ಕನ್ನಡ ಮಾಧ್ಯಮ: ಪೋಷಕರ ನಂಬಿಕೆ ಗಳಿಸುವುದೊಂದೇ ಮಾರ್ಗ

7
ಅಪನಂಬಿಕೆ ದೂರ ಮಾಡುವುದು ಸರ್ಕಾರದ ಕರ್ತವ್ಯ * ನೀತಿಗಳ ರೂಪಿಸುವುದು ಅಗತ್ಯ: ಪ್ರೊ.ಜಿ.ಎಸ್‌. ಜಯದೇವ

ಕನ್ನಡ ಮಾಧ್ಯಮ: ಪೋಷಕರ ನಂಬಿಕೆ ಗಳಿಸುವುದೊಂದೇ ಮಾರ್ಗ

Published:
Updated:
Prajavani

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ):  ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕೆಂದರೆ, ಮೊದಲು ಪೋಷಕರ ನಂಬಿಕೆಯನ್ನು ಗಳಿಸಿಕೊಳ್ಳಬೇಕು ಎಂದು ಪ್ರೊ.ಜಿ.ಎಸ್. ಜಯದೇವ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ನಡೆದ ‘ಕನ್ನಡ ಶಾಲೆಗಳ ಅಳಿವು–ಉಳಿವು’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಬಗೆಗೆ ಪೋಷಕರಲ್ಲಿರುವ ಅಪನಂಬಿಕೆಯನ್ನು ಹೋಗಲಾಡಿಸಲು ಸರ್ಕಾರ ಕೆಲವು ನೀತಿಗಳನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಈ ದಾರಿಯಲ್ಲಿ ಶಿಕ್ಷಕರು ಹಾಗೂ ಸರ್ಕಾರದ ಜವಾಬ್ದಾರಿಯ ಮಹತ್ವವನ್ನು ಒತ್ತಿ ಹೇಳಿದ ಅವರು, ‘ಪ್ರತಿ ಮಗುವಿನ ಕಾಳಜಿ ವಹಿಸುವ ಹಾಗೂ ಪೋಷಕರನ್ನು ವಿಶ್ವಾಸ‌ಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲೂ ಮಕ್ಕಳಿಗೆ ಡೈರಿ ನೀಡಬೇಕು. ಪಾಲಕರ ಸಭೆ ನಡೆಸಬೇಕು. ಗೌರವದಿಂದ, ಪ್ರೀತಿಯಿಂದ ಮಾತನಾಡಿಸಿ, ಅವರ ಮಗುವಿನ ಸಾಮರ್ಥ್ಯದ ಬಗ್ಗೆ ವಿಶ್ವಾಸ ಮೂಡಿಸಬೇಕು. ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು. ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಾಲಾಕೊಠಡಿಗಳ ಕೊರತೆಯನ್ನು ನೀಗಿಸಬೇಕು‘ ಎಂದು ಸಲಹೆ ನೀಡಿದರು.

ಇಂಗ್ಲಿಷ್ ಅನ್ನದ ಭಾಷೆ ಅಲ್ಲ

ಇಂಗ್ಲಿಷ್‌ ಭಾಷೆಯಿಂದಾಗಿಯೇ ಸಂಘಟಿತ ವಲಯದಲ್ಲಿ ಕೆಲಸ ಪಡೆದವರ ಸಂಖ್ಯೆ ತುಂಬಾ ಕಡಿಮೆ. ದೇಶದ ಶೇ 90ಕ್ಕೂ ಹೆಚ್ಚು ದುಡಿಮೆಗಾರರು ಅಸಂಘಟಿತ ವಲಯಕ್ಕೆ ಸೇರಿದವರು. ಇವರ್‍ಯಾರಿಗೂ ಇಂಗ್ಲಿಷ್‌  ಭಾಷೆಯ ಹಂಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ದುಡಿಯುವವರ ಪೈಕಿ ಶೇ 70 ಮಂದಿ ಕೃಷಿ ಕಾರ್ಮಿಕರಾಗಿದ್ದು ಅವರಿಗೂ ಆ ಭಾಷೆ ಗೊತ್ತಿಲ್ಲ. ಅಂದ ಮೇಲೆ ಇಂಗ್ಲಿಷ್‌ ಅನ್ನದ ಭಾಷೆ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಹೆಚ್ಚಾದಂತೆ ಶಾಲೆ ತೊರೆಯುತ್ತಿರುವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದ ಅವರು, ಹೆಚ್ಚು ಇಂಗ್ಲಿಷ್ ಮಾಧ್ಯಮ ಶಾಲೆಗಳಿರುವ ಬೆಂಗಳೂರಿನಲ್ಲಿ ಒಂದೂವರೆ ಲಕ್ಷ ಬಾಲ ಕಾರ್ಮಿಕರಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು

ಶಿಕ್ಷಣ ವ್ಯವಸ್ಥೆಗೆ ಮಾರಕವಾದ ಆರ್‌ಟಿಇ: ‘ಸರ್ಕಾರಿ ಶಾಲೆಗಳು ಮತ್ತು ಆರ್‌ಟಿಇ  ಪ್ರಲೋಭನೆ’ ವಿಷಯವಾಗಿ ಮಾತನಾಡಿದ ನಾಗರತ್ನ ಬಂಜಗೆರೆ,  ‘ಸರ್ಕಾರವು, ಆರ್‌ಟಿಇ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸಾಕುತ್ತಿದೆ’ ಎಂದು ದೂರಿದರು.

ಆರ್ಥಿಕವಾಗಿ ದುರ್ಬಲವಾದ ವರ್ಗಗಳ ಮಕ್ಕಳಿಗೂ ಉಚಿತವಾಗಿ, ಕಡ್ಡಾಯವಾಗಿ ಶಿಕ್ಷಣ ಸಿಗಬೇಕು ಎಂಬ ಚಿಂತನೆಯು ಸಂತೋಷದ ವಿಷಯವೇ ಆಗಿತ್ತು. ಆದರೆ, ಇದೇ ಕಾಯ್ದೆಯು ಪರೋಕ್ಷವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಕಾರಣವಾಯಿತು. ಇದರಿಂದಾಗಿಯೇ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕುಸಿಯುತ್ತಿದೆ ಎಂದು ಅವರು ವಿಶ್ಲೇಷಿಸಿದರು.

ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ  ಶೇ 25ರಷ್ಟು ಸೀಟುಗಳನ್ನು ದುರ್ಬಲ ವರ್ಗದ ಮಕ್ಕಳಿಗೆ ಉಚಿತವಾಗಿ ನೀಡಬೇಕು.  ಆದರೆ, ಅವು ನಿಜವಾಗಿಯೂ ಆ ವರ್ಗದ ಮಕ್ಕಳಿಗೇ ಸಿಗುತ್ತಿಲ್ಲ. ಅಲ್ಲದೇ ಈ ಎಲ್ಲ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬುದು ಭ್ರಮೆ. ಒಂದು ವೇಳೆ ಸಿಗುತ್ತದೆಯಾದರೂ ಅಷ್ಟು ದುಬಾರಿ ಶುಲ್ಕ (ಬೋಧನಾ ಶುಲ್ಕ ಹೊರತುಪಡಿಸಿ) ಭರಿಸುವುದು ಪೋಷಕರಿಗೆ ಹೊರೆಯಾಗುತ್ತದೆ. ಆದರೂ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ ಎಂಬ ಅಪನಂಬಿಕೆಯಿಂದ ಪೋಷಕರು ಖಾಸಗಿ ಶಾಲೆಗಳಿಗೆ ಮುಗಿಬೀಳುತ್ತಿದ್ದಾರೆ ಎಂದು ವಿಷಾದಿಸಿದರು.

ವಿವೇಚನಾಯುತ ಆಯ್ಕೆ ಅಥವಾ ಅನಿವಾರ್ಯ: ಕನ್ನಡದಲ್ಲಿ ಶಿಕ್ಷಣ ಪಡೆಯುವುದು ಆಯ್ಕೆ ಅಥವಾ ಅನಿವಾರ್ಯ ಎಂದು ಪ್ರತಿಪಾದಿಸಿದ ಅಬ್ದುಲ್‌ ರೆಹಮಾನ್‌ ಪಾಷ, ‘ಈ ಆಯ್ಕೆಯು ವಿವೇಚನೆಯಿಂದ ಕೂಡಿರಬೇಕು. ಅಂಥ ಆಯ್ಕೆಯ ಜವಾಬ್ದಾರಿ ಸರ್ಕಾರದ್ದಷ್ಟೇ ಅಲ್ಲ ಸಮುದಾಯದ್ದು ಕೂಡ’ ಎಂದು ಅಭಿಪ್ರಾಯಟ್ಟರು.

‘ಕನ್ನಡ ಮಾಧ್ಯಮ ಎದುರಿಸುತ್ತಿರುವ ಬಿಕ್ಕಟ್ಟುಗಳು‘ ವಿಷಯ ಮಂಡಿಸಿದ ಅವರು,  ‘ಪೋಷಕರು, ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಕಡೆಗೆ ಯಾಕೆ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಸಮೀಕ್ಷೆ ಕೈಗೊಳ್ಳಬೇಕು. ಅವರ ಅಭಿಪ್ರಾಯಗಳನ್ನು ಆಧರಿಸಿ ಯೋಜನೆಯೊಂದನ್ನು ರೂಪಿಸಿದಾಗ ಈ ಬಿಕ್ಕಟ್ಟು ನಿವಾರಣೆ ನಿಟ್ಟಿನಲ್ಲಿ ಹೊಸಹೊಳಹು ಸಿಗಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳು’ ವಿಷಯವಾಗಿ ಸಿದ್ಧರಾಮ ಮನಹಳ್ಳಿ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರು ಉಪಸ್ಥಿತರಿದ್ದರು.             

ಗೋಷ್ಠಿಯ ಸದಸ್ಯರಿಂದ ಮುಖ್ಯಮಂತ್ರಿಗೆ ಮನವಿ 

‘ಕನ್ನಡ ಶಾಲೆಗಳ ಅಳಿವು– ಉಳಿವು‘ ಗೋಷ್ಠಿಯ ಸದಸ್ಯರೆಲ್ಲ ಸೇರಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಲ್ಲಿಸಿದ ಮನವಿಯನ್ನು  ಬಿ.ಎಸ್‌. ಜಯದೇವ ಅವರು ವೇದಿಕೆಯಲ್ಲಿ ಓದಿ ಹೇಳಿದರು.

ಮಕ್ಕಳ ಶಿಕ್ಷಣದ ಹಿನ್ನಡೆಗೆ ಇಂಗ್ಲಿಷ್‌ ಮಾಧ್ಯಮ ಪರಿಹಾರವಾದೀತು ಎಂದು ಭಾವಿಸಿ ತಾವು ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಿಸಲು ಕಾರ್ಯಪ್ರವೃತ್ತರಾಗಿದ್ದೀರಿ. ಆದರೆ, ಇದು ನಾಡಿನ ಮಕ್ಕಳ ಏಳ್ಗೆಗೆ, ಕನ್ನಡ ಸಂಸ್ಕೃತಿಗೆ ಮಾರಕವಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

* ಒಂದನೇ ತರಗತಿಯಿಂದ, ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಪ್ರಸ್ತಾವನೆಯನ್ನು ಈ ಕೂಡಲೇ ಕೈಬಿಡಬೇಕು.

* ಕುವೆಂಪು ಅವರು ಹೇಳಿರುವಂತೆ, ಇಂಗ್ಲಿಷ್ ಅನ್ನು ಭಾಷೆಯನ್ನಾಗಿ ಕಲಿಸಲು ಸೂಕ್ತ ವಿದ್ಯಾರ್ಹತೆಯುಳ್ಳ ಹೆಚ್ಚುವರಿ ಇಂಗ್ಲಿಷ್‌ ಅಧ್ಯಾಪಕರನ್ನು ರಾಜ್ಯದ ಪ್ರತಿಯೊಂದು ಸರ್ಕಾರಿ ಪ್ರಾಥಮಿಕ ಶಾಲೆಗೂ ನೇಮಕ ಮಾಡಬೇಕು.

* ಶತಮಾನ ದಾಟಿದ ಶಾಲೆಗಳು, ಈ ಸಮಾಜದ ಭಾಗವಾಗಿ ಬಂದಿವೆ. ಅವುಗಳಲ್ಲಿ ಬಹುತೇಕ ಶಾಲೆಗಳನ್ನು ಮುಚ್ಚುವ ಪ್ರಸ್ತಾವನೆ ಇದೆ. ಅಂಥ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ನೀಡಿ ಸಮಾಜದ ಭಾಗವಾಗಿ ಅವು ಮತ್ತೆ ತಲೆ ಎತ್ತುವಂತೆ ಮಾಡಬೇಕೆಂದು ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ಅವರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಐದು ವರ್ಷ ಕಳೆದರೂ ಈ ನಿಟ್ಟಿನಲ್ಲಿ ಯಾವುದೇ ಕೆಲಸವಾಗಿಲ್ಲ. ಈ ಶಾಲೆಗಳಿಗೆ ವಿಶೇಷ ಅನುದಾನ ನೀಡಿ, ಸಮರ್ಪಣಾ ಭಾವದಿಂದ ಕೆಲಸ ಮಾಡುವ ಅಧ್ಯಾಪಕರನ್ನು ನೇಮಿಸಬೇಕು. ಇವು ಮತ್ತೆ ತಲೆ ಎತ್ತಿ ನಿಲ್ಲುವಂತೆ ಮಾಡಲು ಕ್ರಮ ಕೈಗೊಳ್ಳಬೇಕು.

ಇಂಗ್ಲಿಷ್ ಬರದೇ ಇರುವುದಕ್ಕೆ ನಾಚಿಕೆಪಟ್ಟುಕೊಳ್ಳಬೇಕಿಲ್ಲ

‘ಇಂಗ್ಲಿಷ್ ಮಾಧ್ಯಮದ ಸಾವಿರ ಶಾಲೆಗಳನ್ನು ತೆರೆಯುವುದಾಗಿ ಹೇಳುವುದಕ್ಕೂ ಮುನ್ನ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ‘ರಾಜ್ಯದ ಮುಖ್ಯಮಂತ್ರಿಯಾದ ನನಗೇ ಇಂಗ್ಲಿಷ್‌ನಲ್ಲಿ ಮಾತನಾಡಲು ನಾಚಿಕೆ ಆಗುತ್ತದೆ. ಎಲ್ಲಿ ತಪ್ಪು ಮಾಡುತ್ತೇನೋ ಎಂಬ ಆತಂಕ ಆಗುತ್ತದೆ. ಇನ್ನು ಜನಸಾಮಾನ್ಯರ ಪಾಡೇನು?’ ಎಂದಿದ್ದರು. ಆದರೆ, ಇಂಗ್ಲಿಷ್ ಬರದೇ ಇರುವುದಕ್ಕಾಗಿ ನಾವು ಯಾಕೆ ನಾಚಿಕೆಪಟ್ಟುಕೊಳ್ಳಬೇಕು?‘ ಎಂದು ಪ್ರೊ.ಜಯದೇವ ಕೇಳಿದರು.

‘ಇಂಗ್ಲಿಷ್‌ ಬರದ ಎಷ್ಟೋ ಮುಖ್ಯಮಂತ್ರಿಗಳು ಈ ನಾಡಿನಲ್ಲಿ ತಲೆ ಎತ್ತಿ ನಿಂತಿದ್ದರು. ಆ ಕಾರಣಕ್ಕೆ ನಾವ್ಯಾರೂ ಕೀಳರಿಮೆ ಪಡಬೇಕಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಕನ್ನಡ ಬರದಿದ್ದರೆ, ನಮ್ಮ ಭಾಷೆಯನ್ನು ಎತ್ತಿ ಹಿಡಿಯದಿದ್ದರೆ ನಾವು ನಾಚಿಕೆಪಟ್ಟುಕೊಳ್ಳಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !