ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಶಾಲೆಗೆ ‘ಸರ್ಜರಿ’; ಸೌಲಭ್ಯ ಭರ್ಜರಿ!

ಕುಲಗೋಡ ವೈದ್ಯ ದಂ‍ಪತಿ ನೇತೃತ್ವದಲ್ಲಿ ‘ಶಕ್ತ’ವಾದ ಸರ್ಕಾರಿ ಶಾಲೆ * ಪ್ರತಿಷ್ಠಾನದಿಂದ ಶಾಲೆ ದತ್ತು ಪಡೆದು ಅಭಿವೃದ್ಧಿ
Last Updated 9 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ನಾಲ್ಕು ವರ್ಷಗಳ ಹಿಂದೆ ಸೌಲಭ್ಯಗಳ ಕೊರತೆಯಿಂದ ನರಳುತ್ತಿದ್ದ, ಇಲ್ಲಿನ ಶಿವಬಸವ ನಗರದ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಅತ್ಯಾಧುನಿಕ ಕಲಿಕೋಪಕರಣ ಬಳಸಿ ಶಿಕ್ಷಣ, ನೃತ್ಯ, ಚೆಸ್‌ ತರಬೇತಿ, ಆರೋಗ್ಯವರ್ಧನೆ ಚಟುವಟಿಕೆ. ಮಧ್ಯಾಹ್ನದ ಬಿಸಿಯೂಟದೊಂದಿಗೆ ಸಂಜೆ ಉಪಾಹಾರಕ್ಕೂ ವ್ಯವಸ್ಥೆ, ಸುಸಜ್ಜಿತ ಗ್ರಂಥಾಲಯ, ವಿಜ್ಞಾನ ಕಲಿಕೆಗೆ ಪ್ರಯೋಗಾಲಯ, ರಜೆಯಲ್ಲಿ ವಿಶೇಷ ತರಗತಿ, ಇಂಗ್ಲಿಷ್ ಕಲಿಕೆಗೂ ಒತ್ತು... ಇಂಥ ವೈಶಿಷ್ಟ್ಯಗಳೊಂದಿಗೆ ಹೆಸರು ಮಾಡಿದೆ.

ಸಮುದಾಯ ಮನಸ್ಸು ಮಾಡಿದರೆ, ಸರ್ಕಾರಿ ಶಾಲೆಗೆ ‘ಬಲ’ ನೀಡಬಹುದು ಎನ್ನುವುದು ಇಲ್ಲಿ ಸಾಬೀತಾಗಿದೆ. ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಇದಕ್ಕೆ ಕಾರಣವಾಗಿರುವುದು ಡಾ.ಶಶಿಕಾಂತ ಕುಲಗೋಡ– ವಿಜಯಲಕ್ಷ್ಮಿ ಕುಲಗೋಡವೈದ್ಯ ದಂಪ
ತಿಯ ‘ರಾಜಲಕ್ಷ್ಮಿ ಮಕ್ಕಳ ಪ್ರತಿಷ್ಠಾನ‘ ಹಾಗೂ ಶಿಕ್ಷಣ ಪ್ರೇಮಿಗಳು. ಗಡಿಯಲ್ಲಿನ ಕನ್ನಡ ಶಾಲೆ ಉಳಿಸಲು ಇವರೊಂದಿಗೆ ಹಲವರು ನೆರವಾಗಿದ್ದಾರೆ. ಹೀಗಾಗಿ, ಕೆಲವೇ ವರ್ಷಗಳಲ್ಲಿ ಶಾಲೆಯ ಚಿತ್ರಣವೇ ಬದಲಾಗಿದೆ.

ಕೊಳೆಗೇರಿ ಮಕ್ಕಳು:7ನೇ ತರಗತಿವರೆಗೆ ಇರುವ ಈ ಶಾಲೆಗೆ ಗ್ಯಾಂಗ್‌ವಾಡಿ, ವಡ್ಡರವಾಡಿ ಸುತ್ತಮುತ್ತಲಿನ ಕೊಳೆಗೇರಿಗಳ 110 ಮಕ್ಕಳು ಬರುತ್ತಾರೆ. ಅವರಿಗೆ ಶೂ, ಸಾಕ್ಸ್, ಬೆಲ್ಟ್, ಟೈ ಹಾಗೂ ಗುರುತಿನ ಚೀಟಿ ನೀಡಲಾಗುತ್ತಿದೆ. ರಾಜಲಕ್ಷ್ಮಿ ಮಕ್ಕಳ ಪ್ರತಿಷ್ಠಾನದಿಂದ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಲಾಗಿದೆ.

ಈಗ ಇಲ್ಲಿ ಗ್ರಂಥಾಲಯ, ವಿಜ್ಞಾನ ಕೇಂದ್ರ, ಗಣಿತ ಕಲಿಕಾ ಕೇಂದ್ರ ಇದೆ. ಆರೋಗ್ಯ ಶಿಕ್ಷಣ, ಆರೋಗ್ಯ ಸೇವಾ ಚಟುವಟಿಕೆಗಳೂ ನಡೆಯುತ್ತಿವೆ. ಪ್ರತಿಷ್ಠಾನದ ಆರೋಗ್ಯ ವರ್ಧಕ ಶಾಲೆ ಯೋಜನೆಯನ್ನು ಇಲ್ಲಿ ಜಾರಿಗೊಳಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ. ವೈದ್ಯ ದಂಪತಿಯ ಕಾಳಜಿ ಮೆಚ್ಚಿದ ಡಾ.ಸುರೇಶ ದೇಸಾಯಿ ಮಕ್ಕಳಿಗೆ ಚೆಸ್‌ ಕಲಿಸಿದರೆ, ಕಲಾವಿದೆ ಮಿನಿಮಾ ಗುತ್ತಿಗೋಳ ನೃತ್ಯ ಹೇಳಿಕೊಡುತ್ತಿದ್ದಾರೆ.

ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದೊಂದಿಗೆ ಸಂಜೆ ಮನೆಗೆ ಹೋಗುವ ಮುನ್ನ, ಮೇಥಿ ಪರೋಟಾ, ಪಾಲಕ್ ಪರೋಟಾ, ಶೇಂಗಾ ಹೋಳಿಗೆ, ಬೇಸನ್ ಲಾಡು, ರವೆ ಲಾಡು, ಗುಲಾಬ್ ಜಾಮೂನ್ (ಇವುಗಳಲ್ಲಿ ಯಾವುದಾದರೊಂದು) ನೀಡಲಾಗುತ್ತದೆ.

ಕಾಯಕ– ದಾಸೋಹದಲ್ಲಿ ನಂಬಿಕೆ:‘ಕಾಯಕ, ದಾಸೋಹದಲ್ಲಿ ನಮಗೆ ನಂಬಿಕೆ. ಗಳಿಸಿದ್ದರಲ್ಲಿ ಒಂದಿಷ್ಟನ್ನು ಸಮಾಜಕ್ಕೆ ನೀಡುತ್ತಿದ್ದೇವೆ. ಸರ್ಕಾರಿ ಶಾಲೆಗಳ ಬಲವರ್ಧನೆ ಇಂದಿನ ತುರ್ತು. ಹೀಗಾಗಿ, ದತ್ತು ಪಡೆಯುತ್ತಿದ್ದೇವೆ. ನಮ್ಮ ಪ್ರಯತ್ನಕ್ಕೆ ಶಿಕ್ಷಕರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ’ ಎಂದು ಡಾ.ಶಶಿಕಾಂತ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪ್ರತಿ ತಿಂಗಳು ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುತ್ತದೆ. ಸ್ನೇಹಿತ ಡಾ.ರವೀಂದ್ರ ಈ ಶಾಲೆ ಮಾತ್ರವಲ್ಲದೇ, ಮಹಾಂತೇಶನಗರ ಕ್ಲಸ್ಟರ್ ವ್ಯಾಪ್ತಿಯ 10 ಕನ್ನಡ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ಪಾಠ ಮಾಡುತ್ತಾರೆ. ಕ್ಯಾಲಿಫೋರ್ನಿಯಾದಲ್ಲಿರುವ ಅವರ ಸ್ನೇಹಿತರಾದ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಆಗಾಗ ಆನ್‌ಲೈನ್‌ನಲ್ಲಿ (ಇ–ಲರ್ನಿಂಗ್‌) ಪಾಠ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಮಹಾಂತೇಶನಗರ ಶಾಸಕರ ಮಾದರಿ ಶಾಲೆ ಅಭಿವೃದ್ಧಿ ಕೆಲಸವೂ ಶುರುವಾಗಿದೆ. ಕಂಪ್ಯೂಟರ್‌ ಪ್ರಯೋಗಾಲಯ, ಶೌಚಾಲಯಗಳು, ಡೈನಿಂಗ್ ಏರಿಯಾ ಸಿದ್ಧವಾಗಿವೆ. ಸುತ್ತಲಿನ 10 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವೇಳಾಪಟ್ಟಿ ಪ್ರಕಾರ ಕಂಪ್ಯೂಟರ್ ಕಲಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು. ಸಂಪರ್ಕಕ್ಕೆ: 94801 88790.

**

ಸರ್ಕಾರಿ ಶಾಲೆಗಳು ಉಳಿಯಬೇಕು. ಹೀಗಾಗಿ, ಅಳಿಲು ಸೇವೆ ಮಾಡುತ್ತಿದ್ದೇವೆ. ಇದು ಇತರರಿಗೆ ಸ್ಫೂರ್ತಿಯಾದರೆ ಸಾಕು.

- ಡಾ.ಶಶಿಕಾಂತ ಕುಲಗೋಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT