ಕನ್ನಡ ಕಲಿಸದ ಶಾಲೆಗಳ ಮಾನ್ಯತೆ ರದ್ದತಿಗೆ ಚಿಂತನೆ

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಪಠ್ಯಕ್ರಮದ ಶಾಲೆಗಳಲ್ಲಿ (ಕೇಂದ್ರ, ಅಂತರ ರಾಷ್ಟ್ರೀಯ ಪಠ್ಯಕ್ರಮ) ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಕಾಯ್ದೆಯೇ ಇದ್ದು, ಇದನ್ನು ಉಲ್ಲಂಘಿಸುವ ಶಾಲೆಗಳ ಮಾನ್ಯತೆ ರದ್ದುಪಡಿಸಲು ಸರ್ಕಾರ ಚಿಂತನೆ ನಡೆಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಬುಧವಾರ ಇಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಜತೆಯಲ್ಲಿ ಕಡ್ಡಾಯ ಕನ್ನಡ ಕಲಿಕಾ ಕಾಯ್ದೆಯ ಅನುಷ್ಠಾನ ಕುರಿತ ಸಭೆಯಲ್ಲಿ ಈ ಸೂಚನೆ ದೊರೆಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ಮಾಹಿತಿಯಂತೆ ಬೆಂಗಳೂರು ನಗರದಲ್ಲೇ ಸುಮಾರು 44 ಶಾಲೆಗಳು ಈ ಕಾಯ್ದೆ ಅನುಷ್ಠಾನ ಮಾಡುವುದರಲ್ಲಿ ವಿಫಲವಾಗಿದ್ದು, ಈ ಶಾಲೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಪರಿಶೀಲನೆ ನಡೆಸಿ, ಇದೇ 20ರೊಳಗೆ ಮಾನ್ಯತೆ ರದ್ದುಪಡಿಸುವ ಕುರಿತಂತೆ ಕಾನೂನು ಕ್ರಮಕ್ಕೆ ವರದಿ ಸಲ್ಲಿಸಲು ಸೂಚಿಸಲಾಯಿತು.
ರಾಜ್ಯದಲ್ಲಿರುವ ಕೇಂದ್ರೀಯ ವಿದ್ಯಾಲಯದ ಶಾಲೆಗಳಲ್ಲಿ ಕನ್ನಡವನ್ನು ಕಲಿಸುತ್ತಿಲ್ಲದಿರುವ ಬಗ್ಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಹಿತಿಯನ್ನು ಪರಿಶೀಲಿಸಲಾಗುವುದು ಎಂದೂ ಸಚಿವರು ತಿಳಿಸಿದರು.