ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜ್ಞಾನ’ ಮಾಸಿಕಕ್ಕೆ ನೂರರ ಸಂಭ್ರಮ

Last Updated 8 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಕನ್ನಡದಲ್ಲಿ ‘ವಿಜ್ಞಾನ’ ಪತ್ರಿಕೆಗಳನ್ನು ನಡೆಸುವುದು ಸುಲಭವಲ್ಲ. ಆರ್ಥಿಕ ಮತ್ತು ನುರಿತ ಮಾನವ ಸಂಪನ್ಮೂಲ ಹೊಂದಿರುವ ವಿಶ್ವವಿದ್ಯಾಲಯಗಳೇ ಈ ನಿಟ್ಟಿನಲ್ಲಿ ಅಂಬೆಗಾಲಿಡುತ್ತಿವೆ. ಇವ್ಯಾವೂ ಅಷ್ಟಾಗಿ ಇಲ್ಲದ ಕಾಲದಲ್ಲಿ ಆರಂಭವಾದ ಕನ್ನಡದ ‘ವಿಜ್ಞಾನ’ ಮಾಸಿಕಕ್ಕೆ ಈಗ ನೂರು ವರ್ಷ. ಇದು ಕನ್ನಡದ ಮೊದಲ ವಿಜ್ಞಾನ ಪತ್ರಿಕೆ.

ಕನ್ನಡ ವಿಜ್ಞಾನ ಸಾಹಿತ್ಯದ ಆದ್ಯ ಪ್ರವರ್ತಕರಾದ ಬೆಳ್ಳಾವೆ ವೆಂಕಟನಾರಾಣಪ್ಪ ಹಾಗೂ ನಂಗಪುರಂ ವೆಂಕಟೇಶ್‌ ಅಯ್ಯಂಗಾರ್‌ ಅವರು ‘ವಿಜ್ಞಾನ’ ಮಾಸಪತ್ರಿಕೆಯ ಸಂಪಾದಕರು. ‘ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ’ 1918 ಮತ್ತು 1919ರಲ್ಲಿ ಆಧುನಿಕ ಶಾಸ್ತ್ರಗಳ ಈ ಮಾಸ ಪತ್ರಿಕೆಯನ್ನು ಬೆಂಗಳೂರಿನ ‘ಐರಿಷ್‌’ ಮುದ್ರಣಾಲಯದಲ್ಲಿ ಮುದ್ರಿಸಿ ಪ್ರಕಟಿಸಿತ್ತು. ಈ ಸಾಹಸಕ್ಕೆ ಒತ್ತಾಸೆಯಾಗಿ ನಿಂತವರು ಆಗಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್‌. ಎಂ. ವಿಶ್ವೇಶ್ವರಯ್ಯ.

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಚಟುವಟಿಕೆಗೆ ಪ್ರೋತ್ಸಾಹ ಸಿಕ್ಕಿದ್ದು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ. ಸರ್‌ ಎಂ.ವಿ, ಬೆಳ್ಳಾವೆ, ನಂಗಪುರಂ ಅವರು ಇದೇ ಕಾಲೇಜಿನಲ್ಲಿ ಓದಿದವರು. ಬೆಳ್ಳಾವೆಯವರು ಭೌತವಿಜ್ಞಾನದ ಉಪನ್ಯಾಸಕರಾಗಿದ್ದರೆ, ನಂಗಪುರಂ ಅವರು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದರು. ಈ ಇಬ್ಬರೂ ಸೇರಿ ಆ ಕಾಲದಲ್ಲಿಯೇ ಗುರುತ್ವ, ನೀರಿನ ಒತ್ತಡ, ಆಮ್ಲ, ಕ್ಷಾರ (ಆಲ್ಕಲಿ), ಶಬ್ದ, ಬೆಳಕು, ಉಷ್ಣ... ಹೀಗೆ ಹಲವಾರು ವಿಷಯಗಳಿಗೆ ಸಂಬಂಧಿಸದ ಪ್ರಯೋಗಗಳನ್ನು ಜನರ ಎದುರಿಗೆ ಮಾಡಿ ಅವರಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡುವಂತೆ ಮಾಡುತ್ತಿದ್ದರು.

ಪಾರಿಭಾಷಿಕ ಪದಕೋಶ ಇಲ್ಲದ ಕಾಲದಲ್ಲಿ ವೈಜ್ಞಾನಿಕ ಭಾಷೆಯನ್ನು ಕನ್ನಡಕ್ಕೆ ನೀಡಿದ ಅವರು, ಆಧುನಿಕ ವಿಜ್ಞಾನದಲ್ಲಿ ಆಗುತ್ತಿದ್ದ ವಿಸ್ಮಯಕಾರಿಯೂ, ಜನೋಪಯೋಗಿಯೂ ಆಗಿದ್ದ ಬೆಳವಣಿಗೆಗಳನ್ನು ಸರಳವಾದ ಕನ್ನಡದಲ್ಲಿ ಜನರಿಗೆ ಮುಟ್ಟಿಸಲು ಅಣಿಯಾಗಿದ್ದರು. 1918ರಲ್ಲಿ ‘ವಿಜ್ಞಾನ’ ಮಾಸಿಕದ ಮೊದಲ ಸಂಚಿಕೆ ಪ್ರಕಟಗೊಂಡಾಗ ಸರ್‌ ಎಂ.ವಿಶ್ವೇಶ್ವರಯ್ಯ ಅವರು, ‘ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳ ಜ್ಞಾನವನ್ನು ನಮ್ಮ ಜನರಲ್ಲಿ ಪ್ರಸಾರ ಮಾಡುವ ಜವಾಬ್ದಾರಿಯನ್ನು ಇಂಗ್ಲಿಷ್‌ ಭಾಷೆಯನ್ನರಿತ ಶಾಸ್ತ್ರಜ್ಞರು ಹೊರಬೇಕು’ ಎಂದು ಕರೆ ನೀಡಿದ್ದರು.

ಪ್ರಕಟವಾದದ್ದು ಎರಡೇ ವರ್ಷ: ಹೀಗೆ 1918ರಲ್ಲಿ ಪ್ರಾರಂಭವಾದ ‘ವಿಜ್ಞಾನ’ ಪ್ರಕಟವಾದದ್ದು ಕೇವಲ ಎರಡು ವರ್ಷಗಳು. ತಿಂಗಳಿಗೊಂದರಂತೆ ಒಟ್ಟು 24 ಸಂಚಿಕೆಗಳು ಪ್ರಕಟವಾದವು. ಪ್ರತಿ ಸಂಚಿಕೆ 32 ಪುಟಗಳದ್ದಾಗಿದ್ದವು. ಅವುಗಳಲ್ಲಿ 28 ಪುಟಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ವಿಶೇಷ ಲೇಖನಗಳು ಹಾಗೂ ಕೊನೆಯ ನಾಲ್ಕು ಪುಟಗಳಲ್ಲಿ ವಿಜ್ಞಾನದ ವಿವಿಧ ವಿಷಯ ಸಂಗ್ರಹಗಳಿದ್ದವು. ವಿಶ್ವ ಪ್ರಸಿದ್ಧ ವಿಜ್ಞಾನ ಪತ್ರಿಕೆಗಳಾದ ‘ನೇಚರ್‌’, ‘ಸೈಂಟಿಫಿಕ್‌ ಅಮೆರಿಕನ್‌’ನ ಆಯ್ದ ವಿಷಯಗಳ ಕನ್ನಡ ಅನುವಾದವೂ ಇರುತ್ತಿದ್ದವು. ಆರ್ಥಿಕ ಸಮಸ್ಯೆ, ಚಂದದಾರರ ಕೊರತೆಯಿಂದಾಗಿ ಇದರ ಪ್ರಕಟಣೆ ಸ್ಥಗಿತವಾಯಿತು. ಆದರೆ ಈ ಸಂಚೆಕೆಗಳಲ್ಲಿ ಪ್ರಕಟವಾಗಿರುವ ಲೇಖನಗಳು ಇಂದಿಗೂ ಸಂಗ್ರಹಯೋಗ್ಯ.

ಈ ಮಾಸಪತ್ರಿಕೆ ಆರಂಭವಾಗಿ ಇದೀಗ 100 ವರ್ಷಗಳಾಗಿವೆ. ಅದು ಪ್ರಕಟಗೊಂಡಿರುವ 24 ಸಂಚಿಕೆಗಳನ್ನು ಸಂಗ್ರಹಿಸಿ, ಅವುಗಳನ್ನು ಎರಡು ಸಂಪುಟಗಳಲ್ಲಿ ನಗರದ ಉದಯಭಾನು ಉನ್ನತ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮಾಡಿದೆ. ಅದರ ಸಂಕಲನವನ್ನು ಪ್ರೊ. ಎಚ್‌.ಆರ್‌. ರಾಮಕೃಷ್ಣರಾವ್‌ ಮತ್ತು ಟಿ.ಆರ್‌. ಅನಂತರಾಮು ಮಾಡಿದ್ದಾರೆ.

ಒಟ್ಟು 384 ಪುಟಗಳ ಎರಡು ಸಂಪುಟ ಮರು ಮದ್ರಣಗೊಂಡಿದ್ದು, ತಲಾ 12 ಸಂಚಿಕೆಗಳನ್ನು ಒಳಗೊಂಡಿವೆ. ಮೊದಲ ಸಂಪುಟದಲ್ಲಿ 70 ಮತ್ತು ಎರಡನೇ ಸಂಪುಟದಲ್ಲಿ 50 ಲೇಖನಗಳಿವೆ. ಹಾಗೆಯೇ ಮೊದಲ ಸಂಪುಟದಲ್ಲಿ 57 ಮತ್ತು ಎರಡನೇ ಸಂಪುಟದಲ್ಲಿ 36 ಚಿತ್ರಗಳನ್ನು ಮುದ್ರಿಸಲಾಗಿದೆ. ಕನ್ನಡದ ಮಕ್ಕಳಿಗೆ ವಿಜ್ಞಾನದ ಸವಿ, ರೋಚಕತೆಗಳನ್ನು ಪರಿಚಯಿಸುವ ಪೂರಕ ಗ್ರಂಥಗಳು ಇವಾಗಿವೆ. ಮೂಲ ಲೇಖನಗಳಲ್ಲಿ ಬಳಸಿರುವ ಪಾರಿಭಾಷಿಕ ಪದಗಳನ್ನು, ಕನ್ನಡ ನುಡಿಗಟ್ಟನ್ನು, ಬಳಸಿರುವ ಕಾಗುಣಿತವನ್ನು ತಿದ್ದದೆ ಹಾಗೆಯೇ ಉಳಿಸಿಕೊಂಡಿರುವುದು ವಿಶೇಷ.

‘ವಿಜ್ಞಾನ’ದ ಹಾದಿಯಲ್ಲಿ: ‘ವಿಜ್ಞಾನ’ ಮಾಸಪತ್ರಿಕೆಯ ಹಾದಿಯಲ್ಲಿ ಕೆಲ ಪ್ರಯತ್ನಗಳು ಕನ್ನಡದಲ್ಲಿ ಆ ನಂತರವೂ ನಡೆದಿವೆ. ಆದರಲ್ಲಿ ಕೆಲವಷ್ಟೇ ಯಶಸ್ವಿಯಾಗಿವೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 1978ರಿಂದ ಪ್ರಕಟಿಸುತ್ತಿರುವ ‘ಬಾಲವಿಜ್ಞಾನ’ ಜನಪ್ರಿಯ ಕನ್ನಡ ವಿಜ್ಞಾನ ಮಾಸಿಕ ಪತ್ರಿಕೆಯಾಗಿದೆ. ನಾಲ್ಕು ದಶಕದ ಹಿಂದೆ ಬಿ.ವಿ.ಸುಬ್ಬರಾಯಪ್ಪ ಅವರು ಆರಂಭಿಸಿದ ‘ವಿಜ್ಞಾನಯುಗ’ ಮಾಸಿಕ ಪ್ರಕಟವಾದದ್ದು ವರ್ಷವಷ್ಟೇ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಎರಡು ದಶಕದಿಂದ ತರುತ್ತಿರುವ ‘ವಿಜ್ಞಾನ ಸಂಗಾತಿ’ಯೂ ಜನಪ್ರಿಯವಾಗಿದೆ. ಅಲ್ಲದೆ ದಶಕದಿಂದ ‘ಇಜ್ಞಾನ’ ಅಂತರ್ಜಾಲ ಪತ್ರಿಕೆಯೂ ಕನ್ನಡದಲ್ಲಿ ವಿಜ್ಞಾನ ಕುರಿತ ಲೇಖನಗಳನ್ನು ಪ್ರಕಟಿಸುತ್ತಿದೆ.

ಸಂವಾದ:

ಕನ್ನಡದ ಮೊದಲ ವಿಜ್ಞಾನ ಪತ್ರಿಕೆ ‘ವಿಜ್ಞಾನ’ ಪ್ರಕಟವಾಗಿ ನೂರು ವರ್ಷಗಳಾಗಿರುವ ಸ್ಮರಣಾರ್ಥ ಬೆಂಗಳೂರಿನ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರ, ‘ಇಜ್ಞಾನ’ ಟ್ರಸ್ಟ್ ಹಾಗೂ ಉದಯಭಾನು ಕಲಾಸಂಘ ಜಂಟಿಯಾಗಿ ಇದೇ 11ರಂದು ಬೆಳಿಗ್ಗೆ 10 ಗಂಟೆಗೆ ಸಂವಾದ ಏರ್ಪಡಿಸಿದೆ. ಜಯನಗರದ ನ್ಯಾಷನಲ್ ಕಾಲೇಜು ಆವರಣದಲ್ಲಿರುವ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರದಲ್ಲಿ ಸಂವಾದ ನಡೆಯಲಿದೆ. ಕನ್ನಡದ ಮುದ್ರಣ ಮಾಧ್ಯಮ, ಟೀವಿ, ರೇಡಿಯೊ ಹಾಗೂ ಜಾಲತಾಣಗಳಲ್ಲಿ ವಿಜ್ಞಾನ ಸಂವಹನದ ಸ್ಥಿತಿ- ಗತಿಗಳನ್ನು ಕುರಿತು ಆಯಾ ಕ್ಷೇತ್ರದ ಪರಿಣತರೊಡನೆ ಚರ್ಚೆ ನಡೆಯಲಿದೆ.

‘ವಿಜ್ಞಾನ’ ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲೊಂದು ಮಹತ್ವದ ಮೈಲುಗಲ್ಲು. ವಿಜ್ಞಾನ ಬರಹಗಳನ್ನು ಸಾಮಾನ್ಯ ಓದುಗರಿಗೂ ಪರಿಚಯಿಸಿದ ಈ ಅಪರೂಪದ ಪ್ರಯತ್ನದ ಕುರಿತು ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಉಪನ್ಯಾಸ ನೀಡಲಿದ್ದಾರೆ.

‘ವಿಜ್ಞಾನ’ದ ಹಾದಿಯಲ್ಲಿ

‘ವಿಜ್ಞಾನ’ ಮಾಸಪತ್ರಿಕೆಯ ಹಾದಿಯಲ್ಲಿ ಕೆಲ ಪ್ರಯತ್ನಗಳು ಕನ್ನಡದಲ್ಲಿ ಆ ನಂತರವೂ ನಡೆದಿವೆ. ಆದರಲ್ಲಿ ಕೆಲವಷ್ಟೇ ಯಶಸ್ವಿಯಾಗಿವೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 1978ರಿಂದ ಪ್ರಕಟಿಸುತ್ತಿರುವ ‘ಬಾಲವಿಜ್ಞಾನ’ ಜನಪ್ರಿಯ ಕನ್ನಡ ವಿಜ್ಞಾನ ಮಾಸಿಕ ಪತ್ರಿಕೆಯಾಗಿದೆ. ನಾಲ್ಕು ದಶಕದ ಹಿಂದೆ ಬಿ.ವಿ.ಸುಬ್ಬರಾಯಪ್ಪ ಅವರು ಆರಂಭಿಸಿದ ‘ವಿಜ್ಞಾನಯುಗ’ ಮಾಸಿಕ ಪ್ರಕಟವಾದದ್ದು ವರ್ಷವಷ್ಟೇ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಎರಡು ದಶಕದಿಂದ ತರುತ್ತಿರುವ ‘ವಿಜ್ಞಾನ ಸಂಗಾತಿ’ಯೂ ಜನಪ್ರಿಯವಾಗಿದೆ. ಅಲ್ಲದೆ ದಶಕದಿಂದ ‘ಇಜ್ಞಾನ’ ಅಂತರ್ಜಾಲ ಪತ್ರಿಕೆಯೂ ಕನ್ನಡದಲ್ಲಿ ವಿಜ್ಞಾನದ ಕುರಿತ ಲೇಖನಗಳನ್ನು ಪ್ರಕಟಿಸುತ್ತಿದೆ.

ಎಂ. ನರಸಿಂಹ
ಎಂ. ನರಸಿಂಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT