ಕನ್ನಡದ ಸೊಗಸು ಆನಂದಮಯ ಮನಸ್ಸು

7
ತಂಬಾಕು ಹಾಕಿ ಉಗಿಯಬೇಡಿ: ನ್ಯಾಯಮೂರ್ತಿ ಮೋಹನ ಶಾಂತನಗೌಡರ್

ಕನ್ನಡದ ಸೊಗಸು ಆನಂದಮಯ ಮನಸ್ಸು

Published:
Updated:
Deccan Herald

ಹುಬ್ಬಳ್ಳಿ: ಕನ್ನಡ ರಿಂಗಣ, ಮಣ್ಣಿನ ಗುಣ, ಭಾವುಕ ಕ್ಷಣ... ಹುಬ್ಬಳ್ಳಿಯ ತಾಲ್ಲೂಕು ನ್ಯಾಯಾಲಯ ಉದ್ಘಾಟನಾ ಸಮಾರಂಭದ ವಿಶೇಷತೆಗಳಿವು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಉದ್ಘಾಟನೆಗೆ ಆಗಮಿಸಿದ್ದರಿಂದ ಹಾಗೂ ಸುಪ್ರೀಂ ಕೋರ್ಟ್, ಹೈಕೋರ್ಟ್‌ ನ್ಯಾಯಮೂರ್ತಿಗಳೆ ಅತಿಥಿಗಳಾಗಿದ್ದ ಕಾರ್ಯಕ್ರಮ ಇಂಗ್ಲಿಷ್‌ ಭಾಷಣದಲ್ಲಿಯೇ ಆರಂಭವಾಗಿ, ಅದರಲ್ಲಿಯೇ ಮುಕ್ತಾಯವಾಗಲಿದೆ ಎಂದು ಜನರು ಭಾವಿಸಿದ್ದರು. ಆದರೆ ಕನ್ನಡಿಗರು ಅದಕ್ಕೆ ತಿರುವು ನೀಡಿದರು. ರಾಜ್ಯದವರೇ ಆದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಮೊದಲು ಕನ್ನಡದಲ್ಲಿ ಮಾತು ಆರಂಭಿಸಿದರು. ‘ನ್ಯಾಯಾಲಯ ಸಂಕೀರ್ಣ ಉದ್ಘಾಟನೆ ಒಂದೂವರೆ ವರ್ಷ ತಡವಾಯ್ತು. ಬಹುಶಃ ಅದು ಮುಖ್ಯ ನ್ಯಾಯಮೂರ್ತಿಗಳಿಗಾಗಿಯೇ ಕಾಯುತ್ತಿತ್ತು ಅನಿಸುತ್ತದೆ. ಶಬರಿ ರಾಮನಿಗೆ ಕಾದ ಹಾಗೆ’ ಎಂದು ಚಪ್ಪಾಳೆ ಗಿಟ್ಟಿಸಿದರು.

ಆ ನಂತರ ಬಂದಿದ್ದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೋಹನ ಎಂ ಶಾಂತನಗೌಡರ್. ಅವರು ಹುಬ್ಬಳ್ಳಿಯ ಬಾರ್ ಅಸೋಸಿಯೇಷನ್ ಸದಸ್ಯರಾಗಿದ್ದವರು. ‘ಈ ಜನ ಸಾಗರ ನೋಡಿ ಹೃದಯ ತುಂಬಿ ಬರುತ್ತಿದೆ. ಹುಬ್ಬಳ್ಳಿ ನ್ಯಾಯಾಲದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದೆ. ಈಗ ಹುಬ್ಬಳ್ಳಿಯ ಋಣ ತೀರಿಸಿದೆ’ ಎಂದು ಭಾವುಕರಾದರು. ‘ಎಲೆ ಅಡಿಕೆ, ತಂಬಾಕು ತಿಂದು ನ್ಯಾಯಾಲಯದೊಳಗೆ ಎಲ್ಲೆಂದರಲ್ಲಿ ಉಗಿಯದೆ, ಸ್ವಚ್ಛತೆ ಕಾಪಾಡಿ’ ಎಂದು ಸಲಹೆ ನೀಡಿದರು.

ಇವರಿಬ್ಬರ ಕನ್ನಡ ಭಾಷಣದಿಂದ ಪ್ರಭಾವಿತರಾದವರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ. ‘ಅಧಿಕಾರಿಗಳು ಬರೆದುಕೊಟ್ಟಿದ್ದ ಇಂಗ್ಲಿಷ್ ಭಾಷಣ ಓದಬೇಕೆಂದಿದ್ದೆ. ಆದರೆ ಕನ್ನಡ ಮಾತನಾಡಿದ ನ್ಯಾಯಮೂರ್ತಿಗಳಿಂದ ಪ್ರೇರಣೆಗೊಂಡು ಮಾತೃಭಾಷೆಯಲ್ಲಿಯೇ ಮಾತನಾಡುತ್ತಿದ್ದೇನೆ’ ಎಂದರು.

ಆ ನಂತರ ಕುತೂಹಲ ಮೂಡಿಸಿದ್ದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಭಾಷಣ. ‘ಎಲ್ಲರಿಗೂ ನಮಸ್ಕಾರ’ ಎಂದು ಮಾತು ಆರಂಭಿಸಿ ಆ ನಂತರ ಇಂಗ್ಲಿಷ್‌ನಲ್ಲಿ ಮಾತನಾಡಿದರು. ಕೊನೆಯಲ್ಲಿ ‘ಎಲ್ಲರೂ ಹೇಗಿದ್ದೀರ’ ಎನ್ನುವ ಮೂಲಕ ಭಾರಿ ಕರತಾಡನ ಗಿಟ್ಟಿಸಿದರು. ಕನ್ನಡಿಗರು ನನ್ನ ಸಹೋದ್ಯೋಗಿಗಳಾದ ಕಾರಣ  ಈ ಕಾರ್ಯಕ್ರಮಕ್ಕೆ ಬರಬೇಕಾಯಿತು ಎಂದರು. ‘ಮಾತೃಭೂಮಿ ಮತ್ತು ಭಾಷೆಗೆ ಬಹಳ ಪ್ರಾಮುಖ್ಯತೆ ಇದೆ. ರಾವಣನ ಕೊಂದ ನಂತರ ‘ಲಂಕೆ ಸುಂದರ ಪ್ರದೇಶ’ ಎಂದು ಲಕ್ಷ್ಮಣ ಹೇಳುತ್ತಾನೆ. ಇದಕ್ಕೆ ಪ್ರತಿಕ್ರಿಯಿಸುವ ರಾಮ ‘ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕೆ ಸಮ. ರಾಜ್ಯಕ್ಕೆ ಮರಳೋಣ’ ಎನ್ನುತ್ತಾನೆ ಎನ್ನುವ ಮೂಲಕ ಅವರವರ ಊರು ಅವರಿಗೆ ಸ್ವರ್ಗ ಎಂದರು. ಕನ್ನಡಮಯ ಕಾರ್ಯಕ್ರಮದಿಂದ ಜನರು ಖುಷ್ ಆದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !