ಮಂಗಳವಾರ, ನವೆಂಬರ್ 12, 2019
26 °C
* ₹ 568 ಕೋಟಿ ನಿಶ್ಚಿತ ಠೇವಣಿ ಸಂಗ್ರಹ * ಅಸಲು, ಬಡ್ಡಿ ನೀಡದೇ ವಂಚನೆ ಆರೋಪ

ಕಣ್ವ ಸಮೂಹ ಕಂಪನಿ ಸಂಸ್ಥಾಪಕ ಬಂಧನ

Published:
Updated:
Prajavani

ಬೆಂಗಳೂರು: ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ನಿಶ್ಚಿತ ಠೇವಣಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪದಡಿ ಕಣ್ವ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎನ್‌.ನಂಜುಂಡಯ್ಯ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಕಣ್ವ ಸಮೂಹ ಸಂಸ್ಥೆಯ ಶ್ರೀ ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿಯಲ್ಲಿ ಹಣ ಠೇವಣಿ ಇರಿಸಿದ್ದ ಯಲಹಂಕದ ಪದ್ಮಾವತಿ ಸೇರಿದಂತೆ ಮೂವರು ಸದಸ್ಯರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ನಂಜುಂಡಯ್ಯ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಬಸವೇಶ್ವರನಗರ ಠಾಣೆ ಪೊಲೀಸರು ಹೇಳಿದರು.

‘ಬಸವೇಶ್ವರ ನಗರದಲ್ಲಿರುವ ಕಂಪನಿಯ ಕಚೇರಿಯಲ್ಲಿ ತಪಾಸಣೆ ನಡೆಸಿ ಕೆಲ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ನೌಕರ
ರಿಂದಲೂ ಹೇಳಿಕೆ ಪಡೆಯಲಾಗಿದೆ. ನಂಜುಂಡಯ್ಯ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ತಿಳಿಸಿದರು.

₹568 ಕೋಟಿ ಠೇವಣಿ?: ‘ಕಣ್ವ ಸಮೂಹ ಸಂಸ್ಥೆಯು ಗಾರ್ಮೆಂಟ್ಸ್‌, ವೈದ್ಯಕೀಯ, ಶಿಕ್ಷಣ ಹಾಗೂ ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಿ ವ್ಯವಹಾರ ಮಾಡುತ್ತಿದ್ದು, 2005ರಲ್ಲಿ ಶ್ರೀ ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿ ಸ್ಥಾಪಿಸಿದೆ. ಸದಸ್ಯರಿಂದ ₹568 ಕೋಟಿ ಠೇವಣಿ ಸಂಗ್ರಹಿಸಿರುವ ಮಾಹಿತಿಇದೆ. ಆ ಪೈಕಿ ಹಲವರಿಗೆ ಹಣ ವಾಪಸು ನೀಡದೆ ವಂಚಿಸಿರುವ ಬಗ್ಗೆ ದೂರುದಾರರು ತಿಳಿಸಿದ್ದಾರೆ’ ಎಂದು ತಿಳಿಸಿದರು.

₹16.50 ಲಕ್ಷ: ‘ಮಂಜುನಾಥನಗರ ದಲ್ಲಿ ವಾಸವಿರುವ ನಿವೃತ್ತ ನೌಕರ ಗೋಪಾಲ್ ಎಂಬುವರು ಸೊಸೈಟಿಯಲ್ಲಿ ₹16.50 ಲಕ್ಷ ನಿಶ್ಚಿತ ಠೇವಣಿ ಇರಿಸಿದ್ದಾರೆ. ನಿಗದಿತ ಅವಧಿ ಮುಗಿದರೂ ಅವರಿಗೆ ಬಡ್ಡಿ ನೀಡಿಲ್ಲ. ಅಸಲನ್ನೂ ಕೊಡದೇ ವಂಚಿಸಲಾಗಿದೆ. ಆ ಸಂಬಂಧ ಅವರು ದೂರು ನೀಡಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸದಸ್ಯರಿಂದ ಹಣ ಕಟ್ಟಿಸಿಕೊಂಡು ಕಂಪನಿಯು ಮೋಸ ಮಾಡುತ್ತಿರುವ ಬಗ್ಗೆ ಸುದ್ದಿ ಹರಡಿತ್ತು. ಕಂಪನಿಯ ಬಳಿ ಹೋಗಿ ನಂಜುಂಡಯ್ಯ ಅವರನ್ನು ಗೋಪಾಲ್‌ ವಿಚಾರಿಸಿದ್ದರು. ₹16.50 ಲಕ್ಷ ಅಸಲು ಮತ್ತು ₹1.06 ಲಕ್ಷ ಬಡ್ಡಿ ವಾಪಸು ಕೊಡುವಂತೆ ಕೇಳಿದ್ದರು. ಅದಕ್ಕೆ ಅವರು ಸ್ಪಂದಿಸಿರಲಿಲ್ಲ. ಕೆಲ ಸದಸ್ಯರಿಗೆ ಚೆಕ್‌ ಮೂಲಕ ಹಣ ಮರುಪಾವತಿ ಮಾಡಿದ್ದು, ಅದರಲ್ಲಿ ಹಲವು ಚೆಕ್‌
ಗಳು ಬೌನ್ಸ್ ಆಗಿವೆ ಕೆಲ ಸದಸ್ಯರು ಹೇಳಿದ್ದಾರೆ’ ಎಂದು ಹೇಳಿದರು.

₹297 ಕೋಟಿ ಮರುಪಾವತಿ: ‘ಮೂರು ವರ್ಷದಿಂದ ಸೊಸೈಟಿಯ ಆರ್ಥಿಕ ಸ್ಥಿತಿ ಕುಗ್ಗಿದೆ. 31 ತಿಂಗಳಲ್ಲಿ ಠೇವಣಿ ಅವಧಿ ಮುಕ್ತಾಯವಾಗಿದ್ದಕ್ಕೆ ಅರ್ಹ ಸದಸ್ಯರಿಗೆ ₹297 ಕೋಟಿ ಮರು ಪಾವತಿ ಮಾಡಿದ್ದೇವೆ’ ಎಂದು ಸೊಸೈಟಿ ಅಧ್ಯಕ್ಷ ಹರೀಶ್ ಹೇಳಿದರು.

‘ಸಾಲಗಾರರಿಂದ ಹಣ ವಸೂಲಿ ಮಾಡುವ ಕೆಲಸ ನಡೆದಿದೆ. ಎಲ್ಲ ಸದಸ್ಯರಿಗೂ ಹಣ ಮರುಪಾವತಿ ಮಾಡುವ ಸಾಮರ್ಥ್ಯ ಸೊಸೈಟಿಗೆ ಇದೆ’ ಎಂದು ತಿಳಿಸಿದರು.

‘ಆರ್ಥಿಕ ಸಂಕಷ್ಟದಲ್ಲಿ ಸೊಸೈಟಿ; ಆಸ್ತಿ ಮಾರಿ ಹಣ ಪಾವತಿ’

‘2005ರಲ್ಲಿ ಸೊಸೈಟಿ ಸ್ಥಾಪಿಸಲಾಗಿದ್ದು, ಆರಂಭದಲ್ಲಿ ಉತ್ತಮ ಪ್ರಗತಿ ಕಂಡಿತು. ಇತ್ತೀಚೆಗೆ ಸಾಲ ಪಡೆದವರು ವಾಪಸು ಕೊಟ್ಟಿಲ್ಲ. ಇದರಿಂದ ಸೊಸೈಟಿಯು ಆರ್ಥಿಕ ಸಂಕಷ್ಟದಲ್ಲಿದೆ. ಆಸ್ತಿಯನ್ನು ಮಾರಾಟಮಾಡಿ ಠೇವಣಿದಾರರಿಗೆ ಹಣ ನೀಡಲು ಕಂಪನಿ ಸಿದ್ಧವಿದೆ’ ಎಂದು ಕಣ್ವ ಸಮೂಹ ಸಂಸ್ಥೆ ಕಾನೂನು ಸಲಹೆಗಾರ ಆರ್.ಮೋಹನ್ ಹೇಳಿದರು.

‘ಐಎಂಎ ಕಂಪನಿ ವಂಚನೆ ಪ್ರಕರಣ ಬಯಲಾದ ನಂತರ, ನಮ್ಮ ಸೊಸೈಟಿ ಬಗ್ಗೆ ಕೆಲವರು ಅಪಪ್ರಚಾರ ಮಾಡಿದರು. ಹಲವು ಸದಸ್ಯರು ತಾವು ಠೇವಣಿ ಇಟ್ಟಿದ್ದ ಹಣವನ್ನು ವಾಪಸು ಪಡೆದರು. ಎಲ್ಲರಿಗೂ ಹಣ ನೀಡುತ್ತಿದ್ದು, ಕೊನೆಯ ಸದಸ್ಯರಿಗೆ ಹಣ ಸಿಗಲಿಲ್ಲ. ಈಗ ಅಂಥ ಸದಸ್ಯರು ದೂರು ನೀಡಿದ್ದಾರೆ’ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)