ಬುಧವಾರ, ನವೆಂಬರ್ 20, 2019
22 °C

ಪೊಲೀಸರಿಗೆ ಶರಣಾದ ಕರವೇ ಕಾರ್ಯಕರ್ತರು; ವೈದ್ಯರ ಮುಷ್ಕರ ಅಂತ್ಯ

Published:
Updated:
Prajavani

ಬೆಂಗಳೂರು: ವೈದ್ಯರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪ ಎದುರಿಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ವಿ.ವಿ.ಪುರ ಪೊಲೀಸರ ಎದುರು ಶುಕ್ರವಾರ ಶರಣಾದರು. ಅದರ
ಬೆನ್ನಲ್ಲೇ ವೈದ್ಯರು ತಮ್ಮ ಮುಷ್ಕರ ಹಿಂಪಡೆದರು.

ಮಿಂಟೊ ಆಸ್ಪತ್ರೆಯ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲ್ಯ ಪ್ರಕರಣದಲ್ಲಿ ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಕಿರಿಯ ವೈದ್ಯರೊಬ್ಬರು ಕನ್ನಡ ಮಾತನಾಡಲಿಲ್ಲವೆಂಬ ಕಾರಣಕ್ಕೆ ಗಲಾಟೆ ನಡೆದಿತ್ತು. ಅದೇ ಸಂದರ್ಭದಲ್ಲೇ ವೈದ್ಯರ ಮೇಲೆ ಹಲ್ಲೆ ನಡೆದ ಬಗ್ಗೆ ವಿ.ವಿ.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

‘ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ನ. 2ರಿಂದಲೇ ಕರ್ತವ್ಯ ಸ್ಥಗಿತಗೊಳಿಸಿ ಕಿರಿಯ ವೈದ್ಯರು ಮುಷ್ಕರ ಆರಂಭಿಸಿದ್ದರು. ಅದರಿಂದ ರೋಗಿಗಳು ಚಿಕಿತ್ಸೆ ಸಿಗದೆ ತೊಂದರೆ ಅನುಭವಿಸುತ್ತಿದ್ದರು. ಇತ್ತ ಕರವೇ ಕಾರ್ಯಕರ್ತರೂ ಪ್ರತಿಭಟನೆಗೆ ಇಳಿಸಿದ್ದರು.

ರಾಜ್ಯದಾದ್ಯಂತ ಒಳರೋಗಿಗಳ ವಿಭಾಗವನ್ನು ಶುಕ್ರವಾರ ಬಂದ್ ಮಾಡಿ ಮುಷ್ಕರ ಮುಂದುವರಿಸುವುದಾಗಿ ವೈದ್ಯರು ಘೋಷಿಸಿದ್ದರು. ಇದರಿಂದ ರೋಗಿಗಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿದ್ದಾರೆ.

ಠಾಣೆಗೆ ಬಂದ ಕಾರ್ಯಕರ್ತರು: ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿಗೌಡ ಸೇರಿದಂತೆ 12 ಮಂದಿ ಕಾರ್ಯಕರ್ತರು ಬೆಳಿಗ್ಗೆ ವಿ.ವಿ.ಪುರ ಠಾಣೆಗೆ ಬಂದರು. ಅವರನ್ನು ಬಂಧಿಸಿದ ಪೊಲೀಸರು, ಹೇಳಿಕೆಗಳನ್ನು ಪಡೆದು ನ್ಯಾಯಾಲಯಕ್ಕೆ ಕರೆದೊಯ್ದರು. 

‘ಬಡವರೇ ಹೆಚ್ಚಾಗಿ ಬರುವ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಆಗುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತದೆ. ಅದೇ ಕಾರಣಕ್ಕೆ ಇಂದು ಶರಣಾಗುತ್ತಿದ್ದೇವೆ. ವೈದ್ಯರಿಗೆ ಹೆದರಿ ಈ ತೀರ್ಮಾನ ಕೈಗೊಂಡಿಲ್ಲ’ ಎಂದು ಅಶ್ವಿನಿಗೌಡ ಸುದ್ದಿಗಾರರಿಗೆ ತಿಳಿಸಿದರು.

ಸದ್ಯಕ್ಕೆ ಮುಷ್ಕರ ಅಂತ್ಯ: ‘ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿರುವ ವಿಷಯ ಗೊತ್ತಾಯಿತು. ಸದ್ಯದ ಮಟ್ಟಿಗೆ ನಮ್ಮ ಮುಷ್ಕರವನ್ನು ಹಿಂಪಡೆಯಲಾಗಿದೆ’ ಎಂದು ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಎಲ್‌.ಎನ್‌.ರೆಡ್ಡಿ ತಿಳಿಸಿದರು.

ಜಾಮೀನು: ಕಾರ್ಯಕರ್ತರನ್ನು ನ್ಯಾಯಾಲಯಕ್ಕೆ ಶುಕ್ರವಾರ ಮಧ್ಯಾಹ್ನವೇ ಹಾಜರುಪಡಿಸಲಾಯಿತು. ಜಾಮೀನು ಕೋರಿ ಕಾರ್ಯಕರ್ತರ ಪರ ವಕೀಲರೂ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ, ₹50 ಸಾವಿರ ಮೊತ್ತದ ಬಾಂಡ್ ಹಾಗೂ ₹3,000 ನಗದು ಶ್ಯೂರಿಟಿ ನೀಡಬೇಕೆಂಬ ಷರತ್ತುಗಳನ್ನು ವಿಧಿಸಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತು.

**
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲ್ಯ ಪ್ರಕರಣದಲ್ಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಹೋರಾಟ ಮುಂದುವರಿಯಲಿದೆ.
-ಟಿ.ಎ.ನಾರಾಯಣಗೌಡ, ಕರವೇ ಅಧ್ಯಕ್ಷ

ಪ್ರತಿಕ್ರಿಯಿಸಿ (+)