ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತೀಯತೆ ಮೀರಿದ ಉದಾರ ಮನಸ್ಸು ಆತನದು’

Last Updated 10 ಜೂನ್ 2019, 16:45 IST
ಅಕ್ಷರ ಗಾತ್ರ

ಶಿರಸಿ: ‘ನಾವು ಕ್ಲಾಸ್‌ಮೇಟ್ಸ್ ಉಳಿದವರು ಮೂರ್ನಾಲ್ಕು ಜನರು ಮಾತ್ರ. ಬಹುತೇಕರೆಲ್ಲ ಆಗಲೇ ಹೋಗಿಬಿಟ್ಟಿದ್ದಾರೆ. ಸೋಮವಾರ ಬೆಳಿಗ್ಗೆ ಬೆಂಗಳೂರಿನಲ್ಲಿರುವ ವಕೀಲ ಸ್ನೇಹಿತ ವಿ.ಎಚ್.ರೋಣ ಕಾಲ್ ಮಾಡಿ, ಗಿರೀಶ ಇನ್ನಿಲ್ಲ ಎಂದ. ಆಮೇಲೆ ಟಿ.ವಿ ಹಚ್ಚಿ ನೋಡಿದರೆ ವಿಷಯ ಸತ್ಯವಾಗಿತ್ತು. ಇವ ಒಬ್ಬ ಇದ್ದ ಎಂಬ ಸಂತಸವಿತ್ತು. ಈಗ ಇವನೂ ಹೋಗಿ ಆಯ್ತು...’ ಎಂದ ವಕೀಲ ಡಿ.ಎನ್.ಹೆಗಡೆ ಹಾಲೇರಿಕೊಪ್ಪ ಅವರಿಗೆ ಮುಂದೆ ಮಾತನಾಡಲೂ ಆಗಲಿಲ್ಲ.

ಕೊಂಚ ಸುಧಾರಿಸಿಕೊಂಡ ಅವರು, ಪ್ರೌಢ ಶಿಕ್ಷಣ, ಎಫ್ಐ ಆರ್ಟ್ಸ್‌ (first year arts), ಇಂಟರ್, ಜೂನಿಯರ್ ಮತ್ತು ಸೀನಿಯರ್ ಬಿ.ಎ ಪದವಿಯನ್ನು ಒಟ್ಟಿಗೆ ಪೂರೈಸಿದ ಸ್ನೇಹಿತ ಸಾಹಿತಿ ಗಿರೀಶ ಕಾರ್ನಾಡ ಮತ್ತು ಅವರ ನಡುವಿನ ಗೆಳೆತನಕ್ಕಿಂತ ಮಿಗಿಲಾದ ಸಂಬಂಧವನ್ನು ತೆರೆದಿಟ್ಟರು.

‘ಒಮ್ಮೆ ನಾಟಕ ಮಾಡುವುದೆಂದು ನಿರ್ಧಾರವಾಯಿತು. ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ನಾಟಕ ಅದು. ನನ್ನದು ಮಾಸ್ತರರ ಪಾತ್ರ, ಆತನದು ಪೂಜಾರಿಯ ಪಾತ್ರ. ನಮ್ಮಿಬ್ಬರ ನಡುವಿನ ಸಂಭಾಷಣೆಯಲ್ಲಿ ನಾನು ಏನೋ ಕಳ್ಳ ಭಟ್ಟ ಎಂದಾಗ, ಆತ ಜೋರಾಗಿ ಕೆನ್ನೆಗೆ ಬಾರಿಸಿದ್ದ. ಬಣ್ಣದ ಮನೆಗೆ ಬಂದ ಮೇಲೆ ಮಾರಾಯ ಏನೋ ಇಷ್ಟು ಜೋರಾಗಿ ಹೊಡೆದೆ ಎಂದರೆ, ಜೋರಾಗಿ ನಕ್ಕಿದ್ದ ಗಿರೀಶ...’ ಇಂತಹ ಕೀಟಲೆಯನ್ನು ಮಾಡುತ್ತಿದ್ದ ಗಿರೀಶ ಅಸಾಧ್ಯ ಬುದ್ಧಿವಂತ ಎಂದು ಹೆಮ್ಮೆಯಿಂದ ಹೇಳಿದರು.

‘ಅವನಷ್ಟು ಸ್ಮರಣಶಕ್ತಿ ಇದ್ದವರನ್ನು ನಾನು ನೋಡಲೇ ಇಲ್ಲ. ಕೆಲವರು ನಿರ್ದಿಷ್ಟ ವಿಷಯಗಳಲ್ಲಿ ಆಸಕ್ತರಾಗಿರುತ್ತಾರೆ. ಆದರೆ, ಗಿರೀಶ ಹಾಗಲ್ಲ, ಎಲ್ಲ ವಿಷಯಗಳಲ್ಲೂ ಅಕ್ಷರಶಃ ತಜ್ಞನೇ. ಇಂಗ್ಲಿಷ್, ಗಣಿತದಲ್ಲಿ ಬಲು ಚುರುಕು. ಬಿ.ಎ. ಕಲಿಯುವಾಗ ಅಂಕ ಗಣಿತ ವಿಷಯವನ್ನು ಆಯ್ದುಕೊಂಡಿದ್ದ. ಧಾರವಾಡದಲ್ಲಿ ನಾನು ರೂಮ್ ಮಾಡಿಕೊಂಡಿದ್ದೆ. ನಿತ್ಯ ಸಂಜೆ ‘ರ್‍ಯಾಲಿ’ ಸೈಕಲ್ ಮೇಲೆ ನನ್ನ ರೂಮಿಗೆ ಬರುತ್ತಿದ್ದ ಆತ, ಒಂದೆರಡು ತಾಸು ಹರಟೆ ಹೊಡೆದು ಹೋಗುತ್ತಿದ್ದ. ಕಾಲೇಜು ಮುಗಿದ ಮೇಲೆ ನಮ್ಮದು ಹೆಚ್ಚಾಗಿ ಫೋನ್ ಸಂಭಾಷಣೆ ಸಂಬಂಧವಾಯಿತು’ ಎಂದು ಕಾಲೇಜಿನ ದಿನಗಳ ನೆನಪು ಮಾಡಿಕೊಂಡರು.

‘2011ರಲ್ಲಿ ಬೆಂಗಳೂರಿಗೆ ಹೋದಾಗ ಕಾಲ್ ಮಾಡಿದ್ದೆ. ನಾನಿದ್ದಲ್ಲಿಗೇ ಕಾರು ಕಳುಹಿಸಿ ತನ್ನ ಮನೆಗೆ ಕರೆಯಿಸಿಕೊಂಡಿದ್ದ. ಬದಲಾಗುತ್ತಿರುವ ಸಮಾಜ, ಹಳೆಯ ನೆನಪುಗಳು ನಮ್ಮ ನಡುವೆ ಹರಿದಾಡಿದವು. ಗಿರೀಶ ಎಂದೂ ಸಂಕುಚಿತ ಬುದ್ಧಿಯವನಾಗಿರಲಿಲ್ಲ. ಜಾತೀಯತೆ ಮೀರಿದ ಔದಾರ್ಯ ಆತನದು’ ಎಂದು ಡಿ.ಎನ್.ಹೆಗಡೆ ಸ್ನೇಹಿತನ ಬಗ್ಗೆ ಅಭಿಮಾನಪಟ್ಟುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT