ಭಾನುವಾರ, ಜುಲೈ 25, 2021
22 °C

ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇರಲು ನೈತಿಕತೆ ಇಲ್ಲ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇರಲು ನೈತಿಕ ಹಕ್ಕಿಲ್ಲ, ಸರ್ಕಾರ ರಾಜ್ಯಪಾಲರಿಂದ ಸುಳ್ಳು ಭಾಷಣ ಮಾಡಿಸಿದೆ. ಅದಕ್ಕಾಗಿ ನಾವು ರಾಜ್ಯಪಾಲರ ಭಾಷಣ ಬಹಿಷ್ಕರ ಮಾಡಿದೆವು ಎಂದು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಹೇಳಿದ್ದಾರೆ. 

ಅವರ ಶಾಸಕರಿಗೇ ಅವರ ಸರ್ಕಾರ ಬೇಕಿಲ್ಲ. ಕಾಂಗ್ರೆಸ್ ಶಾಸಕರಿಗೆ ಕುಮಾರಸ್ವಾಮಿ ಮೇಲೆ ನಂಬಿಕೆಯಿಲ್ಲ. ಬೆಳಗಾದರೆ ಸಾಕು ಸಿದ್ದರಾಮಯ್ಯ ಬೆಂಬಲಿಗರು ನಮ್ಮ ಸಿಎಂ ಸಿದ್ದರಾಮಯ್ಯ ಎನ್ನುತ್ತಿದ್ದಾರೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಯಡಿಯೂರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ನಾವು ರಾಜ್ಯಪಾಲರನ್ನು ಭೇಟಿ ಮಾಡಲ್ಲ,  ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಂಡಿಸಲ್ಲ. ಸಮ್ಮಿಶ್ರ ಸರ್ಕಾರ ತಾನಾಗಿಯೇ ಬಿದ್ದು ಹೋಗುವ ಸಂಭವ ಇದೆ.‌ ಎಲ್ಲವನ್ನೂ ಕಾದು ನೋಡುತ್ತಿದ್ದೇವೆ, ಶಾಸಕರ ಸಭೆ ನಡೆಸಿ ಮುಂದಿನ ಹೋರಾಟ ನಡೆಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು. 

ಸರ್ಕಾರಕ್ಕೆ ಬಹುಮತ ಇಲ್ಲ: ಶ್ರೀರಾಮುಲು

ಜಂಟಿ ಅಧಿವೇಶನಕ್ಕೆ ಸರ್ಕಾರದ 15 ಮಂದಿ ಶಾಸಕರು ಗೈರಾಗಿದ್ದು, ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ ಎಂದು  ಬಿಜೆಪಿ ನಾಯಕ ಶ್ರೀರಾಮುಲು ಹೇಳಿದ್ದಾರೆ. 

ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ಅಧಿಕಾರ ಇಲ್ಲ, ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು. 

ಈ ಸಂಬಂಧ ಸದ್ಯದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಬಹುಮತ ಇಲ್ಲದಿರುವ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ಪಡೆಯಲು ಮನವಿ ಮಾಡುತ್ತೇವೆ. ನಾಳೆಯಿಂದ ಸದನದಲ್ಲೂ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು. 

ಭಾಷಣ ಸತ್ಯಕ್ಕೆ ದೂರ

ರಾಜ್ಯಪಾಲರ ಭಾಷಣ ಸತ್ಯಕ್ಕೆ ದೂರವಾಗಿದೆ. ರಾಜ್ಯಪಾಲರಿಂದ ಸರ್ಕಾರ ಸುಳ್ಳು ಹೇಳಿಸಿದೆ. ಭಾಷಣದಲ್ಲಿ ಯೋಜನೆಗಳ ಕುರಿತು ತಪ್ಪು ಅಂಕಿ ಅಂಶಗಳನ್ನು ನೀಡಲಾಗಿದೆ ಎಂದು ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

ಸಾಲಮನ್ನಾ, ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ.‌ ಬಹಳ ದಿನ ಈ ಸರ್ಕಾರ ಇರುವುದಿಲ್ಲ. ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಹೋಗಿದೆ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು