ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಒಗಟಾಗಿ ಕಾಡಿದ ಸಭಾಧ್ಯಕ್ಷ ರಮೇಶ್‌ ಕುಮಾರ್‌

Last Updated 19 ಜುಲೈ 2019, 2:20 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯ ಮಂಡನೆ ಮತ್ತು ಆ ಬಳಿಕ ನಡೆದ ಚರ್ಚೆಯ ಸಂದರ್ಭ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರ ನಡೆ ಬಿಜೆಪಿ ಪಾಲಿಗೆ ಬಿಡಿಸಲಾಗದ ಒಗಟಾಗಿ ಕಾಡಿದರು.

ವಿಪ್‌ ವಿಚಾರದಲ್ಲಿ ಕಾಂಗ್ರೆಸ್‌ ಮಧ್ಯ ಪ್ರವೇಶಿಸಿ ಸುಪ್ರೀಂಕೋರ್ಟ್‌ವರೆಗೆ ಮೆಟ್ಟಿಲು ಹತ್ತಲು ವೇದಿಕೆಯನ್ನಾಗಿ ಬಳಸುವ ಮತ್ತು ಆ ಮೂಲಕ ವಿಶ್ವಾಸ ಮತವನ್ನು ಮುಂದಕ್ಕೆ ಹಾಕುವ ವಿಚಾರದ ಸುಳಿವು ಬಿಜೆಪಿ ಸದಸ್ಯರಿಗೆ ಬುಧವಾರವೇ ಸಿಕ್ಕಿತ್ತು.

ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತ ನಿರ್ಣಯ ಮಂಡಿಸಿ ಮಾತು ಆರಂಭಿದ ಸ್ವಲ್ಪವೇ ಹೊತ್ತಿನಲ್ಲಿ ಕ್ರಿಯಾಲೋಪದ ಮೂಲಕ ವಿಪ್‌ ವಿಷಯ ಪ್ರಸ್ತಾಪಿಸಿದರು. ವಿಶ್ವಾಸಮತದ ಬಗ್ಗೆ ಚರ್ಚೆಯ ಬದಲು ಇಡೀ ದಿನ ಸಿದ್ದರಾಮಯ್ಯ ಪ್ರಸ್ತಾಪ ಮತ್ತು ಶ್ರೀಮಂತ ಪಾಟೀಲ ಅವರ ನಾಪತ್ತೆ ವಿಚಾರ ಕಲಾಪವನ್ನು ತಿಂದುಹಾಕಿತು.

ತಾವು ಯಾರ ಪರವೂ ಇಲ್ಲ ಎನ್ನುತ್ತಲೇ ಕೇಳಿದವರಿಗೆಲ್ಲ ಮಾತನಾಡಲು ಅವಕಾಶ ಕೊಟ್ಟಿದ್ದು ಸಹಜವಾಗಿ ಬಿಜೆಪಿಯವರ ಸಹನೆ ಕೆಣಕುತ್ತಿತ್ತು. ಒಂದು ಹಂತದಲ್ಲಿ ಬಿಜೆಪಿ, ಅನಗತ್ಯವಾಗಿ ವಿಷಯ ಲಂಬಿಸಲು ಸಭಾಧ್ಯಕ್ಷರು ಅವಕಾಶ ನೀಡುತ್ತಿದ್ದಾರೆ ಎಂಬ ಅರ್ಥದ ಅಸಮಾಧಾನ ಹೊರ ಹಾಕುತ್ತಿದ್ದರು.

ಸಭಾಧ್ಯಕ್ಷರ ಕೆಲವೊಂದು ಮಾತುಗಳು ತಮಗೆ ಅಪ್ಯಾಯಮಾನವಾಗಿ ಕಂಡಬಂದಾಗ, ಆಡಳಿತ ಪಕ್ಷದ ಸದಸ್ಯರು ಮೇಜು ಗುದ್ದಿ ಸ್ವಾಗತಿಸುತ್ತಿದ್ದರು. ಆಗ ತಾವು ಯಾರ ಪರವೂ ಅಲ್ಲ ಎಂಬುದನ್ನು ಹೇಳುತ್ತಿದ್ದರು.

ಒಂದು ಹಂತದವರೆಗೆ ರಕ್ಷಣಾತ್ಮಕವಾಗಿ ವರ್ತಿಸಿದ ಬಿಜೆಪಿ ಬಳಿಕ, ಮತಕ್ಕೆ ಹಾಕಿ ಬಹುಮತ ಇದೆಯೋ ಇಲ್ಲವೋ ಎಂಬುದನ್ನು ನಿರೂಪಿಸಿ ಎಂಬುದಾಗಿ ಆಕ್ರಮಣಕಾರಿಯಾಗಿ ವರ್ತಿಸಿತು.

ಬಿಜೆಪಿ ಶಾಸಕರ ಅಹೋರಾತ್ರಿ ಪ್ರತಿಭಟನೆ
ಬೆಂಗಳೂರು:
ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕದೇ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದ ಕ್ರಮ ವಿರೋಧಿಸಿ ಬಿಜೆಪಿ ಶಾಸಕರೂ ವಿಧಾನಸಭೆ ಸಭಾಂಗಣದಲ್ಲೇ ಇಡೀ ರಾತ್ರಿ ಪ್ರತಿಭಟನೆ ನಡೆಸಿದರು.

ಕಲಾಪ ಮುಂದೂಡುವುದಕ್ಕೆ ಮೊದಲು ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ, ‘ನಾವು ಮಧ್ಯ ರಾತ್ರಿವರೆಗೆ ಇರಲು ಸಿದ್ಧರಿದ್ದೇವೆ. ಮತಕ್ಕೆ ಹಾಕುವ ಪ್ರಕ್ರಿಯೆ ಮುಗಿಸಬೇಕು. ಇಲ್ಲವಾದರೆ, ಹಗಲು ರಾತ್ರಿ ಇಲ್ಲಿಯೇ ಉಳಿಯುತ್ತೇವೆ’ ಎಂದರು.

ಇದಕ್ಕೆ ಕಿವಿಗೊಡದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರು ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು. ಆ ಬಳಿಕ ಬಿಜೆಪಿ ಸದಸ್ಯರು ಅಲ್ಲೇ ಉಳಿದರು.

ಸದನದಲ್ಲಿ ಕೇಳಿ ಬಂದ ಸ್ವಾರಸ್ಯಕರ ಮಾತುಗಳು ಹೀಗಿವೆ:

ಶಾಸಕರನ್ನು ಅಪಹರಿಸಲಾಗುತ್ತಿದೆ, ಹೊತ್ತುಕೊಂಡು ಹೋಗಲು ಇದು ಗಂಡಸಿ ಸಂತೆ ಕುರಿ ವ್ಯಾಪಾರವೋ, ದನದ ವ್ಯಾಪಾರವೋ
– ಕೆ.ಎಂ. ಶಿವಲಿಂಗೇಗೌಡ, ಜೆಡಿಎಸ್‌

*
ಶ್ರೀಮಂತ ಪಾಟೀಲ ನಿನ್ನೆ ಆರೋಗ್ಯವಾಗಿದ್ದರು. ರಾತ್ರಿ ರೆಸಾರ್ಟ್‌ನಿಂದ ನಾಪತ್ತೆ ಆದರು. ಅವರನ್ನು ಬಿಜೆಪಿಯವರೇ ಅಪಹರಣ ಮಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ಪೊಲೀಸ್ ರಕ್ಷಣೆ ಕೊಟ್ಟು ಅವರನ್ನು ಆಸ್ಪತ್ರೆಯಲ್ಲಿ ಇರಿಸಿದೆ.
– ದಿನೇಶ್‌ ಗುಂಡೂರಾವ್‌, ಕಾಂಗ್ರೆಸ್‌

*
ನಿಮಗೆ ನಂಬರ್‌ ಇಲ್ಲದ ಕಾರಣ ಮೈಮೇಲೆ ಭೂತ ಬಂದಂತೆ ಆಡ್ತಾ ಇದ್ದೀರಿ. ಬಹುಮತ ಇದ್ದರೆ ಈ ರೀತಿ ವರ್ತಿಸುತ್ತಿರಲಿಲ್ಲ. ರಾಜಕೀಯ ಭಾಷಣ, ಸಂತೆ ಭಾಷಣ ಹೊರಗೂ ಮಾಡಬಹುದು.
– ಸಿ.ಟಿ.ರವಿ, ಬಿಜೆಪಿ

*
ಸಾವಿನ ಮನೆಗೆ ಹೋದ ಪುರೋಹಿತರಿಗೆ ದುಃಖ ಇರಲ್ಲ. ಅದೇ ರೀತಿ ಇಲ್ಲಿ ನಡೆಯುವ ಕಲಾಪದಲ್ಲಿ ಇವರಿಗೆ (ಮಾಧ್ಯಮ) ಯಾವುದೇ ಭಾವನೆ ಇರೊಲ್ಲ. ಪುರೋಹಿತರು ಮಂತ್ರ ಹೇಳಿ ಹಣ ತೆಗೆದುಕೊಳ್ಳುತ್ತಾರೆ. ಮಾಧ್ಯಮದವರು ಇಲ್ಲಿ ತಮ್ಮ ಕೆಲಸ ನಿರ್ಭಾವುಕವಾಗಿ ಮಾಡುತ್ತಾರೆ. ನಾವು– ನೀವು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು.
–ಕೆ.ಆರ್‌.ರಮೇಶ್‌ ಕುಮಾರ್, ಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT