ಗುರುವಾರ , ಅಕ್ಟೋಬರ್ 17, 2019
22 °C
ನಾಯಿ ಬಾಲದ ಡೊಂಕಿನಂತೆ ಐಎಫ್‌ಎಸ್ ಅಧಿಕಾರಿಗಳ ವರ್ತನೆ: ಕಿಡಿ

ನೆರೆಹಾವಳಿ ಸಂತ್ರಸ್ತರಿಗೆ ಕಾಡಿನ ಕಾಟ

Published:
Updated:

ಬೆಂಗಳೂರು: ನೆರೆಹಾವಳಿ ಸಂತ್ರಸ್ತರಿಗೆ ತಾತ್ಕಾಲಿಕ ಸೂರು, ಕಿರುದಾರಿ ಕಲ್ಪಿಸಲು ಅರಣ್ಯಾಧಿಕಾರಿಗಳು ಅಡ್ಡಿ ಪಡಿಸುತ್ತಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ವಿಧಾನಸಭೆ ಸದಸ್ಯರು ಪಕ್ಷಭೇದ ಮರೆತು ಒಕ್ಕೊರಲಿನಿಂದ ಒತ್ತಾಯಿಸಿದ ಘಟನೆ ಶುಕ್ರವಾರ ನಡೆಯಿತು.

ಸಂಕಷ್ಟಕ್ಕೆ ಈಡಾದವರ ಕುರಿತು ಸದನದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಹೊಳೆದಂಡೆಯಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಅದು ಅರಣ್ಯ ಪ್ರದೇಶ ಎಂಬುದು ಗೊತ್ತಿರಲಿಲ್ಲ. ತಮ್ಮದೇ ಸಾಮ್ರಾಜ್ಯವನ್ನು ಎಲ್ಲ ಕಡೆ ಸೃಷ್ಟಿಸಿಕೊಂಡಿರುವ ಅರಣ್ಯಾಧಿಕಾರಿಗಳು ಈಗ ಅಲ್ಲಿ ಶೆಡ್ ಕಟ್ಟಿಕೊಳ್ಳಲು ಬಿಡುತ್ತಿಲ್ಲ’ ಎಂದು ಟೀಕಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಅರಣ್ಯ ಪ್ರದೇಶದಲ್ಲಿ ಈ ಹಿಂದೆಯೇ ಮನೆ ಕಟ್ಟಿಕೊಂಡವರಿಗೆ ನೀರು, ವಿದ್ಯುತ್‌ ಹಾಗೂ ದಾಖಲೆಗಳನ್ನು ನೀಡಲಾಗಿತ್ತು. ಪ್ರವಾಹದಿಂದಾಗಿ ಅನೇಕರು ಮನೆ ಕಳೆದುಕೊಂಡಿದ್ದಾರೆ. ಅವರು ಮತ್ತೆ ಮನೆ ನಿರ್ಮಿಸಿಕೊಳ್ಳಲು ಬಿಡದಂತೆ ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದರು.

‘ಸಭೆ ನಡೆಸಿದಾಗ ಒಪ್ಪಿಕೊಳ್ಳುತ್ತಾರೆ. ಆಮೇಲೆ ಅವರಿಗೆ ತಿಳಿದಿದ್ದನ್ನೇ ಮಾಡುತ್ತಾರೆ. ನಾಯಿ ಬಾಲ ಡೊಂಕು ಎನ್ನುವಂತೆ ಐಎಫ್‌ಎಸ್‌ ಅಧಿಕಾರಿಗಳು ವರ್ತಿಸುತ್ತಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

ಪಿ.ಟಿ. ಪರಮೇಶ್ವರ ನಾಯ್ಕ: ಹೂವಿನಹಡಗಲಿಯ ಹರವಿ ಸಿದ್ದಾಪುರ ಗ್ರಾಮವೇ ಮುಳುಗಿ ಹೋಗಿತ್ತು. ಮರಗಳೇ ಇಲ್ಲದ ಖಾಲಿ ಜಾಗದಲ್ಲಿ ಜೋಪಡಿ ಹಾಕಿಕೊಡಲು ಮುಂದಾಗಿದ್ದೆವು. ಇದಕ್ಕೆ ತಕರಾರು ತೆಗೆದ ಅರಣ್ಯಾಧಿಕಾರಿಗಳು ಅವಕಾಶ ಕೊಡಲಿಲ್ಲ.

ಅಮರೇಗೌಡ ಬಯ್ಯಾಪುರ: ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಕೆಲವರು ಮನೆ ಕಟ್ಟಿಕೊಂಡಿದ್ದರು. ಮಳೆಗೆ ಮನೆ ಬಿದ್ದು ಹೋಗಿದ್ದವು. ಅದೇ ಜಾಗದಲ್ಲಿ ಮತ್ತೆ ಮನೆ ಕಟ್ಟಿಕೊಡಲು ಬಿಡುತ್ತಿಲ್ಲ.

ವಿಶ್ವೇಶ್ವರ ಹೆಗಡೆ ಕಾಗೇರಿ: ನಮ್ಮ ಉತ್ತರ ಕನ್ನಡ ಜಿಲ್ಲೆ ಹಾಗೂ ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲೂ ಇದೇ ರೀತಿಯ ಸಮಸ್ಯೆ ಇದೆ.

ಅಂಜಲಿ ನಿಂಬಾಳ್ಕರ: ಖಾನಾಪುರ ಕ್ಷೇತ್ರದಲ್ಲಿ ಪ್ರವಾಹದಿಂದಾಗಿ ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದವು. ನೆರೆ ಪ್ರದೇಶದಿಂದ ಹೊರಗೆ ಕರೆತರಲು ಕಾಲುಸಂಕ ನಿರ್ಮಾಣ ಮಾಡಲು ಲೋಕೋಪಯೋಗಿ ಅಧಿಕಾರಿಗಳು ಮುಂದಾಗಿದ್ದರು. ಅರಣ್ಯ ಇಲಾಖೆಯವರು ಆ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಿದ್ದಾರೆ. ಪ್ರವಾಹದಲ್ಲಿ ಸಿಲುಕಿದವರ ಕಷ್ಟ ಅರಣ್ಯ ಇಲಾಖೆಯವರಿಗೆ ಅರ್ಥವಾಗುತ್ತಿಲ್ಲ.

ಆರಗ ಜ್ಞಾನೇಂದ್ರ: ಡೀಮ್ಡ್ ಅರಣ್ಯ ಪ್ರದೇಶ ತಮ್ಮದೇ ಎಂದು ಪ್ರತಿಪಾದಿಸುತ್ತಿರುವ ಅಧಿಕಾರಿಗಳು 4(1) ಅಧಿಸೂಚನೆ ಹೊರಡಿಸಿ ನಿರ್ಬಂಧ ವಿಧಿಸುತ್ತಿದ್ದಾರೆ. ಮಲೆನಾಡಿನಲ್ಲಿ ಚೆಂಬು ಹಿಡಿದುಕೊಂಡು ಮನೆಯ ಹಿಂದೆ ಹೋಗುವಂತಿಲ್ಲ. ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆ.ಜಿ.ಬೋಪಯ್ಯ, ಹರತಾಳು ಹಾಲಪ್ಪ, ಕಂಪ್ಲಿ ಗಣೇಶ್‌ ಮಾತನಾಡಿದರು.

ನೆರೆ: ಆರ್ಥಿಕ ಪ್ರಗತಿ ಕುಂಠಿತ
ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಯಿಂದಾಗಿ ಈ ವರ್ಷದ ಆರ್ಥಿಕ ಬೆಳವಣಿಗೆ ಕುಂಠಿತವಾಗಲಿದೆ ಎಂದು ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನೆ ಹೇಳಿದೆ.

2018–19ರಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆ ದರ ಶೇ 9.6ರಷ್ಟಿತ್ತು. ಮೂಲಸೌಕರ್ಯ, ಕೃಷಿ ಹಾಗೂ ಅಭಿವೃದ್ಧಿ ಚಟುವಟಿಕೆ ಮೇಲೆ ನೆರೆ ಹಾವಳಿಪರಿಣಾಮ ಬೀರಲಿದೆ ಎಂದು ಉಲ್ಲೇಖಿಸಿದೆ.

ಮೋಟಾರು ವಾಹನ ಮಾರಾಟವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 15.8ರಷ್ಟು ಇಳಿಕೆಯಾಗಿದೆ. ಬಜೆಟ್‌ ಅಂದಾಜಿನಂತೆ ಈ ಬಾಬ್ತಿನಿಂದ ₹7100 ಕೋಟಿ ಸಂಗ್ರಹವಾಗಬೇಕಿದ್ದು, ಮಧ್ಯವಾರ್ಷಿಕ ಅವಧಿಯಲ್ಲಿ ಶೇ 41ರಷ್ಟು ಮಾತ್ರ ಸಂಗ್ರಹಣೆಯಾಗಿದೆ. ವಾಣಿಜ್ಯ, ಅಬಕಾರಿ, ಮುದ್ರಾಂಕ ತೆರಿಗೆ ಸಂಗ್ರಹ ಆಶಾದಾಯಕವಾಗಿದೆ.

*
ಕಿರುಕುಳ ನೀಡದಂತೆ ಅಧಿಕಾರಿಗಳಿಗೆ ಸದನದ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ. ಅಧಿವೇಶನ ಬಳಿಕ ಎಲ್ಲ ಅಧಿಕಾರಿಗಳ ಸಭೆ ಕರೆದು ನಿರ್ದೇಶನ ನೀಡುತ್ತೇನೆ.
-ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

*
ದೇವಲೋಕದಿಂದ ಬಂದವರಂತೆ ಅರಣ್ಯಾಧಿಕಾರಿಗಳು ಆಡುತ್ತಾರೆ. ಕರ್ನಾಟಕ ಸರ್ಕಾರದ ಅಧೀನದಲ್ಲಿ ತಾವಿಲ್ಲ ಎಂದು ಭಾವಿಸಿದ್ದಾರೆ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Post Comments (+)