ಮಂಗಳವಾರ, ಅಕ್ಟೋಬರ್ 15, 2019
26 °C
ಈಶ್ವರಪ್ಪ ಮೇಲೆ ಮುಗಿಬಿದ್ದ ಕಾಂಗ್ರೆಸ್‌ ಸದಸ್ಯರು

ಹಿಗ್ಗಾಮುಗ್ಗಾ ಬೈದಾಡಿಕೊಂಡ ನಾಯಕರು: ನಗುತ್ತಲೇ ಸಂಭ್ರಮ

Published:
Updated:
Prajavani

ಬೆಂಗಳೂರು: ತಮ್ಮ ಹೆಸರು ಪ್ರಸ್ತಾಪಿಸಿದ್ದಕ್ಕೆ ರೊಚ್ಚಿಗೆದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಾಯಿಗೆ ಬಂದಂತೆ ಬೈದಾಡಿದ ಘಟನೆ ವಿಧಾನಸಭೆಯಲ್ಲಿ ಶುಕ್ರವಾರ ನಡೆಯಿತು.

ಸೇರಿಗೆ ಸವ್ವಾಸೇರು ಎಂಬಂತೆ ಸಿದ್ದರಾಮಯ್ಯ ಕೂಡ ಕಟು ಶಬ್ದಗಳಲ್ಲಿ ಈಶ್ವರಪ್ಪ ಅವರನ್ನು ಜರಿದರು. ಇಬ್ಬರೂ ನಾಯಕರ ಜಗಳವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎರಡು ಕಡೆ ಹಿರಿಯ ನಾಯಕರು ನಗುತ್ತಲೇ ಸಂಭ್ರಮಿಸಿದರು. ಕಾಂಗ್ರೆಸ್‌ ಸರ್ವನಾಶ ಮಾಡಲು ಸಿದ್ದರಾಮಯ್ಯ ಒಬ್ಬರೇ ಸಾಕು ಎಂದು ಈಶ್ವರಪ್ಪ ಕೆಣಕಿದರು. ಆಗ ಒಟ್ಟಾಗಿ ನಿಂತ ಕಾಂಗ್ರೆಸ್‌ ಸದಸ್ಯರು ಈಶ್ವರಪ್ಪ ಮೇಲೆ ಮುಗಿಬಿದ್ದರು.

‘ನೆರೆ ಸಂತ್ರಸ್ತರಿಗೆ ₹10 ಸಾವಿರ ಪರಿಹಾರ ಕೊಟ್ಟಿದ್ದೇ ಹೆಚ್ಚು ಎಂದು ಸಚಿವರೊಬ್ಬರು ಹೇಳಿದ್ದಾರೆ. ನಿಮ್ಮ ಸರ್ಕಾರ ಸಂತ್ರಸ್ತರ ಪರವಾಗಿ ತೋರುತ್ತಿರುವ ಕಾಳಜಿಗೆ ಇದಕ್ಕಿಂತ ಸಾಕ್ಷಿ ಬೇಕಾ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ‘ಈಶ್ವರಪ್ಪ ಹೇಳಿದ್ದು’ ಎಂದು ಸದಸ್ಯರೊಬ್ಬರು ಹೇಳಿದರು. ‘ಹಾ, ಈಶ್ವರಪ್ಪ’ ಎಂದಷ್ಟೇ ಸಿದ್ದರಾಮಯ್ಯ ಹೇಳಿದರು. ಥೇಟು ಕುಸ್ತಿಗೆ ಅಣಿಯಾದವರಂತೆ ಜಿದ್ದಿಗೆ ಬಿದ್ದ ಈಶ್ವರಪ್ಪ ವಾಗ್ದಾಳಿ ನಡೆಸಿದರು. 

ಸುಟ್ಟು ಹಾಕಬೇಕು: ಸಿದ್ದರಾಮಯ್ಯ

* ನನ್ನದು ರಾಕ್ಷಸೀ ಪ್ರವೃತ್ತಿನಾ? ಅದೆಲ್ಲ ನಿಮ್ಮದು ಮಿಸ್ಟರ್‌ ಈಶ್ವರಪ್ಪ. ನೀವ್ಯಾಕೆ ಮಧ್ಯೆ ಮಾತನಾಡುತ್ತೀರಿ. ಕೂತ್ಕೊಳ್ಳಿ.

* ನಿಮ್ಮ ತರ ಕಾಡಿಬೇಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಉಪಮುಖ್ಯಮಂತ್ರಿಯಾಗಿದ್ದವರಿಗೆ ಸಚಿವಸ್ಥಾನ ಕೊಟ್ಟು ಹಿಂಬಡ್ತಿ ನೀಡಲಾಗಿದೆ. ನಾಚಿಕೆಯಾಗಬೇಕು ನಿಮಗೆ.

* ನನ್ನ ಪ‍ಕ್ಷದಲ್ಲಿ ವಿರೋಧ ಪಕ್ಷದ ನಾಯಕನಾಗುವುದಕ್ಕೂ ನಿಮಗೂ ಏನು ಸಂಬಂಧ. ನಿಮ್ಮ ಪಕ್ಷದಲ್ಲಿ ನೀವು ಎಲ್ಲಿದ್ದೀರಾ ಅಂತ ನೋಡಿಕೊಳ್ಳಿ.

* ನಮ್ಮ ಶಾಸಕರು ನನ್ನನ್ನು ಆಯ್ಕೆ ಮಾಡಿದ್ದಾರೆ. ಅದನ್ನು ಕೇಳೋಕೆ ನೀವು ಯಾರು? 

* ರಾಜಕೀಯ ಕಲ್ಚರ್‌ ಎಂದರೇ ಏನೆಂದು ನಿಮಗೆ ಗೊತ್ತಿಲ್ಲ. ಸಂಸ್ಕಾರ, ಸಂಸ್ಕೃತಿ ಇಲ್ಲದ ನಿಮ್ಮಿಂದ ಪಾಠ ಕಲಿಯಬೇಕಿಲ್ಲ.

* ಗುಲಾಮಗಿರಿ ಮಾಡಿ ಪಕ್ಷದಲ್ಲಿ ಸಚಿವರಾಗಿದ್ದೀರಿ. ಪಕ್ಷದ ಅಧ್ಯಕ್ಷರಾಗಿದ್ದವರಿಗೆ ಬೆಲೆಯೇ ಇಲ್ಲ

* ರಾಯಣ್ಣ ಬ್ರಿಗೇಡ್ ಏನಾಯ್ತು. ಆಯ್ತು ಆಯ್ತು ಎಲ್ಲ ಗೊತ್ತಿದೆ ಕುತ್ಕೊ.

* ನಿಮ್ಮಂತಹವರನ್ನು ಸುಟ್ಟು ಹಾಕಬೇಕು. ನೀವು ಇರುವುದೇ ವೇಸ್ಟ್‌ (ವ್ಯರ್ಥ).

ಬೆಂಕಿ ಹಾಕ: ಈಶ್ವರಪ್ಪ

* ನನ್ನ ಹೆಸರು ಸುಖಾಸುಮ್ಮನೆ ಪ್ರಸ್ತಾಪ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವವಲ್ಲ. ನಿಮ್ಮದು ರಾಕ್ಷಸೀ ವ್ಯವಸ್ಥೆ . ನನ್ನ ಬಗ್ಗೆ ಏಕೆ ಮಾತನಾಡಿದ್ದೀರಿ?

* ಏನೆಲ್ಲ ರಾಜಕೀಯ ಮಾಡಿ, ಪಕ್ಷದ ನಾಯಕರನ್ನು ಬ್ಲಾಕ್‌ಮೇಲ್‌ ಮಾಡಿ ವಿರೋಧ ಪಕ್ಷದ ನಾಯಕರಾಗಿದ್ದೀರಿ? ನಿಮಗೆ ಪಕ್ಷದಲ್ಲಿ ಸೊಪ್ಪು ಹಾಕುತ್ತಿಲ್ಲ.

* ಹತ್ತಾರು ಸಾರಿ ಸೋನಿಯಾಗಾಂಧಿ ಮನೆಗೆ ಹೋದರೂ ನಿಮಗೆ ಬಾಗಿಲು ತೆಗೆಯಲಿಲ್ಲ. ಒಳಗೇ ಬಿಟ್ಟುಕೊಳ್ಳಲಿಲ್ಲ. ನಿಮಗೂ ಕಾಂಗ್ರೆಸ್‌ಗೂ ಸಂಬಂಧವೇ ಇಲ್ಲ

* ಕಾಂಗ್ರೆಸ್‌ನವರು ಕಟ್ಟಿದ್ದ ಹುತ್ತಕ್ಕೆ ಬಂದು ಸೇರಿಕೊಂಡ ಹಾವು ನೀವು. ಮುಖ್ಯಮಂತ್ರಿಯಾದ ಮೇಲೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿದ್ದೀರಿ. ಚುನಾವಣೆಯಲ್ಲಿ ಕಾಂಗ್ರೆಸ್‌ 78 ಸ್ಥಾನಕ್ಕೆ ಕುಸಿಯಲು ನೀವೇ
ಕಾರಣ.

* ಮೈತ್ರಿ ಸರ್ಕಾರ ತೆಗೆಯಲು ನೀವೇ ಕಾರಣ ಎಂದು ಜೆಡಿಎಸ್‌ನವರು ಬಹಿರಂಗವಾಗಿ ಹೇಳಿದ್ದಾರೆ. ಸರ್ಕಾರ ತೆಗೆದಿದ್ದಾಯ್ತು. ಈಗ ಕಾಂಗ್ರೆಸ್ ಸರ್ವನಾಶ ಮಾಡಲು ನೀವೊಬ್ಬರೇ ಸಾಕು. ಎಲ್ಲ ಹಿರಿಯರನ್ನು ಹಿಂದೆ ಸರಿಸಿ ಲಾಬಿ ಮಾಡಿ, ದುಂಬಾಲು ಬಿದ್ದು ವಿರೋಧ ಪಕ್ಷದ ನಾಯಕ ಸ್ಥಾನ ಗಿಟ್ಟಿಸಿಕೊಂಡಿದ್ದೀರಿ.

* ನಿಮ್ಮ ಹಿಂದೆ ಈಗ ನಾಲ್ಕು ಜನ ಇದ್ದಾರೆ, ಜಾರ್ಜ್‌, ಎಂ.ಬಿ. ಪಾಟೀಲರೇ ನೀವು ಎಚ್ಚರದಿಂದಿರಿ. ಸಿದ್ದರಾಮಯ್ಯ ನಿಮ್ಮನ್ನು ಮುಗಿಸ್ತಾರೆ.

* ನಿಮ್ಮಿಂದ ಕಾಂಗ್ರೆಸ್ ಪಕ್ಷವೇ ಮುಗಿದುಹೋಯ್ತು. ನಿಮ್ಮ ಹಣೆ ಬರಹಕ್ಕೆ ಬೆಂಕಿ ಹಾಕ!

Post Comments (+)