ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮಾಶಂಕರ್‌ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು

ಮಾಧ್ಯಮಿಕ ಶಿಕ್ಷಣ ಅಭಿಯಾನದ ₹1,624 ಕೋಟಿ ವೆಚ್ಚದ ಯೋಜನೆ ವೈಫಲ್ಯ
Last Updated 20 ಫೆಬ್ರುವರಿ 2020, 21:31 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ (ಆರ್‌ಎಂಎಸ್‌ಎ) ಅನುಷ್ಠಾನದಲ್ಲಿ ಗಂಭೀರ ಲೋಪ ಎಸಗಲಾಗಿದೆ ಎಂದು ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಹಾಗೂ ಪಂಚಾಯತ್‌ರಾಜ್‌ ಸಂಸ್ಥೆಗಳ ಸಮಿತಿ ಬೊಟ್ಟು ಮಾಡಿದ್ದು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌, ರಾಜ್ಯ ಯೋಜನಾ ನಿರ್ದೇಶಕ ಎಂ.ಟಿ.ರೇಜು, ರಾಜ್ಯ ಯೋಜನಾ ಎಂಜಿನಿಯರ್‌ ಟಿ.ಕೃಷ್ಣೇಗೌಡ ಹಾಗೂ ಅಧಿಕಾರಿ ವಿಜಯ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದೆ.

ಸಮಿತಿಯ 30ನೇ ವರದಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಗುರುವಾರ ಮಂಡಿಸಲಾಯಿತು. ಈ ಯೋಜನೆ ವೈಫಲ್ಯಕ್ಕೆ ಇಬ್ಬರು ಐಎಎಸ್‌ ಅಧಿಕಾರಿಗಳೇ ನೇರ ಹೊಣೆ ಎಂದು ಸಮಿತಿ ದೂರಿದೆ.

ಆರ್‌ಎಂಎಸ್‌ಎ ಯೋಜನೆಯಡಿ 2009ರಿಂದ 2014ರ ವರೆಗೆ 2,024 ಕಾಮಗಾರಿಗಳನ್ನು ನಡೆಸಲು ಮಂಜೂರಾತಿ ನೀಡಲಾಗಿತ್ತು. ಶಾಲಾ ಕೊಠಡಿಗಳು, ಪ್ರಯೋಗಶಾಲೆಗಳು, ಗ್ರಂಥಾಲಯಗಳು, ಬಾಲಕರ ಹಾಗೂ ಬಾಲಕಿಯರ ಶೌಚಾಲಯ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ಎ ಹಾಗೂ ಬಿ ಪ್ಯಾಕೇಜ್‌ಗಳಾಗಿ ವಿಂಗಡಿಸಿ 9 ಗುತ್ತಿಗೆ
ದಾರರಿಗೆ ಕಾಮಗಾರಿ ವಹಿಸಲಾಗಿತ್ತು. ಈ ವೇಳೆ, ಏಕರೂಪ ಟೆಂಡರ್‌ ಕರೆದಿರಲಿಲ್ಲ.

ಆರಂಭಿಕ ಹಂತದಲ್ಲಿ 1,738 ಕಾಮಗಾರಿಗಳ ಗುತ್ತಿಗೆ ಮೊತ್ತ ₹1,195 ಕೋಟಿ ಆಗಿತ್ತು. ಬಳಿಕ ಅದು ₹1,346 ಕೋಟಿಗೆ ಏರಿತ್ತು. 2,024 ಕಾಮಗಾರಿಗಳ ಪರಿಷ್ಕೃತ ಮೊತ್ತ ₹1,624 ಕೋಟಿ. ಗುತ್ತಿಗೆ ಟೆಂಡರ್‌ ಕರಾರಿಗೆ ರಾಜ್ಯ ಯೋಜನಾ ನಿರ್ದೇಶಕರು ಸಹಿ ಹಾಕಿದ್ದರು. ಭಾರತೀಯ ಕರಾರು ಒಪ್ಪಂದ ಕಾಯ್ದೆಯನ್ನು ಉಲ್ಲಂಘಿಸಿ ಯೋಜನಾ ವೆಚ್ಚ ಪರಿಷ್ಕರಿಸಿ ಟಿ.ಕೃಷ್ಣೇಗೌಡ ಹಾಗೂ ವಿಜಯ್‌ ಸಹಿ ಹಾಕಿದ್ದರು.

ಈ ಕಾಮಗಾರಿಗಳು ಅಪೂರ್ಣವಾಗಿರುವುದನ್ನು ಸದನ ಸಮಿತಿ ಗಮನಿಸಿತು. ಈ ಬಗ್ಗೆ ಅಧಿಕಾರಿಗಳಿಂದ ವಿವರಣೆ ಕೇಳಿತು. ಗುತ್ತಿಗೆದಾರರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರಿಂದ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಉಮಾಶಂಕರ್‌ ಹಾಗೂ ರೇಜು ಸಮರ್ಥಿಸಿಕೊಂಡರು. ಮೂವರು ಗುತ್ತಿಗೆದಾರರು 2018ರ ಮಾರ್ಚ್‌ನಲ್ಲಿ ದಾವೆ ಹೂಡಿರುವುದು ದಾಖಲೆಗಳ ಪರಿಶೀಲನೆಯಿಂದ ಸಮಿತಿಯ ಗಮನಕ್ಕೆ ಬಂತು. ಆದರೆ, ಕಾಮಗಾರಿಗಳನ್ನು 2016ರಲ್ಲೇ ಸ್ಥಗಿತಗೊಳಿಸಿರುವುದನ್ನು ಸಮಿತಿ ಪತ್ತೆ ಹಚ್ಚಿತು. ಎರಡು ವರ್ಷಗಳವರೆಗೆ ಗುತ್ತಿಗೆದಾರರಿಗೆ ಸಮಯ ನೀಡಿ ಹೈಕೋರ್ಟ್‌ನಲ್ಲಿ ದಾವೆ ಹೂಡಲು ಇಲಾಖಾಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸಮಿತಿ ಹೇಳಿದೆ.

ಕೃಷ್ಣೇಗೌಡ ಹಾಗೂ ವಿಜಯ್‌ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದೆ ಅವರನ್ನು ಮಾತೃ ಇಲಾಖೆಗೆ ಕಳುಹಿಸಿರುವುದು ಮತ್ತೊಂದು ಲೋಪ. ಆದರೆ, ಈ ಪ್ರಕರಣದ ಬಗ್ಗೆ ತಿಳಿದಿಲ್ಲ ಎಂದು ಉಮಾಶಂಕರ್‌ ಹಾಗೂ ರೇಜು ಹಾರಿಕೆ ಉತ್ತರ ನೀಡಿದ್ದರು. ಆದರೆ, ಈ ಇಬ್ಬರು ಅಧಿಕಾರಿಗಳು ಕಾಮಗಾರಿ ನಡಾವಳಿ ಸಭೆಯಲ್ಲಿ ಪಾಲ್ಗೊಂಡಿರುವುದನ್ನು ಸಮಿತಿ ಪತ್ತೆ ಹಚ್ಚಿತು. ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಿಸಲು ಐಎಎಸ್‌ ಅಧಿಕಾರಿಗಳು ತಪ್ಪು ಮಾಹಿತಿ ನೀಡಿರುವುದು ಬಹಿರಂಗಗೊಂಡಿದೆ ಎಂದು ಸಮಿತಿ ಬೊಟ್ಟು ಮಾಡಿದೆ.

ಸಮಿತಿಯ ಶಿಫಾರಸುಗಳು
* ಗುತ್ತಿಗೆ ಪೂರ್ಣವಾಗುವವರೆಗೆ ಗುತ್ತಿಗೆದಾರರಿಗೆ ಬೇರೆ ಬೇರೆ ಇಲಾಖೆಗಳಲ್ಲಿ ನಿರ್ವಹಿಸಿದ ಕಾಮಗಾರಿಗಳ ಹಣವನ್ನೂ ಪಾವತಿ ಮಾಡಬಾರದು.

* ಈ ಗುತ್ತಿಗೆದಾರರನ್ನು ಕಪ್ಪು‍ಪಟ್ಟಿಗೆ ಸೇರಿಸಬೇಕು. ಯಾವುದೇ ಇಲಾಖೆಯಲ್ಲಿ ಅವರಿಗೆ ಕಾಮಗಾರಿ ನೀಡಬಾರದು.

* ನಾನಾ ಕಾರಣಗಳಿಂದ ಬಾಕಿ ಉಳಿದಿರುವ ಈ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT