ಭಾನುವಾರ, ಅಕ್ಟೋಬರ್ 20, 2019
21 °C

ನೆರೆಹಾವಳಿ: ದಕ್ಷ ಅಧಿಕಾರಿಗಳ ತಂಡ ರಚನೆಗೆ ಎಚ್‌ಡಿಕೆ ಸಲಹೆ

Published:
Updated:

ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯವನ್ನು ಪ್ರಾಮಾಣಿಕತೆಯಿಂದ ಕೈಗೊಳ್ಳಲು ನಿಷ್ಠಾವಂತ ಅಧಿಕಾರಿಗಳ ತಂಡವನ್ನು ರಚಿಸುವಂತೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.

ವಿಧಾನಸಭೆಯಲ್ಲಿ ನೆರೆ ಪೀಡಿತ ಪ್ರದೇಶಗಳ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸಂಕಷ್ಟದಲ್ಲಿರುವಾಗ ಈ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು, ಸಂತ್ರಸ್ತರ ನೋವಿಗೆ ಸ್ಪಂದಿಸೋಣ ಎಂದರು.

ರಾಜ್ಯ ಸರ್ಕಾರ ತನ್ನ ಕೈಯಲ್ಲಾದಷ್ಟು ಪರಿಹಾರ ಮೊತ್ತ ನೀಡಿದೆ. ಇನ್ನೂ ಹೆಚ್ಚು ಪರಿಹಾರ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸೋಣ. ಪ್ರಯತ್ನ ಹಾಕುವುದರಲ್ಲಿ ತಪ್ಪಿಲ್ಲ. ಕಳೆದ ವರ್ಷ ಕೊಡಗು ಜಿಲ್ಲೆಯ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದಾಗ  ಗೌರವದಿಂದಲೇ ನಡೆಸಿಕೊಂಡರು. ಸುಮ್ಮನೆ ಅವರನ್ನು ದೂರುವುದನ್ನು ಬಿಟ್ಟು, ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸೋಣ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಯಾವುದೇ ಪಕ್ಷದಲ್ಲೂ ಪರಿಸ್ಥಿತಿ ಚೆನ್ನಾಗಿಲ್ಲ. ಎಲ್ಲ ಪಕ್ಷಗಳಲ್ಲೂ ಸಮಸ್ಯೆಗಳಿವೆ, ಗುಂಪುಗಾರಿಕೆ ಹೆಚ್ಚಾಗಿದೆ. ಆದರೆ, ಜನರನ್ನು ಬೀದಿಗೆ ತಂದು ನಿಲ್ಲಿಸುವುದು ಬೇಡ. ವಿಧಾನಸಭೆಯನ್ನು ಕೆಸರು ಎರೆಚಾಟಕ್ಕೆ ಬಳಸಿಕೊಂಡು ಜನರಿಗೆ ಅನ್ಯಾಯ ಮಾಡಬೇಕಿಲ್ಲ ಎಂದರು.

ಬಳಕೆ ಆಗದ ಹಣ ಬಳಸಿ: ವಿವಿಧ ಇಲಾಖೆಗಳಲ್ಲಿ ವಿವಿಧ ಬಾಬ್ತುಗಳಲ್ಲಿ ಬಳಕೆ ಆಗದ ಹಣ ಇದೆ. ಅಧಿಕಾರಿಗಳ ಮೂಲಕ ಅದರ ಮಾಹಿತಿ ಪಡೆದು ಪರಿಹಾರ ಕಾರ್ಯಕ್ಕೆ ಬಳಸಿ. ಈ ರೀತಿ ₹10,000 ದಿಂದ ₹15,000 ಕೋಟಿ ಬಳಕೆ ಮಾಡಬಹುದಾಗಿದೆ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಮನೆಗಳು ಸಂಪೂರ್ಣ ನಾಶವಾಗಿದ್ದರೆ, ಅಂತಹವರಿಗೆ ಶಾಶ್ವತ ನೆಲೆ ಮಾಡಿಕೊಡಿ. ಕೆಲವು ಕಡೆಗಳಲ್ಲಿ ಸರ್ಕಾರಹಣ ಕೊಡುತ್ತದೆ ಎಂಬ ಕಾರಣ, ಸಣ್ಣ– ಪುಟ್ಟ ಬಿರುಕು ಬಿಟ್ಟ ಮನೆಗಳನ್ನು ಕೆಡವಿ ಹಾಕುತ್ತಿರುವ ಪ್ರಕರಣಗಳೂ ನಡೆದಿವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

*
ದೇವರು ಕೊಟ್ಟ ಅವಕಾಶ, ಈಗಿನ ಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ಪರಿಹಾರ ಕಾರ್ಯವನ್ನು ಉತ್ತರ ರೀತಿಯಲ್ಲಿ ನಡೆಸಿ
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

Post Comments (+)