ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ–ಮಾಧುಸ್ವಾಮಿ ನಡುವೆ ಮಾತಿನ ಜಟಾಪಟಿ

Last Updated 19 ಫೆಬ್ರುವರಿ 2020, 22:46 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರು ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ಜಟಾಪಟಿ ನಡೆಯಿತು.

ರಾಜ್ಯದಲ್ಲಿ 144 ಸೆಕ್ಷನ್‌ ಹಾಕಿದ್ದು ಕಾನೂನುಬಾಹಿರ ಎಂದು ಹೈಕೋರ್ಟ್ ಕೂಡ ಆದೇಶ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದಕ್ಕೆ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಹಾಗಿದ್ದರೆ ನಿಷೇಧಾಜ್ಞೆ ಬಗ್ಗೆ ಯಾರು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದರು.

‘ನಿಮಗೆ ಹೈಕೋರ್ಟ್‌ ತೀರ್ಪು ಸಮಾಧಾನ ತರದಿದ್ದರೆ ಮೇಲ್ಮನವಿ ಸಲ್ಲಿಸಿ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಮಂಗಳೂರು ಗಲಭೆಗೆ ಸಂಬಂಧಿಸಿ 21 ಜನರಿಗೆ ಹೈಕೋರ್ಟ್‌ ಜಾಮೀನು ನೀಡಿರುವ ಪ್ರಕರಣವನ್ನು ಸಿದ್ದರಾಮಯ್ಯ ಉಲ್ಲೇಖಿಸಿದರು.

‘ನಾವಿನ್ನೂ ಚಾರ್ಜ್ ಶೀಟ್ ಹಾಕಿಲ್ಲ. ಈಗಲೇ ಕೋರ್ಟ್ ಹೇಳಿದೆ ಅಂತ ಚರ್ಚಿಸಲು ಆಗುವುದಿಲ್ಲ. ವಿಚಾರಣೆ ನಡೆಯುತ್ತಿರುವುದರಿಂದ ಇಲ್ಲಿ ಚರ್ಚಿಸುವುದು ಸರಿಯಲ್ಲ’ ಎಂದು ಮಾಧುಸ್ವಾಮಿ ಕ್ರಿಯಾಲೋಪ ಎತ್ತಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ‘ಜಾಮೀನು ನೀಡುವಾಗ ನ್ಯಾಯಾಧೀಶರು ಕಠಿಣ ಪದಗಳನ್ನು ಬಳಸಿದ್ದಾರೆ. ಸರ್ಕಾರದ ವಕೀಲರು ಆಗ ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಸದನಕ್ಕೆ ಅಗೌರವ ತೋರಿಸಿದ್ದಾರೆ. ಇದೇ ರೀತಿ ವರ್ತಿಸಿದರೆ ಅವರಿಗೆ ನೋಟಿಸ್‌ ನೀಡಬೇಕಾಗುತ್ತದೆ’ ಎಂದು ಮಾಧುಸ್ವಾಮಿ ಎಚ್ಚರಿಸಿದರು.

‘ಕೋರ್ಟ್‌ ಆದೇಶದಲ್ಲಿ ಹೇಳಿದ್ದನ್ನು ನಾನು ಇಲ್ಲಿ ಉಲ್ಲೇಖಿಸಿ ದ್ದೇನೆ. ಪ್ರಕರಣದ ಮೇಲೆ ಪ್ರಭಾವ ಬೀರುವ ಕೆಲಸ ಮಾಡಿಲ್ಲ. ನೋಟಿಸ್‌ ಕೊಡಿ. ಅದಕ್ಕೆಲ್ಲ ಹೆದರುವುದಿಲ್ಲ. ಹೆದರಿಸುವುದೇ ನಿಮ್ಮ ಕಾಯಕ’ ಎಂದು ಸಿದ್ದರಾಮಯ್ಯ ಪ್ರತಿಯೇಟು ಕೊಟ್ಟರು.

ನಾಚಿಕೆ, ಸೋಡಾ ಬಾಟಲಿ... ಚರ್ಚೆ
ಬೆಂಗಳೂರು:
ವಿಧಾನ ಪರಿಷತ್‌ನಲ್ಲಿ ನಿಲುವಳಿ ಸೂಚನೆ ಮೇಲೆ ಬುಧವಾರ ನಡೆದ ಚರ್ಚೆ ಸಂದರ್ಭಗಳಲ್ಲಿ ‘ನಾಚಿಕೆ, ಸೋಡಾ ಬಾಟಲಿ’
ಪ್ರತಿಧ್ವನಿಸಿದವು.

ಸಿಎಎ ವಿರುದ್ಧ ಕವಿತೆ ಓದಿದರೆ ದೇಶದ್ರೋಹ ಪ್ರಕರಣ ದಾಖಲಿಸುವ ಸರ್ಕಾರಕ್ಕೆ ನಾಚಿಕೆಆಗಬೇಕು ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಟೀಕಿಸಿದರು. ಇತರ ಸದಸ್ಯರೂ ನಾಚಿಕೆಪದವನ್ನು ಬಳಿಸಿದರು.

‘ಮಂಗಳೂರು ಗಲಭೆ ಸಂದರ್ಭದಲ್ಲಿ ಪೊಲೀಸರ ಕೈಯಲ್ಲಿ ಸೋಡಾ ಬಾಟಲಿ ಇತ್ತು’ ಎಂದು ನಾರಾಯಣಸ್ವಾಮಿ ಹೇಳಿದರು. ಇದೇ ವಿಚಾರದ ಮೇಲೆ ಗಂಭೀರ ಚರ್ಚೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT