ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರಿಗೆ ಸಡ್ಡು: ವಿಶ್ವಾಸ ಗೆಲ್ಲಲು ‘ದೋಸ್ತಿ’ ಯತ್ನ

ಸೋಮವಾರವೂ ‘ಮತ’ ನಿರ್ಣಯ ಅನುಮಾನ
Last Updated 20 ಜುಲೈ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ಇನ್ನೇನು ಬಿದ್ದೇ ಹೋಯಿತು ಎಂಬ ಸ್ಥಿತಿಯಲ್ಲೂ ವಿಶ್ವಾಸ ಮತ ಗೆಲ್ಲುವ ಶತಪ್ರಯತ್ನ ನಡೆಸಿರುವ ಜೆಡಿಎಸ್–ಕಾಂಗ್ರೆಸ್‌ ನಾಯಕರು, ಮತ್ತೊಂದು ಸುತ್ತಿನ ಕಾರ್ಯಾಚರಣೆ ಆರಂಭಿಸಿದ್ದಾರೆ.

ರಾಜೀನಾಮೆ ಕೊಟ್ಟು ಮುಂಬೈ ಸೇರಿಕೊಂಡಿರುವ 12 ಅತೃಪ್ತ ಶಾಸಕರು, ನಿಗೂಢ ಸ್ಥಳದಲ್ಲಿರುವ ಆನಂದ್‌ಸಿಂಗ್‌ ಹಾಗೂ ಕೆ.ಸುಧಾಕರ್‌ ಅವರನ್ನು ಸಂಪರ್ಕಿಸಿ, ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವ ವೇಳೆ ಕರೆತರುವುದು ಮೈತ್ರಿ ನಾಯಕರ ಉದ್ದೇಶ. ಆಸ್ಪತ್ರೆಯಲ್ಲಿರುವ ಬಿ. ನಾಗೇಂದ್ರ ಅವರನ್ನು ಭೇಟಿ ಮಾಡಿದ ಸಚಿವ ಜಮೀರ್ ಅಹಮದ್‌ ಖಾನ್‌, ಕಲಾಪದಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದರು. ಅನಾರೋಗ್ಯದ ಕಾರಣ ಕೊಟ್ಟು ಮುಂಬೈಗೆ ಹೋಗಿರುವ ಶ್ರೀಮಂತ ಪಾಟೀಲ ಅವರನ್ನು ವಾಪಸ್ ಕರೆತರುವ ಯತ್ನವೂ ನಡೆದಿದೆ.

ರಾಜೀನಾಮೆ ವಾಪಸ್ ಪಡೆದು ಕಾಂಗ್ರೆಸ್‌ನಲ್ಲೇ ಉಳಿದಿರುವ ರಾಮಲಿಂಗಾರೆಡ್ಡಿ ಅವರು ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಶನಿವಾರ ಭೇಟಿ ಮಾಡಿದರು. ರಾಜೀನಾಮೆ ಕೊಟ್ಟಿರುವ ಬೆಂಗಳೂರಿನ ಶಾಸಕರನ್ನು ಸಂಪರ್ಕಿಸಿ, ವಾಪಸ್ ಕರೆತರುವ ಬಗ್ಗೆಯೂ ಈ ವೇಳೆ ಚರ್ಚೆ ನಡೆಯಿತು ಎಂದು ಜೆಡಿಎಸ್ ಮೂಲಗಳು ಹೇಳಿವೆ. ಆದರೆ, ‘ಅಂತಹ ಚರ್ಚೆ ನಡೆದಿಲ್ಲ’ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಈ ಬೆನ್ನಲ್ಲೇ, ಸರಣಿ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ
ಜಿ. ಪರಮೇಶ್ವರ, ಸಚಿವ ಡಿ.ಕೆ. ಶಿವಕುಮಾರ್‌ ಅವರು ಅತೃಪ್ತರನ್ನು ವಾಪಸ್‌ ಕರೆತರುವ ಮಾರ್ಗಗಳ ಬಗ್ಗೆ ಚರ್ಚಿಸಿದರು.

‘ಬಿಜೆಪಿ ತೆಕ್ಕೆಯಲ್ಲಿ ಸಿಲುಕಿರುವವರ ಪೈಕಿ ಕೆಲವರು ಹೊರ ಬರುವ ದಾರಿ ಗೊತ್ತಾಗದೇ ಪರದಾಡುತ್ತಿದ್ದಾರೆ. ನಾವು ನೆರವಿಗೆ ನಿಂತರೆ ಕೆಲವರು ವಾಪಸ್ ಬರಬಹುದು’ ಎಂಬ ವಿಷಯ ಪ್ರಸ್ತಾಪವಾಯಿತು.

‘ಸರ್ಕಾರ ಉರುಳಿಸುವ ಬಿಜೆಪಿಯ ವಾಮಮಾರ್ಗ ಫಲಿಸುವುದಿಲ್ಲ. ಅತೃಪ್ತರೆಲ್ಲ ಸೋಮವಾರ ಸದನಕ್ಕೆ ಬರಲಿದ್ದಾರೆ’ ಎಂದು ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಸುದ್ದಿಗಾರರಿಗೆ ತಿಳಿಸಿದರು.

ರಾಷ್ಟ್ರಪತಿ ಆಳ್ವಿಕೆವರೆಗೂ ಕಲಾಪ?
ರಾಷ್ಟ್ರಪತಿ ಆಳ್ವಿಕೆ ಹೇರಿದರೂ ಪರವಾಗಿಲ್ಲ ಎಂಬ ನಿರ್ಣಯಕ್ಕೆ ಬಂದಿರುವ ಮೈತ್ರಿಕೂಟದ ನಾಯಕರು, ಸಾಧ್ಯವಾದಷ್ಟು ಅವಧಿಯವರೆಗೆ ಕಲಾಪವನ್ನು ಮುಂದೆ ತಳ್ಳುತ್ತಾ, ವಿಶ್ವಾಸಮತದ ನಿರ್ಣಯವನ್ನು ಮತಕ್ಕೆ ಹಾಕುವ ಪ್ರಕ್ರಿಯೆ ಮುಂದೂಡುವ ಚಿಂತನೆಯಲ್ಲಿದ್ದಾರೆ.

ವಿಶ್ವಾಸಮತ ನಿರ್ಣಯವನ್ನು ಸೋಮವಾರವೇ ಮತಕ್ಕೆ ಹಾಕಿದರೆ ಸೋಲುವುದು ಖಚಿತ. ಅದರ ಬದಲು, ಅತೃಪ್ತರನ್ನು ಸೆಳೆಯುವ ಯತ್ನ ಮುಂದುವರಿಸುವುದು. ಅದಾಗದೇ ಇದ್ದರೆ ಕಲಾಪದಲ್ಲೇ ಕಾಲಹರಣ ಮಾಡುವುದು ಸದ್ಯದ ಲೆಕ್ಕಾಚಾರ.

ಇದೇ 26ರವರೆಗೆ ಸಂಸತ್ ಅಧಿವೇಶನ ನಡೆಯಲಿದೆ. ರಾಷ್ಟ್ರಪತಿ ಆಳ್ವಿಕೆ ಹೇರಿದರೆ ರಾಷ್ಟ್ರಮಟ್ಟದಲ್ಲಿ ಮುಜುಗರ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಅಂತಹ ನಿರ್ಧಾರ ಕೈಗೊಳ್ಳುವುದಿಲ್ಲ. ಹಾಗೊಂದು ವೇಳೆ ಹೇರಿದರೆ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಬಗ್ಗೆ ದೋಸ್ತಿಗಳ ಮಧ್ಯೆ ಚರ್ಚೆ ನಡೆದಿದೆ.

ಬಿಜೆಪಿ ಲೆಕ್ಕಾಚಾರ
ಬಹುಮತ ಸಾಬೀತುಪಡಿಸುವಂತೆಸೋಮವಾರದ ಕಲಾಪದಲ್ಲಿ ಆಗ್ರಹಿಸುವುದು ಹಾಗೂಇನ್ನಷ್ಟು ಶಾಸಕರ ರಾಜೀನಾಮೆ ಕೊಡಿಸಿಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಗ್ಗಿಸಿ ಮೈತ್ರಿ ನಾಯಕರಿಗೆ ಮತ್ತಷ್ಟು ಬಿಸಿ ಮುಟ್ಟಿಸುವುದು ಬಿಜೆಪಿ ನಾಯಕರ ಆಲೋಚನೆ ಎನ್ನಲಾಗಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT