ಸೋಮವಾರ, ಫೆಬ್ರವರಿ 24, 2020
19 °C
ಮುಗಿದ ವಿಸ್ತರಣೆ, ಖಾತೆ ರಗಳೆ * ಲಾಭದಾಯಕ ಖಾತೆಗಳತ್ತ ನೂತನ ಸಚಿವರ ಕಣ್ಣು

ಕೊನೆಗೂ ಮಂತ್ರಿಗಿರಿ ಗಿಟ್ಟಿಸಿದ 10 ‘ಅರ್ಹ’ ಶಾಸಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಮುಗಿಯುತ್ತಿದ್ದಂತೆ, ನೂತನ ಸಚಿವರು ಪ್ರಮುಖಖಾತೆಗಳಿಗೆ ಪಟ್ಟು ಹಿಡಿದಿದ್ದಾರೆ. ಸಚಿವ ಸ್ಥಾನ ಕೈತಪ್ಪಿದವರ ಅತೃಪ್ತಿ
ಯನ್ನು ತಣಿಸುವ ಜತೆಯಲ್ಲಿ ಖಾತೆ ಹಂಚುವ ಸವಾಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಎದುರಾಗಿದೆ.

ನೂತನ ಸಚಿವರಾದ ಎಸ್‌.ಟಿ.ಸೋಮಶೇಖರ್‌ ಅವರು ಬೆಂಗಳೂರು ಅಭಿವೃದ್ಧಿ, ರಮೇಶ ಜಾರಕಿಹೊಳಿ ಅವರು ಜಲಸಂಪನ್ಮೂಲ, ಬಿ.ಸಿ. ಪಾಟೀಲ ಅವರು ಗೃಹ, ಡಾ.ಕೆ ಸುಧಾಕರ್‌ ಅವರು ವೈದ್ಯಕೀಯ ಶಿಕ್ಷಣ ಅಥವಾ ಅರಣ್ಯ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ. ಉಳಿದ ಸಚಿವರೂ ಲಾಭದಾಯಕ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ತಮ್ಮ ಬಳಿ ಇರುವ ಖಾತೆಯನ್ನು ಮರು ಹಂಚಿಕೆ ಮಾಡುವ ಜತೆಗೆ, ಆರು ತಿಂಗಳ ಹಿಂದೆ ಸಚಿವರಾಗಿರುವವರ ಬಳಿ ಇರುವ ಕೆಲವರ ಖಾತೆಯನ್ನು ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಇದನ್ನು ಯಡಿಯೂರಪ್ಪ ಹೇಗೆ ನಿಭಾಯಿಸಲಿದ್ದಾರೆ ಎಂಬ ಕುತೂಹಲವೂ ಮೂಡಿದೆ.

ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ‘ಶನಿವಾರದ ವೇಳೆಗೆ ಖಾತೆ ಹಂಚಿಕೆ ಆಗಬಹುದು’ ಎಂದು ಹೇಳಿದರು.

ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ಗೆ ಸಡ್ಡು ಹೊಡೆಯುವ ಉದ್ದೇಶದಿಂದ ರಮೇಶ ಜಾರಕಿಹೊಳಿ ಅವರು ಜಲಸಂಪನ್ಮೂಲ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಅದನ್ನು ನೀಡಲು ಯಡಿಯೂರಪ್ಪ ಸೇರಿದಂತೆ ಯಾರಿಗೂ ಮನಸ್ಸಿಲ್ಲ. ಇಂತಹ ಖಾತೆ ನಿಭಾಯಿಸಲು ನೀರಾವರಿ, ಅಂತರರಾಜ್ಯ ಜಲ ವಿವಾದಗಳ ಜ್ಞಾನ ಹೊಂದಿರಬೇಕು. ಇಲ್ಲವಾದರೆ ಕಷ್ಟವಾಗುತ್ತದೆ ಎಂಬ ಭಾವನೆ ವರಿಷ್ಠರದು ಎನ್ನಲಾಗಿದೆ.

‘ಮೈತ್ರಿ ಸರ್ಕಾರದಲ್ಲಿ ತಮ್ಮ ಮಾತಿಗೆ ಕಿಮ್ಮತ್ತು ನೀಡದೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆಗ ತಮಗೆ ಅವಮಾನ ಮಾಡಿದವರಿಗೆ ತಕ್ಕ ಉತ್ತರ ನೀಡಲು ಕ್ರಮವಾಗಿ ನಗರಾಭಿವೃದ್ಧಿ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆಗಳೇ ಬೇಕು’ ಎಂದು ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌ ಬೇಡಿಕೆ ಮಂಡಿಸಿದ್ದಾರೆ.

ಗೈರು: ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಕೇಂದ್ರದ ಯಾವುದೇ ಪ್ರತಿನಿಧಿಗಳು ಹಾಜರಿರಲಿಲ್ಲ. ಸಚಿವ ಸ್ಥಾನ ಆಕಾಂಕ್ಷಿಗಳಾದ ಉಮೇಶ ಕತ್ತಿ, ಮಹೇಶ ಕುಮಠಳ್ಳಿ, ಸಿ.ಪಿ.ಯೋಗೇಶ್ವರ್‌ ಗೈರಾಗಿದ್ದರು.

***

ಸಚಿವ ಸ್ಥಾನ ನೀಡದ್ದಕ್ಕೆ ಬೇಸರ ಇದೆ. ಆದರೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವುದಿಲ್ಲ. ಎರಡು ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಿ ಉಳಿದ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ

- ಜಿ.ಎಚ್‌.ತಿಪ್ಪಾರೆಡ್ಡಿ,ಚಿತ್ರದುರ್ಗ ಶಾಸಕ

ಸಚಿವರ ಅದಕ್ಷತೆ ಮತ್ತು ಶಾಸಕರನ್ನೂ ಕಡೆಗಣಿಸಿದ್ದರಿಂದ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಬಿಜೆಪಿ ಸರ್ಕಾರಕ್ಕೆ ಆ ಸ್ಥಿತಿ ಬರಬಾರದು. ಅಸಮರ್ಥರನ್ನು ಕೈ ಬಿಡಲಿ

- ನೆಹರು ಓಲೇಕಾರ, ಹಾವೇರಿ ಶಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು