ಶುಕ್ರವಾರ, ಡಿಸೆಂಬರ್ 6, 2019
20 °C
ಕೋರ್ಟ್‌ ತೀರ್ಪಿನ ನಂತರ ನಿರ್ಧಾರ * ಪರಿಷತ್‌ ಕ್ಷೇತ್ರಗಳಿಗೆ ಶೀಘ್ರ ಆಯ್ಕೆ

ಉಪ ಚುನಾವಣೆ: ಉಸ್ತುವಾರಿಗಳ ನೇಮಕ, ಅನರ್ಹರಿಗೆ ಟಿಕೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಉಪ ಚುನಾವಣೆ ನಡೆಯಲಿರುವ 17 ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ಉಸ್ತುವಾರಿಗಳನ್ನು ನೇಮಕ ಮಾಡಲಾಗುವುದು. ಅವರು ನ.4ರ ಒಳಗಾಗಿ ಆಯಾ ಕ್ಷೇತ್ರಗಳಲ್ಲಿ ಸಭೆ ನಡೆಸಿ, ಚುನಾವಣೆಗೆ ತಯಾರಿ ನಡೆಸಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

ಶನಿವಾರ ನಡೆದ ಪಕ್ಷದ ಪ್ರಮುಖರ ಸಭೆಯ ನಂತರ ಮಾತನಾಡಿದ ಅವರು, ‘ಕೋರ್ಟ್‌ ತೀರ್ಪಿನ ನಂತರ ಅನರ್ಹರಿಗೆ ಟಿಕೆಟ್‌ ನೀಡುವ ಕುರಿತು ನಿರ್ಧರಿಸಲಾಗುವುದು. ಪಕ್ಷಕ್ಕೆ ಬಂದರೆ ಸ್ವಾಗತಿಸಲಾಗುವುದು’ ಎಂದರು.

‘ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಜೂನ್‌ನಲ್ಲಿ ಚುನಾವಣೆ ನಡೆಯಲಿದ್ದು, ಇವುಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಉಸ್ತುವಾರಿಗಳು ಕೊಟ್ಟಿರುವ ವರದಿಯನ್ನು ಪರಿಶೀಲಿಸಲಾಗುವುದು. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಮೂರು ದಿನಗಳಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ಸಲ್ಲಿಸಲು ಸೂಚಿಸಲಾಗಿದೆ’ ಎಂದು ವಿವರಿಸಿದರು.

ಇದಕ್ಕೂ ಮುನ್ನ ನಡೆದ ಉತ್ತರ ಕರ್ನಾಟಕ ಭಾಗದ ಎಂಟು ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳ ಚುನಾವಣಾ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ‘ಕೋರ್ಟ್‌ ತೀರ್ಪಿನ ನಂತರ ಅನರ್ಹರ ಜತೆಗೆ ಪಕ್ಷದ ಇತರ ಟಿಕೆಟ್‌ ಆಕಾಂಕ್ಷಿಗಳನ್ನೂ ಸೇರಿಸಿ ಸಭೆ ಮಾಡಲಾಗುವುದು. ಹಳಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು ಎನ್ನಲಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಮಾತನಾಡಿ, ‘ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಈಗಿನಿಂದಲೇ ಸಂಘಟನೆಯನ್ನು ಚುರುಕುಗೊಳಿಸಬೇಕು. ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಹೈಕಮಾಂಡ್‌ ನಿರ್ಧರಿಸುವ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದರು.

ವಿಜಯನಗರ ಉಪ ಚುನಾವಣೆ ಕುರಿತ ಚರ್ಚೆ ನಡೆದಾಗ, ‘ಬುಡಾ’ ಅಧ್ಯಕ್ಷ ಸ್ಥಾನಕ್ಕೆ ದಮ್ಮೂರ ಶೇಖರ್ ಎಂಬುವರನ್ನು ನೇಮಕ ಮಾಡಿರುವುದಕ್ಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸನಗೌಡ ಪಾಟೀಲ ಸೇರಿದಂತೆ ಇತರರು ಆಕ್ಷೇಪ ಎತ್ತಿದರು. ಒಳ್ಳೆ ಹೆಸರು ಇಲ್ಲದವರನ್ನು ಈ ಸ್ಥಾನಕ್ಕೆ ನೇಮಿಸಿದ್ದು, ತಕ್ಷಣವೇ ಅದನ್ನು ರದ್ದುಪಡಿಸಬೇಕು ಎಂದು ಪಟ್ಟುಹಿಡಿದರು. ಈ ಸಂದರ್ಭದಲ್ಲಿ ನಳಿನ್‌ಕುಮಾರ ಕಟೀಲ್‌ ಸಮಾಧಾನಪಡಿಸಿದರು. ತಕ್ಷಣವೇ ಯಡಿಯೂರಪ್ಪ ಅವರು ಶೇಖರ್‌ ನೇಮಕಾತಿಯ ರದ್ದತಿಗೆ ಆದೇಶ ನೀಡಿದರು.

ಸಭೆಗೆ ಗೈರಾದ ಅಸಮಾಧಾನಿತರು
ಉಪ ಚುನಾವಣೆ ಕುರಿತಂತೆ ಚರ್ಚಿಸಲು ಕರೆದಿದ್ದ ಸಭೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತ ಮೂವರು ಅಭ್ಯರ್ಥಿಗಳು ಗೈರು ಹಾಜರಾಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಗವಾಡ ಕ್ಷೇತ್ರದ ಅಭ್ಯರ್ಥಿಯಾಗಿದ್ದ ರಾಜು ಕಾಗೆ, ಗೋಕಾಕ ಕ್ಷೇತ್ರದ ಅಶೋಕ ಪೂಜಾರಿ, ವಿಜಯನಗರ ಕ್ಷೇತ್ರದ ಎಚ್.ಆರ್‌. ಗವಿಯಪ್ಪ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಆರ್‌.ಅಶೋಕ, ಬಸವರಾಜ ಬೊಮ್ಮಾಯಿ, ಶಾಸಕ ಎನ್‌.ರವಿಕುಮಾರ್‌ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು