ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಬಂಡಾಯ ಶಮನಕ್ಕೆ ಶತಯತ್ನ

ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನ
Last Updated 1 ಡಿಸೆಂಬರ್ 2019, 13:42 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಉಪಚುನಾವಣೆ ನಾಮಪತ್ರ ಸಲ್ಲಿಕೆ ಕೊನೆಯ ಘಟ್ಟಕ್ಕೆ ಬಂದಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಟಿಕೆಟ್ ಹಂಚಿಕೆ ನಂತರ ಭುಗಿಲೆದ್ದಿರುವ ಅಸಮಾಧಾನ ತಣಿಸಲು ಬಿಜೆಪಿ ಮುಖಂಡರು ಶತಪ್ರಯತ್ನ ಮುಂದುವರಿಸಿದ್ದರೆ, ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿ ಸಿಗದೆ ಕೊನೆ ಕ್ಷಣದಲ್ಲಿ ಪಿ.ನಾಗರಾಜ್ ಅವರನ್ನು ಕಣಕ್ಕಿಸಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನ ಬಹುತೇಕ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದು, ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಿರುವುದು ಆ ಪಕ್ಷದಲ್ಲಿ ಭಿನ್ನಮತ ಉಲ್ಬಣಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಮುಖಂಡರು ಸಿಟ್ಟು ಕಡಿಮೆ ಮಾಡಲು ‘ತಂತ್ರ’ ಹೆಣೆದಿದ್ದಾರೆ. ಒಂದೆಡೆ ‘ನಿಯಂತ್ರಣ’ಕ್ಕೆ ಬಂದಂತೆ ಕಂಡರೂ, ಮತ್ತೊಂದೆಡೆ ಹೊಸರೂಪ ಪಡೆದುಕೊಳ್ಳುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.

ಬೆಳಗಾವಿ ಜಿಲ್ಲೆಯನ್ನೇ ಕೇಂದ್ರೀಕರಿಸಿ ಅತೃಪ್ತಿ ಶಮನ ಮಾಡುತ್ತಿದ್ದರೂ, ಅಥಣಿಯಲ್ಲಿ ಭಾನುವಾರ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಜಗದೀಶ ಶೆಟ್ಟರ್, ಮುಖಂಡ ಕವಟಗಿಮಠ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾದರು. ಸವದಿ ಅವರಿಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಒತ್ತಾಯಿಸಿದರು. ಅನರ್ಹ ಶಾಸಕ ಮಹೇಶ್ ಕುಮಠಳ್ಳಿ ಅವರಿಗೆ ಟಿಕೆಟ್ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ಬೆಂಬಲಿಸುವುದಿಲ್ಲ ಎಂದು ಪಟ್ಟುಹಿಡಿದರು. ‘ಮೋದಿ, ಯಡಿಯೂರಪ್ಪ ಅವರನ್ನು ಟೀಕಿಸಿದವರಿಗೆ ಈಗ ನಾವು ಹೇಗೆ ಮತಹಾಕುವುದು’ ಎಂದು ಪ್ರಶ್ನಿಸಿದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಮಹೇಶ್ ಕುಮಠಳ್ಳಿ ತಮ್ಮ ಬೆಂಬಲಿಗರ ಜತೆಗೆ ಪ್ರತ್ಯೇಕ ಸಭೆ ನಡೆಸಿದರು. ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಹೆಚ್ಚುತ್ತಿರುವುದಕ್ಕೆ ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು ಎನ್ನಲಾಗಿದೆ.

ಗೋಕಾಕ್ ಕ್ಷೇತ್ರದಲ್ಲಿ ಟಿಕೆಟ್ ಸಿಗದೆ ಸಿಡಿದೆದ್ದಿರುವ ಅಶೋಕ್ ಪೂಜಾರಿ ಅವರ ಮನವೊಲಿಸುವ ಪ್ರಯತ್ನ ‘ಫಲ’ ನೀಡಿಲ್ಲ. ‘ಹೊಂದಾಣಿಕೆ’ ರಾಜಕಾರಣ ಮಾಡುವುದಿಲ್ಲ ಎಂದು ಘೋಷಿಸಿರುವ ಪೂಜಾರಿ, ಸ್ಪರ್ಧಿಸಿಯೇ ತೀರುವುದಾಗಿ ಹಟ ಹಿಡಿದಿದ್ದಾರೆ. ಜೆಡಿಎಸ್‌ನಿಂದ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

ರಾಣೆಬೆನ್ನೂರು ಕ್ಷೇತ್ರದಲ್ಲಿ ಅರುಣ್‌ ಕುಮಾರ್‌ಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಹಾಗೂ ಬಸವರಾಜ ಕೆಲಗಾರ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುತ್ತಿಗೆ ಹಾಕಲು ಕೆಲ ಕಾರ್ಯಕರ್ತರು ಪ್ರಯತ್ನಿಸಿದರು. ಕೊನೆಗೆ ಮುಖ್ಯಮಂತ್ರಿಯನ್ನು ಭೇಟಿಮಾಡಿ ಚರ್ಚಿಸಿದರೂ, ಸಿಟ್ಟಿನಿಂದಲೇ ಹೊರನಡೆದಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಸಚಿವ ಬಿ.ಶ್ರೀರಾಮುಲು ಅತೃಪ್ತರ ಜತೆಗೆ ಮಾತುಕತೆ ನಡೆಸಿದರೂ ಕಾರ್ಯಕರ್ತರ ಅಸಮಾಧಾನ ಕಡಿಮೆಮಾಡಲು ಸಾಧ್ಯವಾಗಿಲ್ಲ.

ಸ್ಟಾರ್ ಪ್ರಚಾರಕರು:ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಕೇಂದ್ರದ ಯಾವ ನಾಯಕರೂ ಪ್ರಚಾರಕ್ಕೆ ಬರುತ್ತಿಲ್ಲ. ನಟ ಜಗ್ಗೇಶ್, ವಿವಾದಾತ್ಮಕ ಹೇಳಿಕೆಯ ಮೂಲಕ ಗಮನ ಸೆಳೆದಿರುವ ಸಂಸತ್ ಸದಸ್ಯರಾದ ಅನಂತ ಕುಮಾರ್ ಹೆಗಡೆ, ತೇಜಸ್ವಿ ಸೂರ್ಯ ಅವರನ್ನು ಪ್ರಚಾರ ಪಟ್ಟಿಗೆ ಸೇರಿಸಿಕೊಂಡಿಲ್ಲ.

ಕಾಂಗ್ರೆಸ್ ಸಹ 15 ಕ್ಷೇತ್ರಗಳಿಗೂ ವೀಕ್ಷಕರನ್ನು ನೇಮಿಸುವ ಮೂಲಕ ಪ್ರಚಾರಕ್ಕೆ ಸಜ್ಜಾಗಿದ್ದು, ಪಕ್ಷದ ಕೇಂದ್ರ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ. ಈ ಹೊತ್ತಿನಲ್ಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ– ಹಿರಿಯರ ನಡುವಿನ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದೆ. ಚುನಾವಣೆಯ ಎಲ್ಲಾ ಜವಾಬ್ದಾರಿಯನ್ನು ಸಿದ್ದರಾಮಯ್ಯ ಕಡೆಗೆ ತಳ್ಳಿ ಹಿರಿಯರು ಹಿಂದೆ ಸರಿದಿದ್ದಾರೆ. ಅಥಣಿ, ಗೋಕಾಕ್ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸುವ ಬಗ್ಗೆ ಜೆಡಿಎಸ್ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ವಾಕ್ಸಮರ:ಚುನಾವಣೆ ಕಾವು ಏರುತ್ತಿದ್ದಂತೆ ವಾಕ್ಸಮರವೂ ಜೋರು ಪಡೆದುಕೊಂಡಿದೆ. ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಯಡಿಯೂರಪ್ಪ ‘ತಮ್ಮ ವಿರುದ್ಧ ಚುನಾವಣಾ ಆಯೋಗಕ್ಕೆ ಸಿದ್ದರಾಮಯ್ಯ ದೂರು ನೀಡಿರುವುದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ ಬೇರೆ ಕೆಲಸವಿಲ್ಲದೆ ಇಂತಹ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

‘ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ’ ಎಂದು ಹೇಳುತ್ತಿದ್ದ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್, ಮತ್ತೊಮ್ಮೆ ತಿರುಗಿ ಬಿದ್ದಿದ್ದಾರೆ. ‘ಸಿದ್ದರಾಮಯ್ಯ ಅವರ 30 ವರ್ಷಗಳ ಅವಧಿಯ ಬಂಡವಾಳ ಬಯಲು ಮಾಡಲಾಗುವುದು’ ಎಂದು ಬೆದರಿಕೆ ಹಾಕಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಇಷ್ಟು ವರ್ಷ ಏನು ಮಾಡುತ್ತಿದ್ದರು. ನನ್ನ ವಿಚಾರ ಬಿಚ್ಚಿಡಲು ಅವರ ಹತ್ತಿರ ಏನಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಬುದ್ಧಿ ಚಂಚಲವಾಗಿದೆ’ ಎಂದು ಚುಚ್ಚಿದ್ದಾರೆ. ‘1978ರಿಂದಲೂ ರಾಜಕೀಯ ಜೀವನದಲ್ಲಿ ಸಕ್ರಿಯವಾಗಿರುವ ಎಚ್.ವಿಶ್ವನಾಥ್‌ ಈವರೆಗೆ ಹುಣಸೂರನ್ನು ಜಿಲ್ಲೆಯಾಗಿಸುವ ಪ್ರಯತ್ನ ಏಕೆ ಮಾಡಿರಲಿಲ್ಲ’ ಎಂದು ಪ್ರಶ್ನಿಸಿದರು.

ಕೋರ್ಟ್‌ನಲ್ಲೇ ಅನರ್ಹರು ಎಂಬ ಹಣೆಪಟ್ಟಿ ಕಟ್ಟಿಕೊಂಡು ಬಂದಿದ್ದಾರೆ. ಇಂತಹವರು ಮುಂದೆ ಗೆದ್ದುಬಂದು ಮಂತ್ರಿಯಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆಯೆ? ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಶರತ್ ಉಚ್ಚಾಟನೆ: ಯಡಿಯೂರಪ್ಪ ಎಚ್ಚರಿಕೆ

ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿರುವ ಶರತ್ ಬಚ್ಚೇಗೌಡ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.

‘ನಾಗರಾಜ್ ಅವರಂತಹ ಪ್ರಮಾಣಿಕರು ಸಿಗುವುದಿಲ್ಲ. ಇಂತಹವರ ವಿರುದ್ಧ ಶರತ್ ಸ್ಪರ್ಧಿಸಿರುವುದು ಸರಿಯಲ್ಲ’ ಎಂದರು.

‘ಲಕ್ಷ್ಮಿ ಕಾಲಿಗೆ ಬಿದ್ದು ಮಂತ್ರಿಯಾದರು’

‘ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಅವರ ಕಾಲಿಗೆ ಬಿದ್ದು ರಮೇಶ ಜಾರಕಿಗೊಳಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈ ವಿಚಾರ ಸುಳ್ಳೆಂದು ಬಹಿರಂಗವಾಗಿ ಹೇಳಲಿ’ ಎಂದು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಸವಾಲು ಹಾಕಿದ್ದಾರೆ.

ಸಹೋದರನ ವಿರುದ್ಧ ಸೆಟೆದು ನಿಂತಿದ್ದು, ‘ಲಕ್ಷ್ಮಿ ಕಾಲಿಗೆ ಬಿದ್ದು ರಮೇಶ್ ಸಚಿವ ಸ್ಥಾನಕ್ಕೆ ಬೇಡಿಕೊಂಡಿದ್ದರು. ಇದು ಸುಳ್ಳೆಂದು ಸಾರ್ವಜನಿಕವಾಗಿ ಹೇಳಲಿ’ ಎಂದರು.

‘ಶಾಸಕ ಡಿ.ಕೆ.ಶಿವಕುಮಾರ್, ಲಕ್ಷ್ಮಿ, ರಮೇಶ್ ಒಂದೇ ಗುಂಪಿನಲ್ಲಿ ಇದ್ದರು. ಆಂತರಿಕ ಜಗಳದಿಂದ ಬೇರೆಯಾಗಿದ್ದಾರೆ. ಈಗ ಸಿಕ್ಕವರನ್ನೆಲ್ಲ ರಾಜಕೀಯ ಗುರು ಎಂದು ರಮೇಶ್ ಹೇಳುತ್ತಿದ್ದಾನೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT