ಶುಕ್ರವಾರ, ಡಿಸೆಂಬರ್ 6, 2019
17 °C

ಸಚಿವ ಮಾಧುಸ್ವಾಮಿ ಬಂಧಿಸಿ, ಸಂಪುಟದಿಂದ ವಜಾಗೊಳಿಸಿ: ಬಸವರಾಜ ರಾಯರಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ವೀರಶೈವ ಲಿಂಗಾಯತ ಧರ್ಮೀಯರ ಸಭೆ ಸಂಘಟಿಸಿ, ಅವರನ್ನು ಪ್ರಚೋದಿಸುವ ರೀತಿಯಲ್ಲಿ ಮಾತಾಡಿ ನೀತಿ ಸಂಹಿತೆ ಉಲ್ಲಂಘಿಸಿರುವ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನು ಚುನಾವಣಾ ಆಯೋಗ ತಕ್ಷಣವೇ ಬಂಧಿಸಬೇಕು. ರಾಜ್ಯಪಾಲರು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಬಸವರಾಜ ರಾಯರಡ್ಡಿ ಆಗ್ರಹಿಸಿದರು.‌

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸೋಮವಾರ (ಡಿ.2) ನಗರದಲ್ಲಿ ಬಿಜೆಪಿ ಸಂಘಟಿಸಿದ್ದ ಸಭೆಯಲ್ಲಿ ಮಾಧುಸ್ವಾಮಿಯವರು, ‘ವೀರಶೈವ ಲಿಂಗಾಯತ ಸಮಾಜದವರ ಒಂದು ಮತವೂ ಬಿಜೆಪಿ ಹೊರತುಪಡಿಸಿ ಅನ್ಯ ಪಕ್ಷದ ಅಭ್ಯರ್ಥಿಗೆ ಬೀಳಬಾರದು. ಒಂದುವೇಳೆ ಬೇರೆಯವರಿಗೆ ಮತ ಹಾಕಿದರೆ ಅದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕೆನ್ನೆಗೆ ಹೊಡೆದಂತೆ, ಅವರಿಗೆ ಕಲ್ಲು ಹೊಡೆದು ಅಪಮಾನ ಮಾಡಿದಂತೆ’ ಎಂದು ಹೇಳಿದ್ದಾರೆ. ಇದು ನೇರಾನೇರ ನೀತಿ ಸಂಹಿತೆಯ ಉಲ್ಲಂಘನೆ. ಈ ಕುರಿತು ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗೆ ಕೆಪಿಸಿಸಿಯಿಂದ ದೂರು ಕೊಡಲಾಗುವುದು. ಒಂದುವೇಳೆ ಆಯೋಗ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು’ ಎಂದು ಹೇಳಿದರು.

ಇದನ್ನೂ ಓದಿ... ಆನಂದ್‌ ಸಿಂಗ್‌ ಹಣದ ಮಹಾರಾಜ: ವಿ.ಎಸ್‌. ಉಗ್ರಪ್ಪ ವ್ಯಂಗ್ಯ

‘ಮಾಧುಸ್ವಾಮಿ ಅಷ್ಟೇ ಅಲ್ಲ, ಸಭೆಯಲ್ಲಿ ಪಾಲ್ಗೊಂಡಿದ್ದ ವಸತಿ ಸಚಿವ ವಿ. ಸೋಮಣ್ಣ, ಬಿಜೆಪಿಯ ಸಂಸದರು, ಶಾಸಕರು ಹಾಗೂ ಮುಖಂಡರ ವಿರುದ್ಧವೂ ಆಯೋಗ ಕ್ರಮ ಕೈಗೊಳ್ಳಬೇಕು. 125(ಎ) ಜನಪ್ರತಿನಿಧಿ ಕಾಯ್ದೆ ಪ್ರಕಾರ, ಜಾತಿ–ಧರ್ಮದ ಹೆಸರಿನಲ್ಲಿ ಸಭೆ ಆಯೋಜಿಸಿ, ಯಾರು ಕೂಡ ಮತ ಕೇಳುವಂತಿಲ್ಲ. ಅದಕ್ಕೆ ಮೂರು ವರ್ಷ ಶಿಕ್ಷೆ ಇದೆ. ಅಂತಹ ಸಭೆಗಳಿಂದ ಜಾತಿ ಜಾತಿಗಳ ನಡುವೆ ಕಲಹ ಉಂಟಾಗುತ್ತದೆ. ಸುಮಾರು 40 ವರ್ಷ ವಕೀಲರಾಗಿ ಕೆಲಸ ಮಾಡಿರುವ ಮಾಧುಸ್ವಾಮಿಯವರು ಕಾನೂನು ಮಂತ್ರಿ ಕೂಡ ಆಗಿದ್ದಾರೆ. ಈ ರೀತಿ ಪ್ರಚೋದನಕಾರಿಯಾಗಿ ಮಾತಾಡಿರುವ ಅವರು ಸಂಪುಟದಲ್ಲಿ ಇರಬಾರದು’ ಎಂದರು.

‘ವಾರದ ಹಿಂದೆ ಇದೇ ರೀತಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೂಡ ಮಾತಾಡಿದ್ದರು. ಅದರ ವಿರುದ್ಧ ಈಗಾಗಲೇ ಪಕ್ಷದಿಂದ ದೂರು ಕೊಡಲಾಗಿದೆ. ಅವರೂ ವಿವೇಚನೆಯಿಂದ ಮಾತಾಡಬೇಕು. ಅವರಿಗೆ ನೈತಿಕತೆಯಿದ್ದರೆ ಆ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿದರು.

‘ಲಿಂಗಾಯತರು ಸುಸಂಸ್ಕೃತರು, ವಿಚಾರವಂತರು. ಜಾತಿ ಆಧಾರದ ಮೇಲೆ ಆ ಧರ್ಮೀಯರು ಎಂದೂ ಮತ ಚಲಾಯಿಸಿಲ್ಲ. ವಿಷಯಾಧಾರಿತವಾಗಿ ಮತದಾನ ಮಾಡಿದ್ದಾರೆ. ಆ ಸಮಾಜದ ಹೆಸರು ದುರ್ಬಳಕೆ ಮಾಡಿಕೊಂಡು, ಇಡೀ ಸಮಾಜಕ್ಕೆ ಮಾಧುಸ್ವಾಮಿ ಅಪಮಾನ ಮಾಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

ಇದನ್ನೂ ಓದಿ... ‘ಬೇರೆಯವರಿಗೆ ಮತ ಹಾಕಿದರೆ ಯಡಿಯೂರಪ್ಪ ಕೆನ್ನೆಗೆ ಹೊಡೆದಂತೆ’

‘ಲಿಂಗಾಯತ ಸಮಾಜದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಬಿ.ಡಿ.ಜತ್ತಿ, ಎಸ್‌.ಆರ್‌. ಕಂಠಿ ಅತ್ಯುತ್ತಮ ರಾಜಕಾರಣಿಗಳು. ಒಂದು ಪೈಸೆಯೂ ಹಣ ಮಾಡಿರಲಿಲ್ಲ. ಅವರಿಗೆ ಸ್ವಂತ ಮನೆ, ಕಾರು ಕೂಡ ಇರಲಿಲ್ಲ. ಅಕ್ರಮ ಗಣಿಗಾರಿಕೆಯಲ್ಲಿ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ. ಅವರ ವಿರುದ್ಧ ಅನೇಕ ಪ್ರಕರಣಗಳಿವೆ. ಜಾಮೀನಿನ ಮೇಲೆ ಹೊರಗಿದ್ದಾರೆ. ಅವರು ಮೂರುವರೆ ವರ್ಷ ಸಿ.ಎಂ. ಆಗಿರಲು ಜಾತಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು