ಶನಿವಾರ, ಡಿಸೆಂಬರ್ 14, 2019
25 °C

ಬಿಜೆಪಿ ಆಂತರಿಕ ಸಮೀಕ್ಷೆ: 8 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಪಚುನಾವಣೆ ಬಳಿಕ ಬಿಜೆಪಿ ಸರ್ಕಾರ ಉಳಿಯುತ್ತದೆಯೊ, ಉರುಳುತ್ತದೆಯೊ ಎಂಬ ಬಿಸಿ ಬಿಸಿ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿರುವಾಗಲೇ, ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆ ಆ ಪಕ್ಷದ ನಾಯಕರಲ್ಲಿ ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ. 

‘ಆಂತರಿಕ ಸಮೀಕ್ಷೆಯ ಪ್ರಕಾರ, ಕನಿಷ್ಠ 8 ರಿಂದ 9 ಸ್ಥಾನಗಳಲ್ಲಿ ಗೆಲುವು ಸಾಧ್ಯ. ಸಾಕಷ್ಟು ಕಡೆಗಳಲ್ಲಿ ಕಠಿಣ ಸ್ಪರ್ಧೆ ಇದ್ದರೂ, ಅಂತಿಮವಾಗಿ ಸರ್ಕಾರ ಉಳಿವಿಗೆ ಅಗತ್ಯವಿರುವಷ್ಟು ಗೆಲ್ಲುವುದು ಕಷ್ಟವಾಗುವುದಿಲ್ಲ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಪುನಃ ಸಮ್ಮಿಶ್ರ ಸರ್ಕಾರ ರಚಿಸುತ್ತೇವೆ ಎಂದು ಕಾಂಗ್ರೆಸ್‌– ಜೆಡಿಎಸ್‌ ನಾಯಕರು ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದರೂ ನಮ್ಮ ಪಕ್ಷದ ಮುಖಂಡರು ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅದು ವಿರೋಧಿಗಳ ಚುನಾವಣಾ ತಂತ್ರಗಾರಿಕೆಯೇ ಹೊರತು, ವಾಸ್ತವ ಅಲ್ಲ ಎಂಬುದು ಗೊತ್ತಾಗಿದೆ’ ಎಂದೂ ಪಕ್ಷದ ಮೂಲಗಳು ಹೇಳಿವೆ.

ಎಲ್ಲೆಲ್ಲಿ ಕಠಿಣ ಸ್ಪರ್ಧೆ: ಮುಖ್ಯವಾಗಿ ಹೊಸಕೋಟೆ, ಯಶವಂತಪುರ, ಹುಣಸೂರು, ಕೆ.ಆರ್‌.ಪೇಟೆ, ಗೋಕಾಕ, ಶಿವಾಜಿನಗರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ನಡೆದಿದೆ. ಇವುಗಳಲ್ಲಿ ಯಶವಂತಪುರ, ಚಿಕ್ಕಬಳ್ಳಾಪುರ ಮತ್ತು ಗೋಕಾಕ ಕ್ಷೇತ್ರಗಳಲ್ಲಿ 50–50 ಇದ್ದು, ಫೋಟೊ ಫಿನಿಷಿಂಗ್‌ ಫಲಿತಾಂಶ ಬರಬಹುದು. ಯಲ್ಲಾಪುರ, ಕೆ.ಆರ್‌.ಪುರ, ಮಹಾಲಕ್ಷ್ಮಿಲೇಔಟ್‌, ಅಥಣಿ, ಕಾಗವಾಡ, ಹಿರೇಕೆರೂರು, ರಾಣೆಬೆನ್ನೂರು, ವಿಜಯ ನಗರ ಕ್ಷೇತ್ರಗಳು ಗೆಲುವು ಸಾಧ್ಯ ಎಂಬುದು ಬಿಜೆಪಿ ಆಂತರಿಕ ಸಮೀಕ್ಷೆಯ ಸಾರಾಂಶ.

ಆರಂಭದಲ್ಲಿ ಐದು ಅಥವಾ ಆರು ಸ್ಥಾನಗಳು ಗೆದ್ದರೆ ಹೆಚ್ಚು ಎಂಬ ಹೀನಾಯ ಸ್ಥಿತಿ ಇತ್ತು. ಆದರೆ, ದಿನೇ ದಿನೇ ಪರಿಸ್ಥಿತಿ ಸುಧಾರಣೆ ಆಗುತ್ತಿದೆ. 15 ಕ್ಷೇತ್ರಗಳಲ್ಲಿ ಬೆರಳೆಣಿಕೆಯಷ್ಟು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಹಿಂದಿನ ಚುನಾವಣೆಗಳಲ್ಲಿ ಗೆದ್ದಿತ್ತು. ಉಳಿದವು ಬಿಜೆಪಿಗೆ ಅಭೇದ್ಯ ಕೋಟೆಯೇ ಆಗಿದ್ದವು. ಪಕ್ಷಕ್ಕೆ ಬಂದ ಅನರ್ಹ ಶಾಸಕರ ಬೆಂಬಲಿಗರು ಮತ್ತು ಪಕ್ಷದ ಮೂಲ ಕಾರ್ಯಕರ್ತರ ಮಧ್ಯೆ ಆರಂಭದಲ್ಲಿ ಹೊಂದಾಣಿಕೆ ಸಮಸ್ಯೆ ಇದ್ದವು. ಮೂಲ ಕಾರ್ಯಕರ್ತರು ಮುನಿಸಿಕೊಂಡಿದ್ದರು. ಈಗ ಆ ಅಂತರ ಕಡಿಮೆ ಆಗಿದೆ. ಪರಿಸ್ಥಿತಿಯೂ ಬದಲಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಐದು ಅಥವಾ ಆರು ಕ್ಷೇತ್ರಗಳ ಗೆಲುವಿನ ಸಾಧ್ಯತೆ ಇದ್ದಾಗ, ನಾಯಕರಿಗೆ ಆತಂಕ ಆಗಿತ್ತು. ಅದಕ್ಕಾಗಿ ಕಾರ್ಯತಂತ್ರ ಬದಲಿಸಲಾಯಿತು. ಪಕ್ಷದ ಅಧ್ಯಕ್ಷ ಅಮಿತ್‌ ಶಾ ಕೂಡ 15 ರಲ್ಲಿ 12 ಗೆಲ್ಲಲೇಬೇಕು ಎಂಬ ಗುರಿ ನಿಗದಿ ಮಾಡಿದ ಬಳಿಕ ಅಸಮಾಧಾನ ಇದ್ದವರೂ ಚಳಿ ಬಿಟ್ಟು, ಗೆಲುವಿಗಾಗಿ ಹೋರಾಡುವುದು ಅನಿವಾರ್ಯವಾಯಿತು ಎಂದು ಅವರು ಹೇಳಿದರು.

ಎಂಟರಿಂದ ಹತ್ತು ಸ್ಥಾನಗಳನ್ನು ಗೆದ್ದುಕೊಳ್ಳಲು ಎಲ್ಲರೂ ಹೋರಾಡಬೇಕಾಗಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು