ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿದ್ದಾಜಿದ್ದಿಯ ಅಖಾಡ ಸಿದ್ಧ: ಉಪಚುನಾವಣೆ ನಾಮಪತ್ರ ಸಲ್ಲಿಕೆ ಮುಕ್ತಾಯ

ಇನ್ನು ಸಮರಾಂಗಣದಲ್ಲಿ ಹೋರಾಟ
Last Updated 18 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೋಮವಾರ ಮುಕ್ತಾಯವಾಗಿದ್ದು, ಬಿಜೆಪಿ ಸರ್ಕಾರದ ಅಳಿವು ಉಳಿವು ನಿರ್ಧರಿಸುವ ಮತಸಮರಕ್ಕೆ ಜಿದ್ದಾಜಿದ್ದಿಯ ಅಖಾಡ ಅಣಿಯಾಗಿದೆ.

ಕೆಲವು ಅಭ್ಯರ್ಥಿಗಳು 2–3 ನಾಮಪತ್ರ ಸಲ್ಲಿಸಿದ್ದು, 15 ಕ್ಷೇತ್ರಗಳಲ್ಲಿ 300ಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ವಾಪಸ್ ಪ‍ಡೆಯಲು ಇದೇ 21 ಕೊನೆಯ ದಿನವಾಗಿದೆ. ಬಿಜೆಪಿ, ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲಿ ಹಾಗೂ ಹೊಸಕೋಟೆ ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಮೂರೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಶಕ್ತಿ ಪ್ರದರ್ಶನ ನಡೆಸಿದರು. ಕೆ.ಆರ್‌.ಪೇಟೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಕೆ.ಸಿ.ನಾರಾಯಣಗೌಡ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ, ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.

ನಾಮಪತ್ರ ಸಲ್ಲಿಕೆ ವೇಳೆ ನಡೆದ ಸಮಾವೇಶ, ಮೆರವಣಿಗೆಯಲ್ಲಿ ಮೂರು ಪಕ್ಷಗಳ ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳ ಮಧ್ಯೆ ಮಾತಿನ ಸಮರವೂ ಬಿರುಸುಗೊಂಡಿದೆ. ಮಂಗಳವಾರದಿಂದ ಪ್ರಚಾರದ ವೇಳೆ ಇದು ಮತ್ತಷ್ಟು ತಾರಕಕ್ಕೆ ಏರಲಿದೆ.

ಗೋಕಾಕ ಕ್ಷೇತ್ರದಲ್ಲಿ ಪರಸ್ಪರ ಗುಟುರು ಹಾಕುತ್ತಿರುವ ಸಹೋದರರಾದ ರಮೇಶ ಜಾರಕಿಹೊಳಿ ಮತ್ತು ಲಖನ್‌ ಜಾರಕಿಹೊಳಿ ನಾಮಪತ್ರ ಸಲ್ಲಿಸಿದರು. ಲಖನ್‌ ಭರ್ಜರಿ ಮೆರವಣಿಗೆ ಮೂಲಕ ತೆರಳಿದರೆ, ರಮೇಶ ಅವರು ಅದಕ್ಕೆ ಸೇರಿಗೆ ಸವ್ವಾಸೇರು ಎಂಬಂತೆ ಅಪಾರ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಮೂಲಕ ತೊಡೆ ತಟ್ಟಿದರು.

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಡಾ.ಸುಧಾಕರ್‌, ಕಾಂಗ್ರೆಸ್‌ನ ಆಂಜನಪ್ಪ ಮತ್ತು ಜೆಡಿಎಸ್‌ನ ಕೆ.ಪಿ.ಬಚ್ಚೇಗೌಡ ಅವರು ಭರ್ಜರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು. ಹೊಸಕೋಟೆಯಲ್ಲಿ ಎಂ.ಟಿ.ಬಿ.ನಾಗರಾಜ್‌ ಅವರು ನಾಮಪತ್ರ ಸಲ್ಲಿಸುವಾಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜತೆಯಲ್ಲಿದ್ದರೆ, ಕೆ.ಆರ್.ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸುವಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದ್ದರು.

ಏಟು–ಎದಿರೇಟು

ಸಂಸದ ಬಚ್ಚೇಗೌಡ ಮತ್ತು ಅವರ ಪುತ್ರ ಶರತ್‌ ಬಳಿ ಮೂರು ಬಾರಿ ಮಾತನಾಡಿದ್ದೆ. ಈಗ ತಿರುಗಿ ಬಿದ್ದಿರುವ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ಡಿ. 9 ರ ನಂತರ ಸರ್ಕಾರ ಉಳಿಯುವುದಿಲ್ಲ ಎಂದುಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್‌ನಿಂದ ಭೈರತಿ ಬಸವರಾಜ್ ಟಿಕೆಟ್ ಪಡೆದು ಗೆದ್ದು ಇದೀಗ ಅಧಿಕಾರಕ್ಕಾಗಿ ರಾಜೀನಾಮೆ ನೀಡಿರುವುದು ಎಷ್ಟು ಸರಿ. ಇವರಿಗೆ ಮಾರ್ಯಾದೆ ಇಲ್ಲ ಎಂದುವಿರೋಧ ಪಕ್ಷದ ನಾಯಕಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್‌ನ ಹತ್ತಾರು ಶಾಸಕರ ಅರ್ಜಿಗಳು ನಮ್ಮ ಕಿಸೆಗೆ ಬಂದಿವೆ. ಚುನಾವಣೆ ಮುಗಿದ ಬಳಿಕ, ಆ ಪಕ್ಷದಲ್ಲಿ ಸಿದ್ದರಾಮಯ್ಯ, ದಿನೇಶ್‌ ಮಾತ್ರ ಉಳಿಯುತ್ತಾರೆ ಎಂದು ಬಿಜೆಪಿ ಸಂಸದಅನಂತಕುಮಾರ ಹೆಗಡೆ ಲೇವಡಿ ಮಾಡಿದರು.

ಕೆ.ಆರ್. ಪೇಟೆಯಲ್ಲಿ ಚಪ್ಪಲಿ ತೂರಾಟ

ಕೆ.ಆರ್‌.ಪೇಟೆ: ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಅವರು ಸಚಿವ ಜೆ.ಸಿ. ಮಾಧುಸ್ವಾಮಿ ಜತೆ ನಾಮಪತ್ರ ಸಲ್ಲಿಸಲು ಬಂದಾಗ ಅವರ ಮೇಲೆ ಕಿಡಿಗೇಡಿಗಳು ಚಪ್ಪಲಿ ಮತ್ತು ಕಲ್ಲು ತೂರಾಟ ನಡೆಸಿದ್ದರಿಂದಾಗಿ ಕೆಲಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಏಕಕಾಲಕ್ಕೆ ಮೆರವಣಿಗೆಯಲ್ಲಿ ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿ, ಮಾತಿನ ಚಕಮಕಿ ನಡೆಯಿತು. ಜೆಡಿಎಸ್ ಕಾರ್ಯಕರ್ತರೇ
ಚಪ್ಪಲಿ ತೂರಿದ್ದಾಗಿ ನಾರಾಯಣಗೌಡ ಆರೋಪಿಸಿದರು.

ಶರತ್‌, ಕವಿರಾಜ್‌ ಬಿಜೆಪಿ ಬಂಡಾಯ ಅಭ್ಯರ್ಥಿಗಳು

ಹೊಸಕೋಟೆಯಲ್ಲಿ ಶರತ್‌ ಬಚ್ಚೇಗೌಡ ಮತ್ತು ವಿಜಯನಗರ (ಹೊಸಪೇಟೆ) ಕ್ಷೇತ್ರದಲ್ಲಿ ಕವಿರಾಜ್‌ ಅರಸ್‌ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

‘ನಾಮಪತ್ರವನ್ನು ಹಿಂದಕ್ಕೆ ಪಡೆಯದೇ ಇದ್ದರೆ, ಪಕ್ಷ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಆದರೆ, ನಾಮಪತ್ರ ಹಿಂದಕ್ಕೆ ಪಡೆಯುವುದಿಲ್ಲ ಎಂದು ಇಬ್ಬರೂ ಸ್ಪಷ್ಟಪಡಿಸಿದ್ದಾರೆ.

ಶಿವಾಜಿನಗರದಲ್ಲಿ ರೋಷನ್‌ಬೇಗ್‌ ಅವರು ನಾಮಪತ್ರ ಸಲ್ಲಿಸದೇ ಕಣದಿಂದ ಹಿಂದಕ್ಕೆ ಸರಿಯುವ ಮೂಲಕ ತಟಸ್ಥರಾಗಿದ್ದಾರೆ.

ಬೇಗ್‌ ಅವರನ್ನು ಬೆಂಬಲಿಸುತ್ತಿರುವ ಬಿಬಿಎಂಪಿ ಸದಸ್ಯರೂ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಅವರನ್ನು ಬೆಂಬಲಿಸುವ ಸಾಧ್ಯತೆ ಇಲ್ಲ. ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸದೇ ತಟಸ್ಥವಾಗಿ ಉಳಿದರೆ, ಕ್ರಮ ಜರುಗಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT