ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ವಿಷಯ: ಸಿದ್ದರಾಮಯ್ಯ– ಶ್ರೀರಾಮುಲು ಜಟಾಪಟಿ

‘ಮಾನ ಮರ್ಯಾದೆ ಇದ್ದರೆ ಹಿಂದೆಯೇ ರಾಜೀನಾಮೆ ನೀಡಬೇಕಿತ್ತು’
Last Updated 20 ನವೆಂಬರ್ 2019, 5:46 IST
ಅಕ್ಷರ ಗಾತ್ರ

ಮೈಸೂರು: ರಾಜೀನಾಮೆ ನೀಡುವ ವಿಷಯವಾಗಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಬಿ.ಶ್ರೀರಾಮುಲು ನಡುವಿನ ವಾಕ್ಸಮರ ಮುಂದುವರಿದಿದೆ.

ರಾಜೀನಾಮೆ ನೀಡುವಂತೆ ಶ್ರೀರಾಮುಲು ಹಾಕಿದ ಸವಾಲಿಗೆ ಮಂಗಳವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅವರಿಗೆ ಮಾನ ಮರ್ಯಾದೆ ಇದ್ದರೆ ಹಿಂದೆಯೇ ರಾಜೀನಾಮೆ ಕೊಡಬೇಕಿತ್ತು’ ಎಂದು ವಾಗ್ದಾಳಿ ನಡೆಸಿದರು.

‘ಶ್ರೀರಾಮುಲು ಚುನಾವಣೆಯಲ್ಲಿ ನನ್ನ ವಿರುದ್ಧ ಸೋತಿದ್ದು, ಆ ಹತಾಶೆಯಿಂದ ಹೊರಬಂದಂತೆ ಕಾಣುತ್ತಿಲ್ಲ. ಅದಕ್ಕಾಗಿಯೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಬಿಜೆಪಿಯವರು ಪ್ರಚಾರ ಮಾಡಿದರು. ಆ ಸ್ಥಾನ ನೀಡಿದರಾ? ಶಾಸಕರೇ ಅಲ್ಲದವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಪರಿಶಿಷ್ಟ ವರ್ಗದವರಿಗೆ ಶೇ 7ರಷ್ಟು ಮೀಸಲಾತಿ ಸಿಗದಿದ್ದರೆ ಶಾಸಕ ಸ್ಥಾನದಲ್ಲಿ ಒಂದು ನಿಮಿಷವೂ ಇರಲ್ಲ ಅಂದಿದ್ದರು. ಏನಾಯ್ತು? ಪಾಪ! ಶ್ರೀರಾಮುಲು ವಿರುದ್ಧ ಏನು ಮಾತಾಡೋದು? ಸ್ವಾರ್ಥಿಗಳೆಲ್ಲ ಒಂದೆಡೆ ಸೇರಿಕೊಂಡಿದ್ದಾರೆ. ಅವರ ಬಳಿ ಸ್ವಾರ್ಥವೊಂದು ಬಿಟ್ಟು ಬೇರಾವ ಮೌಲ್ಯ, ಸಿದ್ಧಾಂತಗಳೂ ಇಲ್ಲ’ ಎಂದು ಛೇಡಿಸಿದರು.

ಶ್ರೀರಾಮುಲು ತಿರುಗೇಟು: ಸಿದ್ದರಾಮಯ್ಯ ಹೇಳಿಕೆಗೆ ಮತ್ತೆ ತಿರುಗೇಟು ನೀಡಿರುವ ಶ್ರೀರಾಮುಲು, ‘ನಿಮಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿ’ ಎಂದು ಸವಾಲು ಹಾಕಿದ್ದಾರೆ.

‘ಬಾದಾಮಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ನೀವು ಗೆದ್ದಿರಬಹುದು. ಮೀಸಲಾತಿ ಇಲ್ಲದ ಕ್ಷೇತ್ರವಾದರೂ ಸರಿಯೇ ನನ್ನ ವಿರುದ್ಧ ಗೆದ್ದು ತೋರಿಸಿ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ನಾನೂ ರಾಜೀನಾಮೆ ಕೊಡುತ್ತೇನೆ. ಜನ ಯಾರನ್ನು ಗೆಲ್ಲಿಸುತ್ತಾರೋ ನೋಡೋಣ’ ಎಂದರು.

ಸ್ವಾರ್ಥಿ ಎಂಬ ಆರೋಪಕ್ಕೆ ಪ್ರತಿ ಕ್ರಿಯಿಸಿದ ಅವರು, ‘ಉಪಮುಖ್ಯಮಂತ್ರಿ ಮಾಡಿ, ಹಣಕಾಸು ಖಾತೆ ನೀಡಿದರೂ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಜೆಡಿಎಸ್‌ ತೊರೆದವರು ನೀವು. ಕಾಂಗ್ರೆಸ್‌ ಸೇರಿ, ಆ ಪಕ್ಷದ ಹಿರಿಯ ನಾಯಕರಿಗೆಲ್ಲಾ ಅನ್ಯಾಯ ಮಾಡಿ ಮುಖ್ಯಮಂತ್ರಿಯಾಗಿದ್ದು ನಿಮ್ಮ ಸ್ವಾರ್ಥವಲ್ಲವೇ?’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT