ಸಂಪುಟ ವಿಸ್ತರಣೆ ಜತೆ ಖಾತೆ ಬದಲು: ಕಾಂಗ್ರೆಸ್‌ನಲ್ಲಿ ಹೆಚ್ಚಿದ ಲಾಬಿ

7
ಜೆಡಿಎಸ್‌ನಲ್ಲಿ ಕುತೂಹಲ

ಸಂಪುಟ ವಿಸ್ತರಣೆ ಜತೆ ಖಾತೆ ಬದಲು: ಕಾಂಗ್ರೆಸ್‌ನಲ್ಲಿ ಹೆಚ್ಚಿದ ಲಾಬಿ

Published:
Updated:

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕೆಲವರ ಖಾತೆ ಬದಲಾವಣೆ ಮಾಡುವುದಾಗಿಯೂ ಹೇಳಿದ್ದಾರೆ.

ಸಂಪುಟ ಸೇರಲು ಉತ್ಸುಕರಾಗಿರುವ ಆಕಾಂಕ್ಷಿಗಳು ಕಾಂಗ್ರೆಸ್‌ನಲ್ಲಿ ಲಾಬಿ ಆರಂಭಿಸಿದ್ದರೆ, ಇನ್ನೊಂದೆಡೆ ಖಾತೆ ಬದಲಾವಣೆಯ ಆತಂಕ ಸಚಿವರನ್ನು ಕಾಡಲಾರಂಭಿಸಿದೆ. ಜೆಡಿಎಸ್‌ನಲ್ಲಿ ಖಾಲಿ ಇರುವ ಒಂದು ಸ್ಥಾನ ಯಾರ ಪಾಲಾಗಲಿದೆ ಎಂದು ಕುತೂಹಲ ಮೂಡಿದೆ.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ‘ಸಂಪುಟ ವಿಸ್ತರಣೆಗೆ ಎಲ್ಲ ಸಿದ್ಧತೆಗಳು ಆಗಿವೆ. ಆಯಾ ಸ್ಥಾನಗಳಿಗೆ ಯಾರು ಸೂಕ್ತ ಎಂಬುದರ ಆಯ್ಕೆ ಪ್ರಕ್ರಿಯೆಯೂ ನಡೆದಿದೆ. ಅಕ್ಟೋಬರ್‌ 10 ಅಥವಾ 12ರೊಳಗೆ ಸಂಪುಟ ವಿಸ್ತರಣೆ ಮಾಡಲಾಗುತ್ತದೆ’ ಎಂದರು.

ಸಂಪುಟದಲ್ಲಿ ಏಳು ಸ್ಥಾನಗಳು ಖಾಲಿ ಇವೆ. ಕಾಂಗ್ರೆಸ್‌ ಪಾಲಿಗೆ ಹಂಚಿಕೆಯಾಗಿರುವ ಆರು ಸ್ಥಾನಗಳು ಖಾಲಿ ಉಳಿದಿವೆ. ಈ ಸ್ಥಾನಗಳಿಗೆ 22 ಶಾಸಕರು ಆಕಾಂಕ್ಷಿಗಳಿದ್ದಾರೆ. ಸಚಿವ ಸ್ಥಾನ ಸಿಗದ ಕಾರಣಕ್ಕೆ ‘ಕೈ’‍ಪಾಳಯದಿಂದ ಒಂದು ಹೆಜ್ಜೆ ಹೊರಗಿಟ್ಟ ಒಂಬತ್ತು ಶಾಸಕರು ಇವರಲ್ಲಿ ಸೇರಿದ್ದಾರೆ. ಇವರಿಗೆ ಪ್ರಾತಿನಿಧ್ಯ ನೀಡಲು ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧರಿಸಿದೆ. ಇದರಿಂದಾಗಿ ಹಿರಿಯ ಶಾಸಕರಾದ ರಾಮಲಿಂಗಾ ರೆಡ್ಡಿ, ಎಚ್‌.ಕೆ.ಪಾಟೀಲ, ಎಂ.ಕೃಷ್ಣಪ್ಪ ಸೇರಿದಂತೆ ಪಕ್ಷ ನಿಷ್ಠರು ಈ ಸಲವೂ ಅವಕಾಶ ವಂಚಿತರಾಗಬಹುದು. ಸಚಿವ ಸ್ಥಾನ ಸಿಗದಿದ್ದರೂ ಇವರು ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸವನ್ನು ಹೈಕಮಾಂಡ್‌ ಹೊಂದಿದೆ.

ಆರು ಸ್ಥಾನಗಳ ಪೈಕಿ ಐದು ಸ್ಥಾನಗಳನ್ನು ತುಂಬುವುದು ‘ಕೈ’ಪಾಳಯದ ಆಲೋಚನೆ. ‘ಒಂದು ಸ್ಥಾನ ಖಾಲಿ ಇರಿಸಿಕೊಂಡರೆ ಮತ್ತೆ ಗೊಂದಲ ಸೃಷ್ಟಿಯಾಗಬಹುದು. ಆರು ಸ್ಥಾನಗಳನ್ನು ಭರ್ತಿ ಮಾಡಿ’ ಎಂದು ಕಾಂಗ್ರೆಸ್‌ ಮುಖಂಡರಿಗೆ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಲೋಕಸಭೆ ಚುನಾವಣೆ, ಪ್ರಾದೇಶಿಕತೆ ಮತ್ತು ಜಾತಿ ಮಾನದಂಡವಾಗಿಟ್ಟು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಲು ಕಾಂಗ್ರೆಸ್‌ ಪಾಳಯ ಯೋಜಿಸಿದೆ. ಈ ಮಾನದಂಡದ ಆಧಾರದಲ್ಲಿ ಐವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಸಂಪುಟ ಸೇರುವ ಮತ್ತೊಬ್ಬ ಶಾಸಕನ ಹೆಸರನ್ನು ಅಂತಿಮಗೊಳಿಸಬೇಕಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಈ ಹೊಣೆ ವಹಿಸಲಾಗಿದೆ.

ವಿಸ್ತರಣೆ ವೇಳೆ ಬಳ್ಳಾರಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು ಎಂಬುದು ಜಾರಕಿಹೊಳಿ ಸಹೋದರರ ಹಕ್ಕೊತ್ತಾಯವಾಗಿತ್ತು. ಸಂಪುಟ ಸೇರುವ ವಿಷಯದಲ್ಲಿ ಜಿಲ್ಲೆಯ ಆರು ಶಾಸಕರು ಎರಡು ಗುಂಪುಗಳಾಗಿದ್ದರು.

ಸಂಪುಟ ಸೇರಲು ಉಮೇದು ತೋರಿದ್ದ ‘ವಲಸಿಗ’ ಶಾಸಕರಾದ ಬಿ.ನಾಗೇಂದ್ರ, ಆನಂದ ಸಿಂಗ್‌ ಹಾಗೂ ಭೀಮಾ ನಾಯ್ಕ್ ಅವರನ್ನು ಸಿದ್ದರಾಮಯ್ಯ ಸಮಾಧಾನಿಸಿದ್ದಾರೆ. ಇದರಿಂದಾಗಿ ಈ.ತುಕಾರಾಂ ಅವರ ಹಾದಿ ಸುಗಮವಾಗಿದೆ ಎಂದು ಹೇಳಲಾಗುತ್ತಿದೆ.

ಕುರುಬ ಸಮುದಾಯದಿಂದ ಸಿ.ಎಸ್‌.ಶಿವಳ್ಳಿ ಅವರಿಗೆ ಅದೃಷ್ಟ ಖುಲಾಯಿಸುವ ಸಾಧ್ಯತೆ ದಟ್ಟವಾಗಿದೆ. ಹೊಸಕೋಟೆಯ ಶಾಸಕ ಎಂ.ಟಿ.ಬಿ.ನಾಗರಾಜ್‌ ಅವರು ರೆಸಾರ್ಟ್ ಯಾತ್ರೆ ಹಾಗೂ ಬೆದರಿಕೆ ತಂತ್ರದ ಮೂಲಕ ಒತ್ತಡ ಹೇರುವ ತಂತ್ರ ಅನುಸರಿಸಿ
ದ್ದಾರೆ. ಅವರಿಗೆ ಬಿಡಿಎ ಅಧ್ಯಕ್ಷ ಸ್ಥಾನ ನೀಡಿ ‘ತೃಪ್ತಿ’ಪಡಿಸಲು ಕಾಂಗ್ರೆಸ್‌ ವರಿಷ್ಠರು ಯೋಚಿಸಿದ್ದಾರೆ.

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸದ ಕಾರಣಕ್ಕೆ ‘ಎಡಗೈ’ಯವರು ವಿಧಾನಸಭಾ ಚುನಾವಣೆಯಲ್ಲಿ ‘ಕೈ’ ಕೊಟ್ಟಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಮುದಾಯದ ಮುಖಂಡರಿಗೆ ಸಚಿವ ಸ್ಥಾನ ಸಿಕ್ಕಿಲ್ಲ.

ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಮುದಾಯಕ್ಕೆ ಅವಕಾಶ ನೀಡುವ ಚಿಂತನೆ ನಡೆದಿದೆ. ಆಗ ಕೆಜಿಎಫ್ ಶಾಸಕಿ ರೂಪಾ ಶಶಿಧರ್‌, ವಿಧಾನ ಪರಿಷತ್‌ ಸದಸ್ಯರಾದ ಆರ್‌.ಬಿ.ತಿಮ್ಮಾಪುರ ಹಾಗೂ ಆರ್‌.ಧರ್ಮಸೇನ ಪೈಕಿ ಒಬ್ಬರಿಗೆ ಅವಕಾಶ ಸಿಗಬಹುದು.

ಸಂಪುಟ ವಿಸ್ತರಣೆಯ ವೇಳೆಯೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಲು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮೊದಲ ಹಂತದಲ್ಲಿ 30 ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗುತ್ತದೆ. ಅದರಲ್ಲಿ ಕಾಂಗ್ರೆಸ್‌ನ 20 ಹಾಗೂ ಜೆಡಿಎಸ್‌ನ 10 ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡಿ ತೃ‍ಪ್ತಿಪಡಿಸುವುದು ಮೈತ್ರಿ ಪಾಳಯದ ಆಲೋಚನೆ.

ಇಬ್ಬರಿಗೆ ಕೋಕ್; ಹಲವರ ಖಾತೆ ಬದಲು

ಸಂಪುಟ ವಿಸ್ತರಣೆಯ ವೇಳೆಗೆ 2–3 ಸಚಿವರನ್ನು ಕೈಬಿಡಲು ಹಾಗೂ ಕೆಲವು ಸಚಿವರ ಖಾತೆ ಬದಲಾವಣೆ ಮಾಡುವ ಸೂತ್ರ ಹೆಣೆಯಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಜಯಮಾಲಾ ಅವರನ್ನು ಕೈಬಿಟ್ಟು ಎಡಗೈ ಸಮುದಾಯದ ಮುಖಂಡರಿಗೆ ಸ್ಥಾನ ನೀಡಲು ಚರ್ಚೆ ನಡೆದಿದೆ. ವಿವಾದಗಳಿಂದ ಸುದ್ದಿಯಾದ ಅರಣ್ಯ ಸಚಿವ ಆರ್‌.ಶಂಕರ್‌ ಅವರನ್ನು ಕೈಬಿಡಲು ‘ಮೈತ್ರಿ’ ಮುಖಂಡರು ಒಲವು ತೋರಿದ್ದಾರೆ ಎಂದು ಗೊತ್ತಾಗಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯನ್ನು ಎಂ.ಬಿ.‍ಪಾಟೀಲ, ಕಂದಾಯವನ್ನು ಕೃಷ್ಣ ಬೈರೇಗೌಡ, ಭಾರಿ ಕೈಗಾರಿಕೆ ಖಾತೆ ಆರ್‌.ವಿ.ದೇಶಪಾಂಡೆ ಅವರಿಗೆ ಹಂಚಿಕೆಯಾಗುವ ಸಾಧ್ಯತೆ ಇದೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಉಳಿಸಿಕೊಂಡು ಗೃಹ ಖಾತೆ ಬಿಟ್ಟುಕೊಡಲು ಆಸಕ್ತಿ ತೋರಿದ್ದಾರೆ. ಕೆ.ಜೆ.ಜಾರ್ಜ್‌ ಅವರೂ ಈ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ.

ಕಮಲದ ಕಣ್ಣು–ವಿಳಂಬ ತಂತ್ರ

ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆಯೂ ಇದೆ. ಅವಕಾಶ ವಂಚಿತರು ಬಂಡಾಯದ ಬಾವುಟ ಹಾರಿಸಬಹುದು. ಇದೇ ಅವಕಾಶವನ್ನು ಬಳಸಿಕೊಂಡು ಬಿಜೆಪಿ ಪಾಳಯ ‘ಆಪರೇಷನ್ ಕಮಲ’ಕ್ಕೆ ಮತ್ತೆ ಪ್ರಯತ್ನ ಮಾಡಬಹುದು. ಹೀಗಾಗಿ, ಸಂಪುಟ ವಿಸ್ತರಣೆಯನ್ನು ಲೋಕಸಭಾ ಚುನಾವಣೆಯ ವರೆಗೆ ಮುಂದೂಡಬಹುದು. ನಿಗಮ ಮಂಡಳಿಗಳನ್ನಷ್ಟೇ ನೇಮಕ ಮಾಡಲಾಗುತ್ತದೆ. ಕೆಲವು ಶಾಸಕರಿಗೆ ಮುಖ್ಯಮಂತ್ರಿ ಕಾರ್ಯದರ್ಶಿ ಹಾಗೂ ಸಂಸದೀಯ ಕಾರ್ಯದರ್ಶಿ ಹುದ್ದೆಗಳನ್ನು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ರಾಮನಗರ ಹಾಗೂ ಜಮಖಂಡಿ ಕ್ಷೇತ್ರಗಳಿಗೆ ಉಪಚುನಾವಣೆ ಈ ವಾರವೇ ಘೋಷಣೆಯಾಗುವ ಸಾಧ್ಯತೆ ಇದೆ. ಆಗ ಸಂಪುಟ ವಿಸ್ತರಣೆ ಚುನಾವಣೆ ಮುಗಿಯುವವರೆಗೆ ಮುಂದೂಡಿಕೆಯಾಗಬಹುದು.

ಮುಂಚೂಣಿಯಲ್ಲಿ ಯಾರು?

* ಎಂ.ಬಿ. ಪಾಟೀಲ (ಬಬಲೇಶ್ವರ– ಕುಡು ಒಕ್ಕಲಿಗ ಲಿಂಗಾಯತ)

* ಸಿ.ಎಸ್‌. ಶಿವಳ್ಳಿ (ಕುಂದಗೋಳ–ಕುರುಬ)

* ಬಿ.ಸಿ. ಪಾಟೀಲ (ಹಿರೇಕೆರೂರ– ಸಾಧು ಲಿಂಗಾಯತ)

* ಈ. ತುಕಾರಾಂ (ಸಂಡೂರು– ವಾಲ್ಮೀಕಿ, ಎಸ್‌.ಟಿ)

* ಬಿ.ಕೆ. ಸಂಗಮೇಶ್ವರ (ಭದ್ರಾವತಿ– ಪಂಚಮಸಾಲಿ ಲಿಂಗಾಯತ)

* ರೂಪಾ ಶಶಿಧರ್‌ (ಕೆಜಿಎಫ್‌–ಪರಿಶಿಷ್ಟ ಜಾತಿ ಎಡಗೈ)

****

ಸಚಿವ ಸ್ಥಾನದ ಬಗ್ಗೆ ತಲೆಯೇ ಕೆಡಿಸಿಕೊಂಡಿಲ್ಲ. ನಿಗಮ ಮಂಡಳಿಗಳಿಗೆ ಅವಕಾಶ ಕೊಡಿ ಎಂದೂ ಕೇಳಿಲ್ಲ. ಪಕ್ಷದ ನಿಷ್ಠಾವಂತ ಶಾಸಕ ನಾನು.

– ಎಸ್‌.ಟಿ.ಸೋಮಶೇಖರ್‌, ಯಶವಂತಪುರ ಶಾಸಕ

ಸಚಿವ ಸ್ಥಾನ ಸಿಗುವುದು ಖಚಿತ. ಒಂದು ವೇಳೆ ಸ್ಥಾನ ನೀಡದಿದ್ದರೆ ನಿಗಮ ಮಂಡಳಿಯನ್ನು ಒಪ್ಪಿಕೊಳ್ಳುವುದಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆ. ಪಕ್ಷಾಂತರ ಮಾಡುವುದಿಲ್ಲ.

– ಬಿ.ಸಿ.ಪಾಟೀಲ, ಹಿರೇಕೆರೂರ ಶಾಸಕ

ಸಚಿವನಾಗುವ ಖಾತರಿ ಇದೆ. ಒಂದು ವೇಳೆ ಸ್ಥಾನ ಸಿಗದಿದ್ದರೆ ಆಮೇಲೆ ನೋಡೋಣ. ಆದರೆ, ಪಕ್ಷದ ವರಿಷ್ಠರ ಮೇಲೆ ಸಂಪೂರ್ಣ ವಿಶ್ವಾಸ ಇದೆ. 
– ಬಿ.ಕೆ.ಸಂಗಮೇಶ್ವರ, ಭದ್ರಾವತಿ

ಬಂಜಾರ ಸಮುದಾಯದ ಕೋಟಾದಲ್ಲಿ ನನಗೆ ಸ್ಥಾನ ಸಿಗಬೇಕು. ನಾನೂ ಕೂಡ ಪ್ರಬಲ ಆಕಾಂಕ್ಷಿ. ಸಚಿವ ಸ್ಥಾನ ಸಿಗದಿದ್ದರೆ ನಿಗಮ–ಮಂಡಳಿ ಬೇಡವೇ ಬೇಡ
– ಭೀಮಾನಾಯ್ಕ, ಹಗರಿಬೊಮ್ಮನಹಳ್ಳಿ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !