ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಕ್ಷಣೆ’ಯಲ್ಲಿದ್ದ 187 ಮಕ್ಕಳು ಕಣ್ಮರೆ!

ಸರ್ಕಾರದ ಬಾಲಮಂದಿರ, ವೀಕ್ಷಣಾಲಯದಲ್ಲಿದ್ದವರು ನಾಪತ್ತೆ
Last Updated 14 ನವೆಂಬರ್ 2019, 23:48 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ‘ಮಕ್ಕಳ ರಕ್ಷಣೆ’ಗಾಗಿ ಪ್ರತ್ಯೇಕವಾಗಿ ಆರಂಭಗೊಂಡ ‘ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐಸಿಪಿಎಸ್‌) ನಿರ್ದೇಶನಾಲಯದಡಿ ಕಾರ್ಯನಿರ್ವಹಿಸುತ್ತಿರುವ ಬಾಲಮಂದಿರಗಳು ಮತ್ತು ವೀಕ್ಷಣಾಲಯಗಳಲ್ಲಿ ‌‘ಆಶ್ರಯ’ ಪಡೆದಿದ್ದ ಹೊರದೇಶಗಳ 12 ಸೇರಿ ಒಟ್ಟು 187 ಮಕ್ಕಳು ಎಲ್ಲಿದ್ದಾರೆ ಎನ್ನುವುದೇ ಗೊತ್ತಿಲ್ಲ!

ರಾಜ್ಯದಲ್ಲಿ ಒಟ್ಟು 59 ಬಾಲಮಂದಿರಗಳಿವೆ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಿಗಾಗಿ 17 ವೀಕ್ಷಣಾಲಯಗಳಿವೆ. 2015–16ರಿಂದ 2019ರ ಮೇ ಅಂತ್ಯವರೆಗಿನ ಮಾಹಿತಿ ಪ್ರಕಾರ, ಬಾಲಮಂದಿರಗಳಿಂದ 166 ಮತ್ತು ವೀಕ್ಷಣಾಲಯಗಳಿಂದ 21 ಮಕ್ಕಳು ಕಣ್ಮರೆ ಆಗಿದ್ದಾರೆ. ಈ ಪೈಕಿ, ತಲಾ ಆರು ಮಕ್ಕಳು ಬಾಂಗ್ಲಾದೇಶ ಮತ್ತು ನೇಪಾಳದವರು. ಬೆಂಗಳೂರು ನಗರದಲ್ಲಿರುವ ಸಂಸ್ಥೆಗಳಿಂದ ನಾಪತ್ತೆಯಾದವರ ಸಂಖ್ಯೆ 96.

ಮಕ್ಕಳು ಮತ್ತು ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ದೂರಿನ ವಿಚಾರಣೆ ವೇಳೆ, ಐಸಿಪಿಎಸ್‌ ಯೋಜನಾ ನಿರ್ದೇಶಕಿ ಎಂ.ಸಿ. ಶೈಲಜಾ ಅವರು ನೀಡಿದ ಮಾಹಿತಿಯಿದು.

ಹೊರದೇಶ ಮತ್ತು ಹೊರರಾಜ್ಯದ ಬಹುತೇಕ ಮಕ್ಕಳು ಸಂಸ್ಥೆಗೆ ಹೊಂದಿಕೊಳ್ಳದ ಕಾರಣ ತಪ್ಪಿಸಿಕೊಂಡರೆ, ಮನೆಗೀಳು, ಪದೇ ಪದೇ ಓಡಿ ಹೋಗುವ ಅಭ್ಯಾಸದಿಂದ ಕೆಲವರು ಕಾಣೆಯಾಗುತ್ತಿದ್ದಾರೆ. ಆದರೆ, ಒಬ್ಬಾಕೆ ತಾನು ಪ್ರೀತಿಸಿದ ಹುಡುಗನ ಜೊತೆ ಹೋಗಿದ್ದಾಳೆ!

ಕೌಟುಂಬಿಕ ವಾತಾವರಣ ಮತ್ತು ಸಾಮಾಜಿಕ ಪರಿಸರದಲ್ಲಿ ಕಾರಣಾಂತರಗಳಿಂದ ಹೊಂದಿಕೊಳ್ಳದೆ, ಹೊರಜಗತ್ತಿನ ಆಕರ್ಷಣೆಗೆ ಒಳಗಾಗಿ, ಕೆಲವೊಮ್ಮೆ ಸಮಾಜ ಘಾತುಕರ ಆಮಿಷಕ್ಕೆ ಒಳಗಾಗಿ ಮನೆ ಬಿಟ್ಟು ಬರುತ್ತಾರೆ. ಅಂಥವರನ್ನು ರಕ್ಷಿಸಿ, ಬಾಲಮಂದಿರಗಳಲ್ಲಿ ಆಶ್ರಯ ನೀಡಲಾಗುತ್ತದೆ. ಆದರೆ, ಇಲ್ಲಿನ ಶಿಸ್ತುಬದ್ಧ ವಾತಾವರಣ, ನಿಯಮಿತ ಜೀವನ ಶೈಲಿ, ಆಹಾರ, ಭಾಷಾ ಭಿನ್ನತೆ, ಓದಿನಲ್ಲಿ ನಿರಾಸಕ್ತಿ ಕಾರಣಕ್ಕೆ ಓಡಿ ಹೋಗುವ ಸಾಧ್ಯತೆಗಳು ಹೆಚ್ಚು ಎಂದೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಕಾಣೆಯಾದವರ ಪೈಕಿ ಶೇ 51ರಷ್ಟು ಮಕ್ಕಳು ಹೊರ ದೇಶ (12) ಮತ್ತು ಹೊರರಾಜ್ಯದವರು (76). ಹೊರರಾಜ್ಯ ಮತ್ತು ಹೊರ ದೇಶದ ಮಕ್ಕಳು ಬೆಂಗಳೂರು ನಗರದ ಬಾಲಮಂದಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ. ಈ ಮಕ್ಕಳ ಪೋಷಕರನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸ. ಹೀಗಾಗಿ, ಈ ಮಕ್ಕಳು ಸಂಸ್ಥೆಗಳಿಂದ ಕಾಣೆಯಾಗುವ ಸಾಧ್ಯತೆಗಳೂ ಹೆಚ್ಚು.

ಅಲ್ಲದೆ, ಶೇ 91ರಷ್ಟು ಮಕ್ಕಳು 11ರಿಂದ 18 ವಯೋಮಾನದವರು. ಈ ವಯಸ್ಸಿನಲ್ಲಿ ಮಕ್ಕಳು, ಜೊತೆಯಲ್ಲಿರುವ ಕೆಟ್ಟ ಹವ್ಯಾಸವಿರುವ ಇತರ ಮಕ್ಕಳಿಂದ ಹೊರ ಜಗತ್ತಿನ ಆಕರ್ಷಣೆಗೆ ಒಳಗಾಗಿ ತಪ್ಪಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು, ಸುರಕ್ಷಿತ ವಾತಾವರಣದಿಂದ ಹೊರಗಡೆ ಹೋದಾಗ ಎದುರಾಗುವ ಸಮಸ್ಯೆಗಳು ಮತ್ತು ಕಳ್ಳ ಸಾಗಣೆಯ ಸಾಧ್ಯತೆಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀಡಲು ಉದ್ದೇಶಿಸಲಾಗಿದೆ’ ಎಂದು ಲೋಕಾಯುಕ್ತಕ್ಕೆ ನೀಡಿದ ವರದಿಯಲ್ಲಿ ಅವರು ವಿವರಿಸಿದ್ದಾರೆ.

ಪತ್ತೆಯಾಗದ ಪ್ರಕರಣ ಕೇವಲ 173!
‘ರಾಜ್ಯದಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳ ಪೈಕಿ 2019ರ ಏಪ್ರಿಲ್‌ ವೇಳೆಗೆ 431 ಪ್ರಕರಣಗಳು ಪತ್ತೆ ಆಗಲು ಬಾಕಿ ಇದ್ದವು. ಆಗಸ್ಟ್‌ ವೇಳೆಗೆ ಈ ಸಂಖ್ಯೆ 173ಕ್ಕೆ ಇಳಿದಿದೆ’ ಎಂದು ಪೊಲೀಸ್‌ ಅಧಿಕಾರಿಗಳು ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಮಕ್ಕಳ ನಾಪತ್ತೆ ಪ್ರಕರಣವನ್ನು ಇದೇ 5ರಂದು ವಿಚಾರಣೆ ನಡೆಸಿದ್ದ ಲೋಕಾಯುಕ್ತರು, 2020ರ ಫೆ. 27ರಂದು ಪ್ರಸ್ತುತ ಸ್ಥಿತಿಯ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

**


ನಾಪತ್ತೆಯಾಗಿರುವ ಮಕ್ಕಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಎಲ್ಲ ಪೊಲೀಸ್‌ ಅಧಿಕಾರಿಗಳಿಗೆ ಅಪರಾಧ ವಿಭಾಗದ ಎಡಿಜಿಪಿ ಸ್ಪಷ್ಟ ಸೂಚನೆ ನೀಡಬೇಕು.
-ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ಲೋಕಾಯುಕ್ತ

***
ಎಲ್ಲಿಯ ಮಕ್ಕಳು ನಾಪತ್ತೆ

ನೇಪಾಳ:6
ಬಾಂಗ್ಲಾದೇಶ:6
ಕರ್ನಾಟಕ:99
ಆಂಧ್ರಪ್ರದೇಶ:21
ಬಿಹಾರ:19
ರಾಜಸ್ಥಾನ:3
ಉತ್ತರ ಪ್ರದೇಶ:7
ತೆಲಂಗಾಣ:1
ಒಡಿಶಾ:3
ಪಶ್ಚಿಮ ಬಂಗಾಲ:04
ಅಸ್ಸಾಂ:5
ಮಹಾರಾಷ್ಟ್ರ:06
ಛತ್ತೀಸ್‌ಗಢ:1
ತಮಿಳುನಾಡು:03
ಜಾರ್ಖಂಡ್:2
ಕೇರಳ:1
ಒಟ್ಟು:187

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT