ಶನಿವಾರ, ಜೂಲೈ 4, 2020
27 °C
l3,221 ಸೋಂಕಿತರು

ರಾಜ್ಯದಲ್ಲಿ ಒಂದೇ ದಿನ 299 ಪ್ರಕರಣ: 50ರ ಗಡಿ ದಾಟಿದ ಮೃತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಒಂದೇ ದಿನ 299 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈವರೆಗೆ ಒಂದು ದಿನ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 3,221ಕ್ಕೆ ತಲುಪಿದೆ.

ಮಹಾರಾಷ್ಟ್ರದ ನಂಟಿನಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದೆ. ಒಂದು ವಾರದಲ್ಲಿ 1,035 ಮಂದಿಗೆ ಸೋಂಕು ತಗುಲಿದೆ. ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ 255 ಮಂದಿ ಅನ್ಯ ರಾಜ್ಯಗಳಿಂದ ಹಾಗೂ 7 ಜನ ವಿವಿಧ ದೇಶಗಳಿಂದ ವಾಪಸ್ ಆದವರಾಗಿದ್ದಾರೆ.

ಬಹುತೇಕರು ಮಹಾರಾಷ್ಟ್ರ ಪ್ರಯಾಣದ ಇತಿಹಾಸ (252) ಹೊಂದಿದ್ದಾರೆ. ಒಟ್ಟು ಸೋಂಕಿತರಲ್ಲಿ 1,463 ಮಂದಿಗೆ ಮಹಾರಾಷ್ಟ್ರದ ನಂಟಿದೆ. ಯಾದಗಿರಿ ಹಾಗೂ ರಾಯಚೂರಿನಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಈ ಜಿಲ್ಲೆಗಳು ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದಿವೆ.

ರಾಯಚೂರಿನಲ್ಲಿ 83, ಯಾದಗಿರಿಯಲ್ಲಿ 44, ಬೀದರ್‌ನಲ್ಲಿ 33, ಕಲಬುರ್ಗಿಯಲ್ಲಿ 28, ವಿಜಯಪುರದಲ್ಲಿ 26, ಬೆಂಗಳೂರಿನಲ್ಲಿ 21, ದಕ್ಷಿಣ ಕನ್ನಡದಲ್ಲಿ 14, ಬೆಳಗಾವಿಯಲ್ಲಿ 13, ಮಂಡ್ಯದಲ್ಲಿ 13, ಉಡುಪಿಯಲ್ಲಿ 10, ದಾವಣಗೆರೆಯಲ್ಲಿ 6, ಉತ್ತರ ಕನ್ನಡದಲ್ಲಿ 5 ಹಾಗೂ ಬಳ್ಳಾರಿ, ಶಿವಮೊಗ್ಗ, ಕೋಲಾರದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.

ಭಾನುವಾರ ಒಂದೇ ದಿನ 13,358 ಮಂದಿಯ ಗಂಟಲ ದ್ರವದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಬೆಂಗಳೂರಿನಲ್ಲಿ 59 ಸೇರಿದಂತೆ  221 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದೇ ಮೊದಲ ಬಾರಿಗೆ ಒಂದೇ ದಿನ ಇಷ್ಟೊಂದು ಸಂಖ್ಯೆಯಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ.

ಮೃತರ ಸಂಖ್ಯೆ 51ಕ್ಕೆ: ರಾಯಚೂರಿನಲ್ಲಿ 50 ವರ್ಷದ ಪುರುಷ ಹಾಗೂ ಬೀದರ್‌ನಲ್ಲಿ 75 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕಿಗೆ ಸಾವಿಗೀಡಾದವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಮೇ 21ರಂದು ಮುಂಬೈನಿಂದ ವಾಪಸ್ ಆಗಿದ್ದ ರಾಯಚೂರಿನ 50 ವರ್ಷದ ವ್ಯಕ್ತಿ, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದರು. ಈ ವೇಳೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೇ 28ರಂದು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 29ರಂದು ಅವರು ಮೃತಪಟ್ಟಿದ್ದರು. ಈಗ ಅವರ ಕೋವಿಡ್‌ ಪರೀಕ್ಷೆಯ ವರದಿ ಬಂದಿದ್ದು, ಸೋಂಕು ತಗುಲಿತ್ತು ಎನ್ನುವುದು ದೃಢಪಟ್ಟಿದೆ. 

ಬೀದರ್‌ನ ವೃದ್ಧ ಕಂಟೈನ್‌ಮೆಂಟ್ ಪ್ರದೇಶದ ನಿವಾಸಿಯಾಗಿದ್ದರು. ರಕ್ತದೊತ್ತಡ, ಜ್ವರ ಮತ್ತು ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮೇ 29ರಂದು ಮನೆಯಲ್ಲಿ ನಿಧನರಾಗಿದ್ದರು. ಅವರಿಗೆ ಕೂಡ ಸೋಂಕು ತಗುಲಿತ್ತು.

ದಾವಣಗೆರೆಯ ಕೋವಿಡ್‌ ಜಿಲ್ಲಾಸ್ಪತ್ರೆಯ ವೈದ್ಯಕೀಯ ಪ್ರಾಧ್ಯಾಪಕ ಮತ್ತು ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು