ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಳು ಸುಟ್ಟು ಬೂದಿಯಾದರೆ ದೇಶ ಕಲ್ಯಾಣ

ಚಿತ್ರದುರ್ಗದ ವಕೀಲರ ಭವನದಲ್ಲಿ ಚಿತ್ರನಟ ದೊಡ್ಡಣ್ಣ
Last Updated 20 ಏಪ್ರಿಲ್ 2018, 6:26 IST
ಅಕ್ಷರ ಗಾತ್ರ

ಚಿತ್ರದುರ್ಗ: ಜನರ ನಡುವೆ ವೈಮನಸ್ಸು ಉಂಟು ಮಾಡುವ ಜಾತಿ ವ್ಯವಸ್ಥೆಯನ್ನೇ ಸುಟ್ಟು ಹಾಕಬೇಕು. ಆಗ ದೇಶದ ಕಲ್ಯಾಣವಾಗಲಿದೆ. ಎಲ್ಲರೂ ಸಮಾನತೆಯಿಂದ ಬದುಕುತ್ತಾರೆ ಎಂದು ಚಿತ್ರನಟ ದೊಡ್ಡಣ್ಣ ಅಭಿಪ್ರಾಯಪಟ್ಟರು.

ಇಲ್ಲಿನ ವಕೀಲರ ಭವನದಲ್ಲಿ ಗುರುವಾರ ತಮ್ಮ ಅಳಿಯ ಕೆ.ಸಿ.ವೀರೇಂದ್ರ ಪರ ಮತಯಾಚಿಸಲು ಬಂದಿದ್ದ ಸಂದರ್ಭದಲ್ಲಿ ಜಾತಿ ವಿಷಯದ ಕುರಿತೇ ಹೆಚ್ಚು ಮಾತನಾಡಿದರು.

ದೇಶದಲ್ಲಿ ಅತಿ ವೇಗವಾಗಿ ಚುಚ್ಚುವಂಥ ಯಾವುದಾದರೂ ಹರಿತಾದ ಆಯುಧ ಇದ್ದರೆ ಅದು ಜಾತಿ. ಅದನ್ನು ನಾವು ಬಿಟ್ಟರು ಅದು ನಮ್ಮನ್ನು ಬಿಡುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಷ ಬೀಜವನ್ನು ಬುಡ ಸಮೇತ ಕಿತ್ತು ಹಾಕಲು ಹೊರಟರೆ, ಅದರಲ್ಲಿ ಸ್ವಲ್ಪವಾದರೂ ನಮ್ಮ ದೇಹದಲ್ಲಿ ಉಳಿದುಕೊಳ್ಳುತ್ತದೆ. ಜಾತಿಯೆಂಬ ವಿಷ ಹರಡದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.

ನಾನೂ ನನ್ನ ಮಗಳ ಮದುವೆ ಸಂಬಂಧ ದಾವಣಗೆರೆಯಲ್ಲಿ ಕಲ್ಯಾಣ ಮಂಟಪಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಕಾರ್ಯಕ್ರಮ ವೊಂದರಲ್ಲಿ ಅನಿವಾರ್ಯವಾಗಿ ಪಾಲ್ಗೊಂಡೆ. ಅಂದೇ ಗೊತ್ತಾಗಿದ್ದು, ನಾನೂ ಲಿಂಗಾಯತ. ಅಲ್ಲಿವರೆಗೂ ಜಾತಿಯೆಂಬ ಸೋಂಕಿನಿಂದ ತುಂಬಾ ದೂರ ಉಳಿದಿದ್ದೆ. ಈಗಲೂ ಜಾತ್ಯತೀತವಾಗಿಯೇ ಇದ್ದೇನೆ. ಮುಂದೆಯೂ ಇರುತ್ತೇನೆ ಎಂದರು.

ಮನುಷ್ಯನಾಗಿ ಹುಟ್ಟಿದ ಮೇಲೆ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿ, ವಿಶ್ವಾಸ, ಗೌರವಿಸುವ ಸದ್ಗುಣಗಳನ್ನುಕಲಿಯಬೇಕು. ಅದನ್ನು ನನ್ನ
ತಾಯಿಯಿಂದ ನಾನೂ ಕಲಿತಿದ್ದೇನೆ.  ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತಾಗ ಮಾತ್ರ ಉತ್ತಮ ಅನುಭವಗಳೊಂದಿಗೆ ಸದಭಿರುಚಿಯಿಂದ ಜೀವಿಸಲು ಸಾಧ್ಯ. ಆದ್ದರಿಂದ ಸತ್ಪ್ರಜೆಗಳಾಗಿ ಬಾಳುವುದನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಚಿತ್ರದುರ್ಗದಲ್ಲಿ ಗುಣಮಟ್ಟದ ರಸ್ತೆಗಳಿಲ್ಲ, ಚರಂಡಿ ವ್ಯವಸ್ಥೆ ಸರಿಯಿಲ್ಲ, ಉತ್ತಮ ಶಾಲೆಗಳಿಲ್ಲ ಎಂಬ ಕಾರಣಕ್ಕಾಗಿ ಜನಸೇವೆ ಮಾಡಲು ಬಯಸಿದ್ದಾರೆ. ಆದ್ದರಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ (ಪಪ್ಪಿ) ಅವರಿಗೆ ಧನಸಹಾಯ ಮಾಡಬೇಡಿ. ನಿಮ್ಮ ಅಮೂಲ್ಯವಾದ ಮತ ನೀಡಿ ಗೆಲ್ಲಿಸಿ. ಜಯಗಳಿಸಿದರೆ, ಖಂಡಿತ ಅಭಿವೃದ್ಧಿ ಮಾಡಿ ತೋರಿಸುತ್ತಾನೆ ಎಂಬ ವಿಶ್ವಾಸ ನನಗಿದೆ’ ಎಂದರು.

ಇದೇ ಸಂದರ್ಭದಲ್ಲಿ ಡೈಲಾಗ್ ಹೇಳುವಂತೆ ಅಲ್ಲಿದ್ದ ಅಭಿಮಾನಿಗಳು ದೊಡ್ಡಣ್ಣ ಅವರನ್ನು ಒತ್ತಾಯಿಸಿದರು. ಸೂರ್ಯವಂಶ ಚಿತ್ರದ ಹಾಸ್ಯ ಸನ್ನಿವೇಶವೊಂದರ ಸಂಭಾಷಣೆ ಹೇಳುವ ಮೂಲಕ ರಂಜಿಸಿದರು.  ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್ ಅವರನ್ನೂ ನೆನಪಿಸಿಕೊಂಡರು. ಪಂಪ, ರನ್ನ, ಕುವೆಂಪು ಸೇರಿದಂತೆ ಮಹನೀಯರು ಜನಿಸಿದ ನಾಡಿನಲ್ಲಿ ಕನ್ನಡಾಭಿಮಾನ ಹೆಚ್ಚಾಗಬೇಕೆ ಹೊರತು ಕಡಿಮೆಯಾಗಬಾರದು ಎಂದು ಮನವಿ ಮಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ವೀರಭದ್ರಪ್ಪ, ಇತರೆ ವಕೀಲರು ಇದ್ದರು.

ವಿಶ್ವದಲ್ಲಿರುವುದು ನಾಲ್ಕೇ ಜಾತಿ

ವೇದ, ಉಪನಿಷತ್ತುಗಳ ಆಗಮನದ ನಂತರ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಈ ನಾಲ್ಕು ಚತುರ್ವಣಗಳ ಬಗ್ಗೆ ಈಗಾಗಲೇ ಅನೇಕರಿಗೆ ಗೊತ್ತಿದೆ. ಆದರೆ, ಅದಕ್ಕೂ ಮುಂಚಿನಿಂದಲೂ ನಾಲ್ಕು ಜಾತಿಗಳಿದ್ದು, ಪ್ರಸ್ತುತ ಈಗಲೂ ಇವೆ ಎಂದು ದೊಡ್ಡಣ್ಣ ಹೇಳಿದರು.

ಮೊದಲನೆಯದ್ದು ಮಾನವರೆಲ್ಲ ಒಂದೇ ಜಾತಿ, ಎರಡನೆಯದ್ದು ಪ್ರಾಣಿ – ಪಕ್ಷಿ ಸಂಕುಲ, ಮೂರನೆಯದ್ದು
ಸಸ್ಯ – ಕೀಟ ಸಂಕುಲ, ನಾಲ್ಕನೆಯದ್ದು ಜಲಚರ ಜೀವಿಗಳು. ಇವುಗಳನ್ನು ಹೊರತು ಪಡಿಸಿ ಇನ್ಯಾವುದೇ ಜಾತಿಗಳಿಲ್ಲ. ಈ ವಿಚಾರವನ್ನು ಮೊದಲು ನಾವು ಅರಿತರೇ ಸಮಾನತೆಯಿಂದ ಜೀವಿಸಲು ಸಾಧ್ಯವಿದೆ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT