ಭಾನುವಾರ, ನವೆಂಬರ್ 17, 2019
28 °C

ಗಡಿಗ್ರಾಮದ ಶಾಲೆಯಲ್ಲಿ ವಾಸ್ತವ್ಯ| ಶಿಕ್ಷಣ ಸಚಿವರಿಗೆ ಸಮಸ್ಯೆಗಳ ದರ್ಶನ

Published:
Updated:
Prajavani

ಪಾವಗಡ: ರಾಜ್ಯದ ಗಡಿಗ್ರಾಮದ ಶಾಲೆಯಲ್ಲಿ ವಾಸ್ತವ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಗಳು ಸಮಸ್ಯೆಗಳ ದರ್ಶನ ಮಾಡಿಸಿದರು.

ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ, ಶಾಲಾ ಕಟ್ಟಡಗಳ ಶಿಥಿಲಾವಸ್ಥೆ, ಕುಡಿಯುವ ನೀರು, ಶೌಚಾಲಯದ ಅಸಮರ್ಪಕ ವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ಸಚಿವರ ಗಮನ ಸೆಳೆದರು.

ಸಚಿವ ಎಸ್.ಸುರೇಶ್ ಕುಮಾರ್ ಅವರು ಭೇಟಿ ನೀಡಿದ ಎಲ್ಲ ಶಾಲೆಗಳಲ್ಲಿ ಈ ಸಮಸ್ಯೆಗಳು ಸಾಮಾನ್ಯವಾಗಿದ್ದವು. ಮಕ್ಕಳ ತೊದಲು ಮಾತುಗಳನ್ನು ಶಿಕ್ಷಣ ಮಂತ್ರಿ ತಾಳ್ಮೆಯಿಂದ ಕೇಳಿಸಿಕೊಂಡು ಅವುಗಳನ್ನು ಆದಷ್ಟು ಬೇಗ ಪರಿಹರಿಸುವುದಾಗಿ ಭರವಸೆಗಳನ್ನು ನೀಡುತ್ತಾ ಮುಂದಿನ ಶಾಲೆಗಳತ್ತ ಸಾಗಿದರು. 

ವೆಂಕಟಮ್ಮನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಶಾಲಾ ಅಭಿವೃದ್ಧಿ ಸಮಿತಿಯೊಂದಿಗೆ ಸಂವಾದ ನಡೆಸಿದರು. ತರಗತಿ ಕೊಠಡಿಗೆ ಮಳೆ ನೀರು ನುಗ್ಗುತ್ತಿರುವ ಬಗ್ಗೆ, ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಕುರಿತು ಸಚಿವರ ಗಮನ ಸೆಳೆದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಎಂಜಿನಿಯರನ್ನು ಕರೆದು ಸಚಿವರು ‘ಎತ್ತರದಲ್ಲಿರುವ ರಸ್ತೆಯಿಂದ ಶಾಲೆಗೆ ನೀರು ನುಗ್ಗದಂತೆ ಮಳೆನೀರು ಸಂಗ್ರಹ ವ್ಯವಸ್ಥೆ ಮಾಡಿಸಿ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ದುರಸ್ತಿಗೆ ಕ್ರಮವಹಿಸಿ’ ಎಂದು ಸೂಚಿಸಿದರು.

ಕ್ಯಾತಗಾನಚೆರ್ಲು ಹಿರಿಯ ಪ್ರಾಥಮಿಕ ಶಾಲೆಗೆ ಬಂದ ಸಚಿವರನ್ನು ಎದುರುಗೊಂಡ ವಿದ್ಯಾರ್ಥಿಗಳು, ‘ಕಾನ್ವೆಂಟ್‌ಗೆ ಹೋಗುವ ಸ್ನೇಹಿತರು ‘ನಮ್ಮ ಶಾಲೆಯಲ್ಲಿ ಒಂದೊಂದು ವಿಷಯಕ್ಕೆ ಒಬ್ಬೊಬ್ಬರು ಟೀಚರ್ ಇದ್ದಾರೆ. ನಿಮ್ಮ ಶಾಲೆಯಲ್ಲಿ ಎಲ್ಲ ವಿಷಯವನ್ನು ಒಬ್ಬ ಟೀಚರ್ ಪಾಠ ಮಾಡ್ತಾರೆ’ ಅಂತಾರೆ. ನಮಗೂ ಒಂದೇ ಟೀಚರ್ ಪಾಠ ಕೇಳಿ ಬೋರ್ ಆಗ್ತಿದೆ. ನಮಗೆ ಹೊಸ ಟೀಚರ್ಸ್ ಕಳ್ಸಿ ಸಾರ್...’ ಎಂದು ಮನವಿ ಮಾಡಿದರು.

ವಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಕೊಠಡಿಯಲ್ಲಿನ ಸ್ವಚ್ಛತೆ ಪರಿಶೀಲಿಸಿದರು. ‘ಶೌಚಾಲಯ ಶುಚಿಗೊಳಿಸುವ ಸಿಬ್ಬಂದಿ ನಿಯೋಜಿಸಿ. ತರಗತಿ ಕೊಠಡಿಗಳನ್ನು ಕಟ್ಟಿಸಿ ಕೊಡಿ’ ಎಂದು ವಿದ್ಯಾರ್ಥಿಗಳು ಅಹವಾಲು ಸಲ್ಲಿಸಿದರು.

ತಿರುಮಣಿಯ ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳು ವಿಜ್ಞಾನ, ಇಂಗ್ಲಿಷ್ ಮತ್ತು ಗಣಿತ ವಿಷಯಕ್ಕೆ ಟೀಚರ್ ಇಲ್ಲ ಸರ್. ನಾವು ಹೇಗೆ ಓದಿ ಪರೀಕ್ಷೆ ಬರೆಯೋದು ಎಂದು ಸಚಿವರನ್ನು ಪ್ರಶ್ನಿಸಿದರು.

ಎಲ್ಲ ವಿದ್ಯಾರ್ಥಿಗಳ ಮಾತನ್ನು ಕೇಳಿದ ಬಳಿಕ ‘ಅಧಿಕಾರಿಗಳ ಜೊತೆ ಚರ್ಚಿಸಿ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇನೆ’ ಎಂದು ಭರವಸೆ ನೀಡಿ ಕಾರು ಹತ್ತಿ ಸಚಿವರು ಬೆಂಗಳೂರಿನತ್ತ ಹೊರಟರು.

ಮೋದಿ ಯಾರಂತ ಗೊತ್ತಿಲ್ವಲ್ಲೊ ನಿನಗೆ

ಶಿಕ್ಷಣ ಸಚಿವರು ವಾಸ್ತವ್ಯ ಹೂಡಿದ್ದ ಎನ್.ಅಚ್ಚಮ್ಮನಹಳ್ಳಿ ಶಾಲೆಯ ಅಂಗಳದಲ್ಲಿ ಕುಳಿತು ಶಾಲಾ ವಿದ್ಯಾರ್ಥಿಯೊಂದಿಗೆ ಮಾತನಾಡುತ್ತ, ‘ನಮ್ಮ ದೇಶದ ಪ್ರಧಾನಿ ಯಾರು ಹೇಳೊ’ ಎಂದು ಪ್ರಶ್ನೆ ಕೇಳಿದರು.

ಪ್ರಶ್ನೆಯನ್ನು ಮೂರ್ನಾಲ್ಕು ಬಾರಿ ಅರ್ಥೈಸಿ, ‘ಪ್ರೈಮ್‌ ಮಿನಿಸ್ಟರ್’ ಎಂಬ ಪದ ಬಳಸಿ ಕೇಳಿದರು. ಆಗಲೂ ವಿದ್ಯಾರ್ಥಿಯಿಂದ ಉತ್ತರ ಬರಲಿಲ್ಲ.

ಆಗ ಸಚಿವರು, ‘ನರೇಂದ್ರ ಮೋದಿ ಅವರ ಹೆಸರು ಕೇಳಿಲ್ವಾ’ ಎಂದು ಉತ್ತರ ಪಡೆಯಲು ಪ್ರಯತ್ನಿಸಿದರು. ಆದರೂ ಉತ್ತರ ಸಿಗಲಿಲ್ಲ.

ವಿದ್ಯಾರ್ಥಿಯ ಮೌನಕ್ಕೆ ಪ್ರತಿಯಾಗಿ ‘ಮೋದಿ ಯಾರಂತ ಗೊತ್ತಿಲ್ವಲ್ಲೊ ನಿನಗೆ’ ಎಂದು ಸಚಿವರು ಹೇಳಿದರು.

ವಾಸ್ತವ್ಯ ಹೂಡಿದ ಶಾಲೆಯಿಂದ ಹೊರಡುವ ಮುನ್ನ ಸಚಿವರು ಅಂಗಳದಲ್ಲಿ ಸಂಪಿಗೆ ಗಿಡ ನೆಟ್ಟರು.

ಸರಣಿ ಸನ್ಮಾನ, ಪೂರ್ಣಕುಂಭ ಸ್ವಾಗತ

ಸಚಿವ ಸುರೇಶ್‌ ಕುಮಾರ್‌ ಅವರು ಪ್ರತಿ ಗ್ರಾಮದ ಶಾಲೆಗೆ ಭೇಟಿ ನೀಡಿದಾಗಲೂ ಗ್ರಾಮಸ್ಥರು, ಪೋಷಕರು, ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಕರು, ಸಂಘ ಸಂಸ್ಥೆಯವರು ಸರದಿಯಾಗಿ ಸನ್ಮಾನ ಮಾಡಿದರು. ವೆಂಕಟಮ್ಮನಹಳ್ಳಿ ವಿದ್ಯಾರ್ಥಿನಿಯರು ಪೂರ್ಣಕುಂಭ ಹೊತ್ತು ಸಚಿವರನ್ನು ಬರಮಾಡಿಕೊಂಡರು.

ವಾಸ್ತವ್ಯದ ಖರ್ಚು– ವೆಚ್ಚ?

ಮಂತ್ರಿ ಅವರ ಶಾಲಾ ವಾಸ್ತವ್ಯಕ್ಕೆ ₹ 70 ಸಾವಿರ ರೂಪಾಯಿ ಖರ್ಚಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಶಾಲೆಯ ಕೆಲ ಭಾಗವನ್ನು ನವೀಕರಿಸಲಾಗಿತ್ತು. ಸುಣ್ಣ ಬಣ್ಣ ಬಳಿಯಲಾಗಿತ್ತು. ಎರಡು ಪೆಪ್ಸ್ ಹಾಸಿಗೆಗಳನ್ನು ಖರೀದಿಸಲಾಗಿತ್ತು. ಶೌಚಾಲಯದಲ್ಲಿ ಪಾಶ್ಚಾತ್ಯ ಶೈಲಿಯ ಕಮೋಡ್ ಅಳವಡಿಸಲಾಗಿತ್ತು. ಸಂವಾದ ಸಭೆಗೆ ಶಾಮಿಯಾನ, ಜನರೇಟರ್ ವ್ಯವಸ್ಥೆ ಮಾಡಲಾಗಿತ್ತು. ತಲಾ ₹ 100ರಂತೆ 70 ಜನರಿಗೆ ಮಾತ್ರ ಹೋಳಿಗೆ ಊಟ ಹಾಕಲಾಯಿತು.

ಶಿಕ್ಷಣ ಇಲಾಖೆಯಿಂದ ವಾಸ್ತವ್ಯಕ್ಕಾಗಿ ನಯಾಪೈಸೆ ಅನುದಾನವೂ ಬಂದಿಲ್ಲ. ದಾನಿಗಳು ಸಹಕಾರ ನೀಡಿದ್ದಾರೆ. ಅಧಿಕಾರಿಗಳು ಸಹ ಕೈಯಿಂದ ಹಣ ಹಾಕಿ ವ್ಯವಸ್ಥೆ ಮಾಡಿದ್ದಾರೆ. ಶಾಲಾ ಅಭಿವೃದ್ಧಿಗಾಗಿ ಬಿಡುಗಡೆಯಾಗಿದ್ದ 12,500 ರೂಪಾಯಿ ಬಳಸಿಕೊಂಡಿದ್ದೇವೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)