ಶನಿವಾರ, ಡಿಸೆಂಬರ್ 14, 2019
24 °C
ಪ್ರೌಢ ಹಂತದಲ್ಲೇ ಜೀವನ ಶಿಕ್ಷಣ: 4 ವರ್ಷದ ಬಿ.ಇಡಿ ಕೋರ್ಸ್

ಶೀಘ್ರ ಕರ್ನಾಟಕ ಶಿಕ್ಷಣ ನೀತಿ ಜಾರಿ

ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯ ಬಿಂಬಿಸುವ ಹಾಗೂ ಪ್ರೌಢಶಾಲಾ ಹಂತದಲ್ಲೇ ಜೀವನ ಶಿಕ್ಷಣವನ್ನು ಪರಿಚಯಿಸುವ ನೂತನ ಕರ್ನಾಟಕ ಶಿಕ್ಷಣ ನೀತಿ ರೂಪಿಸಲು ಸರ್ಕಾರ ಮುಂದಾಗಿದೆ.

ರಾಜ್ಯದ 78 ಸಾವಿರ ಶಾಲೆಗಳಲ್ಲಿ 1.03 ಕೋಟಿಗಿಂತ ಅಧಿಕ ಮಕ್ಕಳು ಕಲಿಯುತ್ತಿದ್ದಾರೆ. ಇಲ್ಲಿ ಕಲಿಯುವ ಮಕ್ಕಳು ಪದವಿ ಹಂತದ ವರೆಗೆ ಓದನ್ನು ಮುಂದುವರಿಸುವಂತೆ ಹಾಗೂ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ನೆರವಾಗುವಂತೆ ಶಿಕ್ಷಣ ನೀತಿ ರೂಪಿಸಿ, ಅದನ್ನು ಅನುಷ್ಠಾನಕ್ಕೆ ತರಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಚಿತ್ತ ಹರಿಸಿದ್ದಾರೆ.

‘ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ ಕನ್ನಡಿಗ ತಜ್ಞರು, ಶಿಕ್ಷಣ ಕ್ಷೇತ್ರದ ಪರಿಣತರನ್ನು ಒಳಗೊಂಡ ಸಮಿತಿ ರಚಿಸಲು ಪ್ರಸ್ತಾವನೆ ಕಳುಹಿಸಬೇಕು. ಒಂದು ತಿಂಗಳೊಳಗೆ ಕರ್ನಾಟಕ ಶಿಕ್ಷಣ ನೀತಿ ಕರಡನ್ನು ತಯಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿದ್ದಾರೆ.

‘ಶಾಲಾ ಶಿಕ್ಷಣದ ನಿಯಂತ್ರಣಕ್ಕೆ ಒಂದು ಮೇಲ್ವಿಚಾರಣಾ ವ್ಯವಸ್ಥೆ ಬೇಕು, ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ವಿಶೇಷ ಪ್ರಯತ್ನ ನಿಶ್ಚಿತ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು.

ನೀತಿಯಲ್ಲಿ ಏನಿರಲಿದೆ?: ಕರ್ನಾಟಕ ಜ್ಞಾನ ಆಯೋಗದ ವರದಿ, ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿದ ವರದಿ ಹಾಗೂ ತಜ್ಞರು ನೀಡುವ ಅಗತ್ಯದ ಸಲಹೆಗಳು ನೀತಿಯಲ್ಲಿ ಸೇರ್ಪಡೆಗೊಳ್ಳಲಿವೆ.

ಮಾತೃಭಾಷೆಯಲ್ಲೇ ಕಲಿಕಾ ಮಾಧ್ಯಮ, ಶಾಲೆಗಳಲ್ಲಿ ವೃತ್ತಿಪರ ಶಿಕ್ಷಣ ಕಲಿಕೆಗೆ ಅವಕಾಶ, 4 ವರ್ಷದ ಬಿ.ಇಡಿ ಕೋರ್ಸ್, ಶಿಕ್ಷಕರನ್ನು ಶಿಕ್ಷಣೇತರ ಕೆಲಸಗಳಿಂದ ಮುಕ್ತಗೊಳಿಸುವುದು, ಕಲಿಕಾ ಹಂತಗಳನ್ನು 5+3+3+4 ಮಾದರಿಯಲ್ಲಿ ವಿಂಗಡಿಸುವುದು, ಪ್ರಾಥಮಿಕದ ಜತೆಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಸೇರಿಸುವುದು ಸಹಿತ ಹಲವು ಹೊಸ ವಿಚಾರಗಳು ನೂತನ ಶಿಕ್ಷಣ ನೀತಿಯಲ್ಲಿ ಅಡಕವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು