ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ನಿಷ್ಠೆಯೋ, ಅನರ್ಹರಿಗೆ ಬೆಂಬಲವೋ?

ಇಕ್ಕಟ್ಟಿನಲ್ಲಿ ಪಾಲಿಕೆ ಸದಸ್ಯರು, ಸುಪ್ರೀಂಕೋರ್ಟ್‌ ತೀರ್ಪಿನವರೆಗೆ ಕಾದು ನೋಡುವ ತಂತ್ರ
Last Updated 21 ಸೆಪ್ಟೆಂಬರ್ 2019, 20:41 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ಟೋಬರ್‌ 21ರಂದು ನಡೆಯುವ ಉಪಚುನಾವಣೆಯಲ್ಲಿ ಅನರ್ಹ ಶಾಸಕರ ಪರ ವಹಿಸಬೇಕೋ ಅಥವಾ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕೋ?

ಉಪಚುನಾವಣೆ ನಡೆಯಲಿರುವ ಬೆಂಗಳೂರು ನಗರದ ವಿಧಾನಸಭಾ ಕ್ಷೇತ್ರಗಳಲ್ಲಿನ ಪಾಲಿಕೆ ಸದಸ್ಯರನ್ನು ಕಾಡುತ್ತಿರುವ ಗೊಂದಲವಿದು.

ಶಾಸಕರನ್ನು ಅನರ್ಹಗೊಳಿಸಿದ್ದರಿಂದಾಗಿ ನಗರದ ವ್ಯಾಪ್ತಿಯಲ್ಲಿ ತೆರವಾಗಿದ್ದ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ರಾಜರಾಜೇಶ್ವರಿನಗರವನ್ನು ಹೊರತುಪಡಿಸಿ ಉಳಿದ ಐದು ಕ್ಷೇತ್ರಗಳಿಗೆ ಅ. 21ರಂದು ಉಪಚುನಾವಣೆ ಘೋಷಣೆಯಾಗಿದೆ. ಯಶವಂತಪುರ, ಕೆ.ಆರ್‌.ಪುರ, ಶಿವಾಜಿ ನಗರ ಹಾಗೂ ಹೊಸಕೋಟೆ ಕ್ಷೇತ್ರಗಳು ಈ ಹಿಂದೆ ಕಾಂಗ್ರೆಸ್‌ ತೆಕ್ಕೆಯಲ್ಲಿದ್ದರೆ, ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರ ಜೆಡಿಎಸ್‌ ವಶದಲ್ಲಿತ್ತು.

ಕಾಂಗ್ರೆಸ್‌ ಪಕ್ಷದ ಶಾಸಕರು ಪ್ರತಿ ನಿಧಿಸುತ್ತಿದ್ದ ಬಹುತೇಕ ಕ್ಷೇತ್ರಗಳಲ್ಲಿ ಪಾಲಿಕೆ ಸದಸ್ಯರು ಅನರ್ಹ ಶಾಸಕರ ಜೊತೆ ಗುರುತಿಸಿಕೊಳ್ಳಲು ಒಲವು ಹೊಂದಿದ್ದಾರೆ. ಆದರೆ, ‘ಉಪ ಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸುವುದಕ್ಕೆ ಅವಕಾಶ ಇಲ್ಲ’ ಎಂಬ ಅರ್ಥದಲ್ಲಿ ರಾಜ್ಯದ ಮುಖ್ಯ ಚುನಾ ವಣಾಧಿಕಾರಿ ಪಿ.ಸಂಜೀವ ಕುಮಾರ್‌ ಹೇಳಿಕೆ ನೀಡಿರುವುದರಿಂದ ಈ ಕಾರ್ಪೊರೇಟರ್‌ಗಳು ಗೊಂದಲಕ್ಕೊಳಗಾಗಿದ್ದಾರೆ. ಕೆಲವರು ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

‘ಅನರ್ಹ ಶಾಸಕರು ಚುನಾವಣೆ ಯಲ್ಲಿ ಸ್ಪರ್ಧಿಸುವುದಕ್ಕೆ ಸುಪ್ರೀಂ ಕೋರ್ಟ್‌ ಅವಕಾಶ ಮಾಡಿಕೊಟ್ಟರೆ ನಾವು ನಮ್ಮ ನಾಯಕರ ಜೊತೆ ಹೋಗುವುದು ನಿಸ್ಸಂದೇಹ’ ಎಂದು ಕೆಲವು ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಗೆಲುವಿನಲ್ಲಿ ಶಿವಾಜಿನಗರ ಕ್ಷೇತ್ರದ ಶಾಸಕರಾಗಿದ್ದ ರೋಷನ್‌ ಬೇಗ್‌ ಮಹತ್ತರ ಪಾತ್ರ ವಹಿಸಿದ್ದರು. ಹಾಗಾಗಿ ಅವರೇ ಸ್ಪರ್ಧಿಸುವುದಾದರೆ ಅವರ ಜೊತೆ ನಿಲ್ಲಲಿದ್ದೇವೆ. ಆದರೆ, ಅವರ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ನಮ್ಮ ನಿಲುವು ಬದಲಾಗುವ ಸಾಧ್ಯತೆಯೂ ಇದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಾಲಿಕೆ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಈ ಕ್ಷೇತ್ರದ ಏಳು ಕಾರ್ಪೊರೇಟರ್‌ಗಳಲ್ಲಿ ಐವರು ಕಾಂಗ್ರೆಸ್‌ನಿಂದ ಗೆದ್ದವರು.

ಯಶವಂತಪುರ ಕ್ಷೇತ್ರದ ಐವರು ಪಾಲಿಕೆ ಸದಸ್ಯರಲ್ಲಿ ಮೂವರು ಕಾಂಗ್ರೆಸ್‌ನವರು. ಅನರ್ಹ ಶಾಸಕ ಎಸ್‌.ಟಿ.ಸೋಮಶೇಖರ್ ಅವರೇ ಸ್ಪರ್ಧಿಸಿದರೆ ಕಾರ್ಪೊರೇಟರ್‌ಗಳೂ ಅವರ ಜೊತೆ ಹೋಗುವ ಸಾಧ್ಯತೆ ಹೆಚ್ಚು.

‘ಉಪಚುನಾವಣೆ ಬಗ್ಗೆ ನಾವಿನ್ನೂ ತೀರ್ಮಾನ ಕೈಗೊಂಡಿಲ್ಲ. ಸದ್ಯಕ್ಕೆ ಇದೇ ತಿಂಗಳಾಂತ್ಯದಲ್ಲಿ ನಡೆಯುವ ಮೇಯರ್‌ ಚುನಾವಣೆಯ ಬಗ್ಗೆ ಗಮನ ವಹಿಸಿದ್ದೇವೆ. ಈ ಚುನಾವಣೆಯಲ್ಲಿ ನಾವು ಕಾಂಗ್ರೆಸ್‌ ಅಭ್ಯರ್ಥಿಯನ್ನೇ ಬೆಂಬಲಿಸಲಿದ್ದೇವೆ. ಉಪಚುನಾವಣೆ ಕುರಿತು ಯಾವ ತೀರ್ಮಾನ ಕೈಗೊಳ್ಳ ಬೇಕು ಎಂಬ ಬಗ್ಗೆ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ತೀರ್ಮಾನಿಸ ಬೇಕಾಗುತ್ತದೆ’ ಎಂದು ಹೆರೊಹಳ್ಳಿ ವಾರ್ಡ್‌ನ ರಾಜಣ್ಣ ತಿಳಿಸಿದರು.

ಕೆ.ಆರ್‌.ಪುರ ಕ್ಷೇತ್ರದಲ್ಲಿ ಒಂಬತ್ತು ಪಾಲಿಕೆ ಸದಸ್ಯರಿದ್ದು, ಈ ಪೈಕಿ ಆರು ಮಂದಿ ಕಾಂಗ್ರೆಸ್‌ನವರು. ಒಂದಿಬ್ಬರನ್ನು ಹೊರತುಪಡಿಸಿ ಉಳಿದವರು ಅನರ್ಹ ಶಾಸಕ ಭೈರತಿ ಬಸವರಾಜ್‌ ಜೊತೆ ಗುರುತಿಸಿಕೊಂಡಿದ್ದಾರೆ.

‘ಪಕ್ಷಕ್ಕಿಂತ ನಾವು ಬಸವರಾಜ್‌ ವ್ಯಕ್ತಿತ್ವವನ್ನು ಮೆಚ್ಚಿದ್ದೇವೆ. ಹಾಗಾಗಿ ಅವರ ಬೆಂಬಲಕ್ಕೆ ನಿಲ್ಲಲಿದ್ದೇವೆ. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದೇ ಹೋದರೂ ಅವರು ನಿರ್ಧರಿಸುವ ಅಭ್ಯರ್ಥಿಯನ್ನು ಬೆಂಬಲಿಸಲಿದ್ದೇವೆ’ ಎಂದು ವಿಜ್ಞಾನನಗರ ವಾರ್ಡ್‌ನ ಕಾರ್ಪೊರೇಟರ್‌ ಎಸ್‌.ಜಿ. ನಾಗರಾಜ್‌ ಸ್ಪಷ್ಟಪಡಿಸಿದರು.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಏಳು ಮಂದಿ ಪಾಲಿಕೆ ಸದಸ್ಯರಿದ್ದು, ಇವರಲ್ಲಿ ಇಬ್ಬರುಕಾಂಗ್ರೆಸ್‌ನಿಂದ ಗೆದ್ದಿದ್ದರೆ, ಒಬ್ಬರುಬಿಜೆಪಿಯವರು. ಉಳಿದ ನಾಲ್ವರು ಜೆಡಿಎಸ್‌ನಿಂದ ಗೆದ್ದವರು. ಇವರಲ್ಲಿ ಅನರ್ಹ ಶಾಸಕ ಕೆ.ಗೋಪಾಲಯ್ಯ ಅವರ ಪತ್ನಿ ಎಸ್‌.ಪಿ. ಹೇಮಲತಾ ಸೇರಿದಂತೆಇಬ್ಬರು ಮಾತ್ರ ಅವರ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಇದೆ.

‘ನಾನಂತೂ ಪಕ್ಷಕ್ಕೆ ನಿಷ್ಠನಾಗಿರುತ್ತೇನೆ’ ಎಂದು ಉಪಮೇಯರ್‌ ಭದ್ರೇಗೌಡ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರ ಬಿಬಿಎಂಪಿ ವ್ಯಾಪ್ತಿಗೆ ಸೇರಿಲ್ಲ.

ಬಿಜೆಪಿಗೆ ಇರಿಸುಮುರಿಸು
ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್‌ ಶಾಸಕರ ಜೊತೆ ಗುದ್ದಾಡುತ್ತಲೇ ಬಂದಿದ್ದ ಬಿಜೆಪಿ ಕಾರ್ಪೊರೇಟರ್‌ಗಳಿಗೆ ವರಿಷ್ಠರ ತೀರ್ಮಾನ ಇರಿಸುಮುರಿಸು ಉಂಟುಮಾಡಿದೆ. ‘ಅನರ್ಹ ಶಾಸಕರ ಜೊತೆ ಗುರುತಿಸಿಕೊಳ್ಳಲು ನಮಗೆ ಮನಸ್ಸಿಲ್ಲ. ಆದರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ’ ಎಂದು ಬಿಜೆಪಿಯ ಪಾಲಿಕೆ ಸದಸ್ಯರೊಬ್ಬರು ತಿಳಿಸಿದರು.


ಅಂಕಿ ಅಂಶ
28 -ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿರುವ ಬಿಬಿಎಂಪಿ ಸದಸ್ಯರು
16 -ಕಾಂಗ್ರೆಸ್‌ ಕಾರ್ಪೊರೇಟರ್‌ಗಳು
7 - ಬಿಜೆಪಿ ಕಾರ್ಪೊರೇಟರ್‌ಗಳು
4 - ಜೆಡಿಎಸ್‌ ಕಾರ್ಪೊರೇಟರ್‌ಗಳು
1 -ಪಕ್ಷೇತರ ಕಾರ್ಪೊರೇಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT