ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಮುಂದಕ್ಕೆ: ಅನರ್ಹ ಶಾಸಕರು ನಿರಾಳ

ಚುನಾವಣಾ ಆಯೋಗದ ನಿರ್ಧಾರಕ್ಕೆ ‘ಸುಪ್ರೀಂ’ ಸಮ್ಮತಿ
Last Updated 26 ಸೆಪ್ಟೆಂಬರ್ 2019, 20:07 IST
ಅಕ್ಷರ ಗಾತ್ರ

ನವದೆಹಲಿ: ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವ ಸ್ಪೀಕರ್ ಆದೇಶ ಪ್ರಶ್ನಿಸಿರುವ ಪ್ರಕರಣ ಇತ್ಯರ್ಥ ಆಗುವವರೆಗೆ ರಾಜ್ಯದ 15 ಕ್ಷೇತ್ರಗಳಿಗೆ ಘೋಷಿಸಲಾಗಿದ್ದ ಉಪ ಚುನಾವಣೆಯನ್ನು ಮುಂದೂಡಬೇಕೆಂಬ ಚುನಾವಣಾ ಆಯೋಗದ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿದೆ.

‘ಅನರ್ಹಗೊಳಿಸುವ ಸ್ಪೀಕರ್‌ ಪರಮಾಧಿಕಾರಕ್ಕೆ ಸಂಬಂಧಿಸಿದ ಪ್ರಶ್ನೆಗಳು ಉದ್ಭವವಾಗಿವೆ. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡುವವರೆಗೆ ಚುನಾವಣೆಯನ್ನು ಮುಂದೂಡಲಾಗುವುದು’ ಎಂದು ಗುರುವಾರ ನಡೆದ ವಿಚಾರಣೆಯ ವೇಳೆ ಆಯೋಗದ ಪರ ವಕೀಲ ರಾಕೇಶ್‌ ದ್ವಿವೇದಿ ತಿಳಿಸಿದರು.

ಇದಕ್ಕೆ ಸಮ್ಮತಿ ಸೂಚಿಸಿದ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠ, ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್‌ 22ರಿಂದ ಮುಂದುವರಿಸಲು ನಿರ್ಧರಿಸಿತು.

‘15 ಕ್ಷೇತ್ರಗಳಿಗೆ ಅಕ್ಟೋಬರ್‌ 21ರಂದು ಉಪಚುನಾವಣೆ ನಡೆಯುತ್ತಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ಪ್ರಕರಣದ ಸಮಗ್ರ ವಿಚಾರಣೆ ನಡೆಸಿ ತೀರ್ಪು ನೀಡಲೇಬೇಕಿದೆ. ಕ್ಷೇತ್ರಗಳು ತೆರವಾಗಿ ಎರಡು ತಿಂಗಳು ಕಳೆದಿದ್ದು, ಆರು ತಿಂಗಳೊಳಗೆ ಉಪಚುನಾವಣೆ ನಡೆಸಬೇಕೆಂಬ ನಿಯಮದ ಪ್ರಕಾರ ಕಾಲಾವಕಾಶ ಇದೆ’ ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು. ಈ ವೇಳೆ ವಾದ ಮಂಡಿಸಿದ ದ್ವಿವೇದಿ, ಉಪಚುನಾವಣೆ ಮುಂದೂಡುವುದಾಗಿ ಆಯೋಗ ಅಧಿಸೂಚನೆ ಹೊರಡಿಸಲಿದೆ ಎಂದರು.

‘ಸ್ಪರ್ಧೆಗೆ ಅವಕಾಶ ನೀಡಬೇಕು ಇಲ್ಲವೇ ಚುನಾವಣೆ ಮುಂದೂಡಬೇಕು’ ಎಂದು ಕೋರಿದ್ದ ಅನರ್ಹ ಶಾಸಕರು ಆಯೋಗದ ಈ ನಿರ್ಧಾರದಿಂದ ನಿರಾಳವಾಗಿದ್ದಾರೆ.

ಶಾಸಕರ ರಾಜೀನಾಮೆಯಿಂದ ಜೆಡಿಎಸ್‌–ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ರಚನೆಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಸರ್ಕಾರವೂ ಈ ನಿರ್ಧಾರದಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ರಾಜಕೀಯ ಪಕ್ಷವೊಂದರ ಸದಸ್ಯರಾದ ಶಾಸಕರು ಸಂವಿಧಾನಕ್ಕೆ ಅನುಗುಣವಾಗಿ ವರ್ತಿಸಬೇಕು. ಸಂವಿಧಾನದ ಆಶಯವನ್ನು ಧಿಕ್ಕರಿಸಿ , ಕರ್ತವ್ಯವನ್ನೇ ಮರೆತವರನ್ನು ಅನರ್ಹಗೊಳಿಸುವ ಸಂವಿಧಾನಬದ್ಧ ಅಧಿಕಾರ ಸ್ಪೀಕರ್‌ಗೆ ಇದೆ ಎಂದು ಕೆಪಿಸಿಸಿ ಪರ ವಕೀಲ ಕಪಿಲ್‌ ಸಿಬಲ್‌ ಸ್ಪಷ್ಟಪಡಿಸಿದರು.

17 ಜನರ ವಿಧಾನಸಭೆ ಸದಸ್ಯತ್ವ ರದ್ದುಗೊಳಿಸಿದ ಆದೇಶವನ್ನು ಚುನಾವಣಾ ಆಯೋಗ ನೀಡಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಗೂ ಆಯೋಗಕ್ಕೂ ಸಂಬಂಧವೇ ಇಲ್ಲ. ಆದರೂ ಸ್ಪೀಕರ್ ಹೊರಡಿಸಿರುವ ಆದೇಶಕ್ಕೆ ಸಂಬಂಧಿಸಿದಂತೆ ಆಯೋಗ ಮೂಗು ತೂರಿಸುತ್ತಿರುವುದನ್ನು ಒಪ್ಪಲು ಆಗದು ಎಂದು ಹೇಳಿದರು.

‘ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರ ರಾಜೀನಾಮೆ ಸ್ವೀಕರಿಸದೇ ಪಕ್ಷದ ದೂರನ್ನು ಮೊದಲು ಗಮನಿಸಿ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಸ್ಪೀಕರ್‌ಗೆ ಮನವಿ ಮಾಡಿದ್ದರು. ಈ ಮನವಿ ಮೇರೆಗೆ ಸ್ಪೀಕರ್‌ ಕ್ರಮ ಕೈಗೊಂಡಿದ್ದಾರೆ. ಸ್ಪೀಕರ್ ಯಾವ ರೀತಿ ಕಾರ್ಯ ನಿರ್ವಹಿಸಬೇಕು, ಯಾವ ತೀರ್ಮಾನ ಕೈಗೊಳ್ಳಬೇಕು ಎಂಬುದನ್ನು ನ್ಯಾಯಾಲಯ ಸೂಚಿಸುವಂತಿಲ್ಲ ಎಂದು ಅವರು ನ್ಯಾಯಪೀಠದ ಗಮನ ಸೆಳೆದರು.

‘ಸಾಂವಿಧಾನಿಕ ಅಪಚಾರ’
‘ಅನರ್ಹತೆಗೆ ಒಳಗಾಗುವಂತಹ ತಪ್ಪು ಎಸಗಿದವರಿಗೆ ಶಿಕ್ಷೆ ಆಗಲೇಬೇಕು. ಕಾರಣವಿಲ್ಲದೇ ರಾಜೀನಾಮೆ ನೀಡುವವರು ಹಾಗೂ ಅನರ್ಹರಾದವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಿದರೆ ಅವರನ್ನು ಅನರ್ಹಗೊಳಿಸಿದ್ದಕ್ಕೆ ಅರ್ಥವೇ ಇಲ್ಲದಂತಾಗಲಿದೆ’ ಎಂದು ಎಂದು ಕಪಿಲ್‌ ಸಿಬಲ್ ಅವರು ಅಭಿಪ್ರಾಯಪಟ್ಟರು.

‘ಪಕ್ಷಾಂತರದ ಉದ್ದೇಶದಿಂದಲೇ ಇವರು ರಾಜೀನಾಮೆ ನೀಡಿದ್ದಾರೆ. ಪಕ್ಷಾಂತರವು ಸಾಂವಿಧಾನಿಕ ಅಪಚಾರವಾಗಿದೆ’ ಎಂದು ಅಭಿಪ್ರಾಯಪಟ್ಟರು.

ತರಾತುರಿಯಲ್ಲಿ ರಾಜೀನಾಮೆ ಸಲ್ಲಿಸಿದವರನ್ನು ಬಿಜೆಪಿಯ ರಾಜ್ಯಸಭೆ ಸದಸ್ಯರೊಬ್ಬರು ವಿಶೇಷ ವಿಮಾನದಲ್ಲಿ ಮುಂಬೈಗೆ ಕರೆದೊಯ್ದು ಪಂಚತಾರಾ ಹೋಟೆಲ್‌ನಲ್ಲಿ ಇರಿಸಿದ್ದರು. ಎಲ್ಲರೂ ಉದ್ದೇಶಪೂರ್ವಕವಾಗಿ ಒಂದೇ ದಿನ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್‌ ಇವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.

*
ಐತಿಹಾಸಿಕ ತೀರ್ಪು. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದ್ದು, ಆತಂಕಗೊಂಡಿದ್ದ ಅನರ್ಹ ಶಾಸಕರಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

*
ಅನರ್ಹ ಶಾಸಕರ ಪ್ರಕರಣದ ಗಂಭೀ>ರತೆ ಕೋರ್ಟ್‌ಗೆ ಮನವರಿಕೆಯಾಗಿದೆ. ಸ್ಪೀಕರ್ ಆದೇಶ ತಪ್ಪು ಎಂದು ನ್ಯಾಯಾಲಯ ಎಲ್ಲೂ ಹೇಳಿಲ್ಲ. ಶಾಸಕರ ಅನರ್ಹತೆ ಮುಂದುವರಿದಿದೆ.
-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

*
ಚುನಾವಣಾ ಆಯೋಗದಿಂದಲೇ ವಕೀಲರು ಚುನಾವಣೆ ಮುಂದೂಡಲು ಮನವಿ ಮಾಡಿಕೊಂಡಿರುವುದು ದೇಶದ ವ್ಯವಸ್ಥೆಗೆ ಅಪಾಯಕಾರಿ, ಕರಾಳ ದಿನಗಳನ್ನು ಕಾಣುತ್ತಿದ್ದೇವೆ.
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT