ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಜಲಾಶಯ ಆಯ್ತು, ಈಗ ನೆರೆಗಾಗಿ ಮತ್ತೆ ನೆಲೆ ಕಳೆದುಕೊಂಡರು

ಕೊಡಸಳ್ಳಿ, ಕದ್ರಾ ಜಲಾಶಯಗಳ ನಿರ್ಮಾಣಕ್ಕೆ ಡೋಂಗ್ರಿಯಲ್ಲಿ ಪುನರ್ವಸತಿಯಾಗಿತ್ತು
Last Updated 16 ಆಗಸ್ಟ್ 2019, 19:54 IST
ಅಕ್ಷರ ಗಾತ್ರ

ಕಾರವಾರ: ‘ಸರ್ಕಾರ ಅಂದು ಪರಿಹಾರವಾಗಿ ಕೊಟ್ಟಿದ್ದೇ ಒಂದು ಎಕರೆ ಜಾಗ. ಅದರಲ್ಲಿ ತೋಟ ಮಾಡಿ, ಅಡಿಕೆ, ಕಾಳುಮೆಣಸು ಬೆಳೆದು ಜೀವನ ಸಾಗಿಸುತ್ತಿದ್ದೆವು. ಈಗ ಹಿಂದೆಂದೂ ಕಾಣದಂಥ ಪ್ರವಾಹ ಬಂದು, ತೋಟವೂ ನಾಶವಾಗಿದೆ. ಮತ್ತೆ ನಮ್ಮನ್ನು ನಿರಾಶ್ರಿತರನ್ನಾಗಿ ಮಾಡಿದೆ...’

ಕದ್ರಾ, ಕೊಡಸಳ್ಳಿ ಜಲಾಶಯದ ಯೋಜನೆಗಾಗಿ ಇದ್ದ ಜಾಗ ಕಳೆದುಕೊಂಡು, ಅಂಕೋಲಾ ತಾಲ್ಲೂಕಿನ ಡೋಂಗ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋನಾಳದಲ್ಲಿ ಪುನರ್ವಸತಿ ಪಡೆದ ರೈತ ಜನಾರ್ದನ ಪಟಗಾರ ಅವರ ನೋವಿನ ನುಡಿಗಳಿವು.

‘ಗಂಗಾವಳಿ ನದಿಯ ನೀರು ಇಷ್ಟು ವರ್ಷ ನಮ್ಮ ತೋಟಕ್ಕೆ ವರವಾಗಿತ್ತು. ಅದೇ ನೀರಿನಿಂದ ಈ ರೀತಿ ನಮ್ಮ ಜೀವನವನ್ನು ಕೊಚ್ಚಿಕೊಂಡು ಹೋಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನಾಗರಪಂಚಮಿ (ಆ.5) ಹಬ್ಬದ ದಿನ ಒಮ್ಮೆಲೇನದಿ ನೀರು ಅಪ್ಪಳಿಸಿ, ತೋಟದಲ್ಲಿನ ಅಡಿಕೆ ಮರಗಳು ಸಾಲಾಗಿ ಮುರಿದು ಬಿದ್ದವು.ಜಮೀನಿನ ಮಣ್ಣೂಕುಸಿದು ನೀರು ಪಾಲಾಯಿತು. ನಾವು ಜೀವ ಉಳಿಸಿಕೊಳ್ಳಲು ಎತ್ತರದ ಪ್ರದೇಶಕ್ಕೆಓಡಿದೆವು’ ಎಂದು ಅವರು ಹೇಳುವಾಗ ಕಣ್ಣಂಚಿನಲ್ಲಿ ನೀರು ಜಿನುಗಿತು.

‘ಸುಮಾರು 25 ಮನೆಗಳುಈ ವ್ಯಾಪ್ತಿಯಲ್ಲಿವೆ. ಬಹುತೇಕ ಎಲ್ಲರ ತೋಟಗಳಿಗೂಹಾನಿಯಾಗಿದೆ. ಏಕಾಏಕಿ ನುಗ್ಗಿ ಬಂದ ನೀರಿನಿಂದ ಜೀವ ಉಳಿಸಿಕೊಂಡರೆ ಸಾಕಾಗಿತ್ತು’ ಎಂದು ಅವರ ಪತ್ನಿ ಸುಶೀಲಾ ಪಟಗಾರ ಹೇಳಿದರು.

ಗ್ರಾಮದಲ್ಲಿ ಮೌನ: ಗಂಗಾವಳಿ ನದಿಯ ಅಬ್ಬರಕ್ಕೆ ಸಿಲುಕಿದ ತೋಟ, ಗದ್ದೆಗಳು, ನದಿಯಂಚಿನ ಗ್ರಾಮಗಳಲ್ಲಿ ಈಗ ನೀರವ ಮೌನ ಆವರಿಸಿದೆ.

ಘಟ್ಟಪ್ರದೇಶದಿಂದ ಟನ್‌ಗಟ್ಟಲೆ ಕಸದ ರಾಶಿ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದು ಅಡಿಕೆ ತೋಟಗಳಲ್ಲಿ ಸಿಕ್ಕಿ ಹಾಕಿಕೊಂಡಿದೆ. ಮಣ್ಣು‌ ಕೂಡ ಸಡಿಲಗೊಂಡಿದ್ದು, ತೋಟಗಳಲ್ಲಿ ಕಾಲಿಟ್ಟರೆ ಒಂದೆರಡು ಅಡಿ ಆಳಕ್ಕೆ ಹುಗಿಯುತ್ತಿದೆ. ಬಾಳೆಗಿಡ, ಅಡಿಕೆ ಮರಗಳ ಮೇಲೆಲ್ಲ ಕೆಸರಿನಗುರುತು ಇನ್ನೂ ಉಳಿದುಕೊಂಡಿದೆ. ಹೊಂಡ ಬಿದ್ದಿರುವ ರಸ್ತೆಗಳಲ್ಲೇ ಇಲ್ಲಿನ ಗ್ರಾಮಸ್ಥರು ನಿತ್ಯವೂ ಸಂಚರಿಸುತ್ತಿದ್ದಾರೆ.

‘ಶಾಶ್ವತ ಪರಿಹಾರ ಕಲ್ಪಿಸಿ’: ಗಂಗಾವಳಿ ನದಿಯ ವ್ಯಾಪ್ತಿಯಲ್ಲಿ ಶುಕ್ರವಾರ ಸಂಚರಿಸಿದ ಹಳಿಯಾಳ ಶಾಸಕ ಆರ್‌.ವಿ.ದೇಶಪಾಂಡೆ, ನೆರೆ ಸಂತ್ರಸ್ತರಿಗೆ ಶಾಶ್ವತ ನೆಲೆ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಕೊಡಸಳ್ಳಿ ಜಲಾಶಯದಿಂದ ನಿರಾಶ್ರಿತರಾದವರಿಗೆಇಲ್ಲಿ ಪುನರ್ವಸತಿ ಕಲ್ಪಿಸಿದ್ದೆವು. ಆಗ ನಾನೇ ಸಚಿವನಿದ್ದೆ. ಆದರೆ, ಈಗ ಪ್ರವಾಹ ಬಂದು ಎಲ್ಲವೂ ಹೋಗಿದೆ. ಇಲ್ಲಿನ ಬಹುತೇಕರು ರೈತರು, ಕೂಲಿಕಾರರು. ಅವರಿಗೆ ಪುನಃ ಇಲ್ಲಿಯೇ ಮನೆ ನಿರ್ಮಿಸಿಕೊಟ್ಟರೆ ಮತ್ತೆ ಪ್ರವಾಹ ಬಂದರೆನಿರಾಶ್ರಿತರಾಗುತ್ತಾರೆ. ಹಾಗಾಗಿಬೇರೆಡೆ ಜಾಗ ಹುಡುಕಿ, ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT