ಭಾನುವಾರ, ಆಗಸ್ಟ್ 18, 2019
26 °C
10 ದಿನಗಳಲ್ಲಿ ವಿವಿಧ ಜಲಾಶಯಗಳಿಗೆ 750 ಟಿಎಂಸಿ ಅಡಿ ನೀರು l 60 ವರ್ಷಗಳಲ್ಲೇ ಅಧಿಕ ಮಳೆ l ಮೃತರ ಸಂಖ್ಯೆ 48ಕ್ಕೆ ಏರಿಕೆ

ಉತ್ತರದಲ್ಲಿ ಜಲದಿಗ್ಬಂಧನ: ದಕ್ಷಿಣದಲ್ಲಿ ಮಳೆ ಭೀತಿ

Published:
Updated:

ಬೆಂಗಳೂರು: ಅರವತ್ತು ವರ್ಷಗಳ ದಾಖಲೆ ಮುರಿದಿರುವ ಮಹಾಮಳೆ; ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಕೆಲವು ದಿನಗಳು ಮುಂದುವರಿಯುವ ಸಾಧ್ಯತೆ ಇದೆ. ಕಾವೇರಿ ಮತ್ತು ತುಂಗಭದ್ರಾ ನದಿಗಳ ಪಾತ್ರದಲ್ಲಿ ಪ್ರವಾಹ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಉತ್ತರ ಕರ್ನಾಟಕದಲ್ಲಿ ಸೋಮವಾರ ಮಳೆ ಮತ್ತು ಪ್ರವಾಹ ಇಳಿಮುಖವಾಗಿದೆ. ಇನ್ನೂ ಕೆಲವು ಪ್ರದೇಶಗಳು ಜಲಾವೃತವಾಗಿಯೇ ಉಳಿದಿವೆ. ಪರಿಹಾರ ಕಾರ್ಯದಲ್ಲಿ ಜಿಲ್ಲಾಡಳಿತದ ಜೊತೆ ಸಾರ್ವಜನಿಕರೂ ಕೈಜೋಡಿಸಿರುವುದರಿಂದ ಎಲ್ಲೂ ತೊಂದರೆ ಉಂಟಾಗಿಲ್ಲ.

ಹತ್ತು ದಿನಗಳಲ್ಲಿ 13 ಜಲಾಶಯಗಳಿಗೆ 750 ಟಿಎಂಸಿ ಅಡಿಗಳಿಗೂ ಹೆಚ್ಚು ನೀರು ಹರಿದು ಬಂದಿದೆ. ಇದು ಸಾರ್ವಕಾಲಿಕ ದಾಖಲೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದರು. 

ಮಲೆನಾಡು, ಕರಾವಳಿಯಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರಿಯಲಿದೆ. ಮಳೆಯಿಂದಾಗಿ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕಷ್ಟವಾಗಿದೆ. ಹುಣಸೂರಿನಲ್ಲಿ ಒಬ್ಬ ಮಹಿಳೆ ಸತ್ತಿದ್ದು, ಕೊಡಗು ಜಿಲ್ಲೆ ತೋರ ಗ್ರಾಮದಲ್ಲಿ ಭೂಕುಸಿತದಲ್ಲಿ ಕಾಣೆಯಾಗಿದ್ದ ಮೂವರ ಶವಗಳು ಪತ್ತೆಯಾಗಿವೆ.

(ಕೃಷ್ಣಾ ನದಿ ಪ್ರವಾಹದಲ್ಲಿ ಜಲಾವೃತಗೊಂಡಿರುವ ರಾಯಬಾಗ ತಾಲ್ಲೂಕಿನ ಚಿಂಚಲಿ ಪಟ್ಟಣದ ಮನೆಯೊಂದರ ಮೇಲೆ ಸುಮಾರು 10 ಅಡಿ ಉದ್ದದ ಮೊಸಳೆ ಸೋಮವಾರ ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ)

ಹಂಪಿ ಸ್ಮಾರಕಗಳು ನೀರಲ್ಲೇ: ಹಂಪಿಯಲ್ಲಿ ಭಾನುವಾರ ಸಂಪೂರ್ಣ ಮುಳುಗಡೆಯಾಗಿರುವ ಪುರಂದರ ಮಂಟಪ, ಚಕ್ರತೀರ್ಥ, ವಿಜಯನಗರ ಕಾಲದ ಕಾಲು ಸೇತುವೆ ಇನ್ನೂ ಅದೇ ಸ್ಥಿತಿಯಲ್ಲಿವೆ. ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನಲ್ಲಿ ಸ್ಮಾರಕಗಳನ್ನು ಆವರಿಸಿದ್ದ ನೀರು ಇಳಿದಿದೆ. ಸ್ಮಾರಕದ ರಕ್ಷಣಾಗೋಡೆಗೆ ಹಾನಿಯಾಗಿದೆ. ಮಂಡ್ಯ ಜಿಲ್ಲೆ ಕೆಆರ್‌ಎಸ್‌ನಿಂದ ಹೆಚ್ಚಿನ ನೀರು ಬಿಟ್ಟಿದ್ದು, ಶ್ರೀರಂಗಪಟ್ಟಣದಲ್ಲಿ ವೆಲ್ಲೆಸ್ಲಿ ಸೇತುವೆಯ ಮೇಲೆ ನೀರು ಹರಿದಿದೆ. ನಿಮಿಷಾಂಬ ದೇವಸ್ಥಾನವೂ ಜಲಾವೃತಗೊಂಡಿತ್ತು.

ಒಡೆದ ಚಿಗಳ್ಳಿ ಜಲಾಶಯ ದಂಡೆ: ಉತ್ತರ ಕನ್ನಡದ ಮುಂಡಗೋಡ ತಾಲ್ಲೂಕಿನ ಚಿಗಳ್ಳಿ ಜಲಾಶಯದ ದಂಡೆ ಒಡೆದು ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿರಸಿ– ಹುಬ್ಬಳ್ಳಿ ನಡುವೆ ಸಂಚಾರಸ್ಥಗಿತಗೊಳಿಸಿ, ಶಿರಸಿ– ಪಾಳಾ ಮೂಲಕ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ. ಗಂಗಾವತಿ ತಾಲ್ಲೂಕಿನ ವಿರೂಪಾಪುರ ಗಡ್ಡೆಯಲ್ಲಿ ಸಿಲುಕಿದ್ದವರ ರಕ್ಷಣೆಗೆ ತೆರಳಿದ್ದ ಎನ್‌ಡಿಆರ್‌ಎಫ್‌ ತಂಡದ ಐವರಿದ್ದ ಬೋಟ್‌ ಮಗುಚಿತು. ತುರ್ತು ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಯಿತು.

ಮನೆ ನಿರ್ಮಾಣಕ್ಕೆ ₹5 ಲಕ್ಷ ಪರಿಹಾರ

ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಲು ತಲಾ ₹ 5 ಲಕ್ಷ ಪರಿಹಾರ ನೀಡಲಾಗುವುದು. ಹಾನಿಯಾದ ಮನೆಗಳ ದುರಸ್ತಿಗೆ ₹ 1 ಲಕ್ಷ ನೀಡಲಾಗುವುದು ಎಂದು ಬಿ.ಎಸ್‌.ಯಡಿಯೂರಪ್ಪ ಘೋಷಿಸಿದರು.

ಬೆಳ್ತಂಗಡಿ ತಾಲ್ಲೂಕಿನ ಕುಕ್ಕಾವು ಸಂತ್ರಸ್ತ ಕೇಂದ್ರಕ್ಕೆ ಭೇಟಿ ನೀಡಿದ್ದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 282 ಮನೆಗಳು ನೆಲಸಮವಾಗಿವೆ’ ಎಂದರು.

ರಾಜಕಾರಣಿಗಳ ದಂಡು

ಪ್ರವಾಹ ಪೀಡಿತ ಪ್ರದೇಶದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಂತ್ರಸ್ತರಿರುವ ಕೇಂದ್ರಗಳಿಗೆ ತೆರಳಿ ಪರಿಹಾರ ಕಾರ್ಯವನ್ನು ವೀಕ್ಷಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಹಾರ ಕಾರ್ಯಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿರುವುದು ದೊಡ್ಡ ಸವಾಲಾಗಿದೆ. ಕೊಪ್ಪಳ ಜಿಲ್ಲೆ ವಿರೂಪಾಪುರ ಗಡ್ಡೆಯಲ್ಲಿ ಸಂತ್ರಸ್ತರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿ ಪರಿಹಾರ ಕೇಂದ್ರದಲ್ಲೂ ಸಾಮಗ್ರಿಗಳ ಚೆಕ್‌ಲಿಸ್ಟ್‌ ನೀಡಿದ್ದು, ಅದರಂತೆ ಸಾಮಗ್ರಿಗಳನ್ನು ರವಾನಿಸಲಾಗುತ್ತಿದೆ. ದಾನಿಗಳಿಂದ ವಸ್ತುಗಳನ್ನು ಸಂಗ್ರಹಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರವೊಂದನ್ನು ತೆರೆಯಲಾಗಿದೆ.

ಬೆಂಗಳೂರು–ಚಿತ್ರದುರ್ಗ ಹೆದ್ದಾರಿ ಟೋಲ್ ಸಂಗ್ರಹ ತಾತ್ಕಾಲಿಕ ಸ್ಥಗಿತ

ಬೆಂಗಳೂರು–ಚಿತ್ರದುರ್ಗ ಮಾರ್ಗದ ಹೆದ್ದಾರಿ 4ರಲ್ಲಿ (ಹೊಸ ಸಂಖ್ಯೆ ಎನ್‌ಎಚ್ 48) ಟೋಲ್‌ ಸಂಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ. ಪ್ರವಾಹದ ಕಾರಣ ಹಲವು ರಸ್ತೆಗಳಲ್ಲಿ ಸಂಚಾರ ಸಾಧ್ಯವಾಗುತ್ತಿಲ್ಲ. ಹಾಗಾಗಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಈ ಕ್ರಮ ಎಂದು ಅವರು ಹೇಳಿದ್ದಾರೆ.

ಇದೇ ಹೆದ್ದಾರಿಯ ಕೊಲ್ಲಾಪುರದ ಶಿರೋಲಿ ಬಳಿ ರಸ್ತೆಯು ಜಲಾವೃತವಾಗಿದ್ದು, ಪರ್ಯಾಯವಾಗಿ ಪುಣೆ–ಸೊಲ್ಲಾಪುರ (ಎನ್ಎಚ್‌ 9), ಸೊಲ್ಲಾಪುರ–ವಿಜಯಪುರ (ಎನ್ಎಚ್‌ 13) ಮತ್ತು ವಿಜಯಪುರ–ಚಿತ್ರದುರ್ಗ (ಎನ್ಎಚ್‌ 50) ಹೆದ್ದಾರಿ ಬಳಸುವಂತೆ ತಿಳಿಸಲಾಗಿದೆ.

Post Comments (+)