ಮಂಗಳವಾರ, ನವೆಂಬರ್ 19, 2019
22 °C
ಖಾನಾಪುರ ತಾಲ್ಲೂಕಿನಲ್ಲಿ 80 ಗ್ರಾಮಗಳ ಸಂಪರ್ಕಕ್ಕೆ ಕುತ್ತು

ಮಹಾರಾಷ್ಟ್ರದಲ್ಲಿ ಮಳೆ | ಕೃಷ್ಣೆ ಪ್ರವಾಹ ಮತ್ತಷ್ಟು ಗಂಭೀರ

Published:
Updated:
Prajavani

ಹುಬ್ಬಳ್ಳಿ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ಹಾಗೂ ಕೊಂಕಣ ಭಾಗದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ.

ಪ್ರವಾಹದಿಂದಾಗಿ ಸೇತುವೆಗಳು, ರಸ್ತೆಗಳು ಮುಳುಗಿವೆ. ಉತ್ತರ ಕನ್ನಡದ ಸೂಪಾ ಜಲಾಶಯದ ಎಲ್ಲ ಗೇಟುಗಳನ್ನು ತೆರೆದು ನೀರು ಬಿಡಲಾಗಿದ್ದು, ಹಳೆ ದಾಂಡೇಲಿ, ಕದ್ರಾ, ಮಲ್ಲಾಪುರ ಗ್ರಾಮಗಳಿಗೆ ನೀರು ನುಗ್ಗಿದೆ.

ಒಂದೇ ತಿಂಗಳ ಅವಧಿಯಲ್ಲಿ ಬೆಳಗಾವಿ, ಬಾಗಲಕೋಟೆ, ಗದಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮತ್ತೆ ಮಹಾಪೂರ ಬಂದಿದ್ದು, ವಾರದ ಹಿಂದಷ್ಟೇ ಪರಿಹಾರ ಕೇಂದ್ರಗಳಿಂದ ಮನೆಗೆ ಮರಳಿದ್ದ ನದಿ ತೀರದ ಜನರನ್ನು ಇದು ಕಂಗೆಡಿಸಿದೆ. 

ಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮ ನವಿಲುತೀರ್ಥ ಜಲಾಶಯದ ಹೊರ ಹರಿವು ಹೆಚ್ಚಳವಾಗಿ ಗದಗ ಜಿಲ್ಲೆಯ ಹೊಳೆ ಆಲೂರು–ಬಾದಾಮಿ ನಡುವಿನ ಸೇತುವೆ ನದಿಯಲ್ಲಿ ಮುಳುಗಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ.

ತುಂಗಭದ್ರಾ ನದಿ ಪ್ರವಾಹದಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿ–ಗಂಗಾವತಿ ಸೇತುವೆ ಮುಳುಗುವ ಭೀತಿಯಿದೆ. ಹಂಪಿಯ ಪುರಂದರ ಮಂಟಪ ಹಾಗೂ ಚಕ್ರತೀರ್ಥ ಜಲಾವೃತವಾಗಿವೆ. ರಾಮ ಲಕ್ಷ್ಮಣ ದೇವಸ್ಥಾನ, ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಸ್ನಾನಘಟ್ಟ ಬಹುತೇಕ ಮುಳುಗಿದೆ.


ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕು ಸುರೇಬಾನದ ಸರ್ಕಾರಿ ಪ್ರೌಢಶಾಲೆ ಜಲಾವೃತವಾಗಿದೆ   

ಮತ್ತೆ ಮುಳುಗಿದ ಸೇತುವೆಗಳು: ಕೃಷ್ಣಾ ಮತ್ತು ದೂಧ್‌ಗಂಗಾ ನದಿಗಳ ಮೂಲಕ ಭಾನುವಾರ ಚಿಕ್ಕೋಡಿ–ಕಲ್ಲೋಳ ಬಳಿ ಒಟ್ಟು 1.80 ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ನೀರು ಹರಿದು ಬರುತ್ತಿದೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕಿನಲ್ಲಿ ಕೃಷ್ಣಾ, ದೂಧ್‌ಗಂಗಾ ಹಾಗೂ ವೇದಗಂಗಾ ನದಿಗಳಿಗೆ ಕಟ್ಟಿರುವ ಆರು ಸೇತುವೆಗಳು, ರಾಯಬಾಗ ತಾಲ್ಲೂಕಿನ
ಕುಡಚಿ ಸೇತುವೆ ಮುಳುಗಡೆ ಸ್ಥಿತಿಯಲ್ಲಿವೆ. 

ಮಲಪ್ರಭಾ (ನವಿಲುತೀರ್ಥ) ಜಲಾಶಯದಿಂದ 21,089 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದಾಗಿ ರಾಮದುರ್ಗದ ಕಿಲಬನೂರು ಹಾಗೂ ನೇಕಾರಪೇಟೆ, ತಾಲ್ಲೂಕಿನ ಸುನ್ನಾಳ ಗ್ರಾಮಗಳು ಭಾಗಶಃ ಜಲಾವೃತವಾಗಿವೆ.

ಚನ್ನಮ್ಮನ ಕಿತ್ತೂರು ಭಾಗದಲ್ಲಿ ಮಳೆ ಆಗುತ್ತಿರುವುದರಿಂದ ತುಪ್ಪರಿಹಳ್ಳ ಉಕ್ಕಿ ಹರಿಯುತ್ತಿದ್ದು, ಧಾರವಾಡ ಸಂಪರ್ಕಿಸುವ ರಸ್ತೆ ಬಂದ್ ಆಗಿದೆ. 

ಕಣಕುಂಬಿಯಿಂದ ಎಂ.ಕೆ. ಹುಬ್ಬಳ್ಳಿವರೆಗಿನ ಎಂಟು ಸೇತುವೆಗಳು ಜಲಾವೃತಗೊಂಡಿವೆ. ಗೋಕಾಕ ಹೊರವಲಯದ ಲೋಳಸೂರ ಸೇತುವೆ ಮತ್ತೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಮೂಡಲಗಿ ತಾಲ್ಲೂಕಿನ ಸುಣಧೋಳಿಯ ಸೇತುವೆ ಘಟಪ್ರಭಾ ಪ್ರವಾಹದಿಂದಾಗಿ ಭಾನುವಾರ ಮುಳುಗಡೆಯಾಗಿದೆ. ಖಾನಾಪುರ ತಾಲ್ಲೂಕಿನಲ್ಲಿ 80 ಗ್ರಾಮಗಳ ಸಂಚಾರ ಕಡಿತಗೊಂಡಿದೆ.

 ದಾಂಡೇಲಿ, ಕದ್ರಾದಲ್ಲಿ ಪ್ರವಾಹ: ಕಾರವಾರದ ಸೂಪಾ ಜಲಾಶಯದ ಎಲ್ಲ ಗೇಟುಗಳನ್ನು ತೆರೆದು ಸುಮಾರು 54 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಟ್ಟಿದ್ದರಿಂದ ಜಲಾಶಯದ ಕೆಳಭಾಗದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.  ಕದ್ರಾ ಜಲಾಶಯದಿಂದ 90 ಸಾವಿರ ಕ್ಯುಸೆಕ್ ನೀರು ಹೊರ ಬಿಟ್ಟಿದ್ದರಿಂದ ಮಲ್ಲಾಪುರದ ಹಿಂದೂವಾಡದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ.

ಶೀಲಹಳ್ಳಿ ಸೇತುವೆ ಮುಳುಗಡೆ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.18 ಲಕ್ಷ ಕ್ಯುಸೆಕ್‌ ನೀರು ಬಿಡಲಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ಕೊಪ್ಪಳ ಜಿಲ್ಲೆಯ ವಿರೂಪಾಪುರ ಗಡ್ಡಿ  ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ.


ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣ ಹೊರವಲಯದ ಪ್ರೇರಣಾ ಶಾಲೆ ಜಲಾವೃತವಾಗಿದೆ

ಪ್ರವಾಹದಲ್ಲಿ ಕೊಚ್ಚಿ ಹೋದ ವೃದ್ಧೆ

ಖಾನಾಪುರ: ಮಲಪ್ರಭಾ ನದಿಯ ಪ್ರವಾಹವನ್ನು ವೀಕ್ಷಿಸಲು ತೆರಳಿದ್ದ ಸುಶೀಲಾ ಭರಮಾಜಿ ಬೋಗಾರ (85) ಕೊಚ್ಚಿಕೊಂಡು ಹೋಗಿದ್ದಾರೆ. ಈಜು ಪರಿಣತರು ವೃದ್ಧೆಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.


ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್ ಹಾಗೂ ಕಂಪ್ಲಿಗೆ ಸಂಪರ್ಕ ಕಲ್ಪಿಸುವ ಸೇತುವೆ ಭಾನುವಾರ ಕಂಡುಬಂದ ದೃಶ್ಯ

ಬಾಗಲಕೋಟೆ ಜಿಲ್ಲೆಯಲ್ಲಿ 14 ಸೇತುವೆಗಳು ಮುಳುಗಡೆ

ಬಾಗಲಕೋಟೆ ಜಿಲ್ಲೆಯಲ್ಲಿ 14 ಸೇತುವೆಗಳು ಮುಳುಗಿವೆ. ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಗೋವನಕೊಪ್ಪ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 217ರಲ್ಲಿ ಸಂಪರ್ಕ ಕಡಿತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್.ಡಿ.ಆರ್.ಎಫ್) ಎರಡು ತಂಡಗಳನ್ನು ಜಿಲ್ಲೆಗೆ ಕರೆಸಲಾಗಿದೆ.

ಘಟಪ್ರಭಾ ನದಿ ಪ್ರವಾಹದ ನೀರು ಮುಧೋಳ ತಾಲ್ಲೂಕಿನ ನಂದಗಾಂವ ಹಾಗೂ ಅಸ್ಕಿ ಗ್ರಾಮಕ್ಕೆ ನುಗ್ಗಿದ್ದು, ಗ್ರಾಮಸ್ಥರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2.5 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದೆ.

ಗದಗ ಜಿಲ್ಲೆಯ ಕೊಣ್ಣೂರು, ಕಪಲಿ, ಕಲ್ಲಾಪುರ, ಶಿರೋಳ ಗ್ರಾಮಗಳಿಗೂ ನದಿ ನೀರು ನುಗ್ಗಿರುವುದರಿಂದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ನರಗುಂದ ತಾಲ್ಲೂಕಿನ ಕೊಣ್ಣೂರು ಹೊಸ ಸೇತುವೆ ಬಳಿ ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218 ಪ್ರವಾಹಕ್ಕೆ ಸಿಲುಕಿದೆ.


ಜೊಯಿಡಾದ ಸೂಪಾ ಜಲಾಶಯದ ಕೆಳಭಾಗದ ರಸ್ತೆ ಬಿರುಕು ಬಿಟ್ಟಿರುವುದು

 

ಪ್ರತಿಕ್ರಿಯಿಸಿ (+)