ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟಕ್ಕೆ ಸ್ಪಂದನೆ: ಬಿಎಸ್‌ವೈ ವಿಶ್ವಾಸ

ನೆರೆಪೀಡಿತ ಪ್ರದೇಶಗಳಿಗೆ ಇಂದಿನಿಂದ ಕೇಂದ್ರ ತಂಡ
Last Updated 24 ಆಗಸ್ಟ್ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ನೆರೆಪೀಡಿತ ಪ್ರದೇಶಗಳಲ್ಲಿ ಮೂರು ದಿನ (ಆ. 28ರವರೆಗೆ) ಕೇಂದ್ರ ಅಧ್ಯಯನ ತಂಡ ಪ್ರವಾಸ ಕೈಗೊಳ್ಳಲಿದೆ. ಕೇಂದ್ರ ‌ಸರ್ಕಾರಕ್ಕೆ ಈ ತಂಡ ವರದಿ ನೀಡಲಿದ್ದು, ರಾಜ್ಯದ ಸಂಕಷ್ಟಕ್ಕೆ ಕೇಂದ್ರ ಸೂಕ್ತವಾಗಿ ಸ್ಪಂದಿಸುವ ವಿಶ್ವಾಸವಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಪ್ರವಾಹದಿಂದ ಉಂಟಾಗಿರುವ ಅನಾಹುತಗಳ ಅಧ್ಯಯನಕ್ಕೆ ಬಂದಿರುವ ಕೇಂದ್ರ ತಂಡದ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ, ‘ಪ್ರವಾಹದಿಂದ ಆಗಿರುವ ಅನಾಹುತ, ನಷ್ಟಗಳ ಬಗ್ಗೆ ತಂಡಕ್ಕೆ ಮಾಹಿತಿ ನೀಡಲಾಗಿದೆ’ ಎಂದರು.

‘ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ್‌ ನೇತೃತ್ವದ ತಂಡ ಬೆಳಗಾವಿ,‌ ಬಾಗಲಕೋಟೆ, ಧಾರವಾಡ, ಗದಗ ಮತ್ತು ‌ಕೊಡಗು ಜಿಲ್ಲೆಗಳಿಗೆ ಭೇಟಿ ನೀಡಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಕುರಿತು ವರದಿ ನೀಡಲಿದೆ. ಇದನ್ನು ಆಧರಿಸಿ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಲಿದೆ’ ಎಂದು ಮುಖ್ಯಮಂತ್ರಿ ವಿವರಿಸಿದರು.

‘ಪ್ರವಾಹದಿಂದ ಆಗಿರುವ ಅನಾಹುತ, ನಷ್ಟ ಮತ್ತು ಕೈಗೊಂಡಿರುವ ಪರಿಹಾರ ಕಾರ್ಯಗಳ ಕುರಿತು ತಂಡಕ್ಕೆ ‌ಮಾಹಿತಿ ನೀಡಿದ್ದೇವೆ. ಪ್ರವಾಹದಿಂದ ಸರ್ವಸ್ವವನ್ನೂ ಕಳೆದುಕೊಂಡಿರುವ ಜನರು, ವಿಶೇಷವಾಗಿ ರೈತರು ಮತ್ತೆ ಬದುಕು ಕಟ್ಟಿಕೊಳ್ಳಬೇಕಿದೆ. ಅದಕ್ಕೆ ನೆರವು ನೀಡಿ, ಬೆಂಬಲಕ್ಕೆ ನಿಂತು ಆತ್ಮವಿಶ್ವಾಸ ಮೂಡಿಸಬೇಕಾದ ಅನಿವಾರ್ಯದ ಬಗ್ಗೆಯೂ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ’ ಎಂದರು.

ಅಧ್ಯಯನ ತಂಡದಲ್ಲಿ ಯಾರಿದ್ದಾರೆ?
ಕೇಂದ್ರ ಗೃಹ ಸಚಿವಾಲಯ ಜಂಟಿ ಕಾರ್ಯದರ್ಶಿ ಪ್ರಕಾಶ್‌, ವಿತ್ತ ಸಚಿವಾಲಯದ ಎಸ್‌.ಸಿ. ಮೀನಾ, ಕೃಷಿ ಸಚಿವಾಲಯದ ಜಂಟಿ ನಿರ್ದೇಶಕ (ತೈಲ ಬೀಜ ಅಭಿವೃದ್ಧಿ ನಿರ್ದೇಶನಾಲಯ) ಪೊನ್ನುಸ್ವಾಮಿ, ಜಲಸಂಪನ್ಮೂಲ ಸಚಿವಾಲಯದ ಸೂಪರಿಟೆಂಡೆಂಟ್‌ ಎಂಜಿನಿಯರ್‌ ಜಿತೇಂದ್ರ ಪನ್ವಾರ್‌, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವಿಜಯಕುಮಾರ್‌, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್‌, ಇಂಧನ ಸಚಿವಾಲಯದ ಉಪ ನಿರ್ದೇಶಕ ಓ.ಪಿ ಸುಮನ್‌ ಇದ್ದಾರೆ.

‘ಸಂತ್ರಸ್ತರಿಗೆ ಪರಿಹಾರ: ಸರ್ಕಾರ ಬದ್ಧತೆ ಪ್ರದರ್ಶಿಸಲಿ’
ಬೆಂಗಳೂರು:
‘ರಾಜ್ಯದಲ್ಲಿ ಸಂಭವಿಸಿರುವ ಜಲಪ್ರಳಯವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಬೇಕು. ರಾಜ್ಯ ಸರ್ಕಾರ ಬದ್ಧತೆಯಿಂದ, ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಕೊಳ್ಳಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಎಂ.ಬಿ. ಪಾಟೀಲ ಒತ್ತಾಯಿಸಿದರು.

ಶಾಸಕರಾದ ಸತೀಶ ಜಾರಕಿಹೊಳಿ, ಗಣೇಶ ಹುಕ್ಕೇರಿ ಮತ್ತು ಆನಂದ ನ್ಯಾಮಗೌಡ ಜೊತೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ದು ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಬೇಕು. ವಿಶೇಷ ಅಧಿವೇಶನ ಕರೆದು ಅತಿವೃಷ್ಟಿ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕು’ ಎಂದೂ ಆಗ್ರಹಿಸಿದರು.

‘₹ 40 ಸಾವಿರ ಕೋಟಿಗೂ ಹೆಚ್ಚು ನಷ್ಟ ಆಗಿದೆ ಎಂದು ಸ್ವತಃ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಈವರೆಗೂ ಕೇಂದ್ರದಿಂದ ನೆರವು ಬಂದಿಲ್ಲ. ಬರ ಪರಿಹಾರವಾಗಿ ಬಂದ ಹಣವನ್ನು ನೆರೆ ಸಂಬಂಧ ಸಿಕ್ಕಿದ ಪರಿಹಾರವೆಂದು ಜನರನ್ನು ತಪ್ಪು ದಾರಿಗೆ ಎಳೆಯಬಾರದು’ ಎಂದು ಬಿಜೆಪಿ ಸಚಿವರಿಗೆ ಪಾಟೀಲ ಕುಟುಕಿದರು.

‘ನಿಖರವಾಗಿ ಹಾನಿಯ ಸಮೀಕ್ಷೆ ಮಾಡಬೇಕು. ಈ ನಿಟ್ಟಿನಲ್ಲಿ ನಾವು ಮುಖ್ಯಮಂತ್ರಿಗೆ ಪೂರ್ಣ ಸಹಕಾರ. ನೀಡುತ್ತೇವೆ’ ಎಂದೂ ಭರವಸೆ ನೀಡಿದ ಅವರು, ‘ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಿದ್ಧಪಡಿಸಿದ, ಸಂತ್ರಸ್ತರ ಅಹವಾಲುಗಳ ವರದಿ ಸಹಿತ 10 ಅಂಶಗಳನ್ನು ಒಳಗೊಂಡ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸುತ್ತೇವೆ’ ಎಂದರು.

‘ಮನೆ ಕಳೆದುಕೊಂಡವರಿಗೆ ಮತ್ತು ಭಾಗಶ: ಹಾನಿಗೊಳಗಾದ ಮಣ್ಣಿನ ಮನೆಗಳ‌ ಮಾಲೀಕರಿಗೆ ಹೊಸ‌‌ಮನೆ ಕಟ್ಟಲು ₹ 10 ಲಕ್ಷ ನೆರವು ನೀಡಬೇಕು. ತಕ್ಷಣಕ್ಕೆ ತಾತ್ಕಾಲಿಕ ಶೆಡ್ ನಿರ್ಮಿಸಿ ಕೊಡಬೇಕು. ಶೌಚಾಲಯ, ಸ್ನಾನಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಿರಾಶ್ರಿತರ ಹೊದಿಕೆ, ಪಠ್ಯ,ಪುಸ್ತಕ, ಪಾತ್ರೆ ಸಾಮಾನು, ಬಟ್ಟೆಬರೆಗೆ ₹ 1 ಲಕ್ಷ ನೀಡಬೇಕು‌’ ಎಂದು ಒತ್ತಾಯಿಸಿದರು.

‘ಎಮ್ಮೆ, ಎತ್ತು, ಆಕಳು ಕಳೆದುಕೊಂಡವರಿಗೆ ₹ 50 ಸಾವಿರ, ಮೇಕೆ, ಆಡು ಕಳೆದುಕೊಂಡವರಿಗೆ ಕನಿಷ್ಠ ₹ 10 ಸಾವಿರ ನೀಡಬೇಕು. ರಸ್ತೆ, ಚೆಕ್ ಡ್ಯಾಂ, ಕೆರೆ ಕಟ್ಟೆಗಳು, ಸೇತುವೆ, ಪಂಪ್ ಸೆಟ್, ಟಿ.ಸಿಗಳು ಹಾನಿಯಾಗಿದ್ದು ಅವುಗಳಿಗೂ ಪರಿಹಾರ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT