ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿದ ಹೇಮಾವತಿ ನದಿ; ಕರಾವಳಿಯಲ್ಲಿ ಬಿರುಸಿನ ಮಳೆ: ಮೂರು ಸಾವು

ಸಂಚಾರಕ್ಕೆ ತೊಂದರೆ l ಕಾವೇರಿ ಒಳಹರಿವಿನಲ್ಲೂ ಹೆಚ್ಚಳ
Last Updated 8 ಸೆಪ್ಟೆಂಬರ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಬಿರುಸಾಗಿದೆ. ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಾವೇರಿ ನದಿಯ ಒಳಹರಿವು ಹೆಚ್ಚಾಗಿದೆ.

ಮಳೆಯಿಂದಾಗಿ ಕೊಟ್ಟಿಗೆಯ ಗೋಡೆ ಕುಸಿದು ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮ ಮೇಗಿನಪಂಜದಲ್ಲಿ ವಾರಿಜಾ ಪೂಜಾರಿ (70) ಮೃತಪಟ್ಟಿದ್ದಾರೆ.

ಉಜಿರೆ- ಚಾರ್ಮಾಡಿ ರಸ್ತೆಯ ಉಜಿರೆ ಪೆಟ್ರೋಲ್‌ ಬಂಕ್ ಬಳಿ ಬೃಹದಾಕಾರದ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಕೆಲಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು. ನಂತರ ಮರ ತೆರವುಗೊಳಿಸಲಾಯಿತು.

ಒಂದು ವಾರದಿಂದ ನಿರಂತರವಾಗಿ ಮಳೆ ಮುಂದುವರಿದಿದ್ದು, ಜಿಲ್ಲೆಯ ಹಲವೆಡೆ ಮತ್ತೆ ನೆರೆಯ ಆತಂಕ ಸೃಷ್ಟಿಯಾಗಿದೆ. ಘಾಟಿಯ ಮೇಲ್ಭಾಗದಲ್ಲೂ ಉತ್ತಮ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಸುಂಟರಗಾಳಿಯಿಂದ ಹಾನಿ: ಭಾನುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಕುಚ್ಚೂರು, ಬೇಳಂಜೆ ಸುತ್ತಮುತ್ತಲ ಪ್ರದೇಶದಲ್ಲಿ ಜೋರಾದ ಸುಂಟರಗಾಳಿ ಬೀಸಿದ್ದು, ಹಲವು ಮನೆಗಳ ಚಾವಣಿಯ ಹೆಂಚು, ಶೀಟುಗಳು ಹಾರಿಹೋಗಿವೆ.

ಬೃಹತ್‌ ಪ್ರಮಾಣದ ಮರವೊಂದು ಬೇಳಂಜೆ– ಆರ್ಡಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು.

ನದಿಗಳ ಮಟ್ಟ ಏರಿಕೆ: ಮೂಡಿಗೆರೆ ತಾಲ್ಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರ ತಡರಾತ್ರಿಯಿಂದಲೂ ಬಿಡುವಿಲ್ಲದೇ ಸುರಿದ ಮಳೆಯಿಂದ ಹೇಮಾವತಿ, ಜಪಾವತಿ, ಚಿಕ್ಕಳ್ಳ, ದೊಡ್ಡಳ್ಳ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಭಾನುವಾರ ಬೆಳಿಗ್ಗೆ ಸುರಿದ ಮಳೆಯಿಂದ ಅರ್ಧ ಗಂಟೆಯಲ್ಲೇ ಹೇಮಾವತಿ ನದಿಯು ಉಗ್ಗೆಹಳ್ಳಿ ಗ್ರಾಮದ ತಡೆಗೋಡೆಯವರೆಗೂ ವ್ಯಾಪಿಸಿದೆ. ಅಣಜೂರು, ಬೆಟ್ಟದಮನೆ, ಉಗ್ಗೆಹಳ್ಳಿಯಲ್ಲಿ ಬೆಳಿಗ್ಗೆ 11 ಗಂಟೆಯವರೆಗೂ ಗದ್ದೆ, ಬಯಲುಗಳೆಲ್ಲವೂ ಹೇಮಾವತಿ ನೀರಿನಿಂದ ಜಲಾವೃತವಾಗಿದ್ದವು. ಹೇಮಾವತಿ ತೀರದಲ್ಲಿ ನಾಟಿಮಾಡಿದ್ದ ಭತ್ತದ ಗದ್ದೆಗಳು ಸಂಪೂರ್ಣ ಕೊಚ್ಚಿಹೋಗಿವೆ. ಹಲವು ಮನೆಗಳಿಗೂ ಹಾನಿಯಾಗಿದೆ. ಈಚೆಗೆ ಸುರಿದ ಮಳೆಗೆ ಹಾನಿಯಾಗಿದ್ದ ಬಂಕೇನಹಳ್ಳಿ ಗ್ರಾಮದ ಬಳಿಯ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಸಂಪರ್ಕಕ್ಕೆ ಪರದಾಡುವಂತಾಗಿದೆ.

ಕೊಟ್ಟಿಗೆಹಾರ, ಕೊಪ್ಪ, ಬಾಳೆಹೊನ್ನೂರು, ಶೃಂಗೇರಿ, ನರಸಿಂಹರಾಜಪುರ ಸುತ್ತಮುತ್ತ ಸಾಧಾರಣ ಮಳೆಯಾಗಿದೆ.

ಮೂಡಿಗೆರೆ ತಾಲ್ಲೂಕಿನ ಬಂಕೇನಹಳ್ಳಿ ಗ್ರಾಮದ ಬಳಿ ಹಾನಿಯಾಗಿದ್ದ ಸೇತುವೆಯು ಸಂಪೂರ್ಣ ಕೊಚ್ಚಿ ಹೋಗಿದೆ.
ಮೂಡಿಗೆರೆ ತಾಲ್ಲೂಕಿನ ಬಂಕೇನಹಳ್ಳಿ ಗ್ರಾಮದ ಬಳಿ ಹಾನಿಯಾಗಿದ್ದ ಸೇತುವೆಯು ಸಂಪೂರ್ಣ ಕೊಚ್ಚಿ ಹೋಗಿದೆ.

ಮುಂದುವರಿದ ಮಳೆ: ಕೊಡಗು ಜಿಲ್ಲೆಯಲ್ಲಿ ಶನಿವಾರ ರಾತ್ರಿಯಿಂದಲೂ ಗಾಳಿ ಸಹಿತ ಮಳೆಯಾಗುತ್ತಿದೆ. ಭಾನುವಾರ ಬೆಳಿಗ್ಗೆ ತುಸು ಬಿಡುವು ನೀಡಿದ್ದ ಮಳೆ, ಮಧ್ಯಾಹ್ನದ ನಂತರ ಬಿರುಸಾಯಿತು.

ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಭಾರೀ ಮಳೆಯಾಗಿದ್ದು ಕರಡಿಗೋಡು, ಗುಹ್ಯ, ನೆಲ್ಯಹುದಿಕೇರಿ, ಬೇತ್ರಿ ವ್ಯಾಪ್ತಿಯ ಕಾವೇರಿ ನದಿಯಲ್ಲಿ ಮತ್ತೆ ನೀರಿನಮಟ್ಟ ಏರಿಕೆ ಕಂಡಿದೆ. ನದಿ ದಂಡೆಯ ನಿವಾಸಿಗಳಿಗೆ ಆತಂಕ ಎದುರಾಗಿದೆ. ಆಗಸ್ಟ್‌ನಲ್ಲೂ ಈ ಭಾಗದ ನಿವಾಸಿಗಳು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದರು.

ಇರ್ಫು, ಹುದಿಕೇರಿ, ಬಾಳೆಲೆ, ಕುಟ್ಟ, ಕಾನೂರು ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದಲೂ ಎಡೆಬಿಡದೇ ಮಳೆಯಾಗುತ್ತಿದ್ದು, ಲಕ್ಷ್ಮಣತೀರ್ಥ ನದಿಯ ಪ್ರವಾಹದಿಂದ ನಾಟಿ ಮಾಡಿದ ಗದ್ದೆಗಳು ಜಲಾವೃತಗೊಂಡಿವೆ. ನಾಟಿ ಮಾಡಿದ್ದ ಪೈರು ಕರಗುತ್ತಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆ ಬೀಳುತ್ತಿದ್ದು, ಜಲಾಶಯದ ಒಳಹರಿವು ಏರಿಕೆಯಾಗಿದೆ.

ಮಡಿಕೇರಿ, ಚೇರಂಬಾಣೆ, ಸುಂಟಿಕೊಪ್ಪ, ಸೋಮವಾರಪೇಟೆ ಹಾಗೂ ಶಾಂತಳ್ಳಿ ಭಾಗದಲ್ಲಿ ಬಿಡುವು ಕೊಟ್ಟು ಮಳೆ ಅಬ್ಬರಿಸುತ್ತಿದೆ. ಅಪ್ಪಂಗಳ, ತಾಳತ್ತಮನೆ, ಮಾದಾಪುರ ಸುತ್ತಮುತ್ತ ಆಗಾಗ್ಗೆ ಸಾಧಾರಣ ಮಳೆ ಸುರಿಯುತ್ತಿದೆ.

ಹೇಮಾವತಿ ಒಳಹರಿವು ಹೆಚ್ಚಳ: ಹಾಸನ ಜಿಲ್ಲೆಯ ಹಾಸನ, ಸಕಲೇಶಪುರ, ಬೇಲೂರು, ಅರಕಲಗೂಡು ಸುತ್ತಮುತ್ತ ಭಾನುವಾರವೂ ಮಳೆ ಮುಂದುವರಿದಿದೆ.

ಸಕಲೇಶಪುರ ತಾಲ್ಲೂಕಿನ ಹೆತ್ತೂರು ಭಾಗದಲ್ಲಿ ಜೋರು ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳಹರಿವು 24 ಸಾವಿರ ಕ್ಯುಸೆಕ್‌ ಇದ್ದು, ಹೊರಹರಿವು 23 ಸಾವಿರ ಕ್ಯುಸೆಕ್‌ ತಲುಪಿದೆ.

ಶಿವಮೊಗ್ಗ ಜಿಲ್ಲೆಯ ಹಲವೆಡೆ ಭಾನುವಾರ ಸಾಧಾರಣ ಮಳೆಯಾಗಿದೆ.

ಆಗುಂಬೆ, ಮಾಸ್ತಿಕಟ್ಟೆ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ತೀರ್ಥಹಳ್ಳಿ, ರಿಪ್ಪನ್‌ಪೇಟೆ, ಹೊಸನಗರ, ಸಾಗರ, ಜೋಗ, ಸೊರಬ, ಭದ್ರಾವತಿ, ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾಗಿದೆ. ಶಿಕಾರಿಪುರದಲ್ಲಿ ತುಂತುರು ಮಳೆಯಾಗಿದೆ.

ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು

ಮಂಗಳೂರು: ನಗರದ ಪಡೀಲ್‌ ಸಮೀಪದ ಶಿವನಗರದಲ್ಲಿ ಭಾನುವಾರ ರಾತ್ರಿ ಭಾರಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ರಾಮಣ್ಣ ಎಂಬುವವರ ಮಕ್ಕಳಾದ ವರ್ಷಿಣಿ (9) ಮತ್ತು ವೇದಾಂತಿ (7) ಮೃತರು. ಮನೆಯ ಹೊರಗಿನ ತಡೆಗೋಡೆ ಕುಸಿದು ಮನೆಯ ಮೇಲೆ ಬಿದ್ದಿದೆ. ಬಳಿಕ ಮನೆಯ ಗೋಡೆ ಕುಸಿದು ಮಕ್ಕಳ ಮೇಲೆ ಬಿದ್ದಿದ್ದು, ಅವರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.

ವ್ಯಕ್ತಿ ಸಾವು: ಭದ್ರಾವತಿ ತಾಲ್ಲೂಕಿನ ಹೊಸ ಸಿದ್ದಾಪುರದಲ್ಲಿ ಭಾನುವಾರ ಬೆಳಗಿನ ಜಾವ ಮಳೆಗೆ ಮನೆಯ ಗೋಡೆ ಕುಸಿದು ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಹೊಸ ಸಿದ್ದಾಪುರದ ನಂಜಾಪುರ ರಸ್ತೆಯ ನಿವಾಸಿ ಗುರುಸ್ವಾಮಿ (40) ಮೃತಪಟ್ಟವರು.

ಕರಾವಳಿ: ‘ಯೆಲ್ಲೊ ಅಲರ್ಟ್‌’

ಬೆಂಗಳೂರು: ‘ರಾಜ್ಯದ ಕರಾವಳಿ ಭಾಗದಲ್ಲಿ ಸೆ. 12ರ ವರೆಗೆ ವ್ಯಾಪಕ ಮಳೆಯಾಗಲಿದ್ದು, ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಸೆ. 12ರ ವರೆಗೆ ಸಾಧಾರಣ ಮಳೆಯಾಗಲಿದ್ದು, ಬಳಿಕ ಈ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ’ ಎಂದವರು ತಿಳಿಸಿದರು.

ಮೆಟ್ಟೂರು ಜಲಾಶಯದಿಂದ 65,000 ಕ್ಯುಸೆಕ್‌ ನೀರು ಹೊರಕ್ಕೆ

ಚೆನ್ನೈ: ತಮಿಳುನಾಡಿನ ಮೆಟ್ಟೂರು ಜಲಾಶಯವು ಶನಿವಾರ ತುಂಬಿದ್ದು ಈಗ 65 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಸೇಲಂ, ತಿರುಚಿರಾ‍ಪಳ್ಳಿ ಸೇರಿ 11 ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

ಕರ್ನಾಟಕದ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಕಾರಣ ಮೆಟ್ಟೂರು ಜಲಾಶಯ ತುಂಬಿದೆ. ಕಳೆದ ವರ್ಷವೂ ಜಲಾಶಯ ತುಂಬಿತ್ತು.

ಭಾನುವಾರ ಸಂಜೆ ಜಲಾಶಯಕ್ಕೆ ಒಳಹರಿವು 71 ಸಾವಿರ ಕ್ಯುಸೆಕ್‌ ಇತ್ತು. ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ 94.75 ಟಿಎಂಸಿ ಅಡಿ.

11 ಜಿಲ್ಲೆಗಳ ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಕಾವೇರಿ ದಡದಲ್ಲಿ ಇರುವ ಜನರನ್ನು ತೆರವು ಮಾಡುವುದಕ್ಕೆ ಅಗತ್ಯವಾದ ಸಿದ್ಧತೆಯನ್ನು ಸರ್ಕಾರ ಮಾಡಿಕೊಂಡಿದೆ.

ತಮಿಳುನಾಡಿನ ಕಾವೇರಿ ಮುಖಜ ಪ್ರದೇಶದ ಜನರು ಕೃಷಿಗೆ ಈ ಜಲಾಶಯದ ನೀರನ್ನೇ ಅವಲಂಬಿಸಿದ್ದಾರೆ. ಈಗ ಜಲಾಶಯ ತುಂಬಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಸಾಮಾನ್ಯವಾಗಿ, ಜೂನ್‌ 12ರಂದು ಜಲಾಶಯದಿಂದ ನೀರು ಹೊರಬಿಡಲಾಗುತ್ತದೆ. ಈ ಬಾರಿ, ಮಳೆ ವಿಳಂಬವಾದ ಕಾರಣ ಜಲಾಶಯಕ್ಕೆ ನೀರು ಬಂದಿರಲಿಲ್ಲ. ಹಾಗಾಗಿ, ಆಗಸ್ಟ್‌ 13ರಂದು ಮೊದಲ ಬಾರಿ ಕೃಷಿಗೆ ನೀರು ಹರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT