ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ: ವಾಸ್ತವಕ್ಕೂ, ಮಾರ್ಗಸೂಚಿಗೂ ತಾಳೆಯಾಗದ ಲೆಕ್ಕ!

ಜಿಲ್ಲೆಯಲ್ಲಿ ಹಾನಿ ಪ್ರಮಾಣ ಅಂದಾಜು ₹2,543 ಕೋಟಿ
Last Updated 2 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಉಂಟಾದ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಮಹಾಪೂರದಿಂದ ₹2,543 ಕೋಟಿ ಹಾನಿಯನ್ನು ಅಂದಾಜಿಸಲಾಗಿದೆ. ಅಂದರೆ, ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಅನ್ವಯಜಿಲ್ಲೆಗೆ ₹420.36 ಕೋಟಿ ಮಾತ್ರ ಪರಿಹಾರ ಲಭ್ಯವಾಗಲಿದೆ!

ಜಿಲ್ಲಾಡಳಿತ ಈಗಾಗಲೇ ಹಾನಿ ಪ್ರಮಾಣದ ಸಮೀಕ್ಷೆ ಪೂರ್ಣಗೊಳಿಸಿದೆ. ಅದರನ್ವಯ ವಾಸ್ತವಿಕ ಹಾನಿ ಪ್ರಮಾಣಕ್ಕೂ ಕೇಂದ್ರದಿಂದ ಸಿಗುವ ನೆರವಿಗೂ ಅಜಗಜಾಂತರ ವ್ಯತ್ಯಾಸವಾಗಲಿದ್ದು, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಲಿದೆ.

ಪ್ರವಾಹದಿಂದಜಿಲ್ಲೆಯಲ್ಲಿ ಒಟ್ಟು 45,997 ಕುಟುಂಬಗಳು ಸಂತ್ರಸ್ತಗೊಂಡಿವೆ. ಕೃಷಿ ಬೆಳೆ, ಮನೆಗಳು, ರಸ್ತೆ,ಸರ್ಕಾರಿ ಕಟ್ಟಡಗಳು, ಹೆದ್ದಾರಿಗಳಿಗೆ ಆದ ಹಾನಿ, ಹೆಸ್ಕಾಂ ಆಸ್ತಿ ನಷ್ಟದ ಪ್ರಮಾಣವನ್ನು ಸಮೀಕ್ಷೆ ಒಳಗೊಂಡಿದೆ.

ಶೇ 40ರಷ್ಟು ಕಬ್ಬು ನಾಶ: ‘ಜಿಲ್ಲೆಯ ನದಿ ದಂಡೆಗಳಲ್ಲಿ ಕಬ್ಬು ಹೆಚ್ಚಾಗಿ ಬೆಳೆಯುತ್ತಾರೆ. ಹೀಗಾಗಿ ಒಟ್ಟು 1.03 ಲಕ್ಷ ಹೆಕ್ಟೇರ್ ಕಬ್ಬಿನ ಪೈಕಿ 41,568 ಹೆಕ್ಟೇರ್‌ ಬೆಳೆ ನಾಶವಾಗಿದೆ. ಕೃಷಿ, ತೋಟಗಾರಿಕೆ ಬೆಳೆ ಸೇರಿ ಒಟ್ಟು 71,942 ಹೆಕ್ಟೇರ್ ಬೆಳೆ ಹಾಳಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ಮಾಹಿತಿ ನೀಡುತ್ತಾರೆ.

ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಹೆಕ್ಟೇರ್‌ಗೆ ₹13.500 ಪ್ರಕಾರ ರೈತರೊಬ್ಬರಿಗೆ ಗರಿಷ್ಠ ಎರಡು ಹೆಕ್ಟೇರ್‌ಗೆ ಮಾತ್ರ ಪರಿಹಾರ ದೊರೆಯಲಿದೆ. ವಾಸ್ತವಿಕ ಸಮೀಕ್ಷೆಯಲ್ಲಿ ಎಕರೆಗೆ 40 ಟನ್‌ನಂತೆ ಪ್ರತಿ ಟನ್‌ಗೆ ₹2,750 ನಷ್ಟದ ಪ್ರಮಾಣ ನಿಗದಿಗೊಳಿಸಲಾಗಿದೆ. ನೆರೆಯಿಂದಾಗಿ ಜಿಲ್ಲೆಯಲ್ಲಿ 61 ಹೆಕ್ಟೇರ್‌ ರೇಷ್ಮೆ ಬೆಳ ನಾಶವಾಗಿದ್ದು, ಬೆಳೆಗಾರರಿಗೆ ಹೆಕ್ಟೇರ್‌ಗೆ ₹3 ಸಾವಿರ ಮಾತ್ರ ಪರಿಹಾರ ದೊರಕಲಿದೆ.

ಪಂಚನಾಮೆ ವರದಿ!: ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಕೋಳಿ, ಕುರಿ, ದನಗಳು ಸಾವಿಗೀಡಾಗಿದ್ದರೆ ಪರಿಹಾರ ಪಡೆಯಲು ಪಶುವೈದ್ಯರ ಪಂಚನಾಮೆ ವರದಿ ಸಲ್ಲಿಸಬೇಕಿದೆ. ಆದರೆ ಪ್ರವಾಹದಲ್ಲಿ ಕೊಚ್ಚಿ ಹೋಗಿರುವುದರಿಂದ ಅವುಗಳ ಕಳೇಬರ ಹುಡುಕಿ ತಂದು ಪಂಚನಾಮೆ ಮಾಡಿಸಿ ಅಧಿಕಾರಿಗಳಿಗೆ ಅದರ ವರದಿ ಎಲ್ಲಿಂದ ಕೊಡುವುದು ಎಂಬುದು ರೈತರ ಪ್ರಶ್ನೆ. ‘ಹೀಗಾಗಿ ಜಾನುವಾರು ಸಾವಿರಗಟ್ಟಲೇ ಕೊಚ್ಚಿ ಹೋಗಿದ್ದರೂ ನೂರರ ಲೆಕ್ಕದಲ್ಲಿ ಸಮೀಕ್ಷೆ ಪಟ್ಟಿಯಲ್ಲಿವೆ’ ಎಂಬುದು ಅವರ ಅಳಲು.

‘ಈ ಗೊಂದಲ ನನ್ನ ಗಮನಕ್ಕೂ ಬಂದಿದೆ. ಹೀಗಾಗಿ ಸಮೀಕ್ಷೆ ವೇಳೆ ಕನಿಷ್ಠ ಸಾಮಾನ್ಯ ಜ್ಞಾನ ಬಳಸಿ, ಮಾನವೀಯತೆ ನೆಲೆಯಲ್ಲಿ ಪರಿಹಾರ ನಿಗದಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳುತ್ತಾರೆ.

ಪ್ರಮುಖ ಅಂಶಗಳು

*301 ಜಾನುವಾರು ಸಾವು

* 4 ಪರಿಹಾರ ಕೇಂದ್ರ

* 570 ಆಶ್ರಯ ಪಡೆದವರು

* ಪ್ರಕೃತಿ ವಿಕೋಪದಿಂದ ರೈತರಿಗೆ ಬಹಳಷ್ಟು ನಷ್ಟವಾಗಿದೆ. ಸಾಧ್ಯ<br/>ವಾದಷ್ಟು ಹೆಚ್ಚಿನ ನೆರವು ಕೊಡುವಂತೆ ಅವರ ಪರ ಕೇಂದ್ರಕ್ಕೆ ವಿನಂತಿಸುವೆ.

ಗೋವಿಂದ ಕಾರಜೋಳ,ಉಪ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT