ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ಸ್ಥಿತಿ ಬಾಣಲೆಯಿಂದ ಬೆಂಕಿಗೆ!

ಮಳೆಗೆ ಕುಸಿದುಬೀಳುತ್ತಿವೆ ಮನೆಗಳು: ಜೀವ ಕೈಯಲ್ಲಿ ಹಿಡಿದು ಬದುಕಬೇಕಿದೆ
Last Updated 12 ಅಕ್ಟೋಬರ್ 2019, 20:11 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಪ್ರವಾಹದ ವೇಳೆ ಜಲಾವೃತವಾಗಿದ್ದ ಮನೆಗಳು ಈಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದು ಬೀಳುತ್ತಿವೆ. ಹೀಗಾಗಿ ಸಂತ್ರಸ್ತರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಎಂಬಂತಾಗಿದೆ.

ಜಿಲ್ಲೆಯಲ್ಲಿ ಪ್ರವಾಹದ ನಂತರ ಇಲ್ಲಿಯವರೆಗೆ 240 ಮನೆಗಳು ಬಿದ್ದಿವೆ. ಅಕ್ಟೋಬರ್ 9ರಂದು ಹುನಗುಂದ ತಾಲ್ಲೂಕಿನಲ್ಲಿ ಒಂದೇ ರಾತ್ರಿ 25 ಮನೆಗಳು ನೆಲಕಚ್ಚಿವೆ.

ಮಣ್ಣಿನ ಚಾವಣಿ ಹೊಂದಿದ ಮಾಳಿಗೆ ಮನೆಗಳ ಅಡಿಪಾಯಗಳೂ ಪ್ರವಾಹದ ವೇಳೆ ವಾರಗಟ್ಟಲೇ ನೀರಿನಲ್ಲಿ ನೆನೆದಿವೆ. ಈಗ ಮಳೆಯಿಂದ ಗೋಡೆ, ಸೂರು ನೆನೆದು ಸುಲಭವಾಗಿ ಕುಸಿದುಬೀಳುತ್ತಿವೆ.

ಪ್ರವಾಹಕ್ಕೆ ತುತ್ತಾಗಿ ಮನೆಗಳುಸಂಪೂರ್ಣ ಕುಸಿದು
ಬಿದ್ದವರಿಗೆವಾಸಕ್ಕೆ ಸರ್ಕಾರ ಸದ್ಯ ತಾತ್ಕಾಲಿಕ ತಗಡಿನ ಶೆಡ್‌ಗಳನ್ನು ಕಟ್ಟಿಕೊಟ್ಟಿದೆ. ಇನ್ನೂ ಕೆಲವರು ಬಾಡಿಗೆ ಮನೆಯಲ್ಲಿದ್ದಾರೆ.

ಆದರೆ ಮನೆ ಭಾಗಶಃ ಬಿದ್ದವರು, ಶಿಥಿಲಗೊಂಡ ಮನೆಗಳವರು ಬೇರೆಡೆ ಆಸರೆ ಇಲ್ಲದೇ ಮತ್ತೆ ಅದೇ ಮನೆಗಳಿಗೆ ಮರಳಿದ್ದಾರೆ.ಅವರೀಗ ಸಂಕಷ್ಟಕ್ಕೆ ಸಿಲುಕಿದ್ದು, ಜೀವ ಕೈಯಲ್ಲಿ ಹಿಡಿದು ಬದುಕಬೇಕಿದೆ.

ಆಯುಧಪೂಜೆಗೆ ಮುನ್ನಾದಿನ ಬಾಗಲಕೋಟೆ ತಾಲ್ಲೂಕಿನ ಕಿರೆಸೂರಿನಲ್ಲಿ ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ.

ಪರಿಹಾರ ನಿಗದಿ ಗೊಂದಲ: ಹೀಗೆ ಮಳೆಯ ಆರ್ಭಟಕ್ಕೆ ಸಿಲುಕಿ ಕುಸಿದುಬಿದ್ದ ಮನೆಗಳಿಗೆ ಯಾವ ಲೆಕ್ಕದಲ್ಲಿ ಪರಿಹಾರ ನಿಗದಿಪಡಿಸಬೇಕು ಎಂಬ ಗೊಂದಲ ಅಧಿಕಾರಿ ವರ್ಗವನ್ನು ಕಾಡುತ್ತಿದೆ.

ಸಾಮಾನ್ಯವಾಗಿ ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ಮೊತ್ತ ಕೊಡಲಾಗುತ್ತದೆ. ಈ ಲೆಕ್ಕದಲ್ಲಿ ಕೊಟ್ಟರೆ ಸಂಪೂರ್ಣ ಮನೆ ಕುಸಿದುಬಿದ್ದರೆ ಸಂತ್ರಸ್ತರಿಗೆ ₹ 98,200 ಪರಿಹಾರ ಸಿಗಲಿದೆ. ಶೇ 15ರಷ್ಟು ಹಾನಿಯಾಗಿದ್ದರೆ ₹5,200 ದೊರೆಯಲಿದೆ.

ಆದರೆ ಈಗ ಪ್ರವಾಹದಿಂದ ಬಾಧಿತವಾಗಿ ಶೇ 25ಕ್ಕಿಂತ ಹೆಚ್ಚು ಹಾನಿಗೀಡಾಗಿದ್ದರೆ ಅಂತಹ ಮನೆಗಳಿಗೆ ರಾಜ್ಯ ಸರ್ಕಾರ ₹5 ಲಕ್ಷ ಪರಿಹಾರ ನಿಗದಿಪಡಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಮನೆ ಕುಸಿದ ಪ್ರಕರಣಗಳನ್ನು ಮಳೆಯಿಂದ ಆದ ಹಾನಿಯೋ ಇಲ್ಲವೇ ಪ್ರವಾಹದಿಂದ ಆದ ಸಂಕಷ್ಟವೋ ಎಂದು ಯಾವ ಮಾನದಂಡದಲ್ಲಿ ಅಂದಾಜಿಸಬೇಕು ಎಂಬುದು ಕಂದಾಯ ಇಲಾಖೆ ಅಧಿಕಾರಿಗಳ ಜಿಜ್ಞಾಸೆ.

-ಇಲ್ಲಿಯವರೆಗೆ 240 ಮನೆಗಳು ಬಿದ್ದಿವೆ

-ಒಂದೇ ರಾತ್ರಿ 25 ಮನೆಗಳು ನೆಲಕಚ್ಚಿವೆ

-ಕುಸಿದುಬಿದ್ದ ಮನೆಗಳಿಗೆ ಪರಿಹಾರ ನೀಡಿಕೆಯಲ್ಲಿ ಗೊಂದಲ

ಸರ್ಕಾರಕ್ಕೆ ಪತ್ರ ಬರೆಯಲಿದ್ದೇವೆ..

‘ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾನಿಗೀಡಾದ ಮನೆಗಳಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ನೀಡುವುದೋ, ಇಲ್ಲವೇ ಪ್ರವಾಹ ಸಂತ್ರಸ್ತರ ಹೆಸರಿನಲ್ಲಿ ನೆರವು ಕಲ್ಪಿಸುವುದೋ ಎಂಬುದನ್ನು ಸ್ಪಷ್ಟಪಡಿಸಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಿದ್ದೇವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳುತ್ತಾರೆ.

‘ಸಂತ್ರಸ್ತರಿಗೆ ಸದ್ಯಕ್ಕೆ ಹಳೆಯ ಮಾರ್ಗಸೂಚಿ ಅನ್ವಯವೇ ಪರಿಹಾರ ಕಲ್ಪಿಸಲಿದ್ದೇವೆ. ಮೇಲಿನಿಂದ ಸ್ಪಷ್ಟನೆ ಬಂದ ನಂತರ ಹೆಚ್ಚುವರಿ ಪರಿಹಾರ ಮೊತ್ತ ನೀಡಲಾಗುವುದು‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT