ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂತ ಮಳೆ: ಪರಿಹಾರದ್ದೇ ಸವಾಲು

Last Updated 13 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಒಂದು ವಾರದಿಂದ ಮಳೆ ಹಾಗೂ ನೆರೆಯಿಂದ ತತ್ತರಿಸಿದ್ದ ಜನರು ಮಂಗಳವಾರ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಕರಾವಳಿ ಭಾಗದಲ್ಲಿ ಸೋಮವಾರ ರಾತ್ರಿ ಹಾಗೂ ಬೆಳಿಗ್ಗೆ ಮಳೆಯಾಗಿರುವುದನ್ನು ಬಿಟ್ಟರೆ, ಮಲೆನಾಡು, ಕೊಡಗು ಭಾಗದಲ್ಲಿ ತುಂತುರು ಮಳೆಯಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮೂಡಿದೆ.

ಕೊಯ್ನಾ ಸೇರಿದಂತೆ ಬಹುತೇಕ ಜಲಾಶಯಗಳಿಂದ ನೀರು ಹೊರಬಿಡುವ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹ ಇಳಿಮುಖವಾಗುತ್ತಿದೆ. ನದಿಗಳ ಪಾತ್ರಗಳಲ್ಲೂ ನೀರು ಇಳಿದಿದ್ದು, ಜನರ ಆತಂಕ ಕಡಿಮೆಯಾಗಿದೆ.

ಪರಿಹಾರ ಸವಾಲು: ಮಳೆ ಬಿಡುವು ನೀಡುತ್ತಿದ್ದಂತೆ ಪರಿಹಾರ ಕಾರ್ಯವೂ ಚುರುಕುಗೊಂಡಿದೆ. ಆದರೆ, ಮನೆ ಕಳೆದುಕೊಂಡವರು ಪರಿಹಾರ ಕೇಂದ್ರಗಳಲ್ಲಿದ್ದು, ರಸ್ತೆ, ಸೇತುವೆಗಳು ಕೊಚ್ಚಿಹೋಗಿದ್ದರಿಂದಾಗಿ ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವುದೇ ಕಷ್ಟಕರವಾಗಿದೆ.

ಪರಿಹಾರ ಕಾಮಗಾರಿಗಳನ್ನುಕೈಗೆತ್ತಿಕೊಳ್ಳುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ನಿಂತಿದೆ. ಯಾವುದನ್ನು ಮೊದಲು ಮಾಡಬೇಕು, ಯಾವುದಕ್ಕೆ ಆದ್ಯತೆ ನೀಡಬೇಕು ಎಂಬ ಚಿಂತೆ ಕಾಡುತ್ತಿದೆ.

ಹಾಳಾಗಿರುವ ರಸ್ತೆ, ಸೇತುವೆಗಳನ್ನು ತಾತ್ಕಾಲಿಕವಾಗಿ ಸರಿಪಡಿಸುವುದು, ರಸ್ತೆ ಮೇಲೆ ತುಂಬಿಕೊಂಡಿರುವ ಮಣ್ಣು, ಕಡ್ಡಿ, ಕಸವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.

ಮನೆ ಕಳೆದುಕೊಂಡವರಿಗೆ ತಕ್ಷಣಕ್ಕೆ ವಾಸದ ವ್ಯವಸ್ಥೆ ಕಲ್ಪಿಸುವುದು, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಸರಬರಾಜು ಮಾಡುವ ಮೂಲಗಳಲ್ಲಿ ಕೆಸರು, ಕೊಳಚೆ ತುಂಬಿಕೊಂಡಿದ್ದು, ಅದನ್ನೂ ಸರಿಪಡಿಸಬೇಕಿದೆ.

ಇಲ್ಲವೆ ಪರ್ಯಾಯ ವ್ಯವಸ್ಥೆ ಮಾಡಿ, ಶುದ್ಧ ನೀರು ಕೊಡುವ ಜವಾಬ್ದಾರಿಯನ್ನೂ ನಿಭಾಯಿಸುವುದು ತಕ್ಷಣದ ಸವಾಲಾಗಿ ಪರಿಣಮಿಸಿದೆ.

ಮುಂದುವರಿದ ಶೋಧ: ಕೊಡಗಿನ ವಿರಾಜಪೇಟೆ ತಾಲ್ಲೂಕು ತೋರ ಬಳಿ ಭೂಕುಸಿತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ಮುಂದುವರಿದಿದ್ದು, ಈವರೆಗೆ 3 ಮೃತ ದೇಹಗಳು ಪತ್ತೆಯಾಗಿದ್ದು, ನಾಪತ್ತೆಯಾಗಿರುವ 7 ಜನರಿಗಾಗಿ ಶೋಧ ನಡೆದಿದೆ.

ಒಡೆದ ಕಾಲುವೆ–ಆತಂಕ:ತುಂಗಭದ್ರಾ ಜಲಾಶಯದ ಎಡದಂಡೆ ಮುಖ್ಯಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಮುನಿರಾಬಾದ್‌ ಪಂಪಾವನಕ್ಕೆ‌ ನುಗ್ಗಿದೆ.

ಆದರೆ ಜಲಾಶಯ ಒಡೆದಿದೆ‌, ಬಿರುಕು ಬಿಟ್ಟಿದೆ ಎಂಬ ವದಂತಿಯಿಂದಾಗಿ ನದಿ ಪಾತ್ರದ ಜನರು ಭಯಭೀತರಾಗಿದ್ದರು. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ವಿರೂಪಾಪುರ ಗಡ್ಡೆಯಲ್ಲಿ ಸಿಲುಕಿಕೊಂಡಿದ್ದ 190 ಪ್ರವಾಸಿಗರು, ಸ್ಥಳೀಯ ನಿವಾಸಿಗಳನ್ನು ಸೇನಾ ಹೆಲಿಕಾಪ್ಟರ್‌ ಮೂಲಕ ಸ್ಥಳಾಂತರಿಸಲಾಗಿದೆ.

ಸಂಚಾರ: ಯಶವಂತಪುರ– ಸಕಲೇಶ ಪುರ– ಮಂಗಳೂರು ಮಾರ್ಗದಲ್ಲಿ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ. ಚಿಕ್ಕಮಗಳೂರು– ಮಂಗಳೂರು ನಡುವಿನ ಚಾರ್ಮಾಡಿಘಾಟ್‌ ಮುಚ್ಚಲಾಗಿದೆ.

ಬೆಳಗಾವಿ– ಕೊಲ್ಹಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾಗಿದ್ದು, ಚೋರ್ಲಾ ಮಾರ್ಗ ವಾಗಿ ಪಣಜಿಗೆ ಲಘು ವಾಹನಗಳು ಸಂಚರಿಸುತ್ತಿವೆ.

‘ಮನೆ ಕಟ್ಟಿಸಿ ಕೊಡದಿದ್ದರೆ ಸರ್ಕಾರ ಕೆಡುವುತ್ತೇನೆ’

ಬೆಳಗಾವಿ: ‘ಪ್ರವಾಹ ಪೀಡಿತ ಜನರಿಗೆ ಮನೆ ಕಟ್ಟಿಸಿಕೊಡದಿದ್ದರೆ ಈ ಸರ್ಕಾರವನ್ನೇ ಕೆಡುವುತ್ತೇನೆ’ ಎಂದು ಅರಭಾವಿಯ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಮ್ಮ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ.

ಮೂಡಲಗಿ ತಾಲ್ಲೂಕಿನ ತಿಗಡಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ನೀಡಿದ್ದ ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಬಳಿಕ, ಗೋಕಾಕದಲ್ಲಿ ಸ್ಪಷ್ಟನೆ ನೀಡಿದ ಅವರು, ‘ಸರ್ಕಾರವನ್ನು ಕೆಡುವುತ್ತೇನೆ ಎಂದು ಬಾಯಿತಪ್ಪಿ ಹೇಳಿದ್ದೇನೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ’ ಎಂದರು.

ಅಂಕಿ– ಅಂಶ

6.97 ಲಕ್ಷ ಜನರ ರಕ್ಷಣೆ

4.45 ಲಕ್ಷ ಹೆಕ್ಟೇರ್ ಬೆಳೆ ನಷ್ಟ

100 ತಾಲ್ಲೂಕು ಬಾಧಿತ ಪ್ರದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT