ಭಾನುವಾರ, ನವೆಂಬರ್ 29, 2020
21 °C
ತ್ವರಿತವಾಗಿ ಕೈಗಾರಿಕಾ ಘಟಕಗಳಿಗೆ ಇದ್ದ ಅಡ್ಡಿ ನಿವಾರಣೆ

ಕೈಗಾರಿಕಾ ಸೌಲಭ್ಯ ತಿದ್ದುಪಡಿ ಮಸೂದೆಗೆ ಸಚಿವ ಸಂಪುಟ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ತ್ವರಿತಗತಿಯಲ್ಲಿ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಸಹಾಯವಾಗಲು ಕರ್ನಾಟಕ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಮಸೂದೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕೈಗಾರಿಕೆ ಸ್ಥಾಪನೆಗೆ ಅಗತ್ಯವಿರುವ ಎಲ್ಲ ರೀತಿಯ ಅನುಮತಿಗಳನ್ನು ಏಕಗವಾಕ್ಷಿಯಡಿ ನೀಡಲಾಗುವುದು. ರಾಜ್ಯ ಅಥವಾ ಜಿಲ್ಲಾ ಹಂತದ ಸಮಿತಿಗಳು ಒಪ್ಪಿಗೆ ನೀಡಿ ದೃಢೀಕರಿಸಿದ ತಕ್ಷಣವೇ ಲ್ಯಾಂಡ್‌ ಆಡಿಟ್‌ ಕಮಿಟಿ ಮಾಹಿತಿ ಪಡೆಯುತ್ತದೆ. ತಕ್ಷಣವೇ ಕೈಗಾರಿಕೆ ಸ್ಥಾಪನೆ ಆರಂಭಿಸಬಹುದು ಎಂದು ಸಚಿವ ಸಂಪುಟ ಸಭೆಯ ಬಳಿಕ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೈಗಾರಿಕೆಗಳು ಕಟ್ಟಡ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳನ್ನು ಸ್ಥಾಪಿಸಬಹುದು. ಎಲ್‌ಒಸಿ, ಬಿಲ್ಡಿಂಗ್‌ ಪ್ಲಾನ್‌, ಮಾಲಿನ್ಯ ನಿಯಂತ್ರಣ ಮಂಡಳಿಗಳ ಅನುಮತಿಯನ್ನು ಮೂರು ವರ್ಷಗಳ ಒಳಗೆ ಅರ್ಜಿ ಸಲ್ಲಿಸಿ ಪಡೆಯಬಹುದು ಎಂದು ಅವರು ಹೇಳಿದರು.

ಸಚಿವ ಸಂಪುಟ ಸಭೆಯ ಇತರ ತೀರ್ಮಾನಗಳು

* ಪದ್ಮಶ್ರೀ ಪುರಸ್ಕಾರಕ್ಕೆ ಅರ್ಹ ವ್ಯಕ್ತಿಗಳ ಹೆಸರು ಶಿಫಾರಸು ಮಾಡಲು ರಾಜ್ಯ ಸರ್ಕಾರದ  ಸಂಪುಟ ಉಪಸಮಿತಿ ರಚಿಸಲಾಗಿದೆ.

*ಸಚಿವರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ವಿಧಾನಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ವಿಧಾನಪರಿಷತ್‌ ಸಭಾಪತಿ ಮತ್ತು ಉಪಸಭಾಪತಿಯವರ ವೇತನದಲ್ಲಿ ಶೇ 30 ಕಡಿತ ಮಾಡಲು ಮಸೂದೆ ರಚಿಸಿದ್ದು, ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು.

* ದುರ್ಬಲ ವರ್ಗದವರಿಗೆ ಮನೆಗಳನ್ನು ಕಟ್ಟಿಕೊಡುವ ಬಸವ, ಬಿ.ಆರ್‌.ಅಂಬೇಡ್ಕರ್‌, ವಾಜಪೇಯಿ ಮುಂತಾದ ಯೋಜನೆಗಳಡಿ 9.74 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ₹10,194 ಕೋಟಿ ಬಿಡುಗಡೆ ಮಾಡಲಾಗುವುದು. ಇವು ಪೂರ್ಣಗೊಳ್ಳುವವರೆಗೆ ಇತರ ಹೊಸ ವಸತಿ ಯೋಜನೆ ಕೈಗೆತ್ತಿಕೊಳ್ಳದಿರಲು ನಿರ್ಧರಿಸಲಾಗಿದೆ. 2012 ರಿಂದಲೂ ಈ ಮನೆಗಳು ಪೂರ್ಣಗೊಂಡಿಲ್ಲ.

* 120 ಆಂಬುಲೆನ್ಸ್‌ಗಳ ಖರೀದಿಗೆ ₹32.04 ಕೋಟಿ ನೀಡಲು ಒಪ್ಪಿಗೆ

*ಖಾಸಗಿ ಸಂಘ ಸಂಸ್ಥೆಗಳು ಸರ್ಕಾರಿ ಜಮೀನನ್ನು ಲೀಸ್‌ ಮೇಲೆ ಪಡೆದಿದ್ದರೆ, ಅವುಗಳನ್ನು ಕಾಯಂ ಆಗಿ ಮಂಜೂರು ಮಾಡಲು ತೀರ್ಮಾನ. ಇವರು ಪ್ರತಿ ವರ್ಷ ನವೀಕರಣಕ್ಕೆ ಅರ್ಜಿ ಸಲ್ಲಿಸುತ್ತಿರುತ್ತಾರೆ. ಸರ್ಕಾರ ಯಾವ ಉದ್ದೇಶಕ್ಕೆ ಭೂಮಿ ನೀಡಿದೆಯೋ ಅದೇ ಉದ್ದೇಶಕ್ಕೆ ಬಳಸುತ್ತಿದ್ದರೆ ಮಾತ್ರ ದರ ನಿಗದಿ ಮಾಡಿ ಮಂಜೂರು ಮಾಡಲಾಗುವುದು.

*ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ₹405 ಕೋಟಿಗೆ 40 ವರ್ಷಗಳ ಅವಧಿಯ ಗುತ್ತಿಗೆ ಆಧಾರದಲ್ಲಿ ನಿರಾಣಿ ಶುಗರ್ಸ್‌ಗೆ ಲೀಸ್ ಆಧಾರದಲ್ಲಿ ನೀಡಲು ತೀರ್ಮಾನ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು