ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಬೇಡ, ಶೆಟ್ಟರ್‌ ಮುಂದುವರಿಸಿ ಎಂದಿದ್ದೆ: ರಮೇಶ ಜಾರಕಿಹೊಳಿ

Last Updated 10 ಏಪ್ರಿಲ್ 2020, 9:35 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

‘ಉಸ್ತುವಾರಿ ಸಚಿವರ ನೇಮಕದ ವಿಷಯದಲ್ಲಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ನನಗೆ ಕೊಡುವುದು ಬೇಡ, ಸದ್ಯಕ್ಕೆ ಜಗದೀಶ ಶೆಟ್ಟರ್ ಅವರೇ ಮುಂದುವರಿಯಲಿ ಎಂದು ನಾನೇ ಮುಖ್ಯಮಂತ್ರಿ ಬಳಿ ವಿನಂತಿಸಿದ್ದೆ. ಹೀಗಾಗಿ ಅಸಮಾಧಾನದ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಿದ್ದಾರೆ.

‘ಜಿಲ್ಲೆಯ ಉಸ್ತುವಾರಿಯನ್ನು ನನಗೆ ಕೊಡಲು ಸ್ವತಃ ಮುಖ್ಯಮಂತ್ರಿ ಬಯಸಿದ್ದರು. ಆದರೆ ಬೆಳಗಾವಿ ದೊಡ್ಡ ಜಿಲ್ಲೆ ಆಗಿರುವುದರಿಂದ ಜವಾಬ್ದಾರಿಯೂ ದೊಡ್ಡದಿರುತ್ತದೆ, ದೊಡ್ಡದಾದ ಜಲಸಂಪನ್ಮೂಲ ಖಾತೆ ನಿಭಾಯಿಸುವ ಜೊತೆಗೆ ಜಿಲ್ಲಾ ಉಸ್ತುವಾರಿಯನ್ನೂ ನಿಭಾಯಿಸುವುದು ಸಾಧ್ಯವಿಲ್ಲ. ಹೀಗಾಗಿ, ಉಸ್ತುವಾರಿ ಬೇಡ ಎಂದು‌ ನಾನೇ ತಿಳಿಸಿದ್ದೇನೆ. ಶೆಟ್ಟರ್ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಬೇರೆ ಅಲ್ಲ, ನಾನು ಬೇರೆ ಅಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

‘ಜಿಲ್ಲೆಯ ಉಸ್ತುವಾರಿಯನ್ನು ಮೊದಲ ಬಾರಿಗೆ ಬೇರೆ ಜಿಲ್ಲೆಯ ಸಚಿವರೊಬ್ಬರಿಗೆ ಕೊಡಲು ಮುಖ್ಯಮಂತ್ರಿ ಮುಂದಾಗಿದ್ದರು. ಆದರೆ ಶೆಟ್ಟರ್ ಅವರಿಗೆ ಕೊಡುವಂತೆ ನಾನೇ ವಿನಂತಿಸಿದ್ದೆ. ನನ್ನ ಮನವಿಯಂತೆ ಶೆಟ್ಟರ್‌ಗೆ ನೀಡಲಾಗಿದೆ. ಅವರೇ ಮುಂದುವರಿಯಲಿ ಎಂದೂ ಹೇಳಿದ್ದೆ. ಹಾಗಾಗಿ ಈಗಲೂ ಬದಲಾಯಿಸಲಿಲ್ಲ. ಅವರಾದರೆ ನಾನೇ ಆದಂತೆ’ ಎಂದಿದ್ದಾರೆ.

‘ಸದ್ಯಕ್ಕೆ ನನಗೆ ಜಿಲ್ಲಾ ಉಸ್ತುವಾರಿ ಬೇಡ. ಜಿಲ್ಲೆ ಬಹಳ ದೊಡ್ಡದಿದೆ. ಜಿಲ್ಲೆಯನ್ನೆಲ್ಲ ಸುತ್ತುವುದೂ ಕಷ್ಟ. ಜಲಸಂಪನ್ಮೂಲ ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ. ಚುನಾವಣೆಗೆ ಒಂದು ವರ್ಷ ಇರುವಾಗ ನಾನು ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಈಗ ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಚುನಾವಣೆಯ ವರ್ಷ ನಾನೇ ಉಸ್ತುವಾರಿಯ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಈ‌ ವಿಷಯದಲ್ಲಿ ದಯವಿಟ್ಟು ಯಾರೂ ಗೊಂದಲಕ್ಕೆ ಒಳಗಾಗಬಾರದು’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT