ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರ ತಂಡ ಸೇರಿದ ನಾಗರಾಜ್

ಬಿಜೆಪಿ ಶಾಸಕ ಆರ್‌. ಅಶೋಕ ಜತೆಗೂಡಿ ಮುಂಬೈಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಎಂಟಿಬಿ
Last Updated 14 ಜುಲೈ 2019, 19:42 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೈತ್ರಿ ನಾಯಕರು ರಾಜೀನಾಮೆ ವಾಪಸ್ ಪಡೆಯುವಂತೆ ಶಾಸಕ ಎಂ.ಟಿ.ಬಿ.ನಾಗರಾಜ್ ಅವರನ್ನು ಶನಿವಾರ ಮನವೊಲಿಸುವ ಪ್ರಯತ್ನ ನಡೆಸಿದ್ದರೂ, ಭಾನುವಾರ ಕೈಕೊಟ್ಟು ಮುಂಬೈಗೆ ಹಾರಿದ್ದಾರೆ.

ಎಂ.ಟಿ.ಬಿ.ನಾಗರಾಜ್ ಮೂಲಕ ಮತ್ತೊಬ್ಬ ಅತೃಪ್ತ ಶಾಸಕ ಕೆ.ಸುಧಾಕರ್ ಅವರನ್ನು ವಾಪಸ್ ಕರೆತರುವ ಕಸರತ್ತು ಈಗ ವ್ಯರ್ಥವಾಗಿದೆ. ಸುಧಾಕರ್ ಮನವೊಲಿಸುವುದಾಗಿ ಹೇಳಿದ್ದ ನಾಗರಾಜ್, ಈಗ ಅವರೇ ಅತೃಪ್ತರ ತಂಡ ಸೇರಿಕೊಂಡಿದ್ದಾರೆ.

ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮುಂಬೈಗೆ ತೆರಳಿದ್ದು, ಬಿ.ಎಸ್.ಯಡಿಯೂರಪ್ಪ ಆಪ್ತಕಾರ್ಯ
ದರ್ಶಿ ಸಂತೋಷ್ ವಿಮಾನದ ವ್ಯವಸ್ಥೆ ಮಾಡಿದ್ದರು. ನಾಗರಾಜ್ ಜತೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಆರ್.ಅಶೋಕ ತೆರಳಿದ್ದು, ಅವರೂ ಕಾಂಗ್ರೆಸ್ ಅತೃಪ್ತ ಶಾಸಕರೊಂದಿಗೆ ಮಾತುಕತೆ ನಡೆಸಿ, ಒಗ್ಗಟ್ಟು ಕಾಪಾಡುವಂತೆ ಮನವಿ ಮಾಡಿದರು ಎನ್ನಲಾಗಿದೆ.

ಕಾಂಗ್ರೆಸ್ ನಾಯಕರು ಮನವೊಲಿಸಿದ ಸಮಯದಲ್ಲಿ ಸುಧಾಕರ್ ಜತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅವರನ್ನೂ ಕರೆತರಲಾಗುವುದು ಎಂಬ ಭರವಸೆಯನ್ನು ಕೈ ನಾಯಕರಿಗೆ ನೀಡಿದ್ದರು. ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ
ಹೊರಟವರು ಅತೃಪ್ತರ ಪಡೆ ಸೇರ್ಪಡೆಯಾಗಿರುವುದು ಕಾಂಗ್ರೆಸ್ ಮುಖಂಡರನ್ನು ಕಂಗಾಲು ಮಾಡಿದೆ.

ಶನಿವಾರದ ರಾಜಕೀಯ ಬೆಳವಣಿಗೆಯಿಂದ ಅತೃಪ್ತರು ಗೊಂದಲಕ್ಕೆ ಒಳಗಾಗಿದ್ದರು. ಒಬ್ಬೊಬ್ಬರು ಒಂದೊಂದು ರೀತಿ ನಡೆದುಕೊಂಡರೆ ಮುಂದೆ ಏನು ಮಾಡುವುದು ಎಂಬ ಚಿಂತೆ ಆವರಿಸಿತ್ತು.

ಆದರೆ ನಾಗರಾಜ್ ಬೆಂಗಳೂರಿನಿಂದ ಬಂದು ಸೇರಿಕೊಂಡಿದ್ದು, ಜತೆಯಲ್ಲಿ ಆರ್.ಅಶೋಕ ಬಂದಿರುವುದು ಅವರಲ್ಲಿ ಮನೆಮಾಡಿದ್ದ ಆತಂಕವನ್ನು ದೂರಮಾಡಿದೆ. ಮುಂದಿನ ರಾಜಕೀಯ ಬೆಳವಣಿಗೆ, ವಿಧಾನ ಸಭಾಧ್ಯಕ್ಷರ ನಿರ್ಧಾರ, ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದಾರೆ.ಎಂತಹುದೇ ಸಮಯ, ಸನ್ನಿವೇಶ ಎದುರಾದರೂ ಒಟ್ಟಾಗಿ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಏನಾದರೂ ಆಗಲಿ, ರಾಜೀನಾಮೆ ವಾಪಸ್ ಪಡೆಯುವುದಿಲ್ಲ. ಸರ್ಕಾರ ಬೀಳಿಸುವುದೇ ನಮ್ಮ ಗುರಿ, ನೀವು ಯಾವ ಕ್ರಮವನ್ನಾದರೂ ತೆಗೆದುಕೊಳ್ಳಿ’ ಎಂದು ಅತೃಪ್ತರು ಕೈ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.

‘ಪಕ್ಷ ದ್ರೋಹಿಗಳು’

‘ಪಕ್ಷಕ್ಕೆ ದ್ರೋಹ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

‘ಪ್ರತಿ ಶಾಸಕರಿಗೆ ₹50ರಿಂದ 100 ಕೋಟಿ ವರೆಗೆ ಹಣ ಕೊಟ್ಟು ಬಿಜೆಪಿಯವರು ಖರೀದಿ ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ದಿನದ ರಾಜಕೀಯ ಬೆಳವಣಿಗೆ

* ಎಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ಮುಂಬೈಗೆ ತೆರಳಿದ ಎಂ.ಟಿ.ಬಿ.ನಾಗರಾಜ್

* ಮುಂಬೈ ಅತೃಪ್ತರ ಜತೆ ಬಿಜೆಪಿ ಶಾಸಕ ಆರ್.ಅಶೋಕ ಚರ್ಚೆ

* ಎಚ್.ಡಿ.ದೇವೇಗೌಡ ಜತೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಚರ್ಚೆ

* ರಾಮಲಿಂಗಾರೆಡ್ಡಿ ಮನವೊಲಿಸಿದ ಈಶ್ವರ ಖಂಡ್ರೆ, ಎಚ್.ಕೆ.ಪಾಟೀಲ

* ಗೌಡರನ್ನು ಭೇಟಿಮಾಡಿ 3 ಗಂಟೆ ಚರ್ಚಿಸಿದ ಎಚ್.ಡಿ.ಕುಮಾರಸ್ವಾಮಿ

* ಹೋಟೆಲ್‌ನಲ್ಲಿ ಶಾಸಕರ ಜತೆ ಸಿದ್ದರಾಮಯ್ಯ ಸಭೆ

* ಶಾಸಕ ನಾಗೇಂದ್ರ ಆರೋಗ್ಯ ವಿಚಾರಿಸಿದ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಕುಮಾರಸ್ವಾಮಿ ಇತರ ನಾಯಕರ ಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT