ಗುರುವಾರ , ನವೆಂಬರ್ 14, 2019
19 °C
ಹೈಕೋರ್ಟ್‌ ತೀರ್ಪಿನ ವಿರುದ್ಧ ಸರ್ಕಾರದ ನಡೆ

ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ ವಿವಾದ: 102 ಅಧಿಕಾರಿಗಳಿಂದ ‘ಇಚ್ಛಾ ಪತ್ರ’

Published:
Updated:

ಬೆಂಗಳೂರು: ಹೈಕೋರ್ಟ್‌ ತೀರ್ಪಿನಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರಿಷ್ಕರಿಸಿರುವ 1998ನೇ ಸಾಲಿನ 383 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪಟ್ಟಿಯನ್ನು ಯಥಾವತ್‌ ಜಾರಿಗೊಳಿಸುವ ಬದಲು, ಸ್ಥಾನಪಲ್ಲಟಗೊಳ್ಳುವ 102 ಅಧಿಕಾರಿಗಳಿಂದ ‘ಇಚ್ಛಾ ಪತ್ರ’ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯಲ್ಲೇ ಮುಂದುವರಿಯಲು ಬಯಸುತ್ತೀರಾ ಅಥವಾ ಪರಿಷ್ಕೃತ ಆಯ್ಕೆ ಪಟ್ಟಿಯ ಅನುಸಾರ ಹುದ್ದೆ ಬದಲಾವಣೆ ಮಾಡುತ್ತೀರಾ’ ಎಂಬ ಬಗ್ಗೆ ಲಿಖಿತ ಇಚ್ಛಾ ಪತ್ರವನ್ನು ಪಡೆಯುವ ಸಂಬಂಧ ಅನುಮೋದನೆಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಅರ್‌) ಮಂಡಿಸಿದ ಕಡತಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ.

ಕೋರ್ಟ್‌ ತೀರ್ಪು ಅನುಷ್ಠಾನಗೊಳಿಸುವ ಬದಲು ಹುದ್ದೆ ಬದಲಾಗುವ ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ತೀರ್ಪು ಯಥಾವತ್‌ ಪಾಲನೆ ಆಗಿಲ್ಲವೆಂದು ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣಾ ಹಂತದಲ್ಲಿರುವಾಗ,
ಸ್ಥಾನಪಲ್ಲಟಗೊಂಡ ಅಧಿಕಾರಿಗಳ ಹುದ್ದೆ ನಮೂದಿಸಿ ಹೈಕೋರ್ಟ್‌ಗೆ ಸರ್ಕಾರ ಈ ಹಿಂದೆ ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ, ಈಗ ನಿಲುವು ಬದಲಿಸಿ, ತೆಗೆದುಕೊಂಡಿರುವ ತೀರ್ಮಾನ ಮತ್ತೊಮ್ಮೆ ಕಾನೂನು ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ.

ಪರಿಷ್ಕೃತ ಪಟ್ಟಿ ಪ್ರಕಾರ 36 ಅಧಿಕಾರಿಗಳು ಹುದ್ದೆ ಕಳೆದುಕೊಳ್ಳುತ್ತಾರೆ. ಅಲ್ಲದೆ, ಈ ಸಾಲಿನಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ 11 ಅಧಿಕಾರಿಗಳ (ಐಎಎಸ್‌ಗೆ ಬಡ್ತಿ ಪಡೆದವರು) ಹುದ್ದೆ ಕೂಡಾ ಬದಲಾಗುತ್ತದೆ. ಆದರೆ, ಈ 11 ಅಧಿಕಾರಿಗಳು ಸಿಎಟಿಯಿಂದ ತಡೆಯಾಜ್ಞೆ ತಂದು ಐಎಎಸ್‌ ಹುದ್ದೆಯಲ್ಲೇ ಮುಂದುವರಿದಿದ್ದಾರೆ. ಹುದ್ದೆ ಕಳೆದುಕೊಳ್ಳುವ ಅಧಿಕಾರಿಗಳ ಮತ್ತು ಹುದ್ದೆ ಬದಲಾಗಿ ಐಎಎಸ್‌ಗೆ ಬಡ್ತಿ ಪಡೆದವರ ಬೆನ್ನಿಗೆ ನಿಂತಿರುವ ರಾಜ್ಯ ಸರ್ಕಾರ, ದಶಕಗಳ ಕಾನೂನು ಹೋರಾಟದಲ್ಲಿ ಗೆದ್ದು ನ್ಯಾಯಯುತವಾಗಿ ಅರ್ಹ ಹುದ್ದೆ ಪಡೆಯಬೇಕಾದ ಅಭ್ಯರ್ಥಿಗಳನ್ನು ನಿರ್ಲಕ್ಷಿಸುತ್ತಿದೆ ಎಂಬ
ಆಕ್ಷೇಪ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗಿದೆ.

2019ರ ಫೆ. 25ರಂದು ಕೆಪಿಎಸ್‌ಸಿ ಪರಿಷ್ಕರಿಸಿದ ನೇಮಕಾತಿ ಪಟ್ಟಿ ಪ್ರಕಾರ 28 ಅಭ್ಯರ್ಥಿಗಳು ಹುದ್ದೆ ಕಳೆದುಕೊಂಡು, ಅಷ್ಟೇ ಸಂಖ್ಯೆಯ ಅಭ್ಯರ್ಥಿಗಳು ಹೊಸತಾಗಿ ಅರ್ಹತೆ ಪಡೆದಿದ್ದರು. ಆದರೆ, ಹೈಕೋರ್ಟ್‌ ತೀರ್ಪಿನ 3ನೇ ನಿರ್ದೇಶನದಂತೆ ಆಗಸ್ಟ್‌ 22ರಂದು ಮತ್ತೊಮ್ಮೆ ಪರಿಷ್ಕರಿಸಿದ ಪಟ್ಟಿ ಪ್ರಕಾರ ಹೊಸದಾಗಿ ಆಯ್ಕೆಯಾದ 28 ಅಭ್ಯರ್ಥಿಗಳಲ್ಲಿ ಇಬ್ಬರು ಹುದ್ದೆ ಕಳೆದುಕೊಂಡು 14 ಅಭ್ಯರ್ಥಿಗಳು ಹೊಸತಾಗಿ ಅರ್ಹತೆ ಪಡೆದಿದ್ದಾರೆ. ಆದರೆ, ಹೊಸದಾಗಿ ಆಯ್ಕೆಯಾದ 14 ಅಭ್ಯರ್ಥಿಗಳಲ್ಲಿ ನಾಲ್ವರು 2006ನೇ ಸಾಲಿನಲ್ಲಿ ನಡೆದ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.

ಪರಿಷ್ಕೃತ ಪಟ್ಟಿಯಲ್ಲಿ ನತದೃಷ್ಟರು!

ಹೈಕೋರ್ಟ್‌ ತೀರ್ಪಿನಂತೆ ಕೆಪಿಎಸ್‌ಸಿ ಪರಿಷ್ಕರಿಸಿರುವ ಪಟ್ಟಿಯ ಪ್ರಕಾರ 36 ಅಭ್ಯರ್ಥಿಗಳು ಹೊಸದಾಗಿ ಹುದ್ದೆ ಪಡೆಯಲು ಆಯ್ಕೆಯಾಗಿದ್ದಾರೆ. ಆದರೆ, ಈ ಪೈಕಿ ಒಬ್ಬ ಈಗಾಗಲೇ ಮೃತಪಟ್ಟಿದ್ದು, ಇನ್ನಿಬ್ಬರು ನಿವೃತ್ತಿ ವಯಸ್ಸು ದಾಟಿದ್ದರಿಂದ ಹುದ್ದೆಗೇರುವ ಅವಕಾಶ ಕಳೆದುಕೊಂಡಿದ್ದಾರೆ.

ಉದ್ಯೋಗ ಸಿಕ್ಕಿಲ್ಲ ಎಂಬ ಕೊರಗಿನಲ್ಲಿ ಮೃತಪಟ್ಟ ಪಾಟೀಲ ಶಿವನಗೌಡ ಎಂಬ ಅಭ್ಯರ್ಥಿಯ ಹೆಸರು ಸಹಾಯಕ ನಿರ್ದೇಶಕ (ಭೂದಾಖಲೆ) ಹುದ್ದೆಗೆ ಆಯ್ಕೆಯಾಗಿರುವವರ ಪಟ್ಟಿಯಲ್ಲಿದೆ. ಜಿಲ್ಲಾ ಮಾರುಕಟ್ಟೆ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ ರಾಜಾರಾಮ ರಾವ್‌ ಮತ್ತು ಸಹಾಯಕ ಖಜಾನಾಧಿಕಾರಿ ಹುದ್ದೆಗೆ ಆಯ್ಕೆಯಾದ ಚನ್ನವೀರಯ್ಯ ಎಂಬುವವರ ವಯಸ್ಸು ಈಗಾಗಲೇ 60 ದಾಟಿದೆ ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)