ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಲೀಗಿಗಳ ಕುರಿತು ಟ್ವೀಟ್‌ ಮಾಡಿದ್ದ ಐಎಎಸ್‌ ಅಧಿಕಾರಿಗೆ ನೋಟಿಸ್‌ 

Last Updated 2 ಮೇ 2020, 15:07 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ನಿಂದ ಗುಣಮುಖರಾದ ತಬ್ಲೀಗಿ ಜಮಾತ್ ಸದಸ್ಯರು ಇತರ ರೋಗಿಗಳ ಚಿಕಿತ್ಸೆಗೆ ಪ್ಲಾಸ್ಮಾವನ್ನು ದಾನ ಮಾಡುತ್ತಿರುವ ಬಗ್ಗೆ ಟ್ವೀಟ್‌ ಮಾಡಿದ್ದ ಐಎಎಸ್‌ ಅಧಿಕಾರಿ ಮೊಹಮದ್‌ ಮೊಹಿಸಿನ್‌ ಅವರಿಗೆ ಕರ್ನಾಟಕ ಸರ್ಕಾರ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ.

ಕಳೆದ ತಿಂಗಳು 27ರಂದು ಟ್ವೀಟ್‌ ಮಾಡಿದ್ದ ಮೊಹಮದ್‌ ಮೊಹಿಸಿನ್‌ ಅವರು, ‘ದೆಹಲಿಯೊಂದರಲ್ಲೇ 300 ಕ್ಕೂ ಹೆಚ್ಚು ತಬ್ಲೀಗಿ ವೀರರು ತಮ್ಮ ಪ್ಲಾಸ್ಮಾವನ್ನು ಇತರರ ಚಿಕಿತ್ಸೆಗೆ ದಾನ ಮಾಡಿ ದೇಶಕ್ಕೆ ಸೇವೆ ಮಾಡಿದ್ದಾರೆ. #Godi ಮೀಡಿಯಾಗಳು ಏನು ಮಾಡಿವೆ? ಈ ವೀರರು ಮಾಡಿದ ಮಾನವೀಯ ಕಾರ್ಯಗಳನ್ನು ಅವರು ತೋರಿಸುವುದಿಲ್ಲ’ಎಂದು ಬರೆದುಕೊಂಡಿದ್ದರು.

1996ರ ಕರ್ನಾಟಕ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಬಿಹಾರ ಮೂಲದ ಮೊಹಿಸಿನ್‌ ಅವರು ಸದ್ಯ ರಾಜ್ಯದ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

1968 ರ ಅಖಿಲ ಭಾರತ ಸೇವೆಗಳ (ನಡವಳಿಕೆ) ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸರ್ಕಾರವು ಐದು ದಿನಗಳಲ್ಲಿ ಅಧಿಕಾರಿಯಿಂದ ಲಿಖಿತ ವಿವರಣೆಯನ್ನು ಕೋರಿದೆ. ಉತ್ತರ ನೀಡದೇ ಹೋದರೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ‌

ಕಾನೂನಿನ ಪ್ರಕಾರ ಉತ್ತರ ನೀಡುತ್ತೇನೆ

ನೋಟಿಸ್‌ ಕುರಿತು ಪ್ರತಿಕ್ರಿಯಿಸಿರುವ ಐಎಎಸ್‌ ಅಧಿಕಾರಿ ಮೊಹಿಸಿನ್‌, ‘ ಹೌದು ಸರ್ಕಾರದ ನೋಟಿಸ್‌ ಸಿಕ್ಕಿದೆ. ಶೀಘ್ರವೇ ಕಾನೂನಿನ ಪ್ರಕಾರ ನಾನು ಉತ್ತರ ನೀಡಲಿದ್ದೇನೆ. ನಾನು ಸುದ್ದಿ ಮಾಧ್ಯಮವೊಂದರ ಸುದ್ದಿಯನ್ನಷ್ಟೇ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದೆ. ಆದರೆ, ನನ್ನ ಟ್ವೀಟ್‌ನ ಬಗ್ಗೆ ಯಾಕಿಷ್ಟು ಆಕ್ರೋಶ ಎಂದು ತಿಳಿಯುತ್ತಿಲ್ಲ,’ ಎಂದು ಅವರು ಅವರು ತಿಳಿಸಿದ್ದಾರೆ.

ಮೋದಿ ಹೆಲಿಕಾಪ್ಟರ್‌ ಪರಿಶೀಲನೆಗೆ ಮುಂದಾಗಿ ಸುದ್ದಿಯಾಗಿದ್ದ ಅಧಿಕಾರಿ

ಕಳೆದ ವರ್ಷ ಲೋಕಸಭೆ ಚುನಾವಣೆಯ ವೇಳೆ ಐಎಎಸ್‌ ಅಧಿಕಾರಿ ಮೊಹಮದ್‌ ಮೊಹಿಸಿನ್‌ ಅವರು ಸುದ್ದಿಯಲ್ಲಿದ್ದರು. ಒಡಿಶಾದಲ್ಲಿ ಚುನಾವಣಾ ವೀಕ್ಷಕರಾಗಿ ನಿಯೋಜನೆಗೊಂಡಿದ್ದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ ಪರಿಶೀಲಿಸಲು ಮುಂದಾಗಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು. ಅಲ್ಲದೆ, ಕರ್ನಾಟಕ ಸೇವೆಗೆ ಮರಳಿ ಕಳುಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT