ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರವೇ ಸಂಪುಟ ಪುನರ್ರಚನೆ

ಸೋಲಿಗೆ ಕಾರಣ ಪರಾಮರ್ಶೆ: ಸಿದ್ದರಾಮಯ್ಯ
Last Updated 25 ಮೇ 2019, 18:45 IST
ಅಕ್ಷರ ಗಾತ್ರ

ನವದೆಹಲಿ: ‘ಚುನಾವಣೆಯಲ್ಲಿ ಮಿತ್ರ ಪಕ್ಷಗಳ ಅಭ್ಯರ್ಥಿಗಳು ಸೋತಿರುವುದಕ್ಕೆ ಕಾರಣಗಳೇನು ಎಂಬುದರ ಪರಾಮರ್ಶೆ ಇನ್ನಷ್ಟೇ ನಡೆಸಬೇಕಾಗಿದೆ. ಉಭಯ ಪಕ್ಷಗಳ ಮುಖಂಡರ ಪರಸ್ಪರ ಅಸಹಕಾರವೇ ಸೋಲಿಗೆ ಕಾರಣ ಎಂಬುದು ಕಪೋಲಕಲ್ಪಿತ’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಅಭಿಪ್ರಾಯಪಟ್ಟರು.

ಶನಿವಾರ ನಡೆದ ಎಐಸಿಸಿ ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮುಖವಾಗಿ ಮೈಸೂರು, ತುಮಕೂರು ಮತ್ತು ಮಂಡ್ಯಗಳಲ್ಲಿ ಎದುರಾದ ಸೋಲಿಗೆ ದೂಷಣೆ ಸರಿಯಲ್ಲ ಎಂದು ಹೇಳಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಸಹಜ. ಅದಕ್ಕೆ ಪ್ರತಿಯೊಬ್ಬರೂ ತಲೆಬಾಗಬೇಕು. ನಮ್ಮ ಸೋಲಿಗೆ ಕಾರಣಗಳೇನು ಎಂಬ ಬಗ್ಗೆ ಮುಂದಿನ ವಾರ ಆತ್ಮಾವಲೋಕನ ಸಭೆ ನಡೆಸಿ ಚರ್ಚಿಸಲಾಗುವುದು’ ಎಂದು ಅವರು ವಿವರಿಸಿದರು.

ಸರ್ಕಾರ ಸುಭದ್ರ: ಈಗ ಹೊರಬಿದ್ದಿರುವ ಜನಾದೇಶ ಕೇಂದ್ರ ಸರ್ಕಾರ ರಚಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ರಾಜ್ಯದ ಆಡಳಿತ ಚುಕ್ಕಾಣಿಯನ್ನು ಯಾರು ಹಿಡಿಯಬೇಕು ಎಂಬುದನ್ನು ಜನತೆ ಕಳೆದ ವರ್ಷವೇ ತೀರ್ಮಾನಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ ಎಂದು ಅವರು ಪುನರುಚ್ಚರಿಸಿದರು.

ಶೀಘ್ರವೇ ವರಿಷ್ಠರೊಂದಿಗೆ ಚರ್ಚಿಸಿ, ಸಂಪುಟ ಪುನರ್‍ರಚನೆ ಹಾಗೂ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಪಕ್ಷದ ಶಾಸಕರಲ್ಲೂ ಭಿನ್ನಾಭಿಪ್ರಾಯ ಇಲ್ಲ. ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ರಾಜೀನಾಮೆ– ಸ್ಪಷ್ಟನೆ: ಎಐಸಿಸಿ ಕಾರ್ಯಕಾರಿಣಿಯಲ್ಲಿ ಲೋಕಸಭೆ ಫಲಿತಾಂಶ ಮತ್ತು ಸೋಲಿನ ಕುರಿತು ಚರ್ಚಿಸಿ, ಜನರ ತೀರ್ಪಿಗೆ ತಲೆಬಾಗುವ ನಿರ್ಧಾರ ಕೈಗೊಳ್ಳಲಾಯಿತು. ರಾಜೀನಾಮೆ ನೀಡುವುದಾಗಿ ರಾಹುಲ್‌ ಗಾಂಧಿ ಪ್ರಸ್ತಾಪಿಸಿಲ್ಲ. ಮಾಧ್ಯಮಗಳಲ್ಲಿ ಈ ಕುರಿತು ವರದಿಯಾಗಿದ್ದರಿಂದ ಎಲ್ಲ ಸದಸ್ಯರು ರಾಜೀನಾಮೆ ನೀಡದಂತೆ ಒತ್ತಾಯಿಸಿದರು ಎಂದು ಅವರು ಸ್ಪಷ್ಟಪಡಿಸಿದರು.

ರಾಹುಲ್‌ಗೆ ಅಭಿನಂದನೆ: ‘ಸಭೆಯಲ್ಲಿ ಎಲ್ಲರೂ ರಾಹುಲ್‌ ಗಾಂಧಿ ಅವರನ್ನು ಅಭಿನಂದಿಸಿದೆವು’ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು. ‘ಅಭಿನಂದಿಸಿದ್ದು ಯಾಕೆ’ ಎಂಬ ಪ್ರಶ್ನೆ ತೂರಿ ಬಂದಿದ್ದರಿಂದ ತಬ್ಬಿಬ್ಬಾಗಿ ಸಿಟ್ಟಿಗೆದ್ದ ಅವರು, ‘ಯಾಕೆ ಅಂತ ಕೇಳ್ತೀರಲ್ಲ, ರಾಹುಲ್‌ ಚುನಾವಣೆ ವೇಳೆ ಸತತ ಮೂರು ತಿಂಗಳು ದೇಶದಾದ್ಯಂತ ಸಂಚರಿಸಿ ಪ್ರಚಾರದಲ್ಲಿ ಭಾಗವಹಿಸಿದ್ದಕ್ಕೆ ಅಭಿನಂದನೆ ಸಲ್ಲಿಸಲಾಯಿತು’ ಎಂದರು.

ಸಿದ್ದರಾಮಯ್ಯ– ಶಂಕರ್‌ ಮಾತುಕತೆ

ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್‌.ಶಂಕರ್‌ ಅವರು ಇಲ್ಲಿನ ಕರ್ನಾಟಕ ಭವನದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕಾಣಿಸಿಕೊಂಡರು.

ಕೆಲಹೊತ್ತು ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಂಕರ್‌, ನಂತರ ಅವರೊಂದಿಗೇ ವಿಮಾನ ನಿಲ್ದಾಣಕ್ಕೂ ತೆರಳಿದರು. ಶಾಸಕ ಭೈರತಿ ಬಸವರಾಜ್‌ ಹಾಗೂ ಸಲೀಮ್‌ ಅಹಮದ್‌ ಈ ಸಂದರ್ಭ ಇದ್ದರು.

ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಬಂದಿರುವ ಶಂಕರ್‌ ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ. ಈ ಭೇಟಿಯ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT