ಬುಧವಾರ, ಜನವರಿ 29, 2020
27 °C
ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪ ಎದುರಿಸುತ್ತಿರುವ ಹರೀಶ್ ಬಂಗೇರ

ಸೌದಿ ಅರೇಬಿಯಾದಲ್ಲಿ ಕುಂದಾಪುರ ವ್ಯಕ್ತಿ ಬಂಧನ: ವಿವರಣೆ ಕೇಳಿದ ವಿದೇಶಾಂಗ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ/ರಿಯಾಧ್: ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿ ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ಬೀಜಾಡಿಯ ಹರಿಶ್ ಬಂಗೇರ ಎಂಬುವವರು ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಈ ಕುರಿತು ಭಾರತೀಯ ರಾಯಭಾರ ಕಚೇರಿ ವಿವರಣೆ ಕೇಳಿದ್ದು, ಹರೀಶ್ ನೆರವಿಗೆ ಧಾವಿಸಿದೆ ಎಂದು ಮೂಲಗಳು ತಿಳಿಸಿವೆ.

ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾ ಮತ್ತು ಸೌದಿ ರಾಜಮನೆತನದ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳು ಹರೀಶ್ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟವಾಗಿತ್ತು. ಆದರೆ ಈ ಆರೋಪವನ್ನು ಹರೀಶ್ ಕುಟುಂಬದವರು ನಿರಾಕರಿಸಿದ್ದು, ಕಿಡಿಗೇಡಿಗಳು ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಸಮಸ್ಯೆಯಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.

‘ಹರೀಶ್ ಬಂಗೇರ ಬಂಧನವಾಗಿದೆಯೇ ಎಂಬುದನ್ನು ಖಚಿತಪಡಿಸುವಂತೆ ರಿಯಾಧ್‌ನಲ್ಲಿರುವ ಕಚೇರಿಗೆ ಸೂಚಿಸಿದ್ದೇವೆ. ಈವರೆಗೂ ಅಲ್ಲಿಂದ ಯಾವುದೇ ಸಂದೇಶ ಬಂದಿಲ್ಲ. ಹರೀಶ್ ಅವರ ಕುಟುಂಬದವರ ಜತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದೇವೆ. ಹೆಚ್ಚು ಮಾಹಿತಿ ತಿಳಿದ ಕೂಡಲೇ ಕುಟುಂಬದವರಿಗೆ ಮಾಹಿತಿ ನೀಡಲಿದ್ದೇವೆ’ ಎಂದು ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಬಿಡುಗಡೆಗೆ ನೆರವು ಕೋರಿ ಪತ್ನಿ ಮನವಿ: ಹರೀಶ್‌ ಬಂಗೇರ ಬಿಡುಗಡೆಗೆ ನೆರವು ಕೋರಿ ಕುಟುಂಬಸ್ಥರು ಸೋಮವಾರ ಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.

‘ಪತಿ ತಪ್ಪು ಮಾಡಿಲ್ಲ. ಕಿಡಿಗೇಡಿಗಳು ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಸಮಸ್ಯೆಯಲ್ಲಿ ಸಿಲುಕಿಸಿದ್ದಾರೆ. ಕಾಸರಗೋಡಿನಲ್ಲಿ ನಕಲಿ ಖಾತೆ ಸಕ್ರಿಯವಾಗಿರುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಕುಟುಂಬಕ್ಕೆ ಸರ್ಕಾರದ ತುರ್ತು ನೆರವಿನ ಅಗತ್ಯವಿದೆ’ ಎಂದು ಪತ್ನಿ ಸುಮನಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆಕ್ಷೇಪಾರ್ಹ ಸಂದೇಶ ಸೌದಿ ಪೊಲೀಸರ ವಶದಲ್ಲಿ ಹರೀಶ್‌

‘ಡಿ.19ರಂದು ಹರೀಶ್‌ ಪೌರತ್ವ ಕಾಯ್ದೆಗೆ ಸಂಬಂಧಿಸಿದ ವಿಡಿಯೊವೊಂದನ್ನು ಫೇಸ್‌ಬುಕ್‌ ಖಾತೆಯಿಂದ ಶೇರ್‌ ಮಾಡಿದ್ದರು. ಕೆಲವರು ವಿಡಿಯೋ ಸ್ಕ್ರೀನ್‌ಶಾಟ್‌ ತೆಗೆದು ಮಂಗಳೂರಿನ ಇತರ ಗ್ರೂಪ್‌ಗಳಿಗೆ ಕಳುಹಿಸಿದ್ದರು. ಬಳಿಕ ಪತಿಗೆ ನಿರಂತರ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಖಾತೆಯನ್ನು ರದ್ದುಗೊಳಿಸಿದ್ದರು’ ಎಂದು ಸುಮನಾ ಮಾಹಿತಿ ನೀಡಿದ್ದಾರೆ.

‘ಡಿ.20ರಂದು ಹರೀಶ್‌ ಬಂಗೇರ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆಯಲಾಗಿದ್ದು, ಸೌದಿ ಅರೇಬಿಯಾ ದೊರೆಯ ವಿರುದ್ಧ ಅವಹೇಳನಕಾರಿ ಬರಹ ಹಾಗೂ ಮೆಕ್ಕಾ ಮಸೀದಿ ಬಗ್ಗೆ ಆಕ್ಷೇಪಾರ್ಹ ಬರಹ ಪ್ರಕಟಿಸಲಾಗಿತ್ತು. ಈ ಪೋಸ್ಟ್‌ ಎಲ್ಲೆಡೆ ವೈರಲ್‌ ಆಗಿದ್ದು, ಪತಿಯನ್ನು ಬಂಧಿಸಿರುವ ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದೆ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

‘ಡಿ.21ರಂದು ಉಡುಪಿಯ ಠಾಣೆಗೆ ಪತಿಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿರುವ ಬಗ್ಗೆ ದೂರು ನೀಡಲಾಗಿದೆ. ಇದುವರೆಗೂ ಪತಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಫೇಸ್‌ಬುಕ್‌ನಲ್ಲಿ ಬಂಧನವಾಗಿರುವ ಸುದ್ದಿ ಹರಿದಾಡುತ್ತಿದೆ’ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಆಕ್ಷೇಪಾರ್ಹ ಪೋಸ್ಟ್‌ಗೆ ಸಂಬಂಧಿಸಿ ಕ್ಷಮೆಯಾಚಿಸಿ ಹರೀಶ್ ಬಿಡುಗಡೆ ಮಾಡಿರುವ ವಿಡಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು