ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ಅಕಾಡೆಮಿ ಪ್ರಶಸ್ತಿ ರದ್ದು

ಆಯ್ಕೆಪಟ್ಟಿ ಅಸಿಂಧುಗೊಳಿಸಲು ಹೊಸ ಸಮಿತಿ ನಿರ್ಧಾರ‌
Last Updated 28 ಡಿಸೆಂಬರ್ 2019, 20:45 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ನಿರ್ಗಮಿತ ಕಾರ್ಯಕಾರಿ ಸಮಿತಿ ಘೋಷಣೆ ಮಾಡಿದ್ದ ಪ್ರಶಸ್ತಿ ಪಟ್ಟಿಯನ್ನು ಅಸಿಂಧುಗೊಳಿಸಲು ಅಕಾಡೆಮಿಯ ಈಗಿನ ಕಾರ್ಯಕಾರಿ ಸಮಿತಿ ಮುಂದಾಗಿದೆ.

ನಾಟಕ ಅಕಾಡೆಮಿ ಅಂದಿನ ಅಧ್ಯಕ್ಷ ಜೆ.ಲೋಕೇಶ್ ಜುಲೈ 29ರಂದು ಸರ್ವಸದಸ್ಯರ ಸಭೆ ನಡೆಸಿ, 2019–20ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ರಂಗಭೂಮಿ ಸಾಧಕರ ಪಟ್ಟಿ ‌ಅಂತಿಮಗೊಳಿಸಿದ್ದರು. ಜು.30ರಂದು ಪಟ್ಟಿ ಬಿಡುಗಡೆ ಮಾಡಿದ್ದರು. ಹಿರಿಯ ರಂಗಕರ್ಮಿ ಉಮಾಶ್ರೀ ಅವರು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಕಲಾವಿದ ಅರುಣ್ ಸಾಗರ್, ಸಾಹಿತಿ ಲಕ್ಷ್ಮೀಪತಿ ಕೋಲಾರ ಸೇರಿದಂತೆ 25 ಮಂದಿ ವಾರ್ಷಿಕ ರಂಗ ಪ್ರಶಸ್ತಿಗೆ ಹಾಗೂ ಲಿಂಗರಾಜ ದಂಡಿನ ಕಲ್ಲೂರ ಸೇರಿದಂತೆ ನಾಲ್ಕು ಮಂದಿ 4 ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದರು.

ಆದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಅಧಿಕಾರಾವಧಿ ಮುಗಿಯುವ ಮುನ್ನವೇ, ಬಿಜೆಪಿ ಸರ್ಕಾರ ಅವುಗಳನ್ನು (ಜು.31ರಂದು) ಮೊಟಕುಗೊಳಿಸಿ ಹೊಸದಾಗಿ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿತ್ತು.

‘2019–20ನೇ ಸಾಲಿನ ವಾರ್ಷಿಕ ಪ್ರಶಸ್ತಿ ಅಸಿಂಧುಗೊಳಿಸಲಾಗುವುದು.ಹೊಸದಾಗಿ ಪ್ರಶಸ್ತಿಗೆ ಆಯ್ಕೆ ಮಾಡಲು ನಿರ್ಧರಿಸಿದ್ದು, ಮುಂದಿನ ತಿಂಗಳು ಸರ್ವಸದ್ಯರ ಸಭೆಯಲ್ಲಿ ಚರ್ಚಿಸಿದ ಬಳಿಕ ಹೊಸ ಪಟ್ಟಿ ಬಿಡುಗಡೆ ಮಾಡಲಾಗುವುದು’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ವಸದಸ್ಯರ ಸಭೆಯಲ್ಲಿ ಚರ್ಚಿಸಿಯೇ ಸಾಧಕರನ್ನು ಆಯ್ಕೆ ಮಾಡಲಾಗಿತ್ತು. ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಗೆ ರಿಜಿಸ್ಟ್ರಾರ್ ಅವರೂ ಸಹಿ ಹಾಕಿದ್ದಾರೆ. ಪ್ರಶಸ್ತಿಗೆ ಅಕಾಡೆಮಿ ಕಾನೂನು ಬದ್ಧವಾಗಿ ಆಯ್ಕೆ ಮಾಡಿದ ಪಟ್ಟಿಯನ್ನು ಅಸಿಂಧು ಮಾಡುವುದು ಸರಿಯಲ್ಲ. ಇದರಿಂದ ಪ್ರಶಸ್ತಿಗೆ ಆಯ್ಕೆಯಾದವರಿಗೆ ಅವಮಾನ ಮಾಡಿದಂತಾಗುತ್ತದೆ’ ಎಂದು ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಜೆ.ಲೋಕೇಶ್
ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT