ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಬೆಳೆಗೆ ನೆರವು ನೀಡಲು ಕೆಪಿಎ ಒತ್ತಾಯ

Last Updated 30 ಅಕ್ಟೋಬರ್ 2018, 11:11 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗಿನ ತೋಟಗಳಲ್ಲಿ ಇರುವ 50ಕ್ಕೂ ಹೆಚ್ಚು ವರ್ಷ ಹಳೆಯದಾದ ಕಾಫಿ ಗಿಡಗಳನ್ನು ಕಿತ್ತು, ಅವುಗಳ ಸ್ಥಾನದಲ್ಲಿ ಹೆಚ್ಚು ಇಳುವರಿ ಕೊಡುವ, ಗುಣಮಟ್ಟದ ಬೀಜಗಳನ್ನು ನೀಡುವ ಗಿಡಗಳನ್ನು ನೆಡಲು ಸರ್ಕಾರ ಅನುಮತಿ, ಸಹಾಯಧನ ಮತ್ತು ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ನೀಡುವಂತೆ ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್‌(ಕೆಪಿಎ) ಒತ್ತಾಯಿಸಿದೆ.

ಒಕ್ಕೂಟದ ಅಧ್ಯಕ್ಷ ಎಚ್‌.ಟಿ.ಪ್ರಮೋದ್‌ ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ,‘ರಾಜ್ಯದ ತೋಟಗಳಲ್ಲಿನ ಅರೇಬಿಕಾ ಗಿಡಗಳು ಸುಮಾರು 40 ವರ್ಷ ಮತ್ತು ರೋಬಸ್ಟಾ ತಳಿ ಗಿಡಗಳು ಅಂದಾಜು 80 ವರ್ಷ ಮಾತ್ರ ಉತ್ತಮ ಫಸಲನ್ನು ನೀಡುವ ಸಾಮಾರ್ಥ್ಯ ಹೊಂದಿವೆ. ಬಹುತೇಕ ತೋಟಗಳು ರೂಪುಗೊಂಡು ಒಂದು ಶತಮಾನ ಸಮೀಪಿಸುತ್ತಿದೆ. ಹಾಗಾಗಿ ಸಸಿಗಳ ಮರುನಾಟಿಗೆ ಶೇ.30 ರಷ್ಟು ಸಹಾಯಧನ ನೀಡಬೇಕು’ ಎಂದು ಆಗ್ರಹಿಸಿದರು.

‘ಪ್ರತಿವರ್ಷ ರಸಗೊಬ್ಬರ, ಕೀಟನಾಶಕ ಬೆಲೆಗಳು ಮತ್ತು ಕಾರ್ಮಿಕರ ಕೂಲಿಮೊತ್ತವು ಶೇ.10ರಷ್ಟು ಹೆಚ್ಚುತ್ತಿದೆ. ಜತೆಗೆ ಈ ಬಾರಿ ಕೊಡಗಿನಲ್ಲಿ ಭೂ ಕುಸಿತ ಸಂಭವಿಸಿ ಸುಮಾರು 1,500 ಎಕರೆ ತೋಟದ ಪ್ರದೇಶ ನಾಶವಾಗಿದೆ. ಇದರಿಂದ ಅಂದಾಜು 80 ಸಾವಿರ ಟನ್‌ ಇಳುವರಿ ಕುಸಿದಿದೆ. ನಷ್ಟದ ಸುಳಿಯಲ್ಲಿ ಸಿಲುಕಿರುವ ಬೆಳೆಗಾರರನ್ನು ಕಾಪಾಡಲು ಸರ್ಕಾರ ಆದಷ್ಟು ಬೇಗ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

ಒಕ್ಕೂಟದ ಉಪಾಧ್ಯಕ್ಷ ಎಂ.ಬಿ.ಗಣಪತಿ, ‘ಕೊಡಗಿನ ತೋಟಗಳ ಜಮೀನು ಹೊರತುಪಡಿಸಿ, ಇನ್ನೂ 80 ಸಾವಿರ ಹೆಕ್ಟೆರ್‌ ಪ್ರದೇಶ ಕಾಫಿ ಬೆಳೆಗೆ ಯೋಗ್ಯವಾಗಿದೆ. ಅಲ್ಲಿಯೂ ಕಾಫಿ ಕೃಷಿ ಮಾಡಲು ₹ 10 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ನೀಡಬೇಕು. ₹ 25 ಲಕ್ಷದ ವರೆಗಿನ ಬೆಳೆಸಾಲಕ್ಕೆ ಶೇ 3 ಮತ್ತು ಅದಕ್ಕೂ ಮೇಲ್ಪಟ್ಟ ಸಾಲದ ಮೊತ್ತಕ್ಕೆ ಶೇ 6 ರಷ್ಟು ಬಡ್ಡಿಯನ್ನು ಮಾತ್ರ ನಿಗದಿಪಡಿಸಬೇಕು. ತೋಟಗಳಿಗೆ ರಸ್ತೆ, ವಿದ್ಯುತ್‌ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಘಟಿಸಿದ ಭೂಕುಸಿತಗಳನ್ನು ರಾಜ್ಯ ಸರ್ಕಾರ ಕೇವಲ ನೈಸರ್ಗಿಕ ವಿಕೋಪ ಎಂದು ಪರಿಗಣಿಸಿದೆ. ಇದನ್ನು ರಾಷ್ಟ್ರೀಯ ವಿಕೋಪವೆಂದು ಘೋಷಿಸಲು ಕೇಂದ್ರಕ್ಕೆ ಒತ್ತಾಯಿಸಬೇಕು. ಆಗ ಹೆಚ್ಚು ಪರಿಹಾರ ಧನ ರಾಜ್ಯಕ್ಕೆ ಬರಲಿದೆ. ಅದರಿಂದ ಬೆಳೆಗಾರರಿಗೂ ಸೂಕ್ತ ಪರಿಹಾರ ನೀಡಬಹುದು’ ಎಂದರು.

‘ಸಾವಿರಾರು ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅಂದಾಜು ₹6 ಸಾವಿರ ಕೋಟಿಯಷ್ಟು ಸಾಲ ಮಾಡಿದ್ದಾರೆ. ವಿಕೋಪದಿಂದ ಹಾನಿಯಾದ ತೋಟಗಳ ಮಾಲೀಕರಿಂದ ಈ ವರ್ಷ ಸಾಲ ವಸೂಲಿ ಮಾಡಬಾರದು’ ಎಂದು ಬೇಡಿಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT