ಮಂಗಳವಾರ, ಆಗಸ್ಟ್ 20, 2019
22 °C

Live| ವಿಧಾನಸಭೆ:ವಿಶ್ವಾಸಮತ ಪ್ರಕ್ರಿಯೆಗೆ ಮಂಗಳವಾರ ಸಂಜೆ 6ರ ಗಡಿ ನೀಡಿದ ಸ್ಪೀಕರ್

Published:
Updated:

ಬೆಂಗಳೂರು: ಕರ್ನಾಟಕ ರಾಜಕಾರಣ ಈಗ ದೇಶದ ವಿದ್ಯಮಾನ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸಮತ ಯಾಚನೆ ಮೇಲಿನ ಚರ್ಚೆ ಇಂದು (ಸೋಮವಾರ) ಮುಂದುವರಿದಿದ್ದು, ನಿರ್ಣಯವನ್ನು ಸ್ಪೀಕರ್‌ ಮತಕ್ಕೆ ಹಾಕಲಿದ್ದಾರೆ ಎನ್ನುವ ನಿರೀಕ್ಷೆಗಳಿವೆ. ಇದಕ್ಕೂ ಮೊದಲು ರಾಜ್ಯಪಾಲ ವಜುಭಾಯಿ ವಾಲಾ ಅವರು ಕುಮಾರಸ್ವಾಮಿ ಅವರಿಗೆ ವಿಶ್ವಾಸವನ್ನು ಸಾಬೀತುಪಡಿಸಲು ಎರಡು ಗಡುವು ನೀಡಿದ್ದರು. 15 ಶಾಸಕರು ರಾಜೀನಾಮೆ ಸಲ್ಲಿಸಿದ ಬಳಿಕವೂ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ನಾಯಕರು ನಮ್ಮ ಸಂಖ್ಯಾಬಲ ತೋರಿಸುತ್ತೇವೆ ಎನ್ನುತ್ತಿದ್ದಾರೆ. ಬಿಜೆಪಿಗೆ ಇಬ್ಬರು ಪಕ್ಷೇತರ ಶಾಸಕರು ಸೇರಿ ಒಟ್ಟು 107 ಸದಸ್ಯರ ಸಂಖ್ಯಾಬಲವಿದೆ.

ರಾಜ್ಯ ರಾಜಕಾರಣದ ಬೆಳವಣಿಗೆಗಳ ತಾಜಾ ಮಾಹಿತಿ ಇಲ್ಲಿ ಸಿಗಲಿದೆ.

8.55– ಶುಕ್ರವಾರ ಹೇಳಿರುವಂತೆಯೇ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಿ ಭರವಸೆ ಈಡೇರಿಸಬೇಕು: ಬಿ.ಎಸ್.ಯಡಿಯೂರಪ್ಪ ಅವರಿಂದ ಸಭಾಧ್ಯಕ್ಷರಿಗೆ ಮನವಿ

8.50– ಸ್ಪೀಕರ್ ಮಾತಿಗೆ ಗೌರವ ನೀಡುವಂತೆ ಶಾಸಕರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೂಚನೆ

8.45– ‘ಬೇಕೇ ಬೇಕು ನ್ಯಾಯ ಬೇಕು’, ‘ಸಂವಿಧಾನ ಉಳಿಸಿ’ ಎಂದು ಘೋಷಣೆ ಕೂಗಿ ಮೈತ್ರಿ ನಾಯಕರಿಂದ ಗದ್ದಲ

8.42– ‘ಪ್ರತಿಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ಇಲ್ವಾ? ಹೀಗೆ ಮಾಡಿದರೆ ಕಲಾಪ ಮುಂದೂಡದೆ ಇಲ್ಲೇ ಸುಮ್ಮನೆ ಕುಳಿತುಕೊಳ್ಳುತ್ತೇನೆ’ ಎಂದು ಮೈತ್ರಿ ಶಾಸಕರನ್ನು ಗದರಿದ ಸಭಾಧ್ಯಕ್ಷರು

8.40– ಮಾತನಾಡಲು ಮುಂದಾದ ಬಿ.ಎಸ್‌.ಯಡಿಯೂರಪ್ಪ, ಮಾತನಾಡಲು ಅವಕಾಶ ನೀಡಿ ಎಂದು ಸ್ಪೀಕರ್ ರಮೇಶ್ ಕುಮಾರ್ ಮನವಿ.

8.35– ಕಲಾಪ ಆರಂಭ, ಆಡಳಿತ ಪಕ್ಷದ ಶಾಸಕರಿಂದ ಗದ್ದಲ

8.25– 10 ನಿಮಿಷ ಮುಂದೂಡಿಕೆಯಾದ ಕಲಾಪ 2 ಗಂಟೆ ಕಳೆದರೂ ಆರಂಭವಾಗಿಲ್ಲ

6.25– ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಕಲಾಪವನ್ನು 10 ನಿಮಿಷ ಮುಂದೂಡಿದ ಸಭಾಧ್ಯಕ್ಷರು

6.20– ‘ಬೇಕೇ ಬೇಕು ನ್ಯಾಯ ಬೇಕು’, ‘ಚರ್ಚೆಗೆ ಅವಕಾಶ ನೀಡಿ’ ಎಂದು ಘೋಷಣೆ ಕೂಗುತ್ತಿರುವ ಮೈತ್ರಿ ನಾಯಕರು

6.15– ಇಂದೇ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಬಾರದು ಎಂದು ಆಗ್ರಹಿಸಿ ಆಡಳಿತ ಪಕ್ಷದ ಶಾಸಕರಿಂದ ಸದನದಲ್ಲಿ ಗದ್ದಲ, ಪ್ರತಿಪಕ್ಷದ ಶಾಸಕರಿಂದ ವಿರೋಧ

6.05– ‘ಇವತ್ತು ಎಷ್ಟು ಹೊತ್ತಾದರೂ ಕುಳಿತುಕೊಳ್ಳಲು ನಾನು ತಯಾರಿದ್ದೇನೆ. ಹೊಸ ಮುಖಗಳಿಗೆ, ಮೊದಲ ಬಾರಿ ಆಯ್ಕೆಯಾದವರಿಗೆ ಮಾತನಾಡಲು ಅವಕಾಶ ಕೊಡಬೇಕು. ದಯಮಾಡಿ ಸ್ವಲ್ಪ ಅರ್ಥಮಾಡಿಕೊಳ್ಳಿ, ಶಿಸ್ತು ಪಾಲಿಸಿ’: ಸ್ಪೀಕರ್ ರಮೇಶ್ ಕುಮಾರ್

6.00– ‘ಪಕ್ಷಾಂತರ ನಿಷೇಧ ಕಾಯ್ದೆ ದುರ್ಬಲಗೊಳಿಸುವ ಪ್ರಯತ್ನ ಸೇರಿದಂತೆ ಪ್ರತಿಯೊಂದು ಅಕ್ರಮ, ಅವ್ಯವಹಾರದ ಬಗ್ಗೆ ತನಿಖೆಯಾಗಲಿ: ಈಶ್ವರ್ ಖಂಡ್ರೆ

5.55– ‘ಹಿಂದೆ ಕಾಂಗ್ರೆಸ್ ಮುಕ್ತ ಭಾರತ ಅಂತ ಹೇಳುತ್ತಿದ್ದ ಬಿಜೆಪಿಯವರು ಈಗ ಪ್ರತಿಪಕ್ಷ ಮುಕ್ತ ಭಾರತ ಮಾಡಲು ಹೊರಟಿದ್ದಾರೆ. ಪ್ರತಿಪಕ್ಷ ಇಲ್ಲದೆ ಪ್ರಜಾಪ್ರಭುತ್ವ ಉಳಿಯುತ್ತಾ?’: ಈಶ್ವರ್ ಖಂಡ್ರೆ

5.50– ಚರ್ಚೆಗೆ ಇನ್ನಷ್ಟು ಸಮಯಾವಕಾಶ ಕೊಡುವಂತೆ ಮೈತ್ರಿ ನಾಯಕರಿಂದ ಸ್ಪೀಕರ್ ರಮೇಶ್ ಕುಮಾರ್‌ಗೆ ಮನವಿ

5.40– ಅತೃಪ್ತ ಶಾಸಕರಿಗೆ ಬಿಜೆಪಿ ಹಣದ ಆಮಿಷವೊಡ್ಡಿದೆ: ಈಶ್ವರ್ ಖಂಡ್ರೆ ಆರೋಪ

5.25– ವಿಶ್ವಾಸಮತ ಸಾಬೀತಿಗೆ ಇನ್ನಷ್ಟು ಕಾಲಾವಕಾಶ ನೀಡುವಂತೆ ಸ್ಪೀಕರ್ ರಮೇಶ ಕುಮಾರ್‌ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿರುವುದಾಗಿ ಮೂಲಗಳಿಂದ ಮಾಹಿತಿ

5.10– ದೇಶ ಭಕ್ತರಿಗೆ, ಅನಿವಾರ್ಯ ಸ್ಥಿತಿಯಲ್ಲಿರುವವರಿಗೆ ನೀಡಬೇಕಾದ ವ್ಯವಸ್ಥೆಯನ್ನು ಇಂತಹವರಿಗೆಲ್ಲ ನೀಡಿದರೆ ಹೇಗೆ ನಡೆಸ್ತೀರಿ ಸಮಾಜವನ್ನು ಮುಂದಕ್ಕೆ?: ರಮೇಶ ಕುಮಾರ್

5.00– ಅತೃಪ್ತ ಶಾಸಕರಿಗೆ ‘ಝೀರೋ ಟ್ರಾಫಿಕ್’ ಕೊಟ್ಟಿಲ್ಲವೆಂಬ ಗೃಹ ಸಚಿವ ಎಂ.ಬಿ.ಪಾಟೀಲ್ ಉತ್ತರಕ್ಕೆ ಸ್ಪೀಕರ್ ರಮೇಶ ಕುಮಾರ್ ಕೆಂಡಾಮಂಡಲ. ‘ನಿಮ್ಮ ಅಧಿಕಾರಿಗಳು ‘ಝೀರೋ ಟ್ರಾಫಿಕ್’ ವ್ಯವಸ್ಥೆ ಮಾಡಿಕೊಟ್ಟಿದ್ದನ್ನು ಇಡೀ ದೇಶವೇ ನೋಡಿದೆ. ಈ ರೀತಿ ಉತ್ತರ ನೀಡಲು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತಾ?’:  ರಮೇಶ ಕುಮಾರ್ ಪ್ರಶ್ನೆ

4.50– ‘ಚಂದ್ರಯಾನ–2’ ಯಶಸ್ವಿಯಾಗಿ ಉಡಾವಣೆ ಮಾಡಿರುವ ಬಗ್ಗೆ ಸದನದಲ್ಲಿ ಇಸ್ರೋಗೆ ಅಭಿನಂದನೆ ಸಲ್ಲಿಕೆ. ಅಭಿನಂದನೆ ಟಿಪ್ಪಣಿ ಓದಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ.

4.45– ‘ದಯಮಾಡಿ ಸಹಕರಿಸಿ, ಇಂದೇ ವಿಶ್ವಾಸಮತ ಪ್ರಕ್ರಿಯೆ ಮುಗಿಸಬೇಕು’: ಸ್ಪೀಕರ್ ರಮೇಶ ಕುಮಾರ್

4.40– ಆಕ್ಷೇಪಾರ್ಹ ವಿಡಿಯೊ ವಿಚಾರ, ಭಾವುಕರಾದ ಅರವಿಂದ ಲಿಂಬಾವಳಿ, ವಿಧಾನಸಭಾಧ್ಯಕ್ಷರಿಂದ ಸಾಂತ್ವನ

4.30–‘ವಿಶ್ವಾಸಮತ ನಿರ್ಣಯ ಮತಕ್ಕೆ ಹಾಕಲು ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಸರ್ಕಾರದ ವಿರುದ್ಧ ಕೇಳಿಬಂತು. ಸ್ವಲ್ಪಮಟ್ಟಿಗೆ ನಿಜವಿರಬಹುದು. ಆದರೆ, ಇಂದೇ ಮುಗಿಸಿ ಎಂದು ರಾಜ್ಯಪಾಲರು ಎರಡೆರಡು ಬಾರಿ ಸಂದೇಶ ಕಳುಹಿಸಿದರಲ್ಲ, ಇದ್ಯಾವ ತಂತ್ರ. ನಾವು ರಾಜಕಾರಣಿಗಳು, ರಾಜಕೀಯ ಮಾಡಬಹುದು. ಆದರೆ ರಾಜ್ಯಪಾಲರು ರಾಜಕೀಯ ಮಾಡುವುದು ಸರಿಯೇ: ರಾಮಸ್ವಾಮಿ ಪ್ರಶ್ನೆ

4.25– ‘ಅತೃಪ್ತ ಶಾಸಕರಿಗೆ ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಬರಲು, ವಾಪಸ್ ತೆರಳಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಡಲಾಯಿತಲ್ಲವೇ? ಇದಕ್ಕೆ ಶಿಷ್ಟಾಚಾರದಲ್ಲಿ ಅವಕಾಶವಿದೆಯೇ? ಆಡಳಿತ ಜೀವಂತ ಇದೆಯೋ ಇಲ್ಲವೋ? ಯಾಕೆ ಕೊಟ್ಟಿರಿ ಆ ವ್ಯವಸ್ಥೆ? ಉತ್ತರ ನೀಡಿ. ಯಾರೋ ಗರ್ಭಿಣಿ, ಅಂಗವಿಕಲ ವ್ಯಕ್ತಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಡುತ್ತೀರಾ ನೀವು?’ ರಾಮಸ್ವಾಮಿ ತರಾಟೆ

4.20– ‘ಅಧಿಕಾರಕ್ಕೆ ಬರಬೇಕು ಎಂಬ ಹಪಾಹಪಿತನದಿಂದ ಅತೃಪ್ತರು ರಾಜೀನಾಮೆ ನೀಡಿದ್ದು ಸುಳ್ಳಾ? ಇಂತಹ ಪ್ರಯತ್ನಗಳನ್ನು ತಡೆಯದಿದ್ರೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ. ಈ ವಿಚಾರದಲ್ಲಿ ನೀವು (ಸಭಾಧ್ಯಕ್ಷರು) ಮಹತ್ವದ ನಿರ್ಧಾರ ಕೈಗೊಳ್ಳಬೇಕು. ದೇಶಕ್ಕೆ ಮಾದರಿಯಾಗುವಂತಹ ನಿರ್ಧಾರ ಕರ್ನಾಟಕ ಕೈಗೊಳ್ಳಬೇಕು’: ಎ.ಟಿ.ರಾಮಸ್ವಾಮಿ

4.15– ‘ಯಾವುದೇ ಆಮಿಷವಿಲ್ಲ ಎಂದಾದರೆ ಮುಂಬೈಗೆ ಹೋಗಿ ಕುಳಿತುಕೊಳ್ಳುವ ಅವಶ್ಯಕತೆ ಇತ್ತಾ? ಇಲ್ಲೇನು ಅರಾಜಕತೆ ಇದೆಯಾ? ನಿಮಗೂ (ಬಿಜೆಪಿ) ಇದಕ್ಕೂ ಸಂಬಂಧ ಇಲ್ಲ ಎಂದಾದರೆ ಆತ್ಮಸಾಕ್ಷಿಯಿಂದ ಹೇಳಿ’: ಎ.ಟಿ.ರಾಮಸ್ವಾಮಿ

4.10– ‘ನಿಮಗೆ ನಿಜವಾಗಿಯೂ ಅಧಿಕಾರದ ಆಸೆ ಇಲ್ಲ ಎಂದಾದರೆ ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ:’ ಅತೃಪ್ತ ಶಾಸಕರಿಗೆ ಶಾಸಕ ಎ.ಟಿ.ರಾಮಸ್ವಾಮಿ ಸವಾಲು

4.00– ‘ಪ್ರತಿಪಕ್ಷದ ನಾಯಕರಿಗೂ ಜವಾಬ್ದಾರಿ ಇದೆ. ರಾಜ್ಯದಲ್ಲಿ ಬರ ಇದೆ, ರೈತಾಪಿ ವರ್ಗ ತೊಂದರೆಗೆ ಸಿಲುಕಿದೆ. ಇಂತಹ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಗಮನ ಸೆಳೆಯಬೇಕಿದೆ. ಇಂತಹ ವಿಷಯಗಳ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ. ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ಕಾನೂನು ಎಂಬ ಪರಿಸ್ಥಿತಿ ಇದೆ. ಅಬಲರ, ದುರ್ಬಲರ ರಕ್ಷಣೆಗಾಗಿ ಸರ್ಕಾರ ಇರಬೇಕು’: ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ

3.50– ‘ತಪ್ಪು ಮಾಹಿತಿ ನೀಡುವುದು ಸರಿಯಲ್ಲ, ಪ್ರಜಾಪ್ರಭುತ್ವದಲ್ಲಿ ಯಾರೂ ಅಧಿಕಾರ ವಹಿಸಿಕೊಳ್ಳಬಹುದು. ಆದರೆ, ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯುವುದು ಸರಿಯಲ್ಲ. ನೀವು (ಬಿಜೆಪಿ) ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದ್ದೀರಿ. ಮುಂಬೈನಲ್ಲಿ ಶಾಸಕರನ್ನು ಕರೆದುಕೊಂಡು ಹೋಗಿ ಕೂಡಿಟ್ಟಿದ್ದೀರಿ’: ಸಿದ್ದರಾಮಯ್ಯ

3.45– ಸಿದ್ದರಾಮಯ್ಯನವರೂ ಪಕ್ಷಾಂತರ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿಕೆ: ‘ನಾನು ಜೆಡಿಎಸ್ ಬಿಟ್ಟಿಲ್ಲ. ಅವರೇ ನನ್ನನ್ನು ಉಚ್ಚಾಟನೆ ಮಾಡಿದ್ದರು. ಮಾಹಿತಿ ಇಲ್ಲದೆ ಏನೇನೋ ಮಾತನಾಡಬೇಡಿ’: ಸಿದ್ದರಾಮಯ್ಯ ತಿರುಗೇಟು

3.35– ವಿಧಾನಸಭೆ ಕಲಾಪ ಆರಂಭ

2.30– ವಿಧಾನಸಭೆ ಕಲಾಪವನ್ನು ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರು ಮಧ್ಯಾಹ್ನ 3.30ಕ್ಕೆ ಮೂಂದೂಡಿದರು.

2.25– ರಾಜ್ಯದಲ್ಲಿ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಕೂಡಲೇ ರಾಜೀನಾಮೆ ನೀಡಿರುವ ಶಾಸಕರ ಬಗ್ಗೆ ತೀರ್ಮಾನ ಮಾಡಿ ಬಳಿಕ ವಿಶ್ವಾಸ ಮತ ನಿರ್ಣಯವನ್ನು ಮತಕ್ಕೆ ಹಾಕಿ ಎಂದು ಸಚಿವ ಕೃಷ್ಣ ಬೈರೇಗೌಡ ಆಗ್ರಹಿಸಿದರು. 

2.20–  ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ದೇಶದಲ್ಲಿ ಅಘೋಷಿತ ತುರ್ತುಸ್ಥಿತಿ ಇದೆ ಎಂದು ಕೃಷ್ಣ ಬೈರೇಗೌಡ ಆರೋಪಿಸಿದರು.

2.00– ಅತೃಪ್ತ ಶಾಸಕರು ಈಗಾಗಲೇ ಪಕ್ಷಾಂತರ ಮಾಡಿದ್ದಾರೆ ಎಂದು ಕೃಷ್ಣ ಬೈರೇಗೌಡ ಆರೋಪ ಮಾಡಿದರು. ತಮಿಳುನಾಡಿನ ಪ್ರಸಂಗ ಉಲ್ಲೇಖಿಸಿ ತಮಿಳುನಾಡಿನ ಸ್ಪೀಕರ್ ಸಂವಿಧಾನದ 10ನೇ ಪರಿಚ್ಛೇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಓದಿ ಹೇಳಿದ್ದನ್ನು ಉಲ್ಲೇಖಿಸಿದರು.

1.55– ಚಾರ್ಟರ್ಡ್ ಫ್ಲೈಟ್ ವಿಷಯ ಬಂದಾಗ ಅರವಿಂದ ಲಿಂಬಾವಳಿ ಆಕ್ಷೇಪ. ನಾವು ಇಂದೇ ಮುಗಿಸಬೇಕು. ‘10 ನಿಮಿಷದಲ್ಲಿ ಮಾತು ಮುಗಿಸಿ’- ಸಭಾಧ್ಯಕ್ಷರಿಂದ ಕೃಷ್ಣ ಬೈರೇಗೌಡರಿಗೆ ಸೂಚನೆ. ಹಲವು ಶಾಸಕರ ಹೆಸರು ಪ್ರಸ್ತಾಪಿಸಿದ ಕೃಷ್ಣ ಭೈರೇಗೌಡ. ತಾಳ್ಮೆ ಕಳೆದುಕೊಂಡ ಯಡಿಯೂರಪ್ಪ ಅವರಿಂದಲೂ ಆಕ್ಷೇಪ.

1.52– ಅತೃಪ್ತ ಶಾಸಕರ ಜತೆ ಬಿಜೆಪಿ ನಾಯಕರ ಸಂಬಂಧ ಬಿಚ್ಚಿಡುತ್ತಿರುವ ಕೃಷ್ಣ ಬೈರೇಗೌಡ. ಆಶೋಕ್ ಅವರು ಪಕ್ಷೇತರ ಶಾಸಕರ ಜತೆಗೆ ಇದ್ದ ಪ್ರಸಂಗದ ಉಲ್ಲೇಖ. ಎಂ.ಟಿ.ಬಿ.ನಾಗರಾಜ್ ಅವರನ್ನು ವಿಮಾನದಲ್ಲಿ ಕರೆದೊಯ್ದ ಪ್ರಸಂಗ ಉಲ್ಲೇಖ. 

ಶಾಸಕರು ಯಾಕೆ ರಾಜೀನಾಮೆ ನೀಡಿದ್ದಾರೆಂದು ಚರ್ಚಿಸಬೇಕು–ಕೃಷ್ಣ ಭೈರೇಗೌಡ

12.25– ವಿರೋಧ ಪಕ್ಷ ಮತ್ತು ಸುದ್ದಿಮಾಧ್ಯಮಗಳು ವಿಶ್ವಾಸಮತ ಯಾಚನೆಯೊಂದೇ ಬಾಕಿ ಇದೆ ಎಂದು ಹೇಳುತ್ತಿವೆ. ಶಾಸಕರು ಯಾರು, ಅವರು ಯಾಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಉದ್ದೇಶಗಳೇನು ಎಂಬುದನ್ನು ಚರ್ಚಿಸುತ್ತಿಲ್ಲ. ಅದನ್ನು ಚರ್ಚಿಸಬೇಕಿದೆ ಎಂದು ಕಾಂಗ್ರೆಸ್‌ ಶಾಸಕ ಕೃಷ್ಣ ಭೈರೇಗೌಡ ಪ್ರಸ್ತಾಪಿಸಿದರು.

ರಮೇಶ್‌ ಜಾರಕಿಹೊಳಿ ಅವರು ಏಳೆಂಟು ತಿಂಗಳಿಂದ ಬಿಜೆಪಿಯವರ ಜತೆ ಅನ್ಯೂನ್ಯ ಸಂಬಂಧ ಹೊಂದಿದ್ದಾರೆ. ಅದು ಸ್ಪಷ್ಟವಾಗಿದೆ. 

ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಅವರು ಕೆಲವು ನಾಯಕರೊಂದಿಗೆ ನಡೆಸಿದ ಫೋನ್ ಸಂಭಾಷಣೆಯ ಬಗ್ಗೆ ಎಳೆ ಎಳೆಯಾಗಿ ಪ್ರಸ್ತಾಪ.  25 ಕೋಟಿ ನೀಡುವ ಆಫರ್. ಆದರೆ ಫೋನ್ ಕರೆ ಮಾಡಿದ್ದು ಯಾರು ಎಂದು ಪ್ರಶ್ನಿಸಿದ ಕೃಷ್ಣ ಭೈರೇಗೌಡ ಹೆಸರು ಹೇಳಲಿಲ್ಲ.

* ಶಾಸಕರು ಸದನಕ್ಕೆ ಬರುವ ಅವಕಾಶವನ್ನು ಕ್ಷೇತ್ರದ ಜನ ಕೊಟ್ಟಿದ್ದಾರೆ. ಆದರೆ, ಬರಲು ಆಗುತ್ತಿಲ್ಲ ಎಂದಾದರೆ ನನಗೆ ತಿಳಿಸಿ, ಅನುಮತಿ ಪಡೆಯಬೇಕು. ಸದನದಲ್ಲಿ ಕುಳಿತು ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಅವರು ಅದನ್ನು ಮಾಡುತ್ತಿಲ್ಲ. ಇದೇ ಸ್ಮೆಲ್‌ ಬರುತ್ತಿರುವುದು. ದೇಶದಲ್ಲಿ ನನಗೆ ಬಂದ ದಯಾನಿಯ ಸ್ಥಿತಿ ಬಂದಿಲ್ಲ. ಜನ, ಪ್ರಜಾತಂತ್ರ ಅನಾಥವಾಗಿಬಿಡುತ್ತದೆಯಲ್ಲ ಹೀಗೇಕೆ? ಇದು ಗೌರವ ತರುತ್ತಾರೆ –ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್ ಹೇಳಿದರು.

* ಸದನಲ್ಲಿ ಚರ್ಚೆಯಾದ ವಿಷಯಗಳನ್ನೇ ಮತ್ತೆ ಮಾತನಾಡುತ್ತಿದ್ದಾರೆ. ಸದನದಲ್ಲಿ ಇಲ್ಲದವರ ಬಗ್ಗೆ ಆರೋಪ ಮಾಡುತ್ತಾರೆ. ಅದರ ಅಗತ್ಯವಿಲ್ಲ ಎಂದು ಬಿಜೆಪಿ ಶಾಸಕ ಜಗದೀಶ ಶೆಟ್ಟರ್‌ ಆಕ್ಷೇಪ.

ಮಧ್ಯೆ ಪ್ರವೇಶಿಸಿದ ಬಿಜೆಪಿ ಶಾಸಕ ಮಾಧುಸ್ವಾಮಿ, ಐಪಿಸಿ, ಸಿಆರ್‌ಪಿ ಎಲ್ಲವನ್ನೂ ನಾವು ಚರ್ಚಿಸಲು ಅವಕಾಶ ಕೊಡುವುದಾದರೆ ನಾವು ನಮ್ಮ ಅಭ್ಯಂತರ ಇಲ್ಲ.

* ತನಿಖೆಯ ವಿಚಾರ ಹೇಳಲು ಅವಕಾಶವಿಲ್ಲ. ಶಾಸಕರ ವಿಚಾರವಾಗಿ ಇತರರು ಹೇಳಿದ್ದನ್ನು ಅವರು(ಕೃಷ್ಣ ಭೈರೇಗೌಡ) ಹೇಳುತ್ತಿದ್ದಾರೆ. ಅದಕ್ಕೆ ಅವರು ದಾಖಲೆ ಕೊಡಬೇಕು. ದಾಖಲೆ ಕೊಡದಿದ್ದರೆ ಅದನ್ನು ಕಡತದಿಂದ ತೆಗೆದುಹಾಕಲಾಗುವುದು. – ಸ್ಪೀಕರ್‌ ರಮೇಶ್‌ಕುಮಾರ್ ಸ್ಪಷ್ಟನೆ.

* ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಬೈರೇಗೌಡ ಹೇಳಿಕೆಗೆ ತೀವ್ರ ಆಕ್ಷೇಪ

* ಆರೋಪಿಗಳ ಜತೆ ಬಿರಿಯಾನಿ ತಿಂದು ಅವರನ್ನು ರಕ್ಷಸಿದವರ ಹೆಸರನ್ನೂ ಹೇಳಿ - ಸಿ.ಟಿ.ರವಿ ಕಟಕಿಯಾಡಿದರು.

* ಎದ್ದು ನಿಂತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ತಾವು ಬಿರಿಯಾನಿ ತಿಂದಿಲ್ಲ ಎಂಬ ಸಮರ್ಥನೆ, ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಯುತ್ತಿದೆ ಎಂಬ ಸ್ಪಷ್ಟನೆ.

ಶಾಸಕ ಸಿ.ಟಿ.ರವಿ ಹೇಳಿದ ಬಿರಿಯಾನಿ ತಿಂದವರು ಯಾರು ಎಂದದ್ದು ನನ್ನನ್ನೇ ಕುರಿತು. ಐಎಎಂನ ಮುಖ್ಯಸ್ಥನ ಪರಿಚವೂ ಇಲ್ಲ. ಪ್ರಕರಣವನ್ನು ಎಸ್‌ಐಟಿಗೆ ವಹಿಸಿದ್ದೇವೆ. ಹೃದಯ ಚಿಕಿತ್ಸೆ ಆದ ಬಳಿಕ ನಾನು ಬಿರಿಯಾನಿ ತಿನ್ನುವುದನ್ನು ಬಿಟ್ಟಿದ್ದೇನೆ. ರಂಜಾನ್‌ನಲ್ಲಿ ಕೂಟಕ್ಕೆ ಕರೆದ ಸ್ನೇಹಿತ ಜತೆ ಕರ್ಜೂರ ತಿಂದಿದ್ದೇನೆ. ಅಷ್ಟ ಅದನ್ನೇ ಕೆಲವರು ಮೊಬೈಲ್‌ಲ್ಲಿ ಪೊಟೊ ತೆಗೆದು ವಾಟ್ಸಪ್‌ನಲ್ಲಿ ಹಾಕಿದ್ದಾರೆ. ಬಡವರ ದುಡ್ಡು ತಿಂದವರ ರಕ್ಷಣೆ ಕೊಡುವ ಮಾಡುವ ಕಾರ್ಯವನ್ನು ಸರ್ಕಾರ ಮಾಡುವುದಿಲ್ಲ. –ಸಿಎಂ ಕುಮಾರಸ್ವಾಮಿ ಸ್ಪಷ್ಟನೆ.

* ನೀವು ಫೇಲ್‌ ಆಗಿ ನನಗೆ ಪಾಸ್ ಮಾರ್ಕ್ಸ್ ಹಾಕಿ ಎಂದರೆ ನಾನೇನು ಪೇಚಾಡಲಿ –ಸ್ಪೀಕರ್‌ ರಮೇಶ್‌ಕುಮಾರ್‌.

‘ಸಾಮೂಹಿಕ ಮರೆವನ್ನು ಬಿಟ್ಟು ಕಣ್ಣುಬಿಟ್ಟು ನೋಡಬೇಕು. ಐಎಂಎ ಒ್ರಕರಣದ ಆರೋಪಿಗೆ ಬಿಜೆಪಿ ಜತೆಗೆ ಸಖ್ಯ ಇರುವುದು  ಪತ್ರಿಕೆಯಲ್ಲಿ ಬಹಿರಂಗವಾಗಿದೆ’ –ಕೃಷ್ಣ ಬೈರೇಗೌಡ ಹೇಳಿಕೆ

* ಆರ್. ಶಂಕರ್ ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿದ್ದಾರೆ ಎಂದು ಕೃಷ್ಣ ಬೈರೇಗೌಡ ಅವರು ಹೇಳಿದಾಗ
ಮಾಧುಸ್ವಾಮಿ ಅವರಿಂದ ಆಕ್ಷೇಪ ವ್ಯಕ್ತಪಡಿಸಿದರು. ಇದು ಸಭಾಧ್ಯಕ್ಷರ ನ್ಯಾಯಾಲಯದಲ್ಲಿದೆ ಎಂದಾಗ ಸಭಾಧ್ಯಕ್ಷರಿಂದ ಸಮ್ಮತಿ ದೊರೆಯಿತು. ಈ ವಿಷಯ ಬಿಟ್ಟು ಬೇರೆ ವಿಷಯ ಮಾತನಾಡಲು ಸಲಹೆ ನೀಡಿದರು.

* ಫ್ಲೈಟ್‌ ಹತ್ತಿಸಿಯೇ ಇಲ್ಲ, ಕರೆದುಕೊಂಡೇ ಹೋಗಿಲ್ಲ ಎನ್ನುತ್ತಾರೆ ಇದರ ಅರ್ಥವೇನು? – ಸಚಿವ ಡಿ.ಕೆ.ಶಿವಕುಮಾರ್.

* 8–10 ಜನ ಗುಂಪುಕಟ್ಟಿಕೊಂಡು ಹೀಗೆ ಮಾಡುತ್ತಿದ್ದಾರೆ. ಇದೆಲ್ಲಾ ಪೂರ್ವ ಜಿಯೋಜಿತ. 17–18 ಜನ ರಾಜೀನಾಮೆ ಕೊಡುತ್ತಾರೆ ಎಂದರೆ ಹೇಗೆ. ಇದೆಲ್ಲಾ ಸ್ವಯಂ ಪ್ರೇರಣೆಯಿಂದ ಆಗಿಬಿಟ್ಟಿದೆಯಾ? – ಕೃಷ್ಣ ಭೈರೇಗೌಡ.

* ರಾಜೀನಾಮೆ ನೀಡಿದವರ ಜತೆ ಕಾಣಿಡಿಕೊಂಡ ಸಂತೋಷ್‌ ವಿಷಯವನ್ನು ಪ್ರಸ್ತಾಪಕ್ಕೆ ಸ್ಪೀಕರ್‌ ತಡೆಯೊಡ್ಡಿದರು.

***

12.20– ಬಿಜೆಪಿ ಶಾಸಕ ಮಾಧುಸ್ವಾಮಿ ಸದನದಲ್ಲಿ ಮಾತನಾಡಿ ಸುಪ್ರೀಂಕೋರ್ಟ್‌ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಪ್ರಸ್ತಾಪಿಸಿದರು.

12.18– ಎಲ್ಲೋ ಕೂತಿರುವವರಿಗೆ ಸದನದ ಮೂಲಕ ಸಂದೇಶ ನೀಡುವುದಿಲ್ಲ. ವಿಪ್‌, ನೋಟಿಸ್‌ ನೀಡುವುದು ನಿಮಗೆ ಬಿಟ್ಟಿದ್ದು. ನನ್ನ ಬಳಿ ದೂರು ಬಂದರೆ ಕಾನುನಾತ್ಮಕವಾಗಿ ಕ್ರಮ ಕೈಗೊಳ್ಳುವೆ –ಸ್ಪೀಕರ್‌ ರಮೇಶ್‌ಕುಮಾರ್ ಸ್ಪಷ್ಟನೆ.

12.16– ಶಾಸಕರು ಸದನದಿಂದ ಹೊರಗೆ ಇದ್ದರೆ ವಿಪ್‌ ಉಲ್ಲಂಘನೆ ಆಗುವುದಿಲ್ಲ ಎಂದು ಭಾವಿಸಿದ್ದಾರೆ. ಅವರಿಗೆ ಸದನದ ಮೂಲಕ ಸ್ಪಷ್ಟ ಸಂದೇಶ ನೀಡಬೇಕು ಎಂದು ಶಾಸಕ ಶಿವಲಿಂಗೇ ಗೌಡ ಅವರಿಂದ ಸ್ಪೀಕರ್‌ಗೆ ಮನವಿ.

12.13– ಸ್ಪೀಕರ್‌ ಅವರ ಅಧಿಕಾರ ವ್ಯಾಪ್ತಿಯಲ್ಲಿ ಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಯಾವುದೇ ಗೊಂದಲ ಇಲ್ಲದೆ ಹೇಳಿದೆ. ಸಭಾಧ್ಯಕ್ಷರ ಸ್ವಾತಂತ್ರ್ಯಕ್ಕೆ ಯಾವುದೇ ತೊಂದರೆ ಹಾಗೂ ಉಲ್ಲಂಘನೆಯಾಗಿಲ್ಲ ಎಂದು ಸ್ಪೀಕರ್‌ ರಮೇಶ್‌ ಕುಮಾರ್ ಅವರಿಂದ ಸ್ಪಷ್ಟನೆ.

12.10– ಇಂದು ವಿಶ್ವಾಸಮತ ಚರ್ಚೆ ಪೂರ್ಣಗೊಳಿಸಿ ಮತಕ್ಕೆ ಹಾಕಬೇಕು ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಸ್ಪೀಕರ್‌ಗೆ ಮನವಿ.

12.08– ಪಕ್ಷದ ನಾಯಕರ ವಿಪ್‌ ನೀಡುವ ಜವಾಬ್ದಾರಿ ಮೊಟಕು ಮಾಡುವುದಿಲ್ಲ: ಸ್ಪೀಕರ್‌ ರೂಲಿಂಗ್

'10ನೇ ಶೆಡ್ಯೂಲ್‌ನಲ್ಲಿ ಶಾಸಕಾಂಗ ಪಕ್ಷದ ನಾಯಕರಿಗೆ ನೀಡಿರುವ ಜವಾಬ್ದಾರಿಯನ್ನು ನಾವು ಮೊಟಕು ಮಾಡುವ ಕೆಲಸ ಮಾಡುವುದಿಲ್ಲ' – ಎಂದು ವಿಪ್‌ ವಿಷಯವಾಗಿ ಸಿದ್ದರಾಮಯ್ಯ ಅವರು ಎತ್ತಿದ್ದ ಕ್ರಿಯಾಲೋಪ ಕುರಿತು ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ರೂಲಿಂಗ್‌ ನೀಡಿದರು.

12.01– ಶುಕ್ರವಾರ ಮುಂದೂಡಲ್ಪಟ್ಟಿದ್ದ ವಿಧಾನಸಭೆ ಕಲಾಪದ ವಿಶ್ವಾಸಮತದ ಮೇಲಿನ ಚರ್ಚೆ ಪ್ರಕ್ರಿಯೆ ಬೆಳಿಗ್ಗೆ 12.01ಕ್ಕೆ ಆರಂಭವಾಯಿತು. 

12.00– ಮಧ್ಯಾಹ್ನ 12 ಆದರೂ ಆರಂಭವಾದ ಕಲಾಪ. 11ಗಂಟೆಗೆ ಕಲಾಪ ಆರಂಭವಾಗಬೇಕಿತ್ತು. 

11.58– ರಾಜಭವನದ ವಿಶೇಷಾಧಿಕಾರಿ ರಮೇಶ್‌ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಂಡಿದ್ದು, ರಾಜ್ಯಪಾಲರಿಗೆ ವರದಿ ಮಾಡುತ್ತಿದ್ದಾರೆ.

11.57– ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಭೇಟಿಗೆ ಕಾಲ ನಿಗದಿಪಡಿಸಿದ ಸ್ಪೀಕರ್ ರಮೇಶ್‌ ಕುಮಾರ್. ನಾಳೆ (ಜುಲೈ 23) ಬೆಳಿಗ್ಗೆ 11 ಗಂಟೆಗೆ ತಮ್ಮನ್ನು ಭೇಟಿ ಮಾಡಬೇಕು ಎಂದು ರಮೇಶ್‌ಕುಮಾರ್ ಸೂಚನೆ. ರಾಜೀನಾಮೆ ನೀಡಿರುವ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಮೈತ್ರಿ ನಾಯಕರು ಮಾಡಿರುವ ಮನವಿ ಮೇರೆಗೆ ಸ್ಪೀಕರ್ ಕ್ರಮ.

11.35– ವಿಶ್ವಾಸಮತ ಯಾಚನೆಗೆ ಎರಡು ದಿನ ಕಾಲಾವಕಾಶ ಕೋರಿ ಮುಖ್ಯಮಂತ್ರಿ ಹಾಗೂ ಮೈತ್ರಿ ನಾಯಕರು ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪೀಕರ್‌ ಯಾವುದೇ ಸ್ಪಷ್ಟ ಅಭಯ ನೀಡಿಲ್ಲ.

11.25– ಬಿಜೆಪಿ ಸದನಕ್ಕೆ ಬರುತ್ತಿರುವ ಶಾಸಕರ ಹೆಸರುಗಳನ್ನು ಪಟ್ಟಿ ಮಾಡುತ್ತಿದೆ.

11.20– ಯಾವುದೇ ಪ್ರತಿಕ್ರಿಯೆ ನೀಡದೆ ಸದನ ಒಳಗೆ ನಡೆದ ಕಾಂಗ್ರೆಸ್‌ ಶಾಸಕ ರಾಮಲಿಂಗಾ ರೆಡ್ಡಿ

11.17–  ಬಿಜೆಪಿ ನಿಯೋಗ ಸ್ಪೀಕರ್‌ ಕಚೇರಿಗೆ ತೆರಳಿ ಕೆ.ಆರ್‌.ರಮೇಶ್‌ಕುಮಾರ್‌ ಅವರನ್ನು ಭೇಟಿ ಮಾಡಿತು.

11.15– ವಿಧಾಸನಸಭೆ ಕಲಾಪಕ್ಕೆ ಬರಿಗಾಲಲ್ಲಿ ಬಂದು ಗಮನ ಸೆಳೆದಿದ್ದ ಸಚಿವ ಎಚ್‌.ಡಿ. ರೇವಣ್ಣ ಇಂದು ಚಪ್ಪಲಿ ಹಾಕಿಕೊಂಡು ಸದನಕ್ಕೆ ಬಂದರು.

11.10– ಸದನಕ್ಕೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಡಿಸಿಎಂ ಜಿ.‍ಪರಮೇಶ್ವರ್ ಮತ್ತು ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬಂದರು.

11.05– ಹೇಳುವಿದೇನೂ ಇಲ್ಲ. ಎಲ್ಲರೂ ದೃಶ್ಯ ತೆಗೆದುಕೊಳ್ಳಿ. ನಮ್ಮ ತಂತ್ರವನ್ನು ಹೇಳಲು ಸಾಧ್ಯವಿಲ್ಲ – ವಿಧಾನಸೌಧದ ಒಳಗೆ ಹೋಗುವ ಮುನ್ನ ಡಿಸಿಎಂ ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌.

11– ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಹೇಳಿದ್ದೆವು. ಇನ್ನೂ ಅನೇಕ ಬೆಳವಣಿಗೆಗಳನ್ನು ಆಡಳಿತಾರೂಢ ಸರ್ಕಾರ ಮಾಡುತ್ತಿದೆ. ಶಾಸಕರಿಗೆ ಎದರಿಸುವ ಮತ್ತು ಆಮಿಷ ತೋರಿಸುವ ಕೆಸಲ ಮಾಡುತ್ತಿದೆ. ಸುಪ್ರೀಂ ಕೋರ್ಟ್‌ ಸದನದ ಬೆಳವಣಿಗೆ ನೋಡಿ ನಾಳೆ ವಿಚಾರಣೆಗೆ ತೆಗೆದುಕೊಳ್ಳಬೇಕೋ ಇಲ್ಲವೇ ನೋಡುತ್ತೇವೆ ಎಂದು ಹೇಳಿದೆ. ಆದ್ದರಿಂದ, ಸರ್ಕಾರ ಇಂದು ವಿಶ್ವಾಸಮತ ಯಾಚಿಸಬೇಕು. ರಾಜ್ಯ ಸರ್ಕಾರ ನನ್ನ ಬಗ್ಗೆಯೂ ಕುತಂತ್ರ ಮಾಡಿ ಆರೋಪಿಸುತ್ತಿದೆ. ಸಚಿವರೊಬ್ಬರು ನನ್ನನ್ನೂ ಸಂಪರ್ಕಿಸಿದ್ದರು. –ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ.

10.50– ಕರ್ನಾಟಕದಲ್ಲಿ ಕುದುರೆ ವ್ಯಾಪಾರ: ಪರಿಶೀಲನೆಗೆ ಮನವಿ

ಕರ್ನಾಟಕದಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಅದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ವಕೀಲೆ ಲಿಲ್ಲಿ ಥಾಮಸ್ ಅವರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದರು. 

ಶಾಸಕರು ಕೋಟಿ ಕೋಟಿಗೆ ಮಾರಾಟವಾಗುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ ಎಂದು ಮನವಿಯಲ್ಲಿ ಲಿಲ್ಲಿ ಥಾಮಸ್ ಪ್ರಸ್ತಾಪಿಸಿದ್ದಾರೆ.

ಮತ್ತೊಬ್ಬ ವಕೀಲರಿಂದ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ವಿಚಾರ ಪ್ರಸ್ತಾಪಿಸಲಾಗಿದೆ.

10.40– ತುರ್ತು ವಿಚಾರಣೆ ಅಸಾಧ್ಯ ಎಂದ ಸುಪ್ರೀಂ ಕೋರ್ಟ್‌

ಇಂದು ವಿಚಾರಣೆ ಮಾಡಲು ಆಗುವುದಿಲ್ಲ. ಮಧ್ಯಪ್ರವೇಶ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ತಿಳಿಸಿತು. ಶೀಘ್ರ ವಿಶ್ವಾಸಮತ ಯಾಚಿಸಲು ಸೂಚಿಸಬೇಕು ಎಂದು ವಕೀಲ ಮುಕುಲ್ ರೋಹಟಗಿ ಕೋರಿದ್ದರು.

ಇಂದು ಸಂಜೆ 5 ಗಂಟೆಯ ಒಳಗೆ ವಿಶ್ವಾಸಮತ ಯಾಚನೆಗೆ ಸೂಚಿಸಿ ಎಂದು ಅತೃಪ್ತರ ಪರ ವಕೀಲ ಮುಕುಲ್ ರೋಹಟಗಿ ಕೋರಿದ್ದರು. ತುರ್ತು ವಿಚಾರಣೆ ಅಸಾಧ್ಯ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತು.

* ನಾಳೆ ವಿಚಾರಣೆಗೆ ಪರಿಗಣಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಭರವಸೆ ನೀಡಿದರು.

10.28– ರಮಡಾ ರೆಸಾರ್ಟ್‌ನಿಂದ ಹೊರಟಿದ್ದ ಹೊರಟಿದ್ದ ಬಿಜೆಪಿಯ ಶಾಸಕರು ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿಧಾನಸೌಧ ತಲುಪಿದ್ದಾರೆ

10.14– ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ: ಸ್ಪೀಕರ್ ಇಂಗಿತ

ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸಲಾಗುವುದು. ಇದೇನು ವರ್ಷಗಟ್ಟಲೆಯಿಂದ ನಡೆಯುತ್ತಿರುವ ಚರ್ಚೆಯಲ್ಲ. ಬಹಳ ಜನರಿಗೆ ಏನು ತಪ್ಪು ಕಲ್ಪನೆ ಬರ್ತಿದೆ ಎಂದು ಶಾಸಕರ ರಮೇಶ್‌ ಕುಮಾರ್ ಹೇಳಿದರು.

‘ತಮ್ಮ ನಿವಾಸದಿಂದ ವಿಧಾನಸೌಧಕ್ಕೆ ಹೊರಡುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ವಿಶ್ವಾಸಮತ ನಿರ್ಣಯ ಚರ್ಚೆಗೆ ಸಭೆಯಲ್ಲಿ ಮಂಡನೆಯಾಗಿದ್ದೇ ಬುಧವಾರ. ಗುರುವಾರ ಇಡೀದಿನ ಪಾಯಿಂಟ್ ಆಫ್ ಆರ್ಡರ್ ಪ್ರಕಾರವೇ ಹೋಯಿತು. ರಾಜೀನಾಮೆ ಕೊಟ್ಟವರನ್ನು ಸದನದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ಹೇಳಿತು. ಆದರೆ 10ನೇ ಶೆಡ್ಯೂಲ್ ಪ್ರಕಾರ ಸದನದಲ್ಲಿ ಪಾಲ್ಗೊಳ್ಳಲು ಸೂಚಿಸಬಹುದು ಅಂತ ಇದೆ. ಈ ಸಂದಿಗ್ಧದ ಬಗ್ಗೆ ನಾನು ಅಡ್ವೊಕೇಟ್ ಜನರಲ್ ಸಲಹೆ ಪಡೆದುಕೊಂಡೆ. ಅಷ್ಟುಹೊತ್ತಿಗೆ ಸಂಜೆಯಾಯಿತು. ನಾವು ಕಾನೂನಿಗೆ ಗೌರವ ಕೊಡಬೇಕು, ರಕ್ಷಣೆ ಮಾಡಬೇಕು’ ಎಂದು ಅವರು ಪ್ರತಿಕ್ರಿಯಿಸಿದರು.

10.13– ರೆಸಾರ್ಟ್‌ನಿಂದ ವಿಧಾನಸೌಧದತ್ತ ಬಿಜೆಪಿ ಶಾಸಕರು

ಬೆಂಗಳೂರಿನ ಹೊರವಲಯದಲ್ಲಿರುವ ರಮಡಾ ರೆಸಾರ್ಟ್‌ನಲ್ಲಿ ತಂಗಿದ್ದ ಬಿಜೆಪಿ ಶಾಸಕರು ಸೋಮವಾರ ಬೆಳಿಗ್ಗೆ ಅಲ್ಲಿಂದ ವಿಧಾನಸೌಧದತ್ತ ಪ್ರಯಾಣ ಬೆಳೆಸಿದ್ದಾರೆ. ಬೆಳಿಗ್ಗೆ ಅಲ್ಲಿಯೇ ಯೋಗಾಭ್ಯಾಸ ನಡೆಸಿದ ಬಳಿಕ, ವಾಹನದಲ್ಲಿ ತೆರಳಿದರು.

Post Comments (+)