ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನಕ್ಕೆ ಅತೃಪ್ತರೇ ಆತಂಕ

ಕಾಂಗ್ರೆಸ್‌ ನಾಯಕತ್ವಕ್ಕೆ ಭಿನ್ನಮತೀಯರ ಸಡ್ಡು: ಶಾಸಕರ ರಾಜೀನಾಮೆ ಕೊಡಿಸಲು ಬಿಜೆಪಿ ತಂತ್ರ
Last Updated 6 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ನಾಯಕರ ಶಿಸ್ತುಕ್ರಮದ ಎಚ್ಚರಿಕೆಗೂ ಸೊಪ್ಪು ಹಾಕದೇ ಅತೃಪ್ತರ ಗುಂಪಿನ ನಾಲ್ವರು ಸೇರಿದಂತೆ ಕೆಲವು ಕಾಂಗ್ರೆಸ್ ಶಾಸಕರು ಅಧಿವೇಶನಕ್ಕೆ ಗೈರಾಗಿದ್ದು, ಬಜೆಟ್ ಅಧಿವೇಶನದ ಮೇಲೆ ‘ಆಪರೇಷನ್‌’ನ ಕಾರ್ಮೋಡ ಕವಿದಿದೆ.

ವಿಧಾನಮಂಡಲ ಕಲಾಪ ವೇಳೆ ಕಡ್ಡಾಯ ಹಾಜರಿರುವಂತೆ ವಿಪ್‌ ಜಾರಿ ಮಾಡಿದ್ದರೂ, ಅದನ್ನು ಲೆಕ್ಕಿಸದೆ ಅತೃಪ್ತ ನಾಲ್ವರು (ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಬಿ. ನಾಗೇಂದ್ರ, ಉಮೇಶ ಜಾಧವ್‌) ಗೈರಾದರು. ಮುಂಬೈಯಲ್ಲಿ ವಾಸ್ತವ್ಯ ಹೂಡಿರುವ ಇವರ ಜೊತೆ ‘ಆಪರೇಷನ್ ಕಮಲ’ದ ಉಸ್ತುವಾರಿ ಹೊತ್ತಿರುವ ಬಿಜೆಪಿ ಶಾಸಕರಾದ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಮತ್ತು ಬಾಲಚಂದ್ರ ಜಾರಕಿಹೊಳಿ ಕೂಡಾ ಇದ್ದಾರೆ ಎನ್ನಲಾಗಿದೆ.

ಅತೃಪ್ತರು ಗುರುವಾರ ಅಥವಾ ಶುಕ್ರವಾರ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ. ಅವರು ರಾಜೀನಾಮೆ ಕೊಟ್ಟ ಬೆನ್ನಲ್ಲೇ, ಮತ್ತೆ ಆರಕ್ಕೂ ಹೆಚ್ಚು ಶಾಸಕರು ಮೈತ್ರಿ ಸರ್ಕಾರದ ಸಹವಾಸ ತೊರೆಯಲಿದ್ದಾರೆ. ಸರ್ಕಾರ ಪತನದ ದಿನಗಳು ಆರಂಭವಾಗಲಿವೆ ಎಂಬ ವಿಶ್ವಾಸ ಬಿಜೆಪಿ ನಾಯಕರಿಗೆ ಇದೆ.

ಅದೇ ಉಮೇದಿನಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿ, ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕಮಲ ಪಾಳಯದ ನಾಯಕರು ಬೀಗಿದರು.

ಇದಕ್ಕೆ ಪ್ರತಿ ಆಪರೇಷನ್ ಮಾಡಲು ಸಜ್ಜಾಗಿರುವ ‘ಮಿತ್ರಕೂಟ’ದ ನಾಯಕರು, ಬಿಜೆಪಿ ತಂತ್ರಗಾರಿಕೆಯನ್ನು ಸೋಲಿಸುವ ತಂತ್ರವನ್ನೂ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಅತೃಪ್ತರ ಬಲ ಹೆಚ್ಚಳ? :ಹೊಸಪೇಟೆ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿರುವ ಅದೇ ಪಕ್ಷದ ಶಾಸಕ ಜೆ.ಎನ್‌. ಗಣೇಶ್‌ ಹಾಗೂ ಜೆಡಿಎಸ್‌ನ ನಾರಾಯಣಗೌಡ ಬಿಜೆಪಿ ತೆಕ್ಕೆಯಲ್ಲಿದ್ದಾರೆ ಎಂಬ ಅನುಮಾನ ಮಿತ್ರಕೂಟದ ನಾಯಕರಲ್ಲಿದೆ.ಕಾಂಗ್ರೆಸ್‌ನ ಬಿ.ಸಿ. ಪಾಟೀಲ ಮತ್ತು ಎಸ್‌. ರಾಮಪ್ಪ ಅನುಪಸ್ಥಿತಿ ಕಾಂಗ್ರೆಸ್‌ ನಾಯಕರ ದುಗುಡ ಹೆಚ್ಚಿಸಿದೆ. ತಮ್ಮ ಕ್ಷೇತ್ರಕ್ಕೆ ಅನುದಾನ ನೀಡದ ಕಾರಣ ಮುಖ್ಯಮಂತ್ರಿ ವಿರುದ್ಧ ಮುನಿಸಿಕೊಂಡಿರುವ ನಾರಾಯಣ ಗೌಡ, ಅನಾರೋಗ್ಯ ಕಾರಣವೊಡ್ಡಿ ಗೈರು ಹಾಜರಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ‘ನಾನು ಉದ್ದೇಶಪೂರ್ವಕವಾಗಿ ತಪ್ಪಿಸಿಲ್ಲ’ ಎಂದು ಹರಿಹರದ ರಾಮಪ್ಪ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಲಿ ಅಧ್ಯಕ್ಷ ಸ್ಥಾನ ಸಿಗದೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮುನಿಸಿ
ಕೊಂಡಿರುವ ಸುಧಾಕರ್ ವಿಧಾನಸೌಧಕ್ಕೆ ಬಂದರೂ ಕಲಾಪಕ್ಕೆ ಹೋಗಲಿಲ್ಲ.

ರೆಡ್ಡಿ, ಬೇಗ್ ಗೈರು: ಸಚಿವ ಸ್ಥಾನ ಸಿಗದ ಕಾರಣಕ್ಕೆ ಕೋಪಗೊಂಡಿರುವ ಬೆಂಗಳೂರಿನ ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ಆರ್. ರೋಷನ್ ಬೇಗ್‌ ಹಾಗೂ ತಂದೆಗೆ ಅವಕಾಶ ತಪ್ಪಿಸಿದ್ದಕ್ಕೆ ಸಿಟ್ಟಾಗಿರುವ ಸೌಮ್ಯಾರೆಡ್ಡಿ ಕೂಡ ಕಲಾಪದಿಂದ ದೂರ ಉಳಿದು, ಪ್ರತಿಭಟನೆ ತೋರಿದರು ಎನ್ನಲಾಗಿದೆ.

‘ಸಿಎಲ್‌ಪಿ ಸಭೆಗೆ ಗೈರಾದರೆ ಕ್ರಮ’

ಅತೃಪ್ತರ ನಿಗೂಢ ನಡೆಯಿಂದ ಎದುರಾಗಿರುವ ಆತಂಕದ ಮಧ್ಯೆಯೇ, ಬಜೆಟ್‌ ಮಂಡನೆಯ ದಿನ (ಫೆ. 8) ಬೆಳಿಗ್ಗೆ 9 ಗಂಟೆಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಸಿದ್ದರಾಮಯ್ಯ ಸಿಎಲ್‌ಪಿ ಸಭೆ ಕರೆದಿದ್ದಾರೆ.

‘ಈ ಸಭೆಗೆ ಎಲ್ಲ ಶಾಸಕರೂ ಖುದ್ದು ಹಾಜರಾಗಬೇಕು. ಗೈರಾದರೆ ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆ’ ಎಂದೂ ಎಚ್ಚರಿಕೆ ನೀಡಿದ್ದಾರೆ.

ರಾಜ್ಯಪಾಲರ ಭಾಷಣ ಮೊಟಕು

ವಿರೋಧ ಪಕ್ಷ ಬಿಜೆಪಿ ಸದಸ್ಯರ ಧರಣಿ ಹಾಗೂ ಧಿಕ್ಕಾರಗಳ ಹಿನ್ನೆಲೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನದ ಭಾಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದರು.

ವಾಲಾ ಅವರು ಸದನಕ್ಕೆ ಬೆಳಿಗ್ಗೆ 11.02ಕ್ಕೆ ಬಂದರು. ಅವರು ಭಾಷಣ ಆರಂಭಿಸುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಎದುರು ನಿಂತು ಘೋಷಣೆಗಳನ್ನು ಕೂಗಲು ಆರಂಭಿಸಿದರು. ‘ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲ’, ‘ಸರ್ಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸುತ್ತಿದೆ’, ‘ಸುಳ್ಳಿನ ಕಂತೆಯ ಭಾಷಣ ಬೇಡವೇ ಬೇಡ’ ಎಂದು ಘೋಷಣೆ ಕೂಗಿದರು. ಗದ್ದಲದ ನಡುವೆಯೂ ರಾಜ್ಯಪಾಲರು ಎರಡು ಪುಟಗಳನ್ನು ಓದಿದರು.

ಗದ್ದಲ ಜೋರಾದಾಗ, ‘ಮುಂದೇನು ಮಾಡುವುದು’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಅವರನ್ನು ಪ್ರಶ್ನಿಸಿದರು. ಭಾಷಣ ಮಂಡಿಸುವಂತೆ ಸಭಾಧ್ಯಕ್ಷರು ಹೇಳಿದರು. ‘ಗದ್ದಲ ಮುಂದುವರಿದರೆ ಭಾಷಣ ಮೊಟಕುಗೊಳಿಸುತ್ತೇನೆ’ ಎಂದು ರಾಜ್ಯಪಾಲರು ಎಚ್ಚರಿಸಿದರು. ಇದನ್ನು ಬಿಜೆಪಿ ಸದಸ್ಯರು ಕಿವಿಗೆ ಹಾಕಿಕೊಳ್ಳಲಿಲ್ಲ. ರಾಜ್ಯಪಾಲರು ಭಾಷಣದ ಕೊನೆಯ ಪುಟ ಓದಿ ಭಾಷಣ ನಿಲ್ಲಿಸಿದರು. ರಾಜ್ಯಪಾಲರ ಭಾಷಣ ಐದೇ ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಎಂಬತ್ತರ ದಶಕದಲ್ಲಿ ಅನೇಕ ಬಾರಿ ಅಂದಿನ ರಾಜ್ಯಪಾಲರು ಇದೇ ರೀತಿ ಭಾಷಣ ಮೊಟಕು ಗೊಳಿಸಿದ್ದರು. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ ಭಾಷಣ ಓದದೇ ಮಂಡಿಸಿದ್ದರು.

ಶಾಸಕರ ಲೆಕ್ಕಾಚಾರ?

ಗೈರಾದ ಅತೃಪ್ತ ‘ಕೈ’ ಶಾಸಕರು

* ರಮೇಶ ಜಾರಕಿಹೊಳಿ (ಗೋಕಾಕ)

*ಮಹೇಶ ಕುಮಟಳ್ಳಿ (ಅಥಣಿ)

*ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ)

*ಉಮೇಶ ಜಾಧವ್‌ (ಚಿಂಚೋಳಿ)

ಕಾಂಗ್ರೆಸ್‌ ಶಾಸಕರು

* ಜೆ.ಎನ್‌. ಗಣೇಶ (ಕಂಪ್ಲಿ)

* ಬಿ.ಸಿ. ಪಾಟೀಲ (ಹಿರೇಕೆರೂರ)

* ಎಸ್. ರಾಮಪ್ಪ (ಹರಿಹರ)

ಜೆಡಿಎಸ್‌

* ನಾರಾಯಣ ಗೌಡ (ಕೆ.ಆರ್‌. ಪೇಟೆ)

ಪಕ್ಷೇತರ ಶಾಸಕರು

* ಆರ್. ಶಂಕರ್ (ರಾಣೆಬೆನ್ನೂರು)

*ಎಚ್‌. ನಾಗೇಶ್ (ಮುಳಬಾಗಿಲು

**

ಕಾಂಗ್ರೆಸ್‌ ಶಾಸಕರು ಯಾರೂ ರಾಜೀನಾಮೆ ನೀಡುವುದಿಲ್ಲ. ಅತೃಪ್ತ ಶಾಸಕರೆಲ್ಲ ಗುರುವಾರ ಬರುತ್ತಾರೆ. ಮೈತ್ರಿ ಸರ್ಕಾರ ಸುಭದ್ರವಾಗಿದೆ.

- ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

ಸದನಕ್ಕೆ 10ಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗಿ ಕುಮಾರಸ್ವಾಮಿ ಅವರ ಮೇಲೆ ವಿಶ್ವಾಸವಿಲ್ಲ ಎಂದು ತೋರಿಸಿದ್ದಾರೆ.

- ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಸಮ್ಮಿಶ್ರ ಸರ್ಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಬಿಜೆಪಿಯನ್ನು ನಂಬಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿರುವವರು ಮುಂದೆ ಪಶ್ಚಾತ್ತಾಪ ಪಡುತ್ತಾರೆ.

- ಡಿ.ಕೆ.ಶಿವಕುಮಾರ್‌, ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT